ತುಮಕೂರಿನ ಶಿರಾ ಬಳಿ ಬಸ್​ಗೆ ಲಾರಿ ಡಿಕ್ಕಿ; ಪ್ರಯಾಣಿಕನ ಹಠಕ್ಕೆ ಅಮಾಯಕ ಸಾವು, 10 ಜನರಿಗೆ ಗಾಯ

Tumakuru Accident: ಶುಕ್ರವಾರ ರಾತ್ರಿ ತುಮಕೂರು ಜಿಲ್ಲೆಯ ಶಿರಾ ಬಳಿ ಬಸ್ ಸಾಗುತ್ತಿದ್ದಾಗ ಬಸ್​ನಲ್ಲಿದ್ದ ಪ್ರಯಾಣಿಕ ತನಗೆ ಮೂತ್ರ ವಿಸರ್ಜನೆ ಮಾಡಬೇಕು. ಇಲ್ಲೇ ಬಸ್ ನಿಲ್ಲಿಸಿ ಎಂದು ಹಠ ಮಾಡಿದ್ದಾನೆ. ಇದು ಅಪಘಾತ ವಲಯ ಎಂದು ಹೇಳಿದರೂ ಕೇಳದ ಪ್ರಯಾಣಿಕ ಬಸ್​ನಿಂದ ಕೆಳಗೆ ಇಳಿದಿದ್ದಾನೆ.

ತುಮಕೂರಿನಲ್ಲಿ ನಡೆದ ಅಪಘಾತದಲ್ಲಿ ನುಜ್ಜುಗುಜ್ಜಾದ ಬಸ್ ಮತ್ತು ಲಾರಿ

ತುಮಕೂರಿನಲ್ಲಿ ನಡೆದ ಅಪಘಾತದಲ್ಲಿ ನುಜ್ಜುಗುಜ್ಜಾದ ಬಸ್ ಮತ್ತು ಲಾರಿ

  • Share this:
ತುಮಕೂರು (ಡಿ. 28): ರಾತ್ರಿ ವೇಳೆ ಬಸ್​ಗಳಲ್ಲಿ ಸಂಚರಿಸುವಾಗ ಕೊಂಚ ಯಾಮಾರಿದರೂ ದುರಂತ ಸಂಭವಿಸಿಬಿಡುತ್ತದೆ. ಬಹುತೇಕ ಸಂದರ್ಭಗಳಲ್ಲಿ ಚಾಲಕನ ಅಜಾಗರೂಕತೆಯಿಂದಲೇ ಅಪಘಾತಗಳು ಸಂಭವಿಸುತ್ತವೆ. ಆದರೆ, ತುಮಕೂರಿನಲ್ಲಿ ಬಸ್​ ಪ್ರಯಾಣಿಕನ ಹಠದಿಂದ ಅಮಾಯಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾರಂಗೆರೆಯ ಬಳಿ ಬಸ್ ಸಾಗುತ್ತಿದ್ದಾಗ ಬಸ್​ನಲ್ಲಿದ್ದ ಪ್ರಯಾಣಿಕ ತನಗೆ ಮೂತ್ರ ವಿಸರ್ಜನೆ ಮಾಡಬೇಕೆಂದು ಬಸ್ ನಿಲ್ಲಿಸಲು ಮನವಿ ಮಾಡಿದ್ದಾನೆ. ಇದು ಅಪಘಾತ ವಲಯ. ಮುಂದೆ ಎಲ್ಲಾದರೂ ನಿಲ್ಲಿಸುತ್ತೇನೆ ಎಂದು ಚಾಲಕ ಹೇಳಿದರೂ ಕೇಳದ ಪ್ರಯಾಣಿಕ ತನಗೆ ಅರ್ಜೆಂಟ್ ಆಗಿರುವುದರಿಂದ ಇಲ್ಲೇ ನಿಲ್ಲಿಸಿ ಎಂದು ಪಟ್ಟು ಹಿಡಿದಿದ್ದಾನೆ. ಆತನ ಹಠಕ್ಕೆ ಮಣಿದ ಚಾಲಕ ಬಸ್​ ಅನ್ನು ರಸ್ತೆ ಬದಿ ನಿಲ್ಲಿಸಿದ್ದಾನೆ.

ಪ್ರಯಾಣಿಕ ಕೆಳಗೆ ಇಳಿದು ಮೂತ್ರ ವಿಸರ್ಜನೆ ಮಾಡುವಾಗ ವೇಗವಾಗಿ ಬಂದ ಲಾರಿ ಬಸ್​ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ರಾತ್ರಿಯಾದ್ದರಿಂದ ವೇಗವಾಗಿ ಬರುತ್ತಿದ್ದ ಲಾರಿ ಚಾಲಕನಿಗೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬಸ್ ಹತ್ತಿರ ಬಂದ ನಂತರ ಕಂಡಿದೆ. ಆದರೆ, ಸ್ಪೀಡ್ ಕಡಿಮೆ ಮಾಡಲು ಸಾಧ್ಯವಾಗದೆ ಅವಘಡ ಸಂಭವಿಸಿದೆ. ಸೇತುವೆ ಬಳಿ ನಿಲ್ಲಿಸಿದ್ದ ಬಸ್​ಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಬಸ್ ಹಳ್ಳಕ್ಕೆ ಉರುಳಿದೆ. ಇದರಿಂದಾಗಿ ಬಸ್​ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ 40 ವರ್ಷದ ಮಲ್ಲಪ್ಪ ಸಜ್ಜನ್ ಎಂಬ ಪ್ರಯಾಣಿಕನಿಗೆ ತೀವ್ರವಾಗಿ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ನದಿ ಬಳಿ ಡೆತ್​ ನೋಟ್ ಬರೆದಿಟ್ಟು ಕಾಣೆಯಾಗಿದ್ದ ಬಾಗಲಕೋಟೆ ಯುವತಿ ಪ್ರಕರಣಕ್ಕೆ ಹೊಸ ತಿರುವು!

ಬಸ್​ಗೆ ಲಾರಿ ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್​ನ ಚಾಲಕ ತನ್ನ ಮಾತನ್ನು ಕೇಳದೆ ಬಸ್ ನಿಲ್ಲಿಸಲು ಹಠ ಮಾಡಿದ ಪ್ರಯಾಣಿಕನ ಮೇಲೆ ಆಕ್ರೋಶ ಹೊರಹಾಕಿದ್ದಾನೆ. ಇದರಿಂದ ಗಾಬರಿಯಾದ ಆ ಪ್ರಯಾಣಿಕ ಅಲ್ಲಿಂದ ಪರಾರಿಯಾಗಿದ್ದಾನೆ. ನಿನ್ನೆ ಮಧ್ಯರಾತ್ರಿ 1.30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 10 ಜನರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Sushma Chakre
First published: