ಅಸಂಖ್ಯ ಪ್ರಮಥರ ಗಣಮೇಳದ ನಿರ್ಣಯಗಳು; ಬಸವಾದಿ ಶರಣರಿಂದ ಬಿಎಸ್​ವೈಗೆ ಸನ್ಮಾನ

ಅಸಮಖ್ಯ ಪ್ರಮಥರ ಗಣಮೇಳದಲ್ಲಿ ಕೆಲ ನಿರ್ಣಯಗಳನ್ನ ಸ್ವೀಕರಿಸಲಾಯಿತು. ಸರೋಜಿನಿ ಮಹಿಷಿ ಜಾರಿಗೆ ಒತ್ತಾಯ ಕೇಳಿಬರುತ್ತಿರುವ ಈ ಹೊತ್ತಿನಲ್ಲಿ ಗಣಮೇಳದಲ್ಲೂ ಕನ್ನಡಿಗರಿಗೆ ಉದ್ಯೋಗ ಕೊಡಿಸಬೇಕೆನ್ನುವ ಕೂಗು ಕೇಳಿಬಂದಿತು. ಸಭೆಯಲ್ಲಿ ಬಂದ ನಿರ್ಣಯಗಳಲ್ಲಿ ಅದೂ ಒಂದಾಗಿದೆ.

ಗಣಮೇಳದಲ್ಲಿ ಯಡಿಯೂರಪ್ಪ, ವಿಜಯೇಂದ್ರ, ಎಂ.ಪಿ. ರೇಣುಕಾಚಾರ್ಯ ಮೊದಲಾದವರು

ಗಣಮೇಳದಲ್ಲಿ ಯಡಿಯೂರಪ್ಪ, ವಿಜಯೇಂದ್ರ, ಎಂ.ಪಿ. ರೇಣುಕಾಚಾರ್ಯ ಮೊದಲಾದವರು

 • News18
 • Last Updated :
 • Share this:
  ಬೆಂಗಳೂರು(ಫೆ. 16): ನಗರದ ಹೊರವಲಯದ ನೆಲಮಂಗಲ ಸಮೀಪವಿರುವ ನಂದಿ ಮೈದಾನದಲ್ಲಿ ಇವತ್ತು ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವ ಶರಣರ ಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ತಡವಾಗಿ ಬಂದ ಯಡಿಯೂರಪ್ಪ ಎಲ್ಲಾ ಶರಣರಿಗೂ ಗೌರವಾರ್ಪಣೆ ಮಾಡಿದರು. ಕಾರ್ಯಕ್ರಮಕ್ಕೆ ಬಂದಿದ್ದ ಬಸವಾದಿ ಶರಣರು ಮುಖ್ಯಮಂತ್ರಿಗಳಿಗೆ ಸನ್ಮಾನ ಮಾಡಿದರು.

  ಶಿವಶರಣರು 12ನೇ ಶತಮಾನದಲ್ಲಿ ಜಾತಿ, ಮತ, ಧರ್ಮ ಭೇದವಿಲ್ಲದೆ ಜಾತ್ಯತೀತವಾಗಿ ನಡೆದುಕೊಂಡು ಬಂದಿದ್ದರು. ಆಗ ನಡೆದಿದ್ದ ಗಣ ಮೇಳದಲ್ಲಿ 1.96 ಲಕ್ಷ ಜನರು ಸೇರಿದ್ದು ಈಗಲೂ ದಾಖಲೆಯಾಗಿದೆ. ಈಗ ಮುರುಘಾ ಶ್ರೀಗಳ ನೇತೃತ್ವದಲ್ಲಿ 24,000 ಇಷ್ಟಲಿಂಗ ಪೂಜೆ ನಡೆದಿದೆ. ಇದು ನನ್ನ ಜೀವನದ ಕೊನೆಯವರೆಗೂ ನೆನಪಿನಲ್ಲಿರುವ ಅವಿಸ್ಮರಣೀಯ ಕಾರ್ಯಕ್ರಮ ಎಂದು ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದರು.

  ತಮ್ಮ ಬಜೆಟ್​ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ (ಹೈದರಾಬಾದ್-ಕರ್ನಾಟಕ) 500 ಕೋಟಿ ರೂ ಮೀಸಲಿಡಲಿದ್ದೇನೆ. ಮಾರ್ಚ್ 6ರಂದು ಬಜೆಟ್​ನಲ್ಲಿ ಘೋಷಣೆ ಮಾಡಲಿದ್ಧೇನೆ. ನೀರಾವರಿಗೆ ಆದ್ಯತೆ ನೀಡಬೇಕಿದೆ. ರೈತರು ಸ್ವಾಭಿಮಾನ ಹಾಗೂ ನೆಮ್ಮದಿಯಿಂದ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

  ಇದನ್ನೂ ಓದಿ: ಬೆಂಗಳೂರಲ್ಲಿ ಬಸವಧರ್ಮ ಅಲೆ; ಅಸಂಖ್ಯ ಪ್ರಮಥರ ಗಣಮೇಳದಲ್ಲಿ ಹೊಸ ದಾಖಲೆ

  ತಾನು ವಾರಾಣಸಿಯಲ್ಲಿ ಇದ್ದದ್ದರಿಂದ ಕಾರ್ಯಕ್ರಮದ ಉದ್ಘಾಟನೆಗೆ ಬರಲು ಸಾಧ್ಯವಾಗಲಿಲ್ಲ ಎಂದೂ ಯಡಿಯೂರಪ್ಪ ಕ್ಷಮೆ ಕೋರಿದರು.

  ಇದೇ ವೇಳೆ, ಅಸಮಖ್ಯ ಪ್ರಮಥರ ಗಣಮೇಳದಲ್ಲಿ ಕೆಲ ನಿರ್ಣಯಗಳನ್ನ ಸ್ವೀಕರಿಸಲಾಯಿತು. ಸರೋಜಿನಿ ಮಹಿಷಿ ಜಾರಿಗೆ ಒತ್ತಾಯ ಕೇಳಿಬರುತ್ತಿರುವ ಈ ಹೊತ್ತಿನಲ್ಲಿ ಗಣಮೇಳದಲ್ಲೂ ಕನ್ನಡಿಗರಿಗೆ ಉದ್ಯೋಗ ಕೊಡಿಸಬೇಕೆನ್ನುವ ಕೂಗು ಕೇಳಿಬಂದಿತು. ಸಭೆಯಲ್ಲಿ ಬಂದ ನಿರ್ಣಯಗಳಲ್ಲಿ ಅದೂ ಒಂದಾಗಿದೆ.

  1) ಎಲ್ಲಾ ಧರ್ಮದ ಎಲ್ಲಾ ಸ್ವಾಮಿಜಿಗಳ ಸ್ಮಾರಕಗಳ ಸಂರಕ್ಷಣೆ ಸರ್ಕಾರ ಮಾಡಬೇಕು
  2) ಪಠ್ಯ ಪುಸ್ತಕಗಳಲ್ಲಿ ಶಿವಶರಣರ ಬಗ್ಗೆ ಮುದ್ರಣ ಮಾಡುವುದರ ಮೂಲಕ ಶರಣ‌ ಸಾಹಿತ್ಯ, ಬಸವ ಸಾಹಿತ್ಯದ ಪರಿಚಯ ಮಾಡಬೇಕು
  3) ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ಹೆಸರಿಡಬೇಕು
  4) ದಾರಾವಾಡ ವಿಶ್ವವಿದ್ಯಾಲಯಕ್ಕೆ ಬಸವಣ್ಣ ಹೆಸರು ನಾಮಕರಣ ಮಾಡಬೇಕು
  5) ಸ್ವಾವಲಂಬಿ ಬದುಕಿದಾಗಿ ಕನ್ನಡಿಗರಿಗೆ ಹೆಚ್ಚು ಉದ್ಯೋಗವಕಾಶ ಕಲ್ಪಿಸಬೇಕು
  6) ಮುರುಘಾಮಠದಲ್ಲಿ ನಿರ್ಮಾಣವಾಗುತ್ತಿರುವ ಬಸವಣ್ಣನವರ ಪುತ್ತಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು
  7) ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು

  ಇದನ್ನೂ ಓದಿ: ಆನೇಕಲ್​​ ಅರಣ್ಯದಂಚಿನಲ್ಲಿ ಗ್ರಾನೈಟ್​ ಕಾರ್ಖಾನೆಗಳ ತ್ಯಾಜ್ಯ: ವಿಲೇವಾರಿಗೆ ಸಚಿವ ಆನಂದ್​​ ಸಿಂಗ್​​ ಆದೇಶ

  ಗಣಮೇಳದ ನೇತೃತ್ವ ವಹಿಸಿದ್ದ ಮುರುಘಾ ಶರಣರು ಕಾಯಕ ತತ್ವದ ಮಹತ್ವ ಸಾರಿದರು. ಹಿಂದೆ ಬಸವಾದಿ ಶರಣರು ಕಾಯಕವೇ ಕೈಲಾಸ ಎಂದು ಪ್ರತಿಪಾದಿಸಿದ್ದರು. ಯಾರು ಕಾಯಕ ಮಾಡುವುದಿಲ್ಲವೋ ಅವರಿಗೆ ಕಾಯಿಲೆ ಬರುತ್ತದೆ. ಕಾಯಿಲೆ ಬಾರದಿರಲು ಕಾಯಕ ಮಾಡಬೇಕು ಎಂದು ಮುರುಘಾ ಮಠದ ಶ್ರೀಗಳು ತಿಳಿಹೇಳಿದರು.

  ಧ್ಯಾನ ಮತ್ತು ಮೌನವು ಸಮಧಾನಕ್ಕೆ ಸಮಾನವಾಗಿದೆ. ಒತ್ತಡಕ್ಕೆ ಒಳಗಾಗದಂತೆ ಧ್ಯಾನ ಮತ್ತು ಯೋಗವನ್ನು ಪರಿಪಾಲಿಸಬೇಕು. ಇವತ್ತು ಇದು ಪ್ರತಿಯೊಬ್ಬರನ್ನೂ ಬರಬೇಕಿದೆ. ಇದರಿಂದ ಎಲ್ಲರಲ್ಲೂ ಶಾಂತಿ ಮತ್ತು ಸಹನೆ ನೆಲಸಲಿದೆ. ಸಾಮಾಜಿಕ ನ್ಯಾಯ ಮತ್ತು ಪ್ರಗತಿ ಬಗ್ಗೆ 600 ವರ್ಷಗಳ ಹಿಂದೆಯೇ ಶರಣರು ಹೇಳಿದ್ದರು. ಅಂದು ಸಾಧನೆ ಎಂಬುದು ವೈಯಕ್ತಿಕವಾಗಿತ್ತು. ಇಂದು ಸಾಧನೆ ಸಾರ್ವತ್ರಿಕವಾಗಿದೆ ಎಂದು ಹೇಳಿದ ಮುರುಘಾ ಶ್ರೀಗಳು, ಜಗತ್ತಿಗೆ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಬಾಧೆ ನಿಲ್ಲಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

  ಈ ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ಎಂ.ಪಿ. ರೇಣುಕಾಚಾರ್ಯ, ಸಿದ್ದರಾಮಯ್ಯ, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಬಿ.ವೈ. ವಿಜಯೇಂದ್ರ, ವಿ. ಸೋಮಣ್ಣ ಮೊದಲಾದವರು ಪಾಲ್ಗೊಂಡಿದ್ದರು. ಹಾಗೆಯೇ 500ಕ್ಕೂ ಹೆಚ್ಚು ಸಂತ ಶರಣರ ಸಾನಿಧ್ಯ ಇತ್ತು.

  (ವರದಿ: ಅಭಿಷೇಕ್ ಡಿ.ಆರ್.)

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: