ಶಿರಾದಲ್ಲಿ ಪೊಲೀಸರ ಮೂಲಕವೇ ಹಣ ಹಂಚುತ್ತಿದ್ದಾರೆ; ಬಿವೈ ವಿಜಯೇಂದ್ರ ವಿರುದ್ಧ ಹೆಚ್​ಡಿ ದೇವೇಗೌಡ ಆರೋಪ

ಶಿರಾದಲ್ಲಿ ಬಿಜೆಪಿಯವರು ಪೊಲೀಸರ ಮೂಲಕ ದುಡ್ಡು ಹಂಚುತ್ತಿದ್ದಾರೆ. ಈ ಬಗ್ಗೆ ದೂರು ಕೊಟ್ಟರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ರಾಜ್ಯದಲ್ಲಿ ನಿಷ್ಪಕ್ಷಪಾತವಾದ ಚುನಾವಣೆ ಎಂದಿಗೂ ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪನವರ ಮಗ ವಿಜಯೇಂದ್ರ ವಿರುದ್ಧ ದೇವೇಗೌಡರು ಕಿಡಿ ಕಾರಿದ್ದಾರೆ.

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

  • Share this:
ಬೆಂಗಳೂರು (ಅ. 28): ಶಿರಾದಲ್ಲಿ ವಿಜಯೇಂದ್ರ ಚುನಾವಣಾ ತಂತ್ರ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಬಿಜೆಪಿಯವರು ಚುನಾವಣೆ ನಡೆಸೋ ರೀತಿ ಬಗ್ಗೆ ನನಗೆ ಗೊತ್ತಿದೆ. ಅವರು ಯಾವ ರೀತಿ ಚುನಾವಣೆ ನಡೆಸ್ತಾರೆ ಎಂಬ ಬಗ್ಗೆ ವರದಿ ಕೂಡ ಇದೆ. ಪೊಲೀಸರ ಮೂಲಕ ದುಡ್ಡು ಹಂಚುತ್ತಿದ್ದಾರೆ. ಈ ಬಗ್ಗೆ ದೂರು ಕೊಟ್ಟರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರ ಬಗ್ಗೆ ಮಾತನಾಡಿ ಯಾವುದೇ ಉಪಯೋಗವಿಲ್ಲ. ಈ ರಾಜ್ಯದಲ್ಲಿ ನಿಷ್ಪಕ್ಷಪಾತವಾದ ಚುನಾವಣೆ ಎಂದಿಗೂ ಸಾಧ್ಯವಿಲ್ಲ. ಯಾಕೆಂದರೆ ರಾಷ್ಟ್ರದಲ್ಲೇ ಆ ರೀತಿ ಆಗಿದೆ ಇನ್ನು ರಾಜ್ಯದಲ್ಲಿ ಏನು ಮಾಡೋಕಾಗುತ್ತದೆ? ಎಂದು ಸಿಎಂ ಯಡಿಯೂರಪ್ಪನವರ ಮಗ ಬಿವೈ ವಿಜಯೇಂದ್ರ ವಿರುದ್ಧ ಹೆಚ್​ಡಿ ದೇವೇಗೌಡರು ಕಿಡಿ ಕಾರಿದ್ದಾರೆ.

ಬೆಂಗಳೂರಿನ ಜೆಪಿ‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ನಾವು ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನಮಗೆ ಅದರ ಅವಶ್ಯಕತೆಯೂ ಇಲ್ಲ. ನಾನು ಹೋರಾಟ ಮಾಡೋದು ಶತಸಿದ್ಧ. ನನ್ನ ಹೋರಾಟಕ್ಕೆ ನನ್ನ ವಯಸ್ಸು ಲೆಕ್ಕಕ್ಕೆ ಇಲ್ಲ. ಪಕ್ಷ ಉಳಿಯಬೇಕು, ಅದಕ್ಕಾಗಿ ನಾನು ಹೋರಾಟ ಮಾಡುತ್ತೇನೆ. ಯಾರು ಏನೇ ಮಾತಾಡಿದರೂ ನಾವು ಮಾತ್ರ ಪಕ್ಷವನ್ನು ಉಳಿಸಿಕೊಳ್ಳುತ್ತೇವೆ ಎಂದಿದ್ದಾರೆ.

ನಿನ್ನೆ ನಿಖಿಲ್ ಕುಮಾರಸ್ವಾಮಿ ಆರ್​ಆರ್ ನಗರದಲ್ಲಿ ಪ್ರಚಾರ ಮಾಡಿದ್ದಾರೆ. ನಿಖಿಲ್​ಗೆ ಜನರ ಬೆಂಬಲ ಯಾವ ರೀತಿ ಇತ್ತೆಂದು ನಾನು ನೋಡಿದ್ದೇನೆ. ಮಳೆಯಿಂದಾದ ಸಮಸ್ಯೆಗಳಿಗೆ ರಾಜಕಾಲುವೆ ಒತ್ತುವರಿ ಕಾರಣ ಎನ್ನುತ್ತಾರೆ. ನಾನು ಹಿಂದೆ ಸಿಎಂ ಆಗಿದ್ದಾಗ ಮಳೆ ಅನಾಹುತಕ್ಕೆ ಅಗತ್ಯ ಕ್ರಮ ವಹಿಸಿದ್ದೆ. ರಾಜಕಾಲುವರೆ ಒತ್ತುವರಿಯಾಗದಂತೆ, ಕೆರೆಗಳ ಅಭಿವೃದ್ಧಿ ಗೆ ಒತ್ತು ಕೊಟ್ಟಿದ್ದೆವು. ಒತ್ತುವರಿ ತಡೆಗೆ, ಕೆರೆ ಕಬಳಿಕೆ ಮಾಡದಂತೆ ಕ್ರಮ ವಹಿಸಿದ್ದೆವು. ಆದರೆ ಈಗ ಕೆರೆ ಕಬಳಿಕೆಯಲ್ಲಿ ಅನೇಕ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಈಗ ಎರಡು ರಾಷ್ಟ್ರೀಯ ಪಕ್ಷಗಳ ಕೆಸರೆರಚಾಟ ನೋಡುತ್ತಿದ್ದೇನೆ. ಕಾಂಗ್ರೆಸ್​ನಿಂದ ಬಿಜೆಪಿಗೆ ಹೋಗಿರುವ ಅಭ್ಯರ್ಥಿ ಮುನಿರತ್ನ. ಎರಡೂ ಪಕ್ಷದವರು ಸೇರಿ ನನ್ನ ಪಕ್ಷವನ್ನು ಮುಳುಗಿಸಲು ಪ್ರಯತ್ನ ಮಾಡಿದ್ದರು. ಆದರೆ, ಈ ಎರಡು ರಾಜಕೀಯ ಪಕ್ಷಗಳ ಬಗ್ಗೆ ನಾನು ಮಾತಾಡಲ್ಲ. ಇವರ ಬಗ್ಗೆ ಜನರೇ ತೀರ್ಮಾನ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಯುದ್ಧಕ್ಕೆ ಮೊದಲೇ ಡಿಕೆ ಶಿವಕುಮಾರ್ ಪಲಾಯನ ಮಾಡಿದ್ದಾರೆ; ಸಚಿವ ಆರ್​. ಅಶೋಕ್ ಲೇವಡಿ

ಇವತ್ತು ನಾನು ಶಿರಾಗೆ ಹೋಗುತ್ತಿದ್ದೇನೆ. ನಾಲ್ಕು ಪರಿಷತ್ ಚುನಾವಣೆ ಪ್ರಾರಂಭವಾಗಿದೆ. ಈಗಾಗಲೇ ಚುನಾವಣೆಗೆ ಎಲ್ಲಾ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ಹುಬ್ಬಳ್ಳಿ ಅಭ್ಯರ್ಥಿ ನಿವೃತ್ತಿ ಆದಮೇಲೆ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದೇವೆ. ಇದರ ಜವಾಬ್ದಾರಿಯನ್ನು ಬಸವರಾಜ ಹೊರಟ್ಟಿ ವಹಿಸಿಕೊಂಡಿದ್ದಾರೆ. ಈಗಾಗಲೇ ಚುನಾವಣೆ ಹೋರಾಟ ಮಾಡಿದ್ದೇವೆ. ನಾವು ಹೋರಾಟ ಮಾಡಿದ್ದು ಯಾರಿಗೋ ಚಾಲೆಂಜ್ ಮಾಡೋಕೆ ಅಲ್ಲ. ಪಕ್ಷದ ಉಳಿವಿಗಾಗಿ ಹೋರಾಟ ಮಾಡಿದ್ದೇವೆ. ಜೆಡಿಎಸ್​ ಒಂದು ಪ್ರಾದೇಶಿಕ ಪಕ್ಷ. ಒಂದು ಕಾಲದಲ್ಲಿ ರಾಷ್ಟ್ರವನ್ನು ಆಳಿದ ಪಕ್ಷ ಇದು. ರಾಜ್ಯದಲ್ಲಿ ಈ ಪಕ್ಷ ನಾಶವಾಗಲು ರಾಜ್ಯದ ಜನರು ಬಿಟ್ಟುಕೊಟ್ಟಿಲ್ಲ. ಆದರೆ ಕೆಲವರು ಚುನಾವಣೆ ಆದಮೇಲೆ ಈ ಪಕ್ಷದ ಹೆಸರೇ ಇರಲ್ಲ ಅಂತ ನನ್ನ ಮನಸ್ಸಿಗೆ ನೋವಾಗೋ ರೀತಿಯಲ್ಲಿ ಮಾತಾಡ್ತಾರೆ. ಇಲ್ಲಿಂದಲೇ ಬೆಳೆದು, ಅಧಿಕಾರ ಅನುಭವಿಸಿ ಹೋಗಿರೋರು ಏನೇನೋ ಮಾತಾಡ್ತಾರೆ. ಅವರ ಬಗ್ಗೆ ನಾನು ಲಘುವಾಗಿ ಮಾತಾಡಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಕಿಡಿಕಾರಿದ್ದಾರೆ.

ಆರ್​ಆರ್​ ನಗರ ಮತ್ತು ಶಿರಾ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್​ ಗೆಲ್ಲುವ ವಿಶ್ವಾಸ ಇದೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಸೇರಿದಂತೆ ಪ್ರಜ್ವಲ್ ಸೇರಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಎಲ್ಲ ನಾಯಕರು ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಶಿರಾ ಕ್ಷೇತ್ರದಲ್ಲಿ ಕೆಲಸ ಮಾಡೋಕೆ ನನಗೆ ಯಾವುದೇ ಅಡ್ಡಿ ಆತಂಕ ಇಲ್ಲ. ಕುಮಾರಸ್ವಾಮಿಯವರು ಆರ್ ಆರ್ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಯುವಕರ ಸಹಕಾರ ಚೆನ್ನಾಗಿದೆ ಎಂದು ದೇವೇಗೌಡರು ಹೇಳಿದ್ದಾರೆ.
Published by:Sushma Chakre
First published: