ಬಾಗಲಕೋಟೆ (ಮಾ. 03): ಜಿಲ್ಲೆ ಮುಧೋಳ ತಾಲೂಕಿನ ಉತ್ತೂರು ಗ್ರಾಮದ ಬಳಿ ಮಿನಿ ಲಕ್ಸುರಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ ಅನಾಹುತ ಸಂಭವಿಸಿದೆ. ಡಿಕ್ಕಿ ವೇಳೆ ಬಸ್ ಪಲ್ಟಿಯಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿ ಉರಿದಿದೆ. ಈ ವೇಳೆ ಬಸ್ ನಲ್ಲಿದ್ದ ಇಬ್ಬರು ಮಹಿಳೆಯರು ಜೀವಂತ ಸಮಾಧಿಯಾಗಿರುವ ದುರ್ಘಟನೆ ಸಂಭವಿಸಿದೆ. ಯಾದವಾಡದ ಈರವ್ವ ಗಾಣಿಗೇರ(70), ಅಣ್ಣವ್ವ ಗಾಣಿಗೇರ(58) ಮೃತ ದುರ್ದೈವಿಗಳಾಗಿದ್ದಾರೆ. ಇನ್ನುಳಿದ ಪ್ರಯಾಣಿಕರು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್ ನಿಂದ ಹೊರಗೆ ಓಡಿ ಬಂದಿದ್ದಾರೆ. ಘಟನೆಯಲ್ಲಿ 11 ಜನರು ಗಾಯಾಗೊಂಡಿದ್ದು, ಅವರನ್ನು ಮುಧೋಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಇನ್ನು ಮಿನಿ ಲಕ್ಷುರಿ ಬಸ್ ನಲ್ಲಿ 25ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಲೋಕೇಶ್ ಜಗಲಾಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮದುವೆಗೆ ಹೋಗಿದ್ದವರಿಬ್ಬರು ಮಸಣಕ್ಕೆ
ಬೆಳಗಾವಿ ಜಿಲ್ಲೆಯ ಯಾದವಾಡ ಪಟ್ಟಣದ ಜನರು ಅಥಣಿ ತಾಲ್ಲೂಕಿನ ಚಮಕೇರಿ ಗ್ರಾಮಕ್ಕೆ ಮದುವೆಗೆಂದು ಮಿನಿ ಲಕ್ಸುರಿ ಬಸ್ ನಲ್ಲಿ ತೆರಳಿದ್ದರು. ಮದುವೆ ಮುಗಿಸಿಕೊಂಡು ವಾಪಸ್ ಉತ್ತೂರು ಗ್ರಾಮದ ಮೂಲಕ ಯಾದವಾಡಕ್ಕೆ ಸಂಜೆ 6ಗಂಟೆಗೆ ಹೊರಡಲಾಗಿತ್ತು. ಈ ವೇಳೆ ಚಾಲಕ ಕಬ್ಬು ತುಂಬಿದ ಟ್ರ್ಯಾಕ್ಟರ್ ಓವರ್ ಟೇಕ್ ಮಾಡುವುದಕ್ಕೆ ಹೋಗಿ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬಸ್ ಪಲ್ಟಿಯಾಗಿ ರಸ್ತೆ ಪಕ್ಕದ ಕಂದಕಕ್ಕೆ ಬಿದಿದ್ದೆ. ಈ ವೇಳೆ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದು ವಿದ್ಯುತ್ ತಂತಿ ಸ್ಪರ್ಶಿಸಿ ಬಸ್ ಹೊತ್ತಿ ಉರಿದಿದೆ ಎನ್ನಲಾಗಿದೆ. ಘಟನೆ ಕುರಿತು ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಜೀವಂತ ಸುಟ್ಟು ಕರಕಲಾಗಿದ್ದನ್ನು ಕಂಡು ಕಣ್ಣೀರಿಟ್ಟ ಜನ!
ಉತ್ತೂರು ಗ್ರಾಮದ ಬಳಿ ದುರಂತ ನಡೆಯುತ್ತಿದ್ದಂತೆ ಜನ ಜಮಾಯಿಸಿದ್ದಾರೆ. ಆದರೆ ಬೆಂಕಿ ಕೆನ್ನಾಲಿಗೆಗೆ ಬಸ್ ಹೊತ್ತಿ ಉರಿದಿದೆ. ಇಬ್ಬರು ಮಹಿಳೆಯರು ಬೆಂಕಿಗೆ ಸಿಲುಕಿಕೊಳ್ಳುತ್ತಿದ್ದಂತೆ ಆಕ್ರಂದನ ಮಾಡತೊಡಗಿದ್ದಾರೆ. ಜನರಿಗೆ ಅವರಿಬ್ಬರನ್ನು ಪಾರು ಮಾಡಲಿಕ್ಕೆ ಅವಕಾಶ ಆಗಿಲ್ಲ. ಬಸ್ ಹೊತ್ತ ಉರಿಯುತ್ತಿದ್ದಂತೆ ತಕ್ಷಣಕ್ಕೆ ಅಗ್ನಿಶಾಮಕ ದಳ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಸ್ಥಳಕ್ಕೆ ಧಾವಿಸುವ ಮುನ್ನವೇ ಮ್ಯಾಕ್ಸಿ ಕ್ಯಾಬ್ ಸುಟ್ಟು ಕರಕಲಾಗಿದೆ. ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಮುಧೋಳ ತಾಲೂಕಾ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಧೋಳ ತಾಲೂಕು ಆರೋಗ್ಯಾಧಿಕಾರಿ ಮಲಘಾಣ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ