ಸರ್ಕಾರಕ್ಕೆ ತಪ್ಪಿಲ್ಲ ಕಂಟಕ; ರಾಜೂಗೌಡ, ಮಾಧುಸ್ವಾಮಿ, ಆನಂದ್ ಸಿಂಗ್ ರಾಜೀನಾಮೆ ಸಾಧ್ಯತೆ

ಸುರಪುರದ ಬಿಜೆಪಿ ಶಾಸಕ ರಾಜೂಗೌಡ ಅವರು ಜಲಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡಲಿದ್ಧಾರೆನ್ನಲಾಗುತ್ತಿದೆ. ಹಾಗೆಯೇ ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಅವರೂ ಸಂಪುಟಕ್ಕೆ ವಿದಾಯ ಹೇಳಬಹುದು ಎನ್ನುತ್ತಿವೆ ಮೂಲಗಳು.

ಅರಣ್ಯ ಸಚಿವ ಆನಂದ್​ ಸಿಂಗ್​​

ಅರಣ್ಯ ಸಚಿವ ಆನಂದ್​ ಸಿಂಗ್​​

  • Share this:
ಬೆಂಗಳೂರು(ಜ. 25): ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಮರು ಹಂಚಿಕೆಯ ಕಸರುತ್ತು ಮಾಡಿಯೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಕ್ಷದೊಳಗೆ ಹೊಗೆಯಾಡುತ್ತಿರುವ ಅಸಮಾಧಾನವನ್ನು ಶಮನ ಮಾಡಲು ವಿಫಲರಾಗಿದ್ದಂತಿದೆ. ಅತ್ತ ಧರಿ, ಇತ್ತ ಪುಲಿ ಎಂಬಂಥ ಸ್ಥಿತಿಗೆ ಯಡಿಯೂರಪ್ಪ ತಲುಪಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದೇ ಇದ್ದದ್ದು ಅನೇಕರಲ್ಲಿ ಅಸಮಾಧಾನ ತಂದಿರುವುದು ಒಂದೆಡೆಯಾದರೆ, ಖಾತೆ ಹಂಚಿಕೆಯಲ್ಲಿ ಸರಿಯಾದ ಖಾತೆ ಸಿಗದೇ ಮುನಿಸಿಕೊಂಡವರು ಇನ್ನೊಂದೆಡೆ ಇದ್ದಾರೆ. ಮಗದೊಂದೆಡೆ ಖಾತೆ ಮರು ಹಂಚಿಕೆಯಿಂದ ಬೇಸರಗೊಂಡವರಿದ್ದಾರೆ. ಹೀಗೆ ಅಸಮಾಧಾನದ ಬೇಗುದಿ ಹಲವು ರಂಧ್ರಗಳಾಗಿ ಸಿಎಂ ಅವರನ್ನ ಕಾಡತೊಡಗಿದೆ.

ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದ ಸುರಪುರ ಶಾಸಕ ರಾಜೂಗೌಡ ವ್ಯಗ್ರಗೊಂಡಿದ್ಧಾರೆ. ನಾಳೆ ಮುಖ್ಯಂತ್ರಿ ಯಡಿಯೂರಪ್ಪ ಅವರನ್ನ ಭೇಟಿಯಾಗಲಿರುವ ಅವರು ಕರ್ನಾಟಕ ಜಲಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇನ್ನು, ಮೊನ್ನೆ ನಡೆದ ಖಾತೆ ಮರು ಹಂಚಿಕೆ ವೇಳೆ ಡಾ. ಕೆ ಸುಧಾಕರ್ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನ ಮಾಧುಸ್ವಾಮಿ ಅವರಿಗೆ ಸಿಎಂ ನೀಡಿದ್ದರು. ಇದರಿಂದ ಸುಧಾಕರ್ ಕುಪಿತಗೊಂಡಿದ್ದರು. ಇದೀಗ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಅವರಿಗೆ ಮರಳಿಸಲು ಸಿಎಂ ನಿರ್ಧರಿಸಿದ್ದಾರೆ. ಹಾಗೆಯೇ, ಮಾಧುಸ್ವಾಮಿ ಅವರಿಗೆ ಬೇಸರವಾಗಬಾರದೆಂದು ಆನಂದ್ ಸಿಂಗ್ ಬಳಿ ಇರುವ ಪ್ರವಾಸೋದ್ಯಮ ಖಾತೆಯನ್ನ ಮಾಧುಸ್ವಾಮಿ ಅವರಿಗೆ ನೀಡಿ ಥೇಪೆ ಹಾಕಲು ಬಿಎಸ್​ವೈ ಪ್ರಯತ್ನಿಸುತ್ತಿದ್ದಾರೆನ್ನಲಾಗಿದೆ. ಮುಖ್ಯಮಂತ್ರಿಗಳ ಈ ನಡೆಯಿಂದ ಮಾಧುಸ್ವಾಮಿ ಅವರ ಅಸಮಾಧಾನ ಇನ್ನೂ ಹೆಚ್ಚಾಗಿದೆ. ಆನಂದ್ ಸಿಂಗ್ ಕೂಡ ಮುನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ಖಾತೆಯಿಂದ ಎಂಟಿಬಿಗೆ ಸಮಾಧಾನ; ಆದರೆ ಬೆಂ. ಗ್ರಾಮಾಂತರ ಉಸ್ತುವಾರಿ ಸ್ಥಾನದ ಮೇಲೆ ಕಣ್ಣು?

ಯಾವುದಾದರೂ ಒಂದು ಖಾತೆ ಕೊಟ್ಟು ಸುಮ್ಮನಿರಬೇಕು. ಪದೇ ಪದೇ ಖಾತೆ ಬದಲಾವಣೆ ಮಾಡಿದರೆ ಗೌರವ ಎಲ್ಲಿ ಉಳಿಯುತ್ತದೆ ಎಂದು ತಮ್ಮ ಆಪ್ತವಲಯದಲ್ಲಿ ಪ್ರಶ್ನಿಸುತ್ತಿರುವ ಮಾಧುಸ್ವಾಮಿ ಸಂಪುಟಕ್ಕೆ ರಾಜೀನಾಮೆ ನೀಡಲು ಯೋಚಿಸಿದ್ದಾರೆನ್ನಲಾಗುತ್ತಿದೆ. ಯಡಿಯೂರಪ್ಪ ಅವರ ದೂರವಾಣಿ ಕರೆಯನ್ನೂ ಅವರು ಸ್ವೀಕರಿಸುತ್ತಿಲ್ಲ. ಇದೀಗ ಅಶೋಕ್ ಅವರು ಮಾಧುಸ್ವಾಮಿಯನ್ನು ಸಂಪರ್ಕಿಸಿ ಸಮಾಧಾನಕ್ಕೆ ಯತ್ನಿಸುತ್ತಿರುವುದು ತಿಳಿದುಬಂದಿದೆ.

ಇನ್ನೊಂದೆಡೆ, ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಖಾತೆ ಕೈತಪ್ಪಿರುವುದು ಕೋಪ ತರಿಸಿದೆ ಎಂದು ಅವರ ಆಪ್ತರು ಹೇಳಿದ್ದಾರೆ. ಆದರೆ, ನ್ಯೂಸ್18 ಜೊತೆ ಮಾತನಾಡಿದಾಗ ಆನಂದ್ ಸಿಂಗ್ ಅವರು, ತಮಗೆ ಯಾವ ಅಸಮಾಧಾನ ಇಲ್ಲ. ಸಚಿವ ಸ್ಥಾನ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ. ಮಾತು ಕೊಟ್ಟಂತೆ ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುತ್ತಿದ್ದಾರೆ. ಅಷ್ಟೇ ಸಾಕು ಎಂದು ಹೇಳಿದ್ದರು. ಆದರೆ, ಖಾತೆ ಮರುಹಂಚಿಕೆ ವಿಚಾರದಲ್ಲಿ ಸಿಎಂ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಆನಂದ್ ಸಿಂಗ್ ತಮ್ಮ ಆಪ್ತ ವಲಯದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ತಿಳಿದುಬಂದಿದೆ. ಅಲ್ಲಿನ ಮೂಲಗಳ ಪ್ರಕಾರ ಆನಂದ್ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೂ ಮುಂದಾಗಿದ್ದಾರೆನ್ನಲಾಗಿದೆ.

ವರದಿ: ಕೃಷ್ಣ ಜಿ.ವಿ.
Published by:Vijayasarthy SN
First published: