News18 India World Cup 2019

ಟಾರ್ಗೆಟ್-22 ಮುಟ್ಟಿದ ನಂತರ ಬಿಎಸ್​ವೈ ಅಖಾಡಕ್ಕೆ? ಸೋಮವಾರದೊಳಗೆ ಕ್ಷಿಪ್ರ ಕ್ರಾಂತಿ ಸಾಧ್ಯತೆ


Updated:September 14, 2018, 4:04 PM IST
ಟಾರ್ಗೆಟ್-22 ಮುಟ್ಟಿದ ನಂತರ ಬಿಎಸ್​ವೈ ಅಖಾಡಕ್ಕೆ? ಸೋಮವಾರದೊಳಗೆ ಕ್ಷಿಪ್ರ ಕ್ರಾಂತಿ ಸಾಧ್ಯತೆ
ಬಿಎಸ್ ಯಡಿಯೂರಪ್ಪ

Updated: September 14, 2018, 4:04 PM IST
- ರಮೇಶ್ ಹಿರೇಜಂಬುರು, ನ್ಯೂಸ್18 ಕನ್ನಡ

ಬೆಂಗಳೂರು(ಸೆ. 14): ಗೌರಿ ಹಬ್ಬದ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುತ್ತದೆ, ಕಾದು ನೋಡಿ ಎಂದು ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಈಗ ಗೌರಿ-ಗಣೇಶ ಹಬ್ಬ ಮುಗಿಯುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಟ್ವಿಸ್ಟ್ ನೀಡುವ ಬೆಳವಣಿಗೆಗಳಾಗುತ್ತಿವೆ. ಸರಕಾರ ಉರುಳಿಸಲು ಅಂಡರ್​ವರ್ಲ್ಡ್ ಕ್ರಿಮಿನಲ್​ಗಳು ಬಿಜೆಪಿ ಜೊತೆ ಕೈಜೋಡಿಸಿರುವ ಸುದ್ದಿ ಮಧ್ಯಾಹ್ನದಿಂದಲೂ ಸ್ಫೋಟಗೊಂಡಿದೆ. ಇದೀಗ ಬಿಜೆಪಿ ತನ್ನ ಯೋಜನೆ ಸಾಫಲ್ಯಗೊಳಿಸಲು ಟಾರ್ಗೆಟ್-22 ಮಾಡಿಕೊಂಡಿದೆ. ನ್ಯೂಸ್18 ಕನ್ನಡಕ್ಕೆ ಸಿಕ್ಕ ಮಾಹಿತಿ ಪ್ರಕಾರ, 22 ಶಾಸಕರ ಗ್ರೀನ್ ಸಿಗ್ನಲ್ ಸಿಗುವವರೆಗೂ ಬಿಜೆಪಿ ಸೈಲೆಂಟ್ ಆಪರೇಷನ್ ಮಾಡಲು ನಿರ್ಧರಿಸಿದೆ. ಈಗ ಬಿಜೆಪಿ ಬಳಿ 16 ಶಾಸಕರ ಪಟ್ಟಿ ಇದೆ. ಇನ್ನೂ ಕನಿಷ್ಠ 6 ಶಾಸಕರನ್ನು ಬಿಜೆಪಿಯತ್ತ ಸೆಳೆಯಲು ಬಲೆ ಬೀಸಲಾಗಿದೆ. ಬಿಜೆಪಿಯ ಮಿಷನ್-22 ಈಡೇರುವವರೆಗು ಸಮ್ಮಿಶ್ರ ಸರಕಾರ ಸೇಫ್ ಆಗಿರಲಿದೆ.

ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ 16 ಶಾಸಕರು ಸಿದ್ಧವಾಗಿದ್ದಾರೆ. ಆದರೆ, ಅಂತಿಮವಾಗಿ ಎಷ್ಟು ಶಾಸಕರು ಜಾರಕಿಹೊಳಿ ಬ್ರದರ್ಸ್ ಜೊತೆ ಉಳಿಯಲಿದ್ದಾರೆಂಬುದು ಸ್ಪಷ್ಟವಿಲ್ಲ. ಈ ಬೆಳಗಾವಿ ಬ್ರದರ್ಸ್ ಅವರನ್ನಷ್ಟೇ ನಂಬಿ ಕುಳಿತಿರಬೇಡಿ. ಜೆಡಿಎಸ್ ಮತ್ತು ಕಾಂಗ್ರೆಸ್​ನಲ್ಲಿರುವ ಇತರ ಅತೃಪ್ತರಿಗೆ ಗಾಳ ಹಾಕಿರಿ ಎಂದು ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಸಲಹೆ ನೀಡಿದೆ. ಅದರಂತೆ, ಬಿಎಸ್​ವೈ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಸೋಮವಾರದೊಳಗೆ ಈ ಟಾರ್ಗೆಟ್-22 ತಲುಪಲು ಬಿಜೆಪಿ ಡೇಟ್ ಫಿಕ್ಸ್ ಮಾಡಿದೆ. ತಮ್ಮ ಟಾರ್ಗೆಟ್ ರೀಚ್ ಆದ ನಂತರವಷ್ಟೇ ಬಿಎಸ್​ವೈ ಅವರು ಮುಖ್ಯತೆರೆಗೆ ಬರಲಿದ್ದಾರೆ. ಅಂದುಕೊಂಡಂತೆ ಆದರೆ, ಮೊದಲ ಹಂತದಲ್ಲಿ 11 ಅತೃಪ್ತ ಶಾಸಕರ ರಾಜೀನಾಮೆ ಕೊಡಿಸುವ ಸಾಧ್ಯತೆ ಇದೆ. ಎರಡನೇ ಹಂತದಲ್ಲಿ 6 ಶಾಸಕರು ರಾಜೀನಾಮೆ ಕೊಡಲಿದ್ದಾರೆ. ಆ ನಂತರ ಸೆಪ್ಟೆಂಬರ್ ಅಂತ್ಯದೊಳಗೆ ರಾಜ್ಯಪಾಲರ ಬಳಿ ಸರಕಾರ ರಚನೆಯ ಹಕ್ಕು ಮಂಡಿಸಲಾಗುವುದು. ಆ ಮೂಲಕ ಸರಕಾರವನ್ನು ಉರುಳಿಸುವ ಪ್ಲಾನ್ ಬಿಎಸ್​ವೈ ಅಂಡ್ ಟೀಮ್​ನದ್ದಾಗಿದೆ.

ಹೈಕಮಾಂಡ್ ಗರಂ:
ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ, ಆಪರೇಷನ್ ಕಮಲ ನಡೆಸಕೂಡದೆಂದು ರಾಜ್ಯ ಬಿಜೆಪಿ ನಾಯಕರಿಗೆ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸರಕಾರ ತನ್ನಿಂತಾನೆ ಬಿದ್ದುಹೋಗಬಹುದು. ಅಥವಾ ಲೋಕಸಭೆ ಚುನಾವಣೆ ಮುಗಿಯುವವರೆಗೂ ಬಿಜೆಪಿಗೆ ಕೆಟ್ಟ ಹೆಸರು ಬರಬಾರದೆಂಬ ಉದ್ದೇಶದಿಂದ ಆಪರೇಷನ್ ಕಮಲಕ್ಕೆ ಹೈಕಮಾಂಡ್ ರೆಡ್ ಸಿಗ್ನಲ್ ನೀಡಿತ್ತು. ಆದರೆ, ಇತ್ತೀಚೆಗೆ ಡಿಕೆಶಿ ವಿಚಾರವಾಗಿ ಬೆಳಗಾವಿಯ ಪ್ರಬಲ ರಾಜಕಾರಣಿಗಳಾದ ಜಾರಕಿಹೊಳಿ ಸಹೋದರರು ಸೇರಿದಂತೆ ಅನೇಕ ಕಾಂಗ್ರೆಸ್ ಶಾಸಕರು ಬಹಿರಂಗವಾಗಿಯೇ ಸರಕಾರದ ವಿರುದ್ಧ ಕೆಂಡಕಾರಲು ಆರಂಭಿಸಿದ್ದಾರೆ. ಈಗ ಆಪರೇಷನ್ ಕಮಲಕ್ಕೆ ಸರಿಯಾದ ಸಮಯವೆಂದು ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಯಾವುದೇ ಕಾರಣಕ್ಕೂ ಇದು ಬಿಜೆಪಿಗೆ ಕೆಟ್ಟ ಹೆಸರು ಬರದ ರೀತಿಯಲ್ಲಿ ರಹಸ್ಯವಾಗಿಯೇ ನಡೆಯಬೇಕೆಂದೂ ಸೂಚನೆ ಕೊಡಲಾಗಿತ್ತು. ಬಿಎಸ್ ಯಡಿಯೂರಪ್ಪ, ಬಿವೈ ರಾಘವೇಂದ್ರ, ಶ್ರೀರಾಮುಲು ಅವರು ಪ್ರಮುಖವಾಗಿ ಈ ಆಪರೇಷನ್​ನ ನೇತೃತ್ವ ವಹಿಸಿಕೊಂಡು ಕಾಂಗ್ರೆಸ್ ಅತೃಪ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಎಲ್ಲವೂ ಮಾಧ್ಯಮಗಳಲ್ಲಿ ರಸವತ್ತಾದ ಸುದ್ದಿಗಳಾಗಿ ಪ್ರತೀ ದಿನವೂ ಪ್ರಕಟಗೊಳ್ಳುತ್ತಿದೆ. ಜಾರಕಿಹೊಳಿ ಬ್ರದರ್ಸ್ ಹೈಡ್ರಾಮಾ, ಬಿಜೆಪಿಯವರು ಒಡ್ಡುತ್ತಿರುವ ಹಣದ ಆಮಿಷ ಕುರಿತ ಸುದ್ದಿಗಳು ಬರುತ್ತಲೇ ಇವೆ. ಈ ಬೆಳವಣಿಗೆಗಳು ಬಿಜೆಪಿ ಹೈಕಮಾಂಡ್​ಗೆ ಇರಿಸುಮುರುಸು ಮಾಡುತ್ತಿವೆ. ಮಾಧ್ಯಮಗಳಿಗೆ ಗೊತ್ತಾಗುವ ರೀತಿಯಲ್ಲಿ ಚಟುವಟಿಕೆ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರ ನಡವಳಿಕೆಯು ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿದೆ. ಆಪರೇಷನ್ ಕಮಲದ ಮಸಿ ಮೆತ್ತಿಕೊಂಡರೆ ಪಕ್ಷದ ಇಮೇಜ್​ಗೆ ಡ್ಯಾಮೇಜ್ ಆಗುತ್ತದೆ. ಹುಷಾರಾಗಿ ಕಾರ್ಯಾಚರಣೆ ಮಾಡಿ ಎಂದು ಹೈಕಮಾಂಡ್ ಮತ್ತೊಮ್ಮೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದೆ ಎನ್ನಲಾಗಿದೆ.

ಕಾಂಗ್ರೆಸ್​ನಿಂದ ದೂರು?
Loading...

ಇದೇ ವೇಳೆ, ಸರಕಾರವನ್ನು ಉರುಳಿಸಲು ಬಿಜೆಪಿ ಮಾಡುತ್ತಿರುವ ಪ್ರಯತ್ನಗಳನ್ನ ಸಮ್ಮಿಶ್ರ ಸರಕಾರ ಸೂಕ್ಷ್ಮವಾಗಿ ವೀಕ್ಷಿಸುತ್ತಿದೆ. ಬಿಜೆಪಿ ನಾಯಕರ ಹೇಳಿಕೆಗಳ ಡೇಟಾ ಮತ್ತು ಮಾಹಿತಿ ಸಂಗ್ರಹಿಸಲು ಕೆಪಿಸಿಸಿ ಪದಾಧಿಕಾರಿಗಳಿಗೆ ಅಧ್ಯಕ್ಷ ಗುಂಡೂರಾವ್ ಸೂಚನೆ ನೀಡಿದ್ದಾರೆ. ಅತೃಪ್ತ ಸಚಿವರು ಮತ್ತು ಶಾಸಕರಿಗೆ ಬಿಜೆಪಿಯವರು ಹಣ ಹಾಗೂ ಇತರ ಆಮಿಷ ಒಡುತ್ತಿರುವ ಮಾಹಿತಿ ಎಲ್ಲವನ್ನೂ ಕಲೆಹಾಕುತ್ತಿರುವುದಾಗಿ ಡಿಸಿಎಂ ಜಿ. ಪರಮೇಶ್ವರ್ ಕೂಡ ತಿಳಿಸಿದ್ದಾರೆ.

ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳಲ್ಲಿ ಕೆಲವು ನಿಜವಿವೆ. ಯಾರು ಯಾರಿಗೆ ಹಣದ ಆಮಿಷ ಒಡ್ಡಿದ್ದಾರೆಂಬುದು ನನಗೆ ಗೊತ್ತಿದೆ. ಕೆಲ ಶಾಸಕರು ತನಗೆ ಮಾಹಿತಿ ನೀಡಿದ್ದಾರೆ. ಇದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಎಸಿಬಿ ಮತ್ತು ಐಟಿಗೆ ದೂರು ನೀಡಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್  ಪಕ್ಷ ಡಬಲ್ ಅಟ್ಯಾಕ್ ಮಾಡುತ್ತಿದೆ. ಎಸಿಬಿಯಲ್ಲಿ ದೂರು ನೀಡಿದರೆ ಬಿಜೆಪಿಯ ಓಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಬಿಜೆಪಿ ಜೊತೆ ಹೋಗದಂತೆ ಅತೃಪ್ತ ಶಾಸಕರನ್ನು ಹೆದರಿಸಲು ನೆರವಾಗುವ ನಿರೀಕ್ಷೆ ಇದೆ.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...