news18-kannada Updated:June 5, 2020, 1:22 PM IST
bಸವನ ಜೊತೆ ದರ್ಶನ್
ಮೈಸೂರು (ಜೂ.5): ಅದು ಮಂಡ್ಯ ಲೋಕಸಭೆ ಚುನಾವಣೆಯ ಸಮಯ. ಅಂದು ಇಡೀ ಕರ್ನಾಟಕದಲ್ಲಿ ಮಂಡ್ಯ ಚುನಾವಣೆಯ ಅಬ್ಬರವೇ ಇತ್ತು. ಅಂಬರೀಷ್ ಪತ್ನಿ ಸುಮಲತಾ ಅಂಬರೀಷ್ ಪರ ನಟ ದರ್ಶನ್, ಯಶ್ ಭರ್ಜರಿ ಪ್ರಚಾರ ಮಾಡಿದ್ದರು. ಹೀಗೆ ಮೈಸೂರಿನ ಕೆ.ಆರ್.ನಗರದಲ್ಲಿ ನಟ ದರ್ಶನ್ ಪ್ರಚಾರ ಮಾಡುತ್ತಿದ್ದಾಗ, ದಾರಿಯಲ್ಲಿ ಅಡ್ಡ ನಿಂತಿದ್ದ ಬಸವ ಪ್ರಚಾರಕ್ಕೆ ಅಡ್ಡಿ ಪಡಿಸಿತ್ತು. ಅಂದು ದರ್ಶನ್ ಪ್ರಚಾರದ ವಾಹನದಿಂದ ಕೇಳಗಿಳಿದು ಸ್ಪರ್ಶಿಸುತ್ತಿದ್ದಂತೆ ದಾರಿ ಬಿಟ್ಟಿದ್ದ ದೇವರ ಬಸವ ನೆರೆದಿದ್ದ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತ್ತು. ಅದಾದ ನಂತರ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಆ ಬಸವ ಖ್ಯಾತಿ ಗಳಿಸಿತ್ತು. ಆದ್ರೆ ತಿಂಗಳ ಹಿಂದೆ ಅನಾರೋಗ್ಯಕ್ಕಿಡಾಗಿದ್ದ ಬಸವ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಹೌದು, ಕಳೆದ ಲೋಕಸಭಾ ಚುನಾವಣೆ ವೇಳೆ ದರ್ಶನ್ ಪ್ರಚಾರದ ವೇಳೆ ಅಡ್ಡ ಬಂದು ನಂತದ ದರ್ಶನ್ ಸ್ಪರ್ಶಿಸಿದ ಮೇಲೆ ದಾರಿ ಬಿಟ್ಟಿದ್ದ ಬಸವ ಸಾವನ್ನಪ್ಪಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ದೇವರ ಬಸವ ಪ್ರಚಾರದಲ್ಲಿ ಜನಜಂಗುಳಿ ಇದ್ದರು ಜಗ್ಗದೆ ಜನರ ಮಧ್ಯೆಯೆ ನಿಂತಿತ್ತು. ಇದನ್ನ ಗಮನಿಸಿದ ಚಾಲೆಜಿಂಗ್ ಸ್ಟಾರ್ ದರ್ಶನ್ ಪ್ರಚಾರದ ವಾಹನದಿಂದ ಕೇಳಗಿಳಿದು ಬಂದು, ಆ ಬಸವನ ಮೈಸವರಿದ್ದರು.
ಇದನ್ನೂ ಓದಿ: ಗರ್ಭಿಣಿ ಆನೆ ಹತ್ಯೆ ಪ್ರಕರಣದಲ್ಲಿ ಓರ್ವ ಅರೆಸ್ಟ್; ಅಷ್ಟಕ್ಕೂ ಈತ ಯಾರು ಗೊತ್ತಾ?
ದರ್ಶನ್ ಬಸವನ ಮೈ ಮುಟ್ಟುತ್ತಿದ್ದಂತೆ ಆಶ್ಚರ್ಯವೆಂಬಂತೆ ಜನರ ಮಧ್ಯೆ ಇದ್ದ ಬಸವ ದಾರಿ ಬಿಟ್ಟು ಅಲ್ಲಿಂದ ಹೊರಟು ಹೋಗಿತ್ತು. ಅದು ಕಾಕತಾಳಿಯವೋ ಏನೋ ದರ್ಶನ್ ಅವರ ಪ್ರಾಣಿ ಪ್ರೀತಿ ಆ ದೇವರ ಬಸವನಿಗು ತಿಳಿದುಬಿಟ್ಟಂತೆ ಕಂಡಿತು. ಆ ನಂತರ ಕಾಳಮ್ಮನಕೊಪ್ಪಲು ಗ್ರಾಮದ ಈ ಬಸವ ದರ್ಶನ್ ಬಸವ ಎಂದೆ ಖ್ಯಾತಿ ಗಳಿಸಿತು.
ಆದ್ರೆ ಕಳೆದ ಮೇ ತಿಂಗಳಿನಲ್ಲಿ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕಿಡಾಗಿದ್ದ ಕಾಳಮ್ಮನಕೊಪ್ಪಲು ಬಸವ ತೀವ್ರ ನಿತ್ರಾಣವಾಗಿತ್ತು. ಗ್ರಾಮದ ದೇವಾಲಯ ಆವರಣದಲ್ಲಿ ಮೇವು ನೀರ ಬಿಟ್ಟು ಮಲಗಿದ್ದ ಬಸವನನ್ನ ದರ್ಶನ್ ಮತ್ತೊಮ್ಮೆ ಬಂದು ನೋಡಲಿ ಅನ್ನೋ ಆಸೆಯನ್ನ ಗ್ರಾಮದ ಜನರು ನಿರೀಕ್ಷಿಸಿದ್ದರು. ಈ ಬಗ್ಗೆ ತಕ್ಷಣ ಮಾಹಿತಿ ಪಡೆದ ನಟ ದರ್ಶನ್ ತಮ್ಮ ಮೈಸೂರಿನ ಸ್ನೇಹಿತರನ್ನ ಕಳುಹಿಸಿ ಬಸವನ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಅದಕ್ಕೆ ಬೇಕಾದ ಔಷಧ ನೀಡಿ ಅಗತ್ಯವಿದ್ದರೆ ಮತ್ತಷ್ಟು ಸಹಾಯ ಮಾಡುವ ಭರವಸೆ ನೀಡಿದ್ದರು.
ಒಂದು ತಿಂಗಳಿನಿಂದ ಕಾಳಮ್ಮನ ಕೊಪ್ಪಲು ದೇವಾಲಯದ ಆವರಣದಲ್ಲಿ ಬಸವನಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬಸವ ಸಾವನ್ನಪ್ಪಿದ್ದು, ಗ್ರಾಮದ ದೇವಾಲಯದ ಆವರಣದಲ್ಲಿ ಕೊನೆಯುಸಿರೆಳೆದಿದೆ. ಅಂದು ಬಸವ ಅನಾರೋಗ್ಯದ ವಿಷಯ ತಿಳಿದು ಸ್ಪಂದಿಸಿದ್ದ ನಟ ದರ್ಶನ್ಗೆ ಈ ಬಸವನ ಸಾವಿನ ವಿಷಯ ತಿಳಿಸಿ ಅಂತ ಗ್ರಾಮದ ಜನರು ಮನವಿ ಮಾಡಿದ್ದಾರೆ.
ದರ್ಶನ್ ಒಬ್ಬ ಅಪ್ರತಿಮ ಪ್ರಾಣಿ ಪ್ರಿಯ, ತಮ್ಮ ತೋಟದಲ್ಲಿ ಹಸು, ಕುದುರೆ, ಕೋಳಿ,ಕುರಿ ಅಂತ ನೂರಾರು ಪ್ರಾಣಿ ಸಾಕಿರುವ ಡಿ.ಬಾಸ್ ತಮ್ಮ ಸಿನಿಮಾ ಸೆಟ್ಗಳಲ್ಲಿ ಆಗ್ಗಾಗ್ಗೆ ಪ್ರಾಣಿ ಪ್ರೀತಿ ತೋರಿರೋದು ಎಲ್ಲರಿಗು ಗೊತ್ತಿದೆ. ಆದರೆ, ಒಮ್ಮೆಯೂ ನೋಡಿರದ ಊರಿನಲ್ಲಿದ್ದ ಬಸವನಿಗೂ ಸಹ ದರ್ಶನ್ರ ಪ್ರಾಣಿ ಪ್ರಿತಿ ಗೊತ್ತಾಗಿತ್ತು. ಅಂದು ಮೈ ಮುಟ್ಟಿದ ತಕ್ಷಣ ತಕರಾರು ಮಾಡದೆ ದಾರಿ ಬಿಟ್ಟಿದ್ದ ಬಸವ, ಇಂದು ಕೊನೆಯಸಿರೆಳೆದಿದ್ದು ಮಾತ್ರ ನೋವಿನ ಸಂಗತಿಯಾಗಿದೆ. ಪ್ರಾಣಿ ಪ್ರಿಯನಾಗಿರುವ ನಟ ದರ್ಶನ್ ಈ ದೇವರ ಬಸವನ ಸಾವಿಗೆ ಮರುಗುವುದರಲ್ಲಿ ಅನುಮಾನವೇ ಇಲ್ಲ, ಈ ವಿಷಯ ಹೇಗಾದರೂ ದರ್ಶನ್ಗೆ ತಿಳಿಯಲಿ ಅನ್ನೋದೆ ಗ್ರಾಮಸ್ಥರ ಆಶಯ.
First published:
June 5, 2020, 1:22 PM IST