ಜ. 29ಕ್ಕೆ ಸಂಪುಟ ವಿಸ್ತರಣೆ ಬಹುತೇಕ ಖಚಿತ; ಹೈಕಮಾಂಡ್​ನಿಂದಲೂ ಗ್ರೀನ್ ಸಿಗ್ನಲ್

ಸದ್ಯ, ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ 17 ಸಚಿವರಿದ್ದಾರೆ. ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಇನ್ನೂ 11 ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಉಪಚುನಾವಣೆಯಲ್ಲಿ ಗೆದ್ದಿರುವ 11 ‘ಅರ್ಹ’ ಶಾಸಕರಿಗೆ ಸಚಿವ ಸ್ಥಾನ ಸಿಗುವ ಖಾತ್ರಿ ಇಲ್ಲ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • News18
  • Last Updated :
  • Share this:
ಬೆಂಗಳೂರು(ಜ. 25): ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಹಗ್ಗ ಜಗ್ಗಾಟಗಳು ಮುಗಿಯುವ ಕಾಲ ಸಮೀಪಿಸಿದೆ. ಜ. 29ರಂದು ಸಂಪುಟ ವಿಸ್ತರಣೆ ಮಾಡಲು ಯಡಿಯೂರಪ್ಪ ನಿರ್ಧರಿಸಿದ್ಧಾರೆ. ಸಂಪುಟ ವಿಸ್ತರಣೆಗೆ ಸೇರಿಸಿಕೊಳ್ಳುವವರ ಪಟ್ಟಿಯನ್ನು ಯಡಿಯೂರಪ್ಪ ಅವರು ಬಿ.ಎಲ್. ಸಂತೋಷ್ ಮೂಲಕ ಹೈಕಮಾಂಡ್​ಗೆ ರವಾನಿಸಿದ್ದರು. ದೆಹಲಿಯಲ್ಲಿ ಬಿಜೆಪಿ ವರಿಷ್ಠರು ಈ ಪಟ್ಟಿಗೆ ಬಹುತೇಕ ಅಂಕಿತ ಹಾಕಿದ್ದಾರೆನ್ನಲಾಗಿದೆ. ಹಾಗೆಯೇ, ಜ. 29ಕ್ಕೆ ಸಂಪುಟ ವಿಸ್ತರಣೆ ಮಾಡಬೇಕೆನ್ನುವ ಯಡಿಯೂರಪ್ಪ ಅವರ ಯೋಜನೆಗೂ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ಹೇಳಿವೆ.

ಜ. 29, ಬುಧವಾರದ ದಿನ ಸಂಪುಟ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಜ್ಯೋತಿಷಿಗಳ ಸಲಹೆ ಕಾರಣವೆನ್ನಲಾಗಿದೆ. ಅಂದು ಪಂಚಮಿ ವಿಶೇಷ ದಿನವಾಗಿದ್ದು, ಸಂಪುಟ ವಿಸ್ತರಣೆಗೆ ಯೋಗ್ಯ ದಿನ. ಅಂದು ಬೆಳಗ್ಗೆ 10:45ರಿಂದ ರಾಜಯೋಗವಿದೆ. ಆ ಕಾಲದಲ್ಲಿ ಸಂಪುಟ ವಿಸ್ತರಣೆ ಮಾಡಿದರೆ ಯಾವುದೇ ತೊಂದರೆ ಇಲ್ಲ ಎಂಬುದು ಜ್ಯೋತಿಷಿಗಳ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಜ. 29ಕ್ಕೆ ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ದಿನ ನಿಗದಿ ಮಾಡಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ಸೋತವರಿಗೆ ಸಚಿವ ಸ್ಥಾನದ ಬೇಡಿಕೆ; ಎಸ್.ಟಿ. ಸೋಮಶೇಖರ್​ ಮತ್ತು ವಿಶ್ವನಾಥ್ ಮಧ್ಯೆ ವಾಗ್ಯುದ್ಧ

ಜೆಡಿಎಸ್ ಮತ್ತು ಕಾಂಗ್ರೆಸ್​ನಿಂದ 17 ಶಾಸಕರು ರಾಜೀನಾಮೆ ನೀಡಿದ ನಂತರ ಮೈತ್ರಿ ಸರ್ಕಾರ ಪತನಗೊಂಡು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಸಾಧ್ಯವಾಗಿದೆ. 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 13ರಲ್ಲಿ ಗೆದ್ದು ಸರ್ಕಾರವನ್ನು ಭದ್ರ ಮಾಡಿಕೊಂಡಿದೆ. ರಾಜೀನಾಮೆ ನೀಡಿದವರಲ್ಲಿ ಎಂಟಿಬಿ ನಾಗರಾಜ್ ಮತ್ತು ಹೆಚ್. ವಿಶ್ವನಾಥ್ ಅವರಿಬ್ಬರು ಮಾತ್ರ ಸೋಲನುಭವಿಸಿದ್ಧಾರೆ. ಆರ್. ಶಂಕರ್ ಅವರನ್ನು ಚುನಾವಣೆಗೆ ನಿಲ್ಲದಂತೆ ಮನವೊಲಿಸಲಾಗಿತ್ತು. ರೋಷನ್ ಬೇಗ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿಲ್ಲ. ರಾಜೀನಾಮೆ ನೀಡಿ ಅನರ್ಹಗೊಂಡವರಲ್ಲಿ 11 ಮಂದಿ ಉಪಚುನಾವಣೆಯಲ್ಲಿ ಗೆದ್ದು ಅರ್ಹರೆನಿಸಿದ್ದಾರೆ. ಅವರೆಲ್ಲರಿಗೂ ಸಚಿವ ಸ್ಥಾನ ನೀಡಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ. ಹಾಗೆಯೇ ಸೋತವರಿಗೂ ಮಂತ್ರಿ ಸ್ಥಾನ ನೀಡಬೇಕೆಂದು ಹೆಚ್. ವಿಶ್ವನಾಥ್ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಸುತ್ತ ನಿರಂತರವಾಗಿ ಹಗ್ಗ ಜಗ್ಗಾಟಗಳು ನಡೆಯುತ್ತಲೇ ಇದೆ.

ಇದನ್ನೂ ಓದಿ: ರಾಷ್ಟ್ರಧ್ವಜ ನೇಯುವ ನೇಕಾರ ಮಹಿಳೆಯರ ಗೋಳು ಕೇಳತ್ತಾ ಬಿಎಸ್ ಯಡಿಯೂರಪ್ಪ ಸರ್ಕಾರ?

ಸದ್ಯ, ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ 17 ಸಚಿವರಿದ್ದಾರೆ. ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಇನ್ನೂ 11 ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಉಪಚುನಾವಣೆಯಲ್ಲಿ ಗೆದ್ದಿರುವ 11 ‘ಅರ್ಹ’ ಶಾಸಕರಿಗೆ ಸಚಿವ ಸ್ಥಾನ ಸಿಗುವ ಖಾತ್ರಿ ಇಲ್ಲ. ಏಳು ಮಂದಿಗಷ್ಟೇ ಮಂತ್ರಿಭಾಗ್ಯ ಇರಬಹುದು ಎಂಬ ಮಾತುಗಳು ಹರಿದಾಡುತ್ತಿವೆ. ಎಲ್ಲ ಭಿನ್ನಮತೀಯರಿಗೂ ಸಚಿವ ಸ್ಥಾನ ಸಿಗದಿದ್ದರೆ ಬಿಜೆಪಿಯೊಳಗೂ ಬಂಡಾಯ ಏಳುವುದಾಗಿ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ಧಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಜ. 29ರ ನಂತರ ಮತ್ತೊಂದು ಸುತ್ತಿನ ಅಗ್ನಿಪರೀಕ್ಷೆ ಎದುರಾಗುವ ಸಂಭವ ಇಲ್ಲದಿಲ್ಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: