DJ Halli Violence – ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ನಿರ್ಧಾರ; ಗಲಭೆಕೋರರಿಂದ ನಷ್ಟಭರಿಸುವ ಕ್ರಮ ಇಲ್ಲ

ಬೆಂಗಳೂರು ಗಲಭೆ ಪ್ರಕರಣವನ್ನು ಎಸ್ಐಟಿ ಅಥವಾ ಸಿಐಡಿ ಬದಲು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಾನವ ಹಕ್ಕು ಆಯೋಗದ ಮಾರ್ಗಸೂಚಿಯ ಪ್ರಕಾರ ಸರ್ಕಾರ ಹೆಜ್ಜೆ ಇಟ್ಟಿದೆ.

news18-kannada
Updated:August 13, 2020, 10:08 AM IST
DJ Halli Violence – ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ನಿರ್ಧಾರ; ಗಲಭೆಕೋರರಿಂದ ನಷ್ಟಭರಿಸುವ ಕ್ರಮ ಇಲ್ಲ
ಡಿಜೆ ಹಳ್ಳಿ ಗಲಭೆಯಲ್ಲಿ ಹಾನಿಗೀಡಾದ ಪೊಲೀಸ್ ಠಾಣೆ
  • Share this:
ಬೆಂಗಳೂರು(ಆ. 12): ನಿನ್ನೆ ರಾತ್ರಿ ಡಿಜೆ ಹಳ್ಳಿಯಲ್ಲಿ ಸಂಭವಿಸಿದ ಗಲಭೆ ಪ್ರಕರಣದ ತನಿಖೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಸಿಐಡಿ ಅಥವಾ ಎಸ್​ಐಟಿ ತಂಡದಿಂದ ತನಿಖೆ ನಡೆಯಬಹುದೆಂಬ ಸುದ್ದಿಗೆ ತೆರೆಬಿದ್ದಿದೆ. ಇಂದು ಸಂಜೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿಯಾದ ಬಳಿಕ ಈ ನಿರ್ಧಾರ ಕೈಂಡಿರುವುದು ತಿಳಿದುಬಂದಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸಲಹೆ ಮೇರೆಗೆ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಈಗಿರುವ ಪರಿಸ್ಥಿತಿ ಹಾಗೂ ಪೊಲೀಸ್ ತೆಗೆದುಕೊಂಡ ಕ್ರಮಗಳ ಬಗ್ಗೆ ಅವಲೋಕಿಸಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿರುವ ಇರುವ ಮಾರ್ಗಸೂಚಿಯಂತೆ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ಆಯೋಗ ತಿಳಿಸಿದೆ. ಅದರಂತೆ ಮುಂದುವರಿಯುತ್ತೇವೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ, ಗಲಭೆಕೋರರಿಂದ ನಷ್ಟಭರಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುತ್ತದೆಂಬ ಸುದ್ದಿಗೂ ತೆರೆಬಿದ್ದಿದೆ. ಉತ್ತರ ಪ್ರದೇಶದಲ್ಲಿ ಸಂಭವಿಸಿದ್ದ ಗಲಭೆಗಳಿಂದ ಆದ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲಾಗಿತ್ತು. ಅದರಂತೆಯೇ ರಾಜ್ಯದಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದ್ದರು. ಆದರೆ, ಮುಖ್ಯಮಂತ್ರಿಗಳನ್ನ ಭೇಟಿಯಾದ ಬಳಿಕ ಆ ನಿರ್ಧಾರಕ್ಕೆ ತಿಲಾಂಜಲಿ ಹೇಳಲಾಗಿದೆ. ಮಾನವ ಹಕ್ಕು ಆಯೋಗದ ಮಾರ್ಗಸೂಚಿಯಂತೆ ಮಾತ್ರ ನಡೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ.

ಇದನ್ನೂ ಓದಿ: SDPI Statement - ಬೆಂಗಳೂರು ಹೊತ್ತಿ ಉರಿಯಲು ನಾವಲ್ಲ, ಪೊಲೀಸರೇ ಕಾರಣ: ಎಸ್​ಡಿಪಿಐ ಹೇಳಿಕೆ

ಇದೇ ವೇಳೆ, ನಿನ್ನೆ ಗಲಭೆ ಸ್ಥಳದಲ್ಲಿ ವರದಿಗಾರಿಕೆಗೆ ಹೋಗಿದ್ದ ಪತ್ರಕರ್ತರ ಮೇಲೆ ಹಲ್ಲೆಯಾದ ಘಟನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಿದ್ದಾರೆ. ಗಲಭೆಗಳಂಥ ಅಪಾಯದ ಸ್ಥಳಗಳಲ್ಲಿ ವರದಿ ಮಾಡಲು ಬರುವ ಸಂದರ್ಭದಲ್ಲಿ ಪತ್ರಕರ್ತರಿಗೆ ಹೆಚ್ಚಿನ ರಕ್ಷಣೆ ಇರಲಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆನ್ನಲಾಗಿದೆ.

ಇನ್ನು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಉಪ ಮುಖ್ಯಮಂತ್ರಿ ಅಶ್ವಥನಾರಾಯಣ, ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಮೊದಲಾದವರು ಗಲಭೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಚಿವರಿಗೆ ಹಾನಿಯ ಮಾಹಿತಿ ನೀಡಿದ್ದಾರೆ. ಕಮಿಷನರ್ ಕಮಲ್ ಪಂಥ್, ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮೊದಲಾದವರೂ ಈ ಸಂದರ್ಭದಲ್ಲಿದ್ದರು.

ಗಲಭೆಯಲ್ಲಿ ಕಿಡಿಗೇಡಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಡಿಜೆ ಹಳ್ಳಿ ಪೊಲೀಸ್ ಠಾಣೆ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗೆಳಿಗೆ ಸಚಿವರು ಭೇಟಿ ನೀಡಿದರು. ನಂತರ ಮನೆಯನ್ನು ಸುಡಲಾಗಿದ್ದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೂ ಹೋಗಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಇದು ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಬಹುದೊಡ್ಡ ಘಟನೆ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ ಪೊಲೀಸ್ ಠಾಣೆ ಧ್ವಂಸಗೊಳಿಸಿ ಸಿಬ್ಬಂದಿ ಮುಗಿಸಲು ನಡೆದ ವ್ಯವಸ್ಥಿತ ಕೃತ್ಯ; ಅಶ್ವತ್ಥ್‌ ನಾರಾಯಣ್

ಫೈರಿಂಗ್ ಮಾಡುವ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡ ಅವರು, ಪೊಲೀಸರು ಸಕಾಲದಲ್ಲಿ ಗಲಭೆಗಳನ್ನ ನಿಯಂತ್ರಣಕ್ಕೆ ತಂದಿದ್ದಾರೆ. ಫೈರಿಂಗ್ ಮಾಡಿ ಗಲಭೆ ನಿಯಂತ್ರಿಸುವ ಅವರ ನಿರ್ಧಾರ ಸರಿ ಇದೆ ಎಂದು ಹೇಳಿದ್ದಾರೆ.



ಡಿಜೆ ಹಳ್ಳಿಯಲ್ಲಿ ಈ ಹಿಂದೆಯೂ ಇಂಥ ಘಟನೆ ಆಗಿತ್ತು. ಆಗ ಅದನ್ನು ನಿಯಂತ್ರಣಕ್ಕೆ ತರಲು ಐದು ದಿನ ಬೇಕಾಯಿತು. ಆದರೆ, ಪೊಲೀಸ್ ಆಯುಕ್ತರು ತೆಗೆದುಕೊಂಡ ನಿರ್ಧಾರದಿಂದ ಒಂದೇ ದಿನದಲ್ಲಿ ಪರಿಸ್ಥಿತಿ ಕಂಟ್ರೋಲ್​ಗೆ ಬಂದಿದೆ. ಯಾವುದೇ ಅಪರಾಧಿಯು ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗುತ್ತದೆ ಎಂದು ಡಿವಿಎಸ್ ತಿಳಿಸಿದ್ದಾರೆ.
Published by: Vijayasarthy SN
First published: August 12, 2020, 7:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading