ದಿಢೀರನೆ ಬೆಂಗಳೂರಿಗೆ ವಾಪಸ್ಸಾದ ಬಿಎಸ್​ವೈ; ಕಾರ್ಯಕಾರಿಣಿ ಬಿಟ್ಟು ಬರುವ ಹಿಂದಿನ ಮಹತ್ವದ ರಾಜಕೀಯ ಲೆಕ್ಕಾಚಾರವೇನು?

news18
Updated:September 8, 2018, 11:25 AM IST
ದಿಢೀರನೆ ಬೆಂಗಳೂರಿಗೆ ವಾಪಸ್ಸಾದ ಬಿಎಸ್​ವೈ; ಕಾರ್ಯಕಾರಿಣಿ ಬಿಟ್ಟು ಬರುವ ಹಿಂದಿನ ಮಹತ್ವದ ರಾಜಕೀಯ ಲೆಕ್ಕಾಚಾರವೇನು?
ಬಿ.ಎಸ್​. ಯಡಿಯೂರಪ್ಪ ಅವರ ಸಾಂದರ್ಭಿಕ ಚಿತ್ರ
news18
Updated: September 8, 2018, 11:25 AM IST
-ಧರಣೀಶ್ ಬೂಕನಕೆರೆ, ನ್ಯೂಸ್​ 18 ಕನ್ನಡ

ನವದೆಹಲಿ,(ಸೆ.08): ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಲು ನಿನ್ನೆ ರಾತ್ರಿ  ದೆಹಲಿಗೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಇಂದು ಬೆಳಿಗ್ಗೆ ದಿಢೀರನೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ರಾಜ್ಯ ರಾಜಕಾರಣದ ಬಗ್ಗೆ ಹೈಕಮಾಂಡ್​ ನಾಯಕರ ಜೊತೆ  ಚರ್ಚಿಸಲು ಬಿಎಸ್​ವೈ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿತ್ತು. ಮೂಲಗಳ ಪ್ರಕಾರ, ಯಡಿಯೂರಪ್ಪ ಪ್ರಮುಖವಾಗಿ ಎರಡು ವಿಚಾರಗಳನ್ನು ಹೈಕಮಾಂಡ್​ನೊಂದಿಗೆ ಚರ್ಚಿಸಲಿದ್ದಾರೆ. ಬೆಳಗಾವಿ ಕೈ ನಾಯಕರ ಭಿನ್ನಮತದಿಂದ ಬಿಜೆಪಿಗೆ ಯಾವುದೇ ಲಾಭ ಆಗಲಿಲ್ಲ ಎಂಬುದು ಒಂದಾದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸ್ಥಿತಿಗತಿ ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಯಡಿಯೂರಪ್ಪ ಚರ್ಚೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಯಡಿಯೂರಪ್ಪ ಯಾವುದೇ ಹೈಕಮಾಂಡ್​ ನಾಯಕರನ್ನು ಭೇಟಿಯಾಗದೆ ಇಂದು ದಿಢಿರನೇ ಬೆಂಗಳೂರಿಗೆ ವಾಪಸ್ಸಾಗಿದ್ದು ಕುತೂಹಲ ಮೂಡಿಸಿದೆ.

ಯಡಿಯೂರಪ್ಪ ಕುಟುಂಬದ ಕಾರ್ಯಕ್ರಮವೊಂದಕ್ಕೆ ಸ್ವಾಮೀಜಿ ಭೇಟಿ ನೀಡುವ ನಿಮಿತ್ತ, ಅವರ ಕುಟುಂಬಸ್ಥರು ಕರೆ ಮಾಡಿದ್ದಾರೆ. ಹೀಗಾಗಿ  ಬಿಎಸ್​ವೈ ವಾಪಸ್ಸಾಗಿದ್ದಾರೆ ಎನ್ನಲಾಗಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಮತ್ತೆ ದೆಹಲಿಗೆ ವಾಪಸ್ಸಾಗಲಿದ್ದಾರೆ. ನಾಳೆ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ದಿಢೀರ್ ಬೆಂಗಳೂರಿಗೆ ವಾಪಸಾದ ಹಿನ್ನೆಲೆ, ದೆಹಲಿಯಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಮುಖವಾದ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದಾರೆ. ‌ಮತ್ತೆ ಕಾರ್ಯಕಾರಣಿಗೆ ಆಗಮಿಸಲಿದ್ದಾರೆ ಎಂದು ಹೇಳಿದರು. ಆದರೆ ಪ್ರಮುಖ ಕಾರಣ ಏನು ಎಂಬುದನ್ನು ಹೇಳಲಿಲ್ಲ. ಹಾಗೂ ಯಾರ ಭೇಟಿಗೆ ತೆರಳಲಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ನೀಡಲಿಲ್ಲ. ಯಡಿಯೂರಪ್ಪ ಮೂಡಿಸಿದ್ದ ಕುತೂಹಲವನ್ನು ಸಿಟಿ ರವಿ ಮತ್ತೂ ಹೆಚ್ಚಿಸಿದ್ದಾರೆ.

ಅನ್ಯ ಕಾರ್ಯಕ್ರಮ ನಿಮಿತ್ತ ಬಿಎಸ್​ವೈ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ಎಂಬ ಮಾತುಗಳು ಯಡಿಯೂರಪ್ಪ ಆಪ್ತ ವಲಯದಿಂದ ಕೇಳಿಬಂದಿವೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಿಟ್ಟು ದಿಢೀರ್ ವಾಪಸ್ ಆಗೋದಕ್ಕೆ ಖಾಸಗಿ ಕಾರ್ಯಕ್ರಮ ಕಾರಣವೇ? ಎಂಬ ಅನುಮಾನಗಳು ಹುಟ್ಟಿವೆ. ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ಸಚಿವ ರಮೇಶ್​ ಜಾರಕಿಹೊಳಿ ಮುಖಭಂಗ ಅನುಭವಿಸಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಜಾರಕಿಹೊಳಿ ಬ್ರದರ್ಸ್​ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.   ಒಂದು ಕಡೆ ಸಚಿವ ಡಿಕೆಶಿಗೆ ಬಂಧನದ ಭೀತಿ, ಮತ್ತೊಂದು ಕಡೆ ಜಾರಕಿಹೊಳಿ ಬ್ರದರ್ಸ್ ಅಸಮಾಧಾನ. ಇವೆಲ್ಲವುಗಳ ನಡುವೆ ಅಂದುಕೊಂಡಂತೆ ಬಿಜೆಪಿ ಸರ್ಕಾರಕ್ಕೆ ಶಾಕ್​ ಕೊಡುತ್ತಾ? ಎಂಬ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಾಪಸ್ ಬರುತ್ತಿರುವ ಬಿಎಸ್ ವೈರನ್ನು ಇಂದು ಜಾರಕಿಹೊಳಿ ಕಡೆಯವರೊಬ್ಬರು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಭೇಟಿ ಬಳಿಕ ಬಿಎಸ್​ವೈ ಜಾರಕಿಹೊಳಿ ಅಭಿಪ್ರಾಯ ತೆಗೆದುಕೊಂಡು ಸಂಜೆ ದೆಹಲಿಗೆ ತೆರಳಿ, ಜಾರಕಿಹೊಳಿ ಅಭಿಪ್ರಾಯವನ್ನು ವರಿಷ್ಟರಿಗೆ ತಿಳಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಎಸ್ ವೈ ಬೆಂಗಳೂರಿಗೆ ವಾಪಸ್ ಆದ  ಹಿನ್ನೆಲೆ ಶ್ರೀರಾಮುಲು ಕೂಡಾ ಬೆಂಗಳೂರಿಗೆ ಹಿಂತಿರುಗಿದ್ದಾರೆ.

ಇಂದಿನಿಂದ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಎರಡು ದಿನಗಳ ಕಾಲ ಈ ಸಭೆ  ನಡೆಯಲಿದ್ದು, ಚುನಾವಣೆಗಳ ಹಿನ್ನೆಲೆಯಲ್ಲಿ ಕಾರ್ಯಕಾರಿಣಿ ಮಹತ್ವ ಪಡೆದುಕೊಂಡಿದೆ. ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾಷಣ ಮಾಡಲಿದ್ದಾರೆ. ವರ್ಷಾಂತ್ಯದಲ್ಲಿ ಬರುವ ವಿಧಾನಸಭಾ ಚುನಾವಣೆಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ.  ಬಳಿಕ ಲೋಕಸಭಾ ಚುನಾವಣೆ ಬಗ್ಗೆ ಸಮಾಲೋಚನೆ ಮಾಡಲಾಗುತ್ತದೆ. ಚುನಾವಣೆಗಳಲ್ಲಿ ಯಾವ ವಿಷಯ ಪ್ರಸ್ತಾಪಿಸಬೇಕೆಂಬ ಬಗ್ಗೆ ಚರ್ಚಿಸಲಾಗುತ್ತದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಬಗ್ಗೆ ಚರ್ಚೆ ಮಾಡಲಾಗುತ್ತದೆ. ನೋಟು ಅಮಾನ್ಯೀಕರಣ ಸಮರ್ಥಿಸಿಕೊಳ್ಳುವ ಬಗ್ಗೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸಮರ್ಥಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.  ಮೋದಿ ಮತ್ತು ಅಮಿತ್ ಷಾ ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆ ಕ್ರಮದ ಬಗ್ಗೆ ಸಮಾಲೋಚನೆ ನಡಸಿ, ಕಾರ್ಯಕಾರಿಣಿ ಸದಸ್ಯರಿಗೆ ಸಲಹೆ ನೀಡಲಿದ್ದಾರೆ.
First published:September 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ