ಕರ್ಫ್ಯೂ ಬಳಿಕ ಸಹಜ ಸ್ಥಿತಿಯತ್ತ ಮಂಗಳೂರು; ಬಸ್​ ಸಂಚಾರ, ಶಾಲಾ-ಕಾಲೇಜು ಪ್ರಾರಂಭ; ಇನ್ನೂ ಜಾರಿಯಲ್ಲಿದೆ ನಿಷೇಧಾಜ್ಞೆ

ಇದೇ ವೇಳೆ ಕೇರಳದ ಎಡರಂಗ ಮತ್ತು ಕಾಂಗ್ರೆಸ್ ಪಕ್ಷದ ಸಂಸದರು ಮತ್ತು ಶಾಸಕರನ್ನೊಳಗೊಂಡ ನಿಯೋಗ ಮಂಗಳೂರಿಗೆ ಭೇಟಿ ನೀಡಿತ್ತು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕ ನೆಲ್ಲಿಕುನ್ನು, ಮಾಜಿ ಎಂಪಿ ಕರುಣಾಕರನ್, ಕಣ್ಣೂರು ಎಂಪಿ ಸುಧಾಕರನ್ ಸೇರಿ ಆರು ಮಂದಿ ಇದ್ದ ನಿಯೋಗ ಮಂಗಳೂರಿನಲ್ಲಿ ಮೃತ ಇಬ್ಬರ ಮನೆಗಳಿಗೂ ತೆರಳಿ ಸಾಂತ್ವನ ಹೇಳಿದರು.

ಮಂಗಳೂರು

ಮಂಗಳೂರು

  • Share this:
ಪೌರತ್ವ ಕಿಚ್ಚಿನಿಂದ ಕುದಿಯುತ್ತಿದ್ದ ಮಂಗಳೂರು ಶಾಂತಿಯುತವಾಗಿದೆ. ಕರ್ಫ್ಯೂ ತೆಗೆದ ಬಳಿಕ ಇಂದು ಮಂಗಳೂರು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬಂದಿತ್ತು. ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಪರಿಸ್ಥಿತಿ ಸಹಜವಾಗಿತ್ತು. 3 ದಿನಗಳಿಂದ ಮುಚ್ಚಿದ್ದ ಶಾಲಾ- ಕಾಲೇಜುಗಳು ಮತ್ತೆ ಪ್ರಾರಂಭವಾಗಿವೆ. ರಸ್ತೆಗಳಲ್ಲಿ ವಾಹನಗಳು ಎಂದಿನಂತೆ ಸಂಚಾರ ಪ್ರಾರಂಭಿಸಿವೆ.

ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನು ಕರ್ಫ್ಯೂ ಮುಗಿದು ಎಲ್ಲವೂ ಶಾಂತವಾಯ್ತು ಎನ್ನುವಷ್ಟರಲ್ಲಿ ರಾಜಕೀಯ ನಾಯಕರು ದಾಂಗುಡಿ ಇಟ್ಟಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಮತ್ತು ಕೇರಳದ,ಕಾಂಗ್ರೆಸ್ ನ ಸಿಪಿಎಂ ನಾಯಕರ ಪ್ರತ್ಯೇಕ ನಿಯೋಗ ಇಂದು ಮಂಗಳೂರಿಗೆ ಭೇಟಿ ನೀಡಿ ಮೃತ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಕರ್ಫ್ಯೂ ಸಂದರ್ಭದಲ್ಲಿ ಮಂಗಳೂರು ಪ್ರವೇಶ ನಿರಾಕರಿಸಲ್ಪಟ್ಟಿದ್ದ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ನಿಯೋಗದ ಜೊತೆ ಮಂಗಳೂರಿಗೆ ಆಗಮಿಸಿದ್ದರು. ಮಾಜಿ ಸಚಿವರಾದ ಎಂ.ಬಿ ಪಾಟೀಲ್, ಜಮೀರ್ ಅಹ್ಮದ್ ಸಾಥ್ ನೀಡಿದ್ದರು. ಗೋಲಿಬಾರ್ ಘಟನೆಯಲ್ಲಿ ಮೃತರಾದ ಜಲೀಲ್ ಕಂದಕ್ ಮತ್ತು ನೌಶೀನ್ ಕುದ್ರೋಳಿ ಮನೆಗೆ ಭೇಟಿಯಿತ್ತ ನಿಯೋಗ, ಎರಡೂ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಮಂಡ್ಯದಲ್ಲಿ ಅಶೋಕ್ ನೇತೃತ್ವದಲ್ಲಿ ಕೆಡಿಪಿ ಸಭೆ; ಸಕ್ಕರೆ ಕಾರ್ಖಾನೆ, ಅಕ್ರಮ ಗಣಿಗಾರಿಕೆ, ಎನ್​ಆರ್​ಸಿ ಬಗ್ಗೆ ಚರ್ಚೆ

ಅಲ್ಲದೇ, ಮಾಜಿ ಸಿಎಂ ಸಿದ್ದರಾಮಯ್ಯ ವೈಯಕ್ತಿಕವಾಗಿ 5 ಲಕ್ಷ ಮತ್ತು ಜಿಲ್ಲಾ ಕಾಂಗ್ರೆಸ್ 2.5 ಲಕ್ಷ ಸೇರಿ ಎರಡು ಕುಟುಂಬಗಳಿಗೂ ತಲಾ 7.50 ಲಕ್ಷ ರೂಪಾಯಿ ಮೊತ್ತದ ನೆರವಿನ ಚೆಕ್​​ನ್ನು ಪರಿಹಾರವಾಗಿ ನೀಡಿದರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು. ಇಡೀ ಘಟನೆಗೆ ರಾಜ್ಯ ಸರಕಾರವೇ ನೇರ ಹೊಣೆ. ಪೌರತ್ವ ಮಸೂದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೀತಿರುವಾಗ ಇಲ್ಲಿ ಯಾಕೆ 144 ಸೆಕ್ಷನ್, ಕರ್ಫ್ಯೂ ಹಾಕಿ ಹತ್ತಿಕ್ಕಿದ್ದರು. ಪ್ರತಿಭಟನೆ ಜನರ ಹಕ್ಕು. ಅದನ್ನು ಕಸಿದು ಹಿಂಸೆಗೆ ಕಾರಣವಾದ ಗೃಹ ಸಚಿವ ಇದರ ಜವಾಬ್ದಾರಿ ಹೊರಬೇಕು ಎಂದು ಕಿಡಿಕಾರಿದರು.

ಪೊಲೀಸರೇ ತಪ್ಪಿತಸ್ಥರಾಗಿರುವಾಗ ಎಸ್ಐಟಿ ಮಾಡಿ, ಪೊಲೀಸರ ನೇತೃತ್ವದಲ್ಲಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬರುತ್ತಾ? ಇದು ಗುಂಡು ಹಾರಿಸಿದವರನ್ನು ರಕ್ಷಿಸುವ ತಂತ್ರ. ಇದಕ್ಕಾಗಿ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಜಾರ್ಖಂಡ್ ಚುನಾವಣಾ ಫಲಿತಾಂಶ; ಬಿಜೆಪಿಗೆ ಭಾರೀ ಮುಖಭಂಗ, ದಶಕದ ನಂತರ ಅಧಿಕಾರದತ್ತ ಕಾಂಗ್ರೆಸ್ ಮೈತ್ರಿಕೂಟ

ಇದೇ ವೇಳೆ ಕೇರಳದ ಎಡರಂಗ ಮತ್ತು ಕಾಂಗ್ರೆಸ್ ಪಕ್ಷದ ಸಂಸದರು ಮತ್ತು ಶಾಸಕರನ್ನೊಳಗೊಂಡ ನಿಯೋಗ ಮಂಗಳೂರಿಗೆ ಭೇಟಿ ನೀಡಿತ್ತು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕ ನೆಲ್ಲಿಕುನ್ನು, ಮಾಜಿ ಎಂಪಿ ಕರುಣಾಕರನ್, ಕಣ್ಣೂರು ಎಂಪಿ ಸುಧಾಕರನ್ ಸೇರಿ ಆರು ಮಂದಿ ಇದ್ದ ನಿಯೋಗ ಮಂಗಳೂರಿನಲ್ಲಿ ಮೃತ ಇಬ್ಬರ ಮನೆಗಳಿಗೂ ತೆರಳಿ ಸಾಂತ್ವನ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಶಾಂತಿಯುತ ವಾತಾವರಣ ನೆಲೆಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಒಟ್ಟಾರೆ ಮಂಗಳೂರು ಶಾಂತವಾಗುತ್ತಲೇ ರಾಜಕೀಯ ನಾಯಕರು ಕೆಸರೆರಚಾಟದಲ್ಲಿ ತೊಡಗಿದ್ದು ತಮ್ಮ ಬೇಳೆ ಬೇಯಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.

 
Published by:Latha CG
First published: