HOME » NEWS » State » BSY CHALLENGES SIDDARAMAIAH TO PROVE THE CORRUPTION ALLEGATIONS SNVS

ಅವಿಶ್ವಾಸದಲ್ಲಿ ಕೈ ಸೋಲು; ರಾತ್ರಿ 1ರವರೆಗೆ ಕಲಾಪ; ಸಿದ್ದರಾಮಯ್ಯ ಮಾತಿನ ವರಸೆ; ಬಿಎಸ್​ವೈ ಶಪಥ

ಬಿಡಿಎ ಗೃಹ ನಿರ್ಮಾಣ ಯೋಜನೆಯ ಟೆಂಡರ್ ವಿಚಾರದಲ್ಲಿ ಯಡಿಯೂರಪ್ಪನವರ ಕುಟುಂಬ ಭ್ರಷ್ಟಾಚಾರ ನಡೆಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಆರೋಪ ಸಾಬೀತಾದರೆ ರಾಜಕೀಯದಿಂದ ಹಿಂದೆ ಸರಿಯುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

news18-kannada
Updated:September 27, 2020, 8:24 AM IST
ಅವಿಶ್ವಾಸದಲ್ಲಿ ಕೈ ಸೋಲು; ರಾತ್ರಿ 1ರವರೆಗೆ ಕಲಾಪ; ಸಿದ್ದರಾಮಯ್ಯ ಮಾತಿನ ವರಸೆ; ಬಿಎಸ್​ವೈ ಶಪಥ
ಸಾಂದರ್ಭಿಕ ಚಿತ್ರ (ರಾಜ್ಯ ಅಧಿವೇಶನ).
  • Share this:
ಬೆಂಗಳೂರು(ಸೆ. 27): ಈ ಬಾರಿಯ ವಿಧಾನ ಮಂಡಲ ಮುಂಗಾರು ಅಧಿವೇಶನ ಮುಕ್ತಾಯಗೊಂಡಿದೆ. ಹಲವು ಬಿಸಿಬಿಸಿ ಚರ್ಚೆ, ವಾಗ್ದಾಳಿಗಳಿಗೆ ಸಾಕ್ಷಿಯಾಗಿದ್ದ ಈ ಅಧಿವೇಶನದಲ್ಲಿ ಬಿಎಸ್​ವೈ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಯಶಸ್ವಿಯಾಗಲಿಲ್ಲ. ರಾತ್ರಿ ಧ್ವನಿಮತದ ಮೂಲಕ ನಡೆದ ಮತದಾನದಲ್ಲಿ ನಿರ್ಣಯದ ವಿರುದ್ಧವಾಗಿ ಹೆಚ್ಚು ಮತಗಳು ಬಂದವು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಿಶ್ವಾಸ ನಿರ್ಣಯವನ್ನು ತಿರಸ್ರಕರಿಸಿದರು. ಇದರೊಂದಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ನಿರೀಕ್ಷಿತ ಗೆಲುವು ಗಳಿಸಿತು. ಇನ್ನು 6 ತಿಂಗಳ ಕಾಲ ಸರ್ಕಾರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವಂತಿಲ್ಲ. ನಿನ್ನೆ ಅಧಿವೇಶನದ ಅಂತಿಮ ದಿನವಾದ್ದರಿಂದ ಚರ್ಚೆ ಹಾಗೂ ಮಸೂದೆ ಮಂಡನೆಗಳ ಹಿನ್ನೆಲೆಯಲ್ಲಿ ರಾತ್ರಿ ಒಂದು ಗಂಟೆಯವರೆಗೂ ಕಲಾಪ ನಡೆದದ್ದು ವಿಶೇಷ.

ಇದಕ್ಕೂ ಮುನ್ನ ಅಧಿವೇಶನದ ಕೊನೆಯ ದಿನವು ಹಲವು ಬಿಸಿಬಿಸಿ ಚರ್ಚೆಗಳಿಗೆ ಸಾಕ್ಷಿಯಾಯಿತು. ಸಿದ್ದರಾಮಯ್ಯ-ಯಡಿಯೂರಪ್ಪ ಹಾಗೂ ಡಿಕೆಶಿ-ಮಾಧುಸ್ವಾಮಿ ಮಧ್ಯೆ ಮಾತಿನ ಜಟಾಪಟಿ ನಡೆಯಿತು. ಸಿದ್ದರಾಮಯ್ಯ ಅವರು ಯಡಿಯೂರಪ್ಪನವರ ಕುಟುಂಬದವರ ಭ್ರಷ್ಟಾಚಾರವನ್ನು ಎತ್ತಿಹಾಡಿದರು. ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಗಳಿಂದ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ತಮ್ಮ ಮೊನಚು ಮಾತುಗಳ ಮೂಲಕ ಸಿದ್ದರಾಮಯ್ಯ ಸದನದಲ್ಲಿ ಆರ್ಭಟಿಸಿದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ತಮ್ಮ ಕುಟುಂಬದವರು ಭ್ರಷ್ಟಾಚಾರ ನಡೆಸಿದ್ದರೆ ಯಾವ ಸಂಸ್ಥೆಯಿಂದ ಬೇಕಾದರೂ ತನಿಖೆ ನಡೆಯಲಿ. ಆರೋಪ ಸಾಬೀತಾದರೆ ಸಾರ್ವಜನಿಕ ಜೀವನದಿಂದ ಹಿಂದಕ್ಕೆ ಸರಿಯುತ್ತೇನೆ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು. ಇಬ್ಬರೂ ಏಕವಚನದಲ್ಲಿ ಪರಸ್ಪರ ಬೈದಾಡಿಕೊಳ್ಳುವಷ್ಟರ ಮಟ್ಟಕ್ಕೆ ಮಾತಿನ ಸಮರ ನಡೆಯಿತು.

ಇದನ್ನೂ ಓದಿ: Farm Bills: ಕೇಂದ್ರ ಕೃಷಿ ಮಸೂದೆಗೆ ವಿರೋಧ; ಎನ್​ಡಿಎ ಮೈತ್ರಿ ತೊರೆದ ಅಕಾಲಿದಳ

ಯಡಿಯೂರಪ್ಪ ಅವರು ಇನ್ನೂ ಹತ್ತು ವರ್ಷ ಕಾಂಗ್ರೆಸ್​ಗೆ ಅಧಿಕಾರ ಸಿಗದಂತೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡುವಷ್ಟು ಭಾವುಕರಾದರು. ಮುಂಬರುವ ಉಪಚುನಾವಣೆಯಲ್ಲಿ ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿ ಎಂದು ಸವಾಲು ಹಾಕಿದರು. ಹಾಗೆಯೇ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು 135 ಸ್ಥಾನ ಗೆಲ್ಲುತ್ತೇವೆ. ಇನ್ನೂ 10 ವರ್ಷ ಅಧಿಕಾರದಲ್ಲಿರುತ್ತೇವೆ. ಕಾಂಗ್ರೆಸ್ ವಿಪಕ್ಷದಲ್ಲಿ ಸ್ಥಾನದಲ್ಲಿ ಇರಲೇಬೇಕು. ಇದನ್ನು ನಾನು ಮಾಡಿಯೇ ತೀರುತ್ತೇನೆ. ಇದು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ನನ್ನ ಸವಾಲು ಎಂದು ಯಡಿಯೂರಪ್ಪ ಹೇಳಿದರು.

ಇನ್ನು, ರಾತ್ರಿ 10 ಗಂಟೆಯ ನಂತರ ಸಚಿವ ಮಾಧುಸ್ವಾಮಿ ಮತ್ತು ಡಿಕೆ ಶಿವಕುಮಾರ್ ಮಧ್ಯೆ ವಾಗ್ಯುದ್ಧ ನಡೆಯಿತು. ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದಿದ್ದನ್ನು ಇಟ್ಟುಕೊಂಡು ಮಾಧುಸ್ವಾಮಿ ಕಿಚಾಯಿಸಿದರು. “ಏನ್ ಅಂಕಲ್, ಜೈಲಿಗೆ ಹೋಗಿ ಬಂದವರನ್ನ ಯಾಕೆ ಮೆರವಣಿಗೆ ಮಾಡುತ್ತಿದ್ದಾರೆ ಅಂತ ನಂಗೆ ಒಬ್ಬ ಹುಡುಗ ಕೇಳಿದ. ಹೌದಪ್ಪ, ಕೆಲವರಿಗೆ ಹಾಗೇ ಇರುತ್ತೆ ಅಂತ ನಾನು ಅವನಿಗೆ ಹೇಳಿದೆ” ಎಂದು ಡಿಕೆ ಶಿವಕುಮಾರ್ ಹೆಸರತ್ತೆದೆಯೇ ಮಾಧುಸ್ವಾಮಿ ಕುಟುಕಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ನಿಮ್ಮ ನಾಯಕರು ಜೈಲಿಗೆ ಹೋಗಿ ಬಂದಿದ್ದನ್ನು ಯಾಕೆ ಮಾತನಾಡುತ್ತಿಲ್ಲ ಎಂದರು ಪ್ರಶ್ನಿಸಿದರು. ಅದಕ್ಕೆಲ್ಲಾ ನೀವೇ ಕಾರಣ ಎಂದು ಸಚಿವರು ತಿರುಗೇಟು ನೀಡಿದರು.

ಇದನ್ನೂ ಓದಿ: ಸಿಎಂ ಯಡಿಯೂರಪ್ಪ ಎಲ್ಲೇ ಕಂಡರೂ ಘೇರಾವ್ ಹಾಕಿ; ರೈತರಿಗೆ ಕರೆ ನೀಡಿದ ರೈತ-ದಲಿತ-ಕಾರ್ಮಿಕ ಸಮಿತಿ

ನಾನು 1989ರಲ್ಲೇ ಇಲ್ಲಿಗೆ ಬಂದೆ. ಆಮೇಲೆ ನಾನು ಎರಡು ಬಾರಿ ಸೋತು ಬಂದೆ. ಆದರೆ, ನೀವು ಏನೇನು ಮಾಡಿ, ಏನೆಲ್ಲಾ ಶಕ್ತಿಯಿಂದ ಗೆದ್ದು ಬಂದಿರಿ. ನೀವು ಹೇಗೆ ಎಲ್ಲೋ ಹೋಗಿ ಬಿಟ್ರಿ ಎಂಬುದು ನನಗೆ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ಮೇಲೆ ಮಾಧುಸ್ವಾಮಿ ಹರಿಹಾಯ್ದರು.ವರದಿ: ಕೃಷ್ಣ ಜಿ.ವಿ. / ಸಂಜಯ್
Published by: Vijayasarthy SN
First published: September 27, 2020, 8:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories