ನನ್ನ ಸಾಮ್ರಾಜ್ಯ ಕುಸಿದಿರಬಹುದು, ಮತ್ತೆ ಕಟ್ಟುವ ವಿಶ್ವಾಸವಿದೆ; ಉದ್ಯಮಿ ಬಿಆರ್​ ಶೆಟ್ಟಿ

ನಾನು ಸೋತಿರಬಹುದು ಆದರೆ ಸತ್ತಿಲ್ಲ ಅಂತ ಬಿ.ಆರ್. ಶೆಟ್ಟಿ ಗುಟುರು ಹಾಕಿದ್ದಾರೆ. ‘ಶೆಟ್ಟಿ ವಿಲ್ ಕಂ ಬ್ಯಾಕ್’ ಅಂತ ತೊಡೆ ತಟ್ಟಿದ್ದಾರೆ.

ಉದ್ಯಮಿ ಬಿಆರ್​ ಶೆಟ್ಟಿ

ಉದ್ಯಮಿ ಬಿಆರ್​ ಶೆಟ್ಟಿ

  • Share this:
ಉಡುಪಿ (ಮಾ. 1): ನನ್ನ ಸಾಮ್ರಾಜ್ಯ ಕುಸಿದಿರಬಹುದು, ಆದರೆ ನಾನು ದಿವಾಳಿಯಾಗಿಲ್ಲ. ನಾನೇನೂ ದೇಶ ಬಿಟ್ಟು ಹೋಗಿಲ್ಲ. ಪೆಟ್ರೋಲ್ ಹಾಕಲು ಹಣವಿಲ್ಲದ ಸ್ಥಿತಿಯಲ್ಲಿ ಉಡುಪಿಯಿಂದ ಸಾಲ ಮಾಡಿ ಅಬುದಾಬಿಗೆ ಹೋಗಿ ಸಾಮ್ರಾಜ್ಯ ಕಟ್ಟಿದವನು ನಾನು, ಮತ್ತೆ ಚೇತರಿಸಿಕೊಳ್ಳುವ ವಿಶ್ವಾಸವಿದೆ. ‘ಶೆಟ್ಟಿ ವಿಲ್ ಕಂ ಬ್ಯಾಕ್’ ಹೀಗಂತ ತೊಡೆ ತಟ್ಟಿದ್ದವರು ಬೇರ್ಯಾರೂ ಅಲ್ಲ, ಅರಬ್ ರಾಷ್ಟ್ರಗಳಲ್ಲಿ ದೊರೆಗಳಿಗೆ ಸರಿಸಾಟಿಯಾಗಿ ಮೆರೆದು, ಬಿದ್ದಲ್ಲೇ ಎದ್ದೇಳಲು ಹವಣಿಸುತ್ತಿರುವ, ಪದ್ಮಶ್ರೀ ಬಿ.ಆರ್.ಶೆಟ್ಟಿ. ಉಡುಪಿಯಲ್ಲಿ ಧಿಡೀರ್ ಪ್ರತ್ಯಕ್ಷವಾದ ಬಿಆರ್ ಶೆಟ್ಟಿ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಎನ್​ಆರ್​ಐ ಉದ್ಯಮಿ ಬಿ.ಆರ್. ಶೆಟ್ಟಿ ಜೀರೋ ದಿಂದ ಹೀರೋ ಆದವರು.  ಉಡುಪಿ ಮೂಲದ ಈ ಶ್ರೀಮಂತ ಉದ್ಯಮಿ ದಿವಾಳಿಯಾಗಿದ್ದಾರೆ ಎಂದು ಊರೆಲ್ಲಾ ಸುದ್ದಿಯಾಗಿತ್ತು. ಅಬುದಾಬಿಯಲ್ಲಿರುವ ಎನ್​ಎಂಸಿ ಕಂಪೆನಿ ಮುಳುಗಿ ಕೇವಲ ಒಂದು ಡಾಲರ್ ಗೆ ಹರಾಜಾದಾಗ ಶೆಟ್ಟರ ಯುಗ ಮುಗೀತು, ಇನ್ನೇನು ಅವರು ಬೀದಿಗೆ ಬಂದೇ ಬಿಟ್ಟರು ಎಂದು ಭಾವಿಸಲಾಗಿತ್ತು. ಆದರೆ ನಾನು ಸೋತಿರಬಹುದು ಆದರೆ ಸತ್ತಿಲ್ಲ ಅಂತ ಬಿ.ಆರ್. ಶೆಟ್ಟಿ ಗುಟುರು ಹಾಕಿದ್ದಾರೆ. ‘ಶೆಟ್ಟಿ ವಿಲ್ ಕಂ ಬ್ಯಾಕ್’ ಅಂತ ತೊಡೆ ತಟ್ಟಿದ್ದಾರೆ.

ತಾವು ಉಚಿತವಾಗಿ ನಡೆಸುತ್ತಿರುವ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ತನ್ನ ಬಗ್ಗೆ ಜಗತ್ತಿನಾದ್ಯಂತ ಹಬ್ಬಿರುವ ವದಂತಿಗಳಿಗೆ ಬೇಸರ ವ್ಯಕ್ತಪಡಿಸಿ ಭಾವುಕರಾಗಿ ಮಾತನಾಡಿದ್ದರು.

ನಾನು ನಂಬಿದವರೇ ನನಗೆ ಮೋಸ ಮಾಡಿದರು ಎಂದು ತಮ್ಮ ಆರ್ಥಿಕ ದಿವಾಳಿತನದ ಸತ್ಯವನ್ನು ಬಿಚ್ಚಿಟ್ಟರು. ನನ್ನ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಸೇರಿದ ಒಬ್ಬನನ್ನು ನಾನು ಸಿ ಎಫ್ ಓ ಮಾಡಿದೆ.  ಸಿಇಒ ಮಾಡಿದೆ. ಆದರೆ ಅವನೇ ನನ್ನ ಬೆನ್ನಿಗೆ ಚೂರಿ ಹಾಕಿದ ನನಗೆ ತಿಳಿಯದ ಹಾಗೆ ಬೆನ್ನ ಹಿಂದೆ ಆರ್ಥಿಕ ವಂಚನೆ ಮಾಡಿದ್ದಾರೆ. ಈ ವ್ಯಕ್ತಿಯ ಬಗ್ಗೆ ನಾನು ಏನೂ ಹೇಳುವಂತಿಲ್ಲ. ಯಾಕಂದ್ರೆ ಅವನ ಮೇಲಿನ ಆರೋಪ ಸಾಬೀತಾಗಿಲ್ಲ. ಆದರೆ, ಜನರ ಆಶಿರ್ವಾದದಿಂದ ಈ ಎಲ್ಲಾ ಸಮಸ್ಯೆಗಳಿಂದ ನಾನು ಹೊರ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಂದು ಕಾಲದಲ್ಲಿ 84 ಬ್ಯಾಂಕ್ ಗಳು ನನ್ನ ಕಂಪನಿಗೆ ಸಾಲ ನೀಡಲು ಸಾಲಿನಲ್ಲಿ ನಿಲ್ಲುತ್ತಿದ್ದರು. ಈಗ ನೋಡಿ ನನ್ನ ಪರಿಸ್ಥಿತಿ ಹೀಗಾಗಿದೆ. ಹಾಗಂತ ನಾನು ಸೋಲು ಒಪ್ಪುವವನಲ್ಲ. ಒಂದು ಕಾಲದಲ್ಲಿ ದಿವಾಳಿಯಾಗಿದ್ದ ಟ್ರಂಪ್ ಗೆ ಒಂದು ಕ್ರೆಡಿಟ್ ಕಾರ್ಡ್ ಕೊಡಲು ಅಮೆರಿಕದ ಬ್ಯಾಂಕುಗಳು ಹಿಂದೆ ಮುಂದೆ ನೋಡುತ್ತಿದ್ದವು. ಅಂತಹ ದಿವಾಳಿ ಆಗಿದ್ದ ಮನುಷ್ಯ ಬಳಿಕ ಅಮೆರಿಕದ ಅಧ್ಯಕ್ಷ ಆಗಲಿಲ್ಲವೇ? ಎಂದು  ಪ್ರಶ್ನಿಸಿದರು. ಇದೇ ವೇಳೆ ನಾನು ಕಷ್ಟಪಟ್ಟು ದುಡಿದ ಹಣವನ್ನು ಮರುಗಳಿಸುತ್ತೇನೆ ಎಂದು ಆತ್ಮವಿಶ್ವಾಸದ ನಗೆ ಬೀರಿದರು.

ಇದನ್ನು ಓದಿ: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಇನ್ನೂ ಮುಂದೆ ಮಾತನಾಡಲ್ಲ; ಸಚಿವ ರಮೇಶ ಜಾರಕಿಹೊಳಿ ಹೊಸ ವರಸೆ!

ನನ್ನ ಆಸ್ತಿಯ ಅರ್ಧಭಾಗವನ್ನು ಮಿಲಿಂದಾ ಗೇಟ್ ಫೌಂಡೇಶನ್ ಗೆ ದಾನ ಮಾಡಿದ್ದೇನೆ. ನನ್ನ ಟ್ರಸ್ಟ್ ಮೂಲಕ ನಡೆಯುತ್ತಿರುವ ಎಲ್ಲಾ ಉಚಿತ ಸಮಾಜ ಸೇವೆಗಳನ್ನು ಮುಂದುವರಿಸುತ್ತೇನೆ .ಬಿಆರ್ ಶೆಟ್ಟಿ ಸಾಮ್ರಾಜ್ಯ ಮುಳುಗಿಹೋಯಿತು ಎಂಬ ಸುದ್ದಿಗಳನ್ನು ನೋಡಿ ಬೇಸತ್ತು ಹೋಗಿದ್ದೇನೆ. ದೇವರ ದಯೆಯಿಂದ ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ. ನೀವು ಯಾರು ಊಹಿಸಿರದಷ್ಟು ಬಿ ಆರ್ ಶೆಟ್ಟಿ ಆರ್ಥಿಕವಾಗಿ ಸಕ್ಷಮ ವಾಗಿದ್ದಾರೆ. ಹೊರದೇಶದಲ್ಲಿರುವ ನನ್ನ ಸಾಮ್ರಾಜ್ಯ ಹೋಗಿರಬಹುದು. ಆದರೆ, ಭಾರತದ ಆಸ್ತಿ ಸುರಕ್ಷಿತವಾಗಿದೆ. ನನ್ನ ಮೂರು ಹೆಣ್ಣು ಓರ್ವ ಗಂಡು ಮಗ  ಸಂತೃಪ್ತ ಜೀವನ ನಡೆಸುತ್ತಿದ್ದಾರೆ. 2012ರಲ್ಲಿ ನನಗೆ 12.8 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪಿಟಲ್ ಇತ್ತು. ಆದರೆ ಈಗ ಪರಿಸ್ಥಿತಿ ಹೀಗಾಗಿದೆ. 2017ರಿಂದ ನಾನು ನ್ಯೂ ಮೆಡಿಕಲ್ ಸಂಸ್ಥೆಯಿಂದ ಹೊರ ಬಂದೆ. 2019ರಲ್ಲಿ ನನ್ನ ಎಲ್ಲಾ ಸಾಮ್ರಾಜ್ಯ ಕುಸಿದು ಹೋಯಿತು.ಲಕ್ಷ್ಮೀ ಚಂಚಲೆ ಏನೂ ಮಾಡಲು ಸಾಧ್ಯವಿಲ್ಲ ಎಂದು ನಿಟ್ಟುಸಿರು ಬಿಟ್ಟರು.

ಮೋದಿ ನನಗೆ ಆತ್ಮೀಯರು. ಆದರೆ, ಅವರಿಂದ ನೆರವು ಯಾಚಿಸಿಲ್ಲ. ನಾನು ಪ್ರಧಾನಿ ಅವರ ಜೊತೆ ಮಾತನಾಡಲು ಹೋದರೆ ರಾಹುಲ್ ಗಾಂಧಿಗೆ ಮಾತನಾಡಲು ವಿಷಯ ಸಿಗುತ್ತದೆ. ನೀರವ್ ಮೋದಿ- ವಿಜಯ್ ಮಲ್ಯ ಆಯ್ತು ಈಗ ಬಿಆರ್ ಶೆಟ್ಟಿಯೂ ದಿವಾಳಿ ಎನ್ನಬಹುದು. ಹಾಗಾಗಿ ಯಾವ ಬಿಜೆಪಿಯ ಮುಖಂಡರನ್ನು ನಾನು ಮಾತನಾಡಿಸಲು ಹೋಗಿಲ್ಲ.ನಾನು ಯಾವತ್ತೋ ಆನಂದಬಾಷ್ಪ ಸುರಿಸಿದ ಚಿತ್ರವನ್ನು ಮಾಧ್ಯಮಗಳು ಕಣ್ಣೀರು ಎಂದು ಬಿಂಬಿಸುತ್ತಿವೆ. ಆದರೆ, ನಾನು ಅಳುವ ಚಿತ್ರವನ್ನು ಜನರು ನೋಡಿದರೆ ಅವರಿಗೆ ನನ್ನ ಮೇಲೆ ಭರವಸೆ ಉಳೀದೀತೆ? ಎಂದು ಪ್ರಶ್ನಸಿ ಭಾವುಕರಾದರು.
Published by:Seema R
First published: