ಅವರೆಲ್ಲರೂ ಬಸ್ ನಲ್ಲಿ ಮದುವೆಯ ಮನೆಗೆ ತೆರಳುವ ಸಂಭ್ರಮದಲ್ಲಿದ್ದರು. ಕರ್ನಾಟಕ ಗಡಿದಾಟಿದ ಬಸ್ ಕೇರಳ ರಾಜ್ಯವನ್ನು ಪ್ರವೇಶಿಸಿ ಕೆಲವೇ ಕೆಲವು ನಿಮಿಷಗಳು ಕಳೆದಿತ್ತು. ಆದರೆ ಘಾಟ್ ರಸ್ತೆಯಲ್ಲಿ ಅವರನ್ನೇ ಹೊಂಚಿ ಹಾಕಿ ಕುಳಿತಿದ್ದ ಜವರಾಯ ಅವರ ಸಂಭ್ರಮವನ್ನೆಲ್ಲಾ ಕಿತ್ತುಕೊಂಡ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಉರುಳಿ ಬಿದ್ದು ಎಂಟು ಮಂದಿ ದಾರುಣ ಸಾವನ್ನಪ್ಪಿದ್ದಾರೆ.
ಕರ್ನಾಟಕ-ಕೇರಳ ಗಡಿಭಾಗದ ಪಾಣತ್ತೂರು ಇಂದು ಕರಾಳ ಭಾನುವಾರಕ್ಕೆ ಸಾಕ್ಷಿಯಾಗಿದೆ. ಮದುವೆ ದಿಬ್ಬಣ ಹೊರಟಿದ್ದ ಬಸ್ ಘಾಟ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿ ಬಿದ್ದಿದ್ದು ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹೌದು, ಕೊಡಗಿನ ಕರಿಕೆಯ ಚೆತ್ತುಕಯದಲ್ಲಿ ವರನ ಮನೆಯಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಪುತ್ತೂರಿನಿಂದ ತೆರಳುತ್ತಿದ್ದ ಬಸ್ ಕಾಸರಗೋಡಿನ ಕಲ್ಲಪಳ್ಳಿಯ ಪೆರಿಯಾರಂನಲ್ಲಿ ಉರುಳಿ ಬಿದ್ದಿದ್ದು ಎಂಟು ಮಂದಿ ಬಲಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದ ವಧುವಿನ ಮನೆಯಿಂದ ಹೊರಟ್ಟಿದ್ದ ಬಸ್ ಕೇರಳ ರಾಜ್ಯವನ್ನು ಪ್ರವೇಶಿಸಿ, ಕಲ್ಲಪಳ್ಳಿ-ಪಾಣತ್ತೂರು ರಸ್ತೆಯಲ್ಲಿ ಸಂಚರಿಸುವ ವೇಳೆ ಭೀಕರ ಅಫಘಾತವಾಗಿದೆ. ಘಾಟ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮನೆಯ ಮೇಲೆ ಉರುಳಿ ಬಿದ್ದು, ಎಂಟು ಮಂದಿ ಅಸುನೀಗಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿಗೆ ಗಂಭಿರ ಗಾಯವಾಗಿದೆ. ಬಸ್ ನಲ್ಲಿ ಒಟ್ಟು 63 ಮಂದಿ ಪ್ರಯಾಣಿಸುತ್ತಿದ್ದಿದ್ದು,30 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಮೃತರನ್ನು,ರಾಜೇಶ್,ರವಿಚಂದ್ರ,ಆದರ್ಶ್,ಶ್ರೇಯಸ್,ಸುಮತಿ,ಶಶಿ,ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರು ಮಕ್ಕಳೂ ಒಳಗೊಂಡಿದ್ದಾರೆ.
ಪೆರಿಯಾರಂ ಘಾಟ್ ಬಳಿ ವಧುವಿದ್ದ ಟಿಟಿ ವಾಹನದ ಹಿಂದೆ ದಿಬ್ಬಣ ಬಸ್ ಹೋಗುತ್ತಿತ್ತು. ಸಾಮರ್ಥ್ಯ ಮೀರಿ ಬಸ್ ನಲ್ಲಿ ಪ್ರಯಾಣಿಕರಿದ್ದ ಕಾರಣ ಘಾಟ್ ರಸ್ತೆಯಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಬಸ್ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ರಕ್ಷಣೆ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ಮಂಗಳೂರು, ಕಾಂಞಗಾಡ್ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಕಾಸರಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಗೊಂಡವರಲ್ಲಿ ಎಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಸುಳ್ಯ ತಾಲೂಕಿನವರಾಗಿದ್ದಾರೆ. ಮಡಿಕೇರಿಯ ಕರಿಕೆ ಗ್ರಾಮಕ್ಕೆ ಸುಳ್ಯದಿಂದ ಅಲೆಟ್ಟಿ ಕಲ್ಲಪಳ್ಳಿ ರೂಟ್ ಬಹಳ ಹತ್ತಿರವಾಗಿದ್ದು, ಆ ರೂಟ್ ಅನ್ನೇ ವಧುವಿನ ಕಡೆಯವರು ಆರಿಸಿಕೊಂಡಿದ್ದರು. ಪುತ್ತೂರಿನ ಬಲ್ನಾಡು ಸಮೀಪದಿಂದ ವಜ್ರಕಾಯ ಎಂಬ ಹೆಸರಿನ ರೂಟ್ ಬಸ್ ಇದಾಗಿದ್ದು, ನುರಿತ ಚಾಲಕನೇ ಬಸ್ ಚಾಲನೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಕರಾಳ ಘಟನೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳ ಪೂರ್ಣ ಚಿಕಿತ್ಸೆಯನ್ನು ಸರ್ಕಾರ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಕಾಸರಗೋಡು ಜಿಲ್ಲಾಧಿಕಾರಿ ಗೆ ಸೂಚನೆ ನೀಡಿದ್ದಾರೆ. ಗಾಯಾಳುಗಳ ಪೈಕಿ ಬಹುತೇಕರು ಮಹಿಳೆಯರಾಗಿದ್ದು, ಹತ್ತು ಮಂದಿಯ ಸ್ಥಿತಿ ತೀರಾ ಚಿಂತಾಜನಕವಾಗಿದೆ.
ಒಟ್ಟಿನಲ್ಲಿ ಮದುವೆಯ ಸಂಭ್ರಮದಲ್ಲಿದ್ದ ಜನರು ಜವರಾಯನ ಅಟ್ಟಹಾಸಕ್ಕೆ ನಲುಗಿಹೋಗಿದ್ದಾರೆ. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯೆತೆಗಳಿದ್ದು, ಈ ಭೀಕರ ಅಪಘಾತವು ಅತ್ತ ಕೇರಳ-ಕರ್ನಾಟಕ ಗಡಿಪ್ರದೇಶವನ್ನೇ ತಲ್ಲಣಗೊಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ