Exclusive: ಸಿಎಂ ಬಿಎಸ್​ವೈ ಚೇಂಬರ್​ನಲ್ಲಿ ಏನಾಯ್ತು? ವಲಸಿಗ ಸಚಿವರ ಜೊತೆ ಸಿಎಂ ಏನು ಚರ್ಚೆ ಮಾಡಿದರು? ಇಲ್ಲಿದೆ ಸಂಪೂರ್ಣ ವರದಿ

ಸಿಎಂ ಮಾತಿಗೆ ಸಚಿವ ಡಾ ಸುಧಾಕರ್ ನಾವು ರೆಡಿ, ವಿಶೇಷ ವಿಮಾನ  ಮಾಡಿಕೊಂಡು ಹೋಗುತ್ತೇವೆ ಎಂದು ಉತ್ಸಾಹ ತೋರಿಸಿದ್ದಾರೆ. ಆಗ  ಉಳಿದ ವಲಸಿಗ ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸಿಎಂ ಬಿಎಸ್​ ಯಡಿಯೂರಪ್ಪ.

ಸಿಎಂ ಬಿಎಸ್​ ಯಡಿಯೂರಪ್ಪ.

 • Share this:
  ಬಿಜೆಪಿಯ ಹಿರಿಯ ನಾಯಕ, ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ ಮೂರು ಬಾರಿ ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ಬಿಎಸ್​ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲಾಗುವುದು ಎನ್ನುವ ಸುದ್ದಿಯ ಈ ಹೊತ್ತಿನಲ್ಲಿ, ಬಿರುಸಿನ ರಾಜಕೀಯ ಚಟುವಟಿಕೆಗಳು ಬಿಜೆಪಿಯೊಳಗೆ ನಡೆಯುತ್ತಿದ್ದು, ಸಿಎಂ ರೇಸ್​ನಲ್ಲಿ ಇರುವ ಅನೇಕರು ತೆರೆಮರೆಯಲ್ಲಿ ಕುರ್ಚಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಸಿಎಂ ಬದಲಾಗುತ್ತಾರೆ ಎನ್ನುವ ಈ ಹೊತ್ತಿನಲ್ಲೇ ಯಡಿಯೂರಪ್ಪ ಅವರನ್ನು ನಂಬಿಕೊಂಡು ಬಿಜೆಪಿಗೆ ಹಾರಿದ ವಲಸಿಗ ಸಚಿವರು ಬಿಎಸ್​ವೈ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

  ನೆನ್ನೆ ಅಂದರೆ ಜುಲೈ 22 ಗುರುವಾರದಂದು  ಸಿಎಂ ಚೇಂಬರ್ ನಲ್ಲಿ ಏನಾಯ್ತು? ವಲಸಿಗ ಸಚಿವರ ಜೊತೆ ಸಿಎಂ ಏನು ಚರ್ಚೆ ಮಾಡಿದ್ರು? ಈ ಕುರಿತು ನ್ಯೂಸ್ 18 ಕನ್ನಡಕ್ಕೆ ದೊರಕಿರುವ ಎಕ್ಸ್​ಕ್ಲೂಜಿವ್​ ಇನ್ ಸೈಡ್ಸ್ ಸ್ಟೋರಿ ಇದಾಗಿದೆ.

  ಹೆಸರೇಳಲು ಇಚ್ಚಿಸದ ವಲಸಿಗ ಸಚಿವರು ಹಾಗೂ ಸಿಎಂ ಆಪ್ತರಿಂದ ಈ ಮಾಹಿತಿ ದೊರಕಿದ್ದು, ವಲಸಿಗ  ಸಚಿವರ ಬಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏನೇನು ಮಾತನಾಡಿದರು ಎಂಬುದರ ಕುರಿತು ವರದಿ ಇಲ್ಲಿದೆ.

  ಸಿಎಂ ಯಡಿಯೂರಪ್ಪ ಅವರ ಬಳಿ ಏನು ಹೀಗಾಯ್ತಲ್ಲ? ಎಂದು ವಲಸಿಗ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ಯಡಿಯೂರಪ್ಪ ಅವರು ’’ಏನು ಮಾಡಲಿ, ಹೈಕಮಾಂಡ್ ಸೂಚನೆಯಂತೆ ನಾನು ನಡೆಯಬೇಕಿದೆ, ರಾಜೀನಾಮೆ ಕೊಡಿ ಎಂದರೆ ಕೊಡಬೇಕು, ಇಲ್ಲ ಅಂದರೆ ಸುಮ್ಮನಿರಬೇಕು, ಜು. 25 ನೇ ತಾರೀಕಿಗೆ ಕರೆ ಬರಬಹುದು’’ ಎಂಬುದಾಗಿ ಹೇಳಿದ್ದಾರೆ.

  ಹೈಕಮಾಂಡ್​ ಕರೆ ಮಾಡಿ ರಾಜೀನಾಮೆ ಕೊಡಿ ಅಂದ ತಕ್ಷಣ ನಾನು ರಾಜಿನಾಮೆ ಕೊಡುವೆ ಎಂದು ಬಿಎಸ್​ವೈ  ಹೇಳಿದ ತಕ್ಷಣ ಇದಕ್ಕೆ ಪ್ರತಿಕ್ರಿಯೆ ನೀಡಿದ ವಲಸಿಗ ಸಚಿವರು ’’ನೀವು ರಾಜಿನಾಮೆ ಕೊಟ್ಟರೆ ನಮ್ಮಗಳ ಗತಿ ಏನು’’ ಎಂದು ಪ್ರಶ್ನೆ ಮಾಡಿದ್ದಾರೆ, ಅಲ್ಲದೇ ನಿಮ್ಮ ನಂತರ ಯಾರನ್ನ ಸಿಎಂ ಮಾಡ್ತಾರೆ?  ನಿಮ್ಮ ಅಭಿಪ್ರಾಯ ಏನಾದರೂ ಕೇಳಿ, ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರಾ, ಅಥವಾ ನೀವು ಸೂಚಿಸಿದವರನ್ನು ಸಿಎಂ ಮಾಡುತ್ತಾರ? ಎಂದು ಮೇಲಿಂದ ಮೇಲೆ ವಲಸಿಗ ಸಚಿವರ ತಂಡ ಕೇಳಿದ ಪ್ರಶ್ನೆಗಳಿಗೆ ಯಡಿಯೂರಪ್ಪ ಅವರು ಅಸಹಾಯಕರಾಗಿ ಉತ್ತರ ನೀಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

  ’’ಏನೂ ಗೊತ್ತಿಲ್ಲಪ್ಪ, ಮುಂದಿನ ಮುಖ್ಯಮಂತ್ರಿಯಾಗಿ ಯಾರನ್ನು ನೇಮಕ ಮಾಡಲಿದ್ದಾರೆ ಎಂಬ ವಿಚಾರವಾಗಿ ನನ್ನ ಹತ್ತಿರ ಏನೂ ಕೇಳಿಲ್ಲ’’ ಎಂದಿದ್ದಾರೆ.
  ಹಾಗಾದರೆ ಮುಂದೇನು?  ಸಚಿವರಿಂದ ಮುರುಗೇಶ್ ನಿರಾಣಿ ಹೆಸರು
  ರೇಸ್ ನಲ್ಲಿ ಓಡ್ತಿದೆ. ನೀವು ನೋಡಿದ್ರೆ ಹೈಕಮಾಂಡ್ ನನ್ನ ಮಾತು ಕೇಳ್ತಿಲ್ಲ ಅಂತೀರ?
  ಮುಂದೆ ನಮ್ಮ ಕಥೆ ಏನು ಎಂದು ವಲಸಿಗ ಸಚಿವರ ತಂಡ ಬಿಎಸ್​ವೈ ಮುಂದೆ ಆತಂಕ ವ್ಯಕ್ತಪಡಿಸಿತು.

  ವಲಸಿಗ ಸಚಿವರ ಈ ಆತಂಕ ನೋಡಿ ಸಿಎಂ ಬಿಎಸ್​ವೈ ಹೀಗೆ ಮಾಡಿದರೆ ನಿಮ್ಮ ಆತಂಕ ದೂರವಾಗಬಹುದು ಎಂದು ಸಲಹೆ ನೀಡಿದ್ದಾರೆ.

  ’’ನೀವೆಲ್ಲರೂ ವಿಶೇಷ ವಿಮಾನ ಮಾಡಿಕೊಂಡು, ಬೆಳಿಗ್ಗೆ ದೆಹಲಿಗೆ ಹೊರಡಿ. ಅಲ್ಲಿ ಪ್ರಹ್ಲಾದ್ ಜೋಷಿಯನ್ನು ಭೇಟಿಯಾಗಿ, ನಡ್ಡಾ  ಮತ್ತು ಅಮಿತ್ ಷಾ ಅವರ ಭೇಟಿಗೆ ಸಮಯಾವಕಾಶ ಕೊಡಿಸಿ ಅಂತಾ ಕೇಳಿ, ಅದಾಗಲಿಲ್ಲ ಅಂದರೆ ಮುಂಗಾರು ಅಧಿವೇಶನ ನಡೀತಿದೆ ಅಲ್ಲಿಗೆ ಹೋಗಿ ಅಮಿತ್ ಶಾ ಭೇಟಿ ಮಾಡಿ’’ ಎಂದು ಸಲಹೆ ನೀಡಿದ್ದಾರೆ.

  ಅವರನ್ನ ಭೇಟಿ ಮಾಡಿದ ನಂತರ ಯಡಿಯೂರಪ್ಪನವರು ಯಾರ ಹೆಸರನ್ನು ಹೇಳ್ತಾರೆ ಅವರನ್ನ ಸಿಎಂ ಮಾಡಿ, ಬಿಎಎಸ್​ವೈ ಹೇಳಿದವರನ್ನು ಸಿಎಂ ಮಾಡಿದರೆ ಪಕ್ಷ ಸಂಘಟನೆಗೂ ಅನುಕೂಲ, ಯಾವುದೇ ಕಾರಣಕ್ಕೂ ನಿರಾಣಿ ಅವರನ್ನ ಸಿಎಂ ಮಾಡಬೇಡಿ ಎಂದು ಒತ್ತಡ ಹಾಕಿ. ನಿರಾಣಿ ಸಿಎಂ  ಆದರೆ ರಾಜ್ಯದಲ್ಲಿ ಪಕ್ಷ ಸಂಘಟನೆ ಕಷ್ಟ ಅಂತೇಳಿ ಎಂದು ವಲಸಿಗ ಸಚಿವರಿಗೆ ಒಂದಷ್ಟು ಸಲಹೆಗಳನ್ನು ಸಿಎಂ ನೀಡಿದ್ದಾರೆ.

  ಸಿಎಂ ಮಾತಿಗೆ ಸಚಿವ ಡಾ ಸುಧಾಕರ್, ನಾವು ಸಿದ್ದರಿದ್ದು, ದೆಹಲಿಗೆ ವಿಶೇಷ ವಿಮಾನ  ಮಾಡಿಕೊಂಡು ಹೋಗುತ್ತೇವೆ ಎಂದು  ಉತ್ಸಾಹ ತೋರಿಸಿದ್ದಾರೆ. ಆಗ  ಉಳಿದ ವಲಸಿಗ ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಅಲ್ಲದೇ,  ಹೈಕಮಾಂಡ್ ನಾಯಕರು ಭೇಟಿ ಮಾಡಲು ಸಿಗುವುದಿಲ್ಲ, ಈ ಸಂದರ್ಭದಲ್ಲಿ ನಿಮ್ಮ ಪರವಾಗಿ ಲಾಬಿ ಮಾಡೋದು ಸರಿಯಲ್ಲ, ಮಾಧ್ಯಮಗಳಲ್ಲೂ ತಪ್ಪು ಸಂದೇಶ ಹೋಗುತ್ತೆ, ಹೈಕಮಾಂಡ್ ನಾಯಕರು ನಮ್ಮನ್ನ ಕೈ ಬಿಡಲ್ಲ ಎಂದು ಕೊಂಡಿದ್ದೇವೆ.

  ವಿಶೇಷ ವಿಮಾನ ಮಾಡಿಕೊಂಡು ಹೋಗುವುದು ಸರಿ ಅಲ್ಲ ಎಂದು ನಿರಾಕರಿಸಿದ್ದಾರೆ. ಸಿಎಂ ಬಿಎಸ್​​ವೈ ಅವರ ಸೂಚನೆಗೆ ಡಾ ಸುಧಾಕರ್ ಬಿಟ್ಟರೆ ಉಳಿದ ಸಚಿವರು ಒಪ್ಪಲಿಲ್ಲ ಎಂದು ಸಿಎಂ ಆಪ್ತ ಮೂಲಗಳು ನ್ಯೂಸ್​ 18ಗೆ ತಿಳಿಸಿದ್ದಾರೆ.

  ಇದನ್ನೂ ಓದಿ: ಸಿಎಂ ರೇಸ್​ನಲ್ಲಿ 9 ಮಂದಿ? ಅಶೋಕ್ ಕೂಡ ಲಾಬಿ? ಮಂತ್ರಿಪಟ್ಟ ಉಳಿಸಿಕೊಳ್ಳಲು ಈಶ್ವರಪ್ಪ ಕಸರತ್ತು

  ಒಟ್ಟಿನಲ್ಲಿ ಸಿಎಂ ಬದಲಾವಣೆಯ ಸುದ್ದಿಯ ನಡುವೆ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವುದು ಸಹ ಕುತೂಹಲದ ಪ್ರಶ್ನೆಯಾಗಿ ಉಳಿದಿದೆ.

  ವರದಿ: ಚಿದಾನಂದ್​ ಪಟೇಲ್​

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: