ವಿಜಯಪುರದಲ್ಲಿ ಬಸ್ಸಿಗಾಗಿ ಪ್ರಯಾಣಿಕನಿಂದ ಬೊಬ್ಬೆ: ಸಿಬ್ಬಂದಿಯ ಕಾಲರ್ ಹಿಡಿದು ಎಳೆದೊಯ್ದ ಪೊಲೀಸರು

ದಿಢೀರ್ ಪ್ರತಿಭಟನೆಯಿಂದಾಗಿ ಪ್ರಯಾಣಿಕರೂ ಕೂಡ ಆಕ್ರೋಶಕ್ಕೊಳಗಾದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ನಾಗನೂರ ಗ್ರಾಮದ ಮುತ್ತು ಎಂಬ ಪ್ರಯಾಣಿಕ ಬೊಬ್ಬೆ ಹಾಕುವ ಮೂಲಕ ಆಕ್ರೋಶ ಹೊರ ಹಾಕಿದ

ಸಾರಿಗೆ ಇಲಾಖೆ ಸಿಬ್ಬಂದಿಯ ಕಾಲರ್ ಹಿಡಿದು ಎಳೆದೊಯ್ದ ಕಾನ್ಸ್​ಟೇಬಲ್​​

ಸಾರಿಗೆ ಇಲಾಖೆ ಸಿಬ್ಬಂದಿಯ ಕಾಲರ್ ಹಿಡಿದು ಎಳೆದೊಯ್ದ ಕಾನ್ಸ್​ಟೇಬಲ್​​

  • Share this:
ವಿಜಯಪುರ( ಡಿಸೆಂಬರ್​. 11): ಬಸ್ಸಿಗಾಗಿ ಪ್ರಯಾಣಿಕರೊಬ್ಬರು ಬೊಬ್ಬೆ ಹಾಕಿ ಬಸ್ ಬಿಡುವಂತೆ ಅಳಲು ತೋಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ. ರಾಜ್ಯದ ಕೆಲವೆಡೆ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಬೆಳಿಗ್ಗೆಯಿಂದ ಎಂದಿನಂತೆ ಬಸ್ ಸಂಚಾರ ಆರಂಭವಾಗಿತ್ತು. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿರುವ ವಿಜಯಪುರ ಜಿಲ್ಲಾದ್ಯಂತ ಬಸ್​​ ಗಳು ರೋಡಿಗಿಳಿದಿದ್ದವು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದಾಗ ದಿಢೀರನೆ ಪ್ರತಿಭಟನೆಗೆ ಇಳಿದ ಕೆಲವು ಜನ ಚಾಲಕ ಮತ್ತು ಸಿಬ್ಬಂದಿಗಳು ನಿಗದಿತ ಸ್ಥಳಕ್ಕೆ ಹೊರಡಲು ಸಿದ್ಧವಾಗಿದ್ದ ಬಸ್ಸುಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.  ಪ್ರಯಾಣಿಕರನ್ನು ಕೆಳಗೆ ಇಳಿಸಿದರು. ನಮ್ಮ ಕಡೆ ಬಸ್ಸುಗಳನ್ನು ಬಂದ್ ಮಾಡಲಾಗಿದೆ. ಇಲ್ಲೇಕೆ ಓಡಿಸುತ್ತಿದ್ದೀರಿ ಎಂದು ಆವಾಜ್ ಹಾಕಿದರು.  ದಿಢೀರನೆ ನಡೆದ ಈ ಘಟನೆಯಿಂದಾಗಿ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿದ್ದ ಎನ್ ಇ ಕೆ ಆರ್ ಟಿ ಸಿ ಅಧಿಕಾರಿಗಳು ಆತಂಕಕ್ಕೆ ಒಳಗಾದರು. 

ಈ ಸಂದರ್ಭದಲ್ಲಿ ಸ್ಥಳಕ್ಕೆ ದೌಡಾಯಿಸಿದ ವಿಜಯಪುರ ನಗರದ ಗಾಂಧಿ ಚೌಕ್ ಪೊಲೀಸರು ಬಸವಂತವಾಗಿ ಬಸ್ ಸಂಚಾರ ತಡೆಯಲು ಯತ್ನಿಸಿದ ಸಿಬ್ಬಂದಿಯನ್ನು ಶರ್ಟಿನ ಕಾಲರ್ ಹಿಡಿದು ಎಳೆದುಕೊಂಡು ವಶಕ್ಕೆ ಪಡೆದರು.

ಆಗ ಪೊಲೀಸರ ಬಳಿಗೆ ದೌಡಾಯಿಸಿದ ಉಳಿದ ಸಿಬ್ಬಂದಿ ಮನವಿ ಮಾಡಿಕೊಂಡು ಅವರನ್ನು ಬಿಡುಗಡೆ ಮಾಡಿಸಿದರು. ಬಲವಂತವಾಗಿ ಬಸ್ ಬಂದ್ ಮಾಡಿಸುತ್ತಿದ್ದ ಸಿಬ್ಬಂದಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನೌಕರ ಎಂದು ನಂತರ ಗೊತ್ತಾಯಿತು.

ದಿಢೀರ್ ಪ್ರತಿಭಟನೆಯಿಂದಾಗಿ ಪ್ರಯಾಣಿಕರೂ ಕೂಡ ಆಕ್ರೋಶಕ್ಕೊಳಗಾದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ನಾಗನೂರ ಗ್ರಾಮದ ಮುತ್ತು ಎಂಬ ಪ್ರಯಾಣಿಕ ಬೊಬ್ಬೆ ಹಾಕುವ ಮೂಲಕ ಆಕ್ರೋಶ ಹೊರ ಹಾಕಿದ. ತನ್ನ ಹೆಂಡತಿಗೆ  ಹೆರಿಗೆಯಾಗಿದ್ದು, ಕೂಡಲೇ ಬಸ್ ಸಂಚಾರ ಆರಂಭ ಮಾಡಿ ಎಂದು ಬೊಬ್ಬೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದ. ಈ ಸಂದರ್ಭದರಲ್ಲಿ ದೇವರ ನಿಂಬರಗಿಯಿಂದ ಬಂದಿದ್ದ ಪ್ರಯಾಣಿಕ ಯಾಸೀನ್ ಏಕಾಏಕಿ ಹೀಗೆ ದಿಢೀರಾಗಿ ಬಸ್ ಬಂದ್ ಮಾಡಿದರೆ ಹೇಗೆ. ತಾನು ರೋಗಿಯೊಬ್ಬರನ್ನು ಬೇರೆ ಊರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿದೆ ಎಂದು ಆಕ್ರೋಶ ಹೊರ ಹಾಕಿದರು.

ಇದಕ್ಕೆ ಯಾದಗಿರಿಯ ಬಸವರಾಜ ಎಂಬ ಯುವಕ ಕೂಡ ದನಿಗೂಡಿಸಿ ಏಕಾಏಕಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.  ಬಸ್ ಯಾವಾಗ ಆರಂಭವಾಗುತ್ತದೆ ಎಂದರೂ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ ಘಟನೆ ನಡೆಯಿತು.

ಅಲೋಪಥಿ ಒಪಿಡಿ ಬಂದ್- ರೋಗಿಗಳ ಪರದಾಟ

ಈ ಮಧ್ಯೆ ಆಯುರ್ವೇದ ವೈದ್ಯರಿಗೆ ಬ್ರಿಡ್ಜ್ ಕೋರ್ಸ್ ಅವಕಾಶ ಕಲ್ಪಿಸಿ ಕೆಲವು ಶಸ್ತ್ರಚಿಕಿತ್ಸೆ ನಡೆಸಲು ಅನುಮತಿ ನೀಡುವ ಕೇಂದ್ರ ಸರಕಾರದ ನೂತನ ಕಾಯಿದೆಯನ್ನು ವಿರೋಧಿಸಿ ಅಲೋಪಥಿ ವೈದ್ಯರು ವಿಜಯಪುರ ಜಿಲ್ಲಾದ್ಯಂತ ತಮ್ಮ ಒಪಿಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ : 350 ಸಹಾಯಕ ಪ್ರಾಧ್ಯಾಪಕರ ನೇಮಕ: ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಡಿಸಿಎಂ ಅಶ್ವತ್ಥನಾರಾಯಣ ಸೂಚನೆ

ವಿಜಯಪುರ ನಗರದಲ್ಲಿ ಬಿಎಲ್​​ಡಿಇ ಆಸ್ಪತ್ರೆ, ಅಲ್-ಅಮೀನ್ ಆಸ್ಪತ್ರೆ ಸೇರಿದಂತೆ ಬಿದರಿ, ಮುದನೂರ, ಬಸವೇಶ್ವರ ಆಸ್ಪತ್ರೆ ಸೇರಿದಂತೆ ಸುಮಾರು 120ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳು ಹಾಗೂ ವಿಜಯಪುರ ಜಿಲ್ಲೆಯ ನಾನಾ ಕಡೆಗಳಲ್ಲಿರುವ 400ಕ್ಕೂ ಹೆಚ್ಚು ಆಸ್ಪತ್ರೆ ಮತ್ತು ಕ್ಲಿನಿಕ್ ಗಳು ಕೂಡ ಇಂದು ಬಂದ್ ಆಗಿದ್ದವು. ಇದರಿಂದ ರೋಗಿಗಳು ಪರದಾಡುವಂತಾಯಿತು.

ಒಟ್ಟಾರೆ ವಿಜಯಪುರ ಜಿಲ್ಲೆಯಲ್ಲಿ ಇಂದು ಒಂದೆಡೆ ಪ್ರಯಾಣಿಕರು ಮತ್ತೊಂದೆಡೆ ರೋಗಿಗಳು ಪರದಾಡಿದ್ದಂತು ಇಂದಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಬಸ್ ಸಂಚಾರ ಸಾಮಾನ್ಯವಾಗಿತ್ತು. ಆದರೆ, ಬೇರೆ ಜಿಲ್ಲೆಗಳಲ್ಲಿ ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಇಲ್ಲಿಯೂ ಕೆಲವರು ಪ್ರತಿಭಟನೆ ನಡೆಸಿದ್ದರಿಂದ ಬಸ್ಸುಗಳ ಸಂಖ್ಯೆಯಲ್ಲಿ ಕಡಿತ ಮಾಡಲಾಯಿತು.
Published by:G Hareeshkumar
First published: