ಸಾವಿರ ಕೋಟಿ ನೀಡುವುದಾಗಿ ಬಿಎಸ್​ವೈ ಹೇಳಿದ ಮೇಲೆ ರಾಜೀನಾಮೆ ನೀಡಿದೆ; ಅನರ್ಹ ಶಾಸಕ ನಾರಾಯಣಗೌಡ

ಕೆ.ಆರ್.ಪೇಟೆ ತಾಲೂಕಿನ ಅಭಿವೃದ್ದಿಗೆ ನಾನು ನನ್ನ ಸ್ವಯಾರ್ಜಿತ ಆಸ್ತಿಯಲ್ಲಿ ಶೇ.50 ರಷ್ಟನ್ನು ಮೀಸಲಿಡುತ್ತೇನೆ. ಇಲ್ಲಿನ ಮುಖಂಡರು ತಮ್ಮ ಆಸ್ತಿಯನ್ನು ಮೀಸಲಿಡಲಿ.  ಅವರು ಯಾವುದೇ ವೇದಿಕೆಯಲ್ಲಾದರೂ ಸರಿ ಬರಲಿ, ನಾನು ಬರುತ್ತೇನೆ. ಅವರು ಬಾಂಡ್ ಪೇಪರ್ ತರಲಿ, ನಾನು ತರುತ್ತೇನೆ. ತಾಲೂಕಿನ ಅಭಿವೃದ್ಧಿಗಾಗಿ ಬರೆಯಲಿ ನೋಡೋ‌ಣ ಎಂದು ನಾರಾಯಣಗೌಡ ಅವರು ಸ್ಥಳೀಯ ಮುಖಂಡರಿಗೆ ಸವಾಲು ಹಾಕಿದರು.

HR Ramesh | news18-kannada
Updated:November 5, 2019, 4:27 PM IST
ಸಾವಿರ ಕೋಟಿ ನೀಡುವುದಾಗಿ ಬಿಎಸ್​ವೈ ಹೇಳಿದ ಮೇಲೆ ರಾಜೀನಾಮೆ ನೀಡಿದೆ; ಅನರ್ಹ ಶಾಸಕ ನಾರಾಯಣಗೌಡ
ಅನರ್ಹ ಶಾಸಕ ನಾರಾಯಣ ಗೌಡ
  • Share this:
ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಅಭಿವೃದ್ಧಿಗಾಗಿ ಬಿ.ಎಸ್.ಯಡಿಯೂರಪ್ಪ ಅವರು ಸಾವಿರ ಕೋಟಿ ಕೊಡ್ತಿನಿ ಅಂದ್ರು. ನಾನು ತಾಲೂಕಿನ ಅಭಿವೃದ್ದಿಗಾಗಿ 700 ಕೋಟಿ ಅನುದಾನ ಕೇಳಿದ್ದೆ. ಆದರೆ ಯಡಿಯೂರಪ್ಪನವರೇ ಸಾವಿರ ಕೋಟಿ ಕೊಡ್ತಿನಿ ಅಂದರು.  ಅದಕ್ಕಾಗಿ ನಾನು ನನ್ನ ತಾಲೂಕಿನ ಅಭಿವೃದ್ಧಿಗಾಗಿ ಯಡಿಯೂರಪ್ಪ ಜೊತೆ ಕೈ ಜೋಡಿಸಿದೆ ಎಂದು ಅನರ್ಹ ಶಾಸಕ ನಾರಾಯಣಗೌಡ ಹೇಳಿದ್ದಾರೆ.

ಕೆ.ಆರ್.ಪೇಟೆಯ ಬೂಕನಕೆರೆಯಲ್ಲಿ ಮಾತನಾಡಿದ ನಾರಾಯಣಗೌಡ, ಯಡಿಯೂರಪ್ಪ ಅವರು ನೀಡಿದ ಭರವಸೆಯಂತೆ ನಮ್ಮ ತಾಲೂಕಿನ ಅಭಿವೃದ್ದಿಗೆ ಸಾವಿರ ಕೋಟಿ ಅನುದಾನ ಮಂಜೂರು ಮಾಡಿದ್ದಾರೆ. ಇದೀಗ ಮೊದಲ ಕಂತಿನ‌ ಅನುದಾನವಾಗಿ 212 ಕೋಟಿ ಬಂದಿದೆ. ಹಂತ ಹಂತವಾಗಿ ಉಳಿದ ಅನುದಾನ‌ ಕೂಡ ನಮ್ಮ ತಾಲೂಕಿಗೆ ಬರುತ್ತದೆ. ತಾಲೂಕಿನ ಅಭಿವೃದ್ಧಿಗಾಗಿ ನಾನು ತ್ಯಾಗ ಮಾಡಿದ್ದೇನೆ ಎಂದು ಹೇಳಿದರು.

ಸಾವಿರ ಕೋಟಿ ಅನುದಾನಕ್ಕೆ ರಾಜೀನಾಮೆ ನೀಡಿದ ಹೇಳಿಕೆ ವಿವಾದಕ್ಕೆ ತಿರುಗಲಿದೆ ಎಂಬುದನ್ನು ಅರಿತ ನಾರಾಯಣಗೌಡ ಅವರು ಆ ಬಳಿಕ ತಮ್ಮ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದಾರೆ. ಯಡಿಯೂರಪ್ಪ ಮತ್ತು ನನ್ನ ನಡುವಿನ ಅನುದಾನದ ಮಾತುಕತೆ  ರಾಜೀನಾಮೆಗೂ ಮುನ್ನ ನಡೆದಿದ್ದು ಅಲ್ಲಾ, ರಾಜೀನಾಮೆ ನೀಡಿದ ಬಳಿಕ ನಡೆದ ಮಾತುಕತೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸ್ಥಳೀಯ ಜೆಡಿಎಸ್ ಮುಖಂಡರ ಬಹಿರಂಗ ಸವಾಲು

ಕೆ.ಆರ್.ಪೇಟೆ ಜೆಡಿಎಸ್ ಸ್ಥಳೀಯ ಮುಖಂಡರ ವಿರುದ್ದ ವಾಗ್ದಾಳಿ ನಡೆಸಿದ ನಾರಾಯಣಗೌಡ, ಇವರು ನನಗೆ ಆರೂವರೆ ವರ್ಷ ಸತತವಾಗಿ ಕಿರುಕುಳ ಕೊಟ್ಟಿದ್ದಾರೆ‌‌. ವರಿಷ್ಠರ ಬಳಿ ನನ್ನ ಬಗ್ಗೆ ಚಾಡಿ ಹೇಳುವುದೇ ಇವರಿಗೆ ಕೆಲಸವಾಗಿತ್ತು. ನಮ್ಮನ್ನು ದೇವೇಗೌಡರ ಮನೆಗೆ ಹೋದಾಗ ಚಪ್ಪಲಿ ಬಿಡುವ ಜಾಗಕ್ಕಿಂತ ಕಡೆಯಾಗಿ ನೋಡುತ್ತಿದ್ದರು. ಅವರ ಮನೆಯಲ್ಲಿ ನಮಗೆ ಪ್ರೀತಿ, ವಿಶ್ವಾಸ ಸಿಕ್ಕಿದ್ದು ಬಿಟ್ರೆ, ನಮ್ಮ‌ ತಾಲೂಕಿಗೆ ಬೇಕಾದ ಅನುದಾನ ಕೊಟ್ಟಿಲ್ಲ. ತಾಲೂಕಿನ ಅಭಿವೃದ್ದಿಗಾಗಿ ನಾನು ರಾಜೀನಾಮೆ ಕೊಟ್ಟಿದ್ದೇನೆ. ಮೈತ್ರಿ ಸರ್ಕಾರ ಇದ್ದಾಗ ಕೊಟ್ಟ ಅನುದಾನವೆಲ್ಲ ಹಾಸನಕ್ಕೆ ಕಿತ್ಕೊಂಡು ಹೋದ್ರು. ತಾಲೂಕಿನ ಅಭಿವೃದ್ದಿಗಾಗಿ ಬಿಎಸ್​ವೈ 1000 ಕೋಟಿ ಅನುದಾನ ಕೊಟ್ಟಿದ್ದಾರೆ ಎಂದು ಬೂಕನಕೆರೆ ಕಾರ್ಯಕ್ರಮದಲ್ಲಿ ಹೇಳಿದರು.

ಇದನ್ನು ಓದಿ: ಸಿದ್ದರಾಮಯ್ಯ ವಿರುದ್ಧ ಇಬ್ರಾಹಿಂ ತಿರುಗಿಬೀಳಲು ಕಾರಣ ಏನು?

ಕೆ.ಆರ್.ಪೇಟೆ ತಾಲೂಕಿನ ಅಭಿವೃದ್ದಿಗೆ ನಾನು ನನ್ನ ಸ್ವಯಾರ್ಜಿತ ಆಸ್ತಿಯಲ್ಲಿ ಶೇ.50 ರಷ್ಟನ್ನು ಮೀಸಲಿಡುತ್ತೇನೆ. ಇಲ್ಲಿನ ಮುಖಂಡರು ತಮ್ಮ ಆಸ್ತಿಯನ್ನು ಮೀಸಲಿಡಲಿ.  ಅವರು ಯಾವುದೇ ವೇದಿಕೆಯಲ್ಲಾದರೂ ಸರಿ ಬರಲಿ, ನಾನು ಬರುತ್ತೇನೆ. ಅವರು ಬಾಂಡ್ ಪೇಪರ್ ತರಲಿ, ನಾನು ತರುತ್ತೇನೆ. ತಾಲೂಕಿನ ಅಭಿವೃದ್ಧಿಗಾಗಿ ಬರೆಯಲಿ ನೋಡೋ‌ಣ ಎಂದು ನಾರಾಯಣಗೌಡ ಅವರು ಸ್ಥಳೀಯ ಮುಖಂಡರಿಗೆ ಸವಾಲು ಹಾಕಿದರು. 

First published:November 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ