HOME » NEWS » State » BS YEDIYURAPPAS 78TH BIRTHDAY BASH TODAY AN ACT OF DEFIANCE OR JUST COLD POLITICAL CALCULATIONS SNVS

ವಿಜೃಂಭಣೆಯಿಂದ ಯಡಿಯೂರಪ್ಪ 78ನೇ ಜನ್ಮದಿನಾಚರಣೆ; ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ ಎಂಬ ಸಂದೇಶ ರವಾನಿಸುವ ಪ್ರಯತ್ನವಾ?

ಇದು ಹೈಕಮಾಂಡ್​ಗೆ ಸೆಡ್ಡು ಹೊಡೆಯುವ ಕಾರ್ಯ ಎಂದು ಕೆಲವರು ಬಣ್ಣಿಸಿದ್ದಾರೆ. ಹೈಕಮಾಂಡ್​ ಅನ್ನು ಸದಾ ಸಂಪ್ರೀತಗೊಳಿಸುವ ಕಾಯಕ ತಾನು ಮಾಡಲಾರೆ ಎಂದು ಯಡಿಯೂರಪ್ಪ ಸಾರುತ್ತಿರುವ ಗಟ್ಟಿ ಸಂದೇಶ ಇದಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

news18
Updated:February 27, 2020, 7:18 AM IST
ವಿಜೃಂಭಣೆಯಿಂದ ಯಡಿಯೂರಪ್ಪ 78ನೇ ಜನ್ಮದಿನಾಚರಣೆ; ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ ಎಂಬ ಸಂದೇಶ ರವಾನಿಸುವ ಪ್ರಯತ್ನವಾ?
ಸಿಎಂ ಬಿ.ಎಸ್.ಯಡಿಯೂರಪ್ಪ
  • News18
  • Last Updated: February 27, 2020, 7:18 AM IST
  • Share this:
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 78ನೇ ಜನ್ಮದಿನ ಇಂದು. ಕೇವಲ ಎರಡು ವರ್ಷದ ಹಿಂದೆ ಗುಪ್ ಚುಪ್ ರೀತಿಯಲ್ಲಿ ಜನ್ಮದಿನಾಚರಣೆ ಮಾಡಿದ್ದ ಯಡಿಯೂರಪ್ಪ ಇವತ್ತು ಎದೆಯುಬ್ಬಿಸಿ ವಿಜೃಂಭಣೆಯಿಂದ ಹುಟ್ಟಿದ ಹಬ್ಬ ಆಚರಿಸುತ್ತಿದ್ದಾರೆ. ಬೇರೆ ಪಕ್ಷಗಳ ದಿಗ್ಗಜರನ್ನು ಕರೆಸಿ ಪಕ್ಷಾತೀತವಾಗಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತಿದ್ಧಾರೆ. ರಾಜ್ಯ ರಾಜಕಾರಣದ ಮಟ್ಟಿಗೆ ಇದು ಗಮನಿಸಬೇಕಾದ ವಿಚಾರ. ರಾಜ್ಯದಲ್ಲಿ ಹೇಳ ಹೆಸರಿಲ್ಲದಂತಿದ್ದ ಬಿಜೆಪಿಯನ್ನು ಮೂರು ಮೂರು ಬಾರಿ ಅಧಿಕಾರಕ್ಕೆ ತಂದು ನಿಲ್ಲಿಸಿದ ಶ್ರೇಯಸ್ಸು ಬಹುತೇಕ ಯಡಿಯೂರಪ್ಪ ಅವರಿಗೇ ಸಲ್ಲಬೇಕು. ಯಡಿಯೂರಪ್ಪ ಇಲ್ಲದಿದ್ದರೆ ಕರ್ನಾಟಕದಲ್ಲಿ ಬಿಜೆಪಿಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಅನಿವಾರ್ಯವಾಗಿದ್ದಾರೆ. ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಪಕ್ಷದ ಉನ್ನತ ಚುನಾಯಿತ ಸ್ಥಾನಕ್ಕೆ 75 ವರ್ಷ ಮಿತಿ ಹಾಕಿದ್ದ ಬಿಜೆಪಿ ಹೈಕಮಾಂಡ್ ಮುಂದೆ 78 ವರ್ಷದ ಯಡಿಯೂರಪ್ಪ ಸೆಡ್ಡು ಹೊಡೆದು ನಿಂತುಕೊಂಡಿರುವಂತಿದೆ.

2017ರಲ್ಲಿ ಯಡಿಯೂರಪ್ಪ ಆಚರಿಸಿಕೊಂಡ ಹುಟ್ಟುಹಬ್ಬಕ್ಕೂ ಇವತ್ತಿನದ್ದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಆಗ 75 ವರ್ಷ ವಯಸ್ಸು ಪೂರ್ಣಗೊಂಡಿದ್ದ ಯಡಿಯೂರಪ್ಪಗೆ ಪಕ್ಷ ಹಾಕಿದ್ದ 75 ವರ್ಷದ ಲಕ್ಷ್ಮಣ ರೇಖೆಯೇ ಕಾಡುತ್ತಿದ್ದಂತಿತ್ತು. ಆ ಕಾರಣಕ್ಕೆ ಅವರು ತಮ್ಮ ಹುಟ್ಟುಹಬ್ಬಕ್ಕೆ ಯಾರೂ ಶುಭ ಕೋರಬಾರದೆಂದು ಪಕ್ಷದ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಸೂಚನೆ ನೀಡಿದ್ದರು. ಶುಭ ಕೋರುವ ಫಲಕಗಳಲ್ಲಿ ನಮೂದುಗೊಂಡಿದ್ದ ‘75 ವರ್ಷ’ ಎಂಬ ಪದವನ್ನೇ ಆತುರಾತುರವಾಗಿ ತೆಗೆಸಿಹಾಕಿಸಿದ್ದರು. ಕೆಲವರಂತೂ ಯಡಿಯೂರಪ್ಪಗೆ 74ನೇ ಜನ್ಮದಿನ ಎಂದು ಬದಲಾಯಿಸಿಬಿಟ್ಟಿದ್ದರು.

ಇತ್ತೀಚಿನವರೆಗೂ ಬಿಜೆಪಿಯ ವರಿಷ್ಠರ ಪಾಲಿಗೆ ಯಡಿಯೂರಪ್ಪ ಮುಜುಗರದ ವ್ಯಕ್ತಿಯಾಗಿದ್ದರು. ಅವರು ಮತ್ತೊಮ್ಮೆ ಸಿಎಂ ಆಗುವುದು ಹೈಕಮಾಂಡ್​ಗೆ ಇಷ್ಟವಿರಲಿಲ್ಲ. ಹಾಗೂ ಹೀಗೂ ಪ್ರಯತ್ನಗಳನ್ನ ಮಾಡಿ ಯಡಿಯೂರಪ್ಪ ಸಿಎಂ ಆಗುವಲ್ಲಿ ಯಶಸ್ವಿಯಾಗಿಬಿಟ್ಟರು. ತಮ್ಮ ಅಧಿಕಾರಾವಧಿಯ ಬಾಕಿ ಮೂರು ವರ್ಷವೂ ತಾನೇ ಸಿಎಂ ಆಗಿ ಮುಂದುವರಿಯುವ ತಾಕತ್ತು ತನಗೆ ಇದೆ ಎಂದು ಆಗಾಗ್ಗೆ ಅವರು ಸಂದೇಶ ರವಾನೆ ಮಾಡುತ್ತಲೇ ಬಂದಿದ್ಧಾರೆ.

ಇದನ್ನೂ ಓದಿ: ದೊರೆಸ್ವಾಮಿ ವಿರುದ್ಧ ಶಾಸಕ ಯತ್ನಾಳ್ ಅವಹೇಳನಕಾರಿ ಹೇಳಿಕೆ ವಿಚಾರ; ಪ್ರತಿಭಟನೆಗೆ ಕರೆ ನೀಡಿದ ಸಿದ್ದರಾಮಯ್ಯ

ಒಂದು ವಾರದ ಹಿಂದಷ್ಟೇ ಪತ್ರವೊಂದು ಬಿಜೆಪಿ ರಾಜಕೀಯ ಪಡಸಾಲೆಯಲ್ಲಿ ರಹಸ್ಯವಾಗಿ ಹರಿದಾಡುತ್ತಿತ್ತು. ವಯಸ್ಸಾಗಿರುವುದರಿಂದ ಗೌರವಪೂರ್ವಕವಾಗಿಯೇ ಸಿಎಂ ಸ್ಥಾನ ಬಿಟ್ಟುಕೊಡಬೇಕೆಂದು ಯಡಿಯೂರಪ್ಪಗೆ ಸೂಚಿಸಿ ಬರೆದ ಪತ್ರ ಅದಾಗಿತ್ತು. ಯಡಿಯೂರಪ್ಪರ ಎರಡನೇ ಮಗ ಬಿ.ವೈ. ವಿಜಯೇಂದ್ರ ಅವರು ಆಡಳಿತದಲ್ಲಿ ಸಾಕಷ್ಟು ಹಸ್ತಕ್ಷೇಪ ಮಾಡುತ್ತಿದ್ಧಾರೆ. ಅಪ್ಪ ಮಗನ ಬಗ್ಗೆ ಬಿಜೆಪಿಯ ಕೆಲ ಮೂಲ ನಾಯಕರು ಅಸಮಾಧಾನ ಹೊಂದಿದ್ದಾರೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಆ ಪತ್ರಕ್ಕೆ ಯಾವ ಅಪ್ಪ ಅಮ್ಮ ಇರಲಿಲ್ಲ. ಅಂದರೆ ಹೈಕಮಾಂಡ್​ನ ಸಹಿ ಇಲ್ಲದ ಪತ್ರ ಅದಾಗಿತ್ತು. ಇದೇ ಕಾರಣಕ್ಕೆ ಸಿಎಂ ಆಪ್ತ ವಲಯವು ಈ ಪತ್ರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಆದರೂ ಕೂಡ ಈ ಪತ್ರ ಈಗಲೂ ಕೂಡ ಬಿಜೆಪಿಯೊಳಗೆ ರಹಸ್ಯವಾಗಿಯೇ ಹರಿದಾಡುತ್ತಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಜನ್ಮದಿನೋತ್ಸವ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದು ಹೈಕಮಾಂಡ್​ಗೆ ಸೆಡ್ಡು ಹೊಡೆಯುವ ಕಾರ್ಯ ಎಂದು ಕೆಲವರು ಬಣ್ಣಿಸಿದ್ದಾರೆ. ಹೈಕಮಾಂಡ್​ ಅನ್ನು ಸದಾ ಸಂಪ್ರೀತಗೊಳಿಸುವ ಕಾಯಕ ತಾನು ಮಾಡಲಾರೆ ಎಂದು ಯಡಿಯೂರಪ್ಪ ಸಾರುತ್ತಿರುವ ಗಟ್ಟಿ ಸಂದೇಶ ಇದಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಯಡಿಯೂರಪ್ಪ ಜನ್ಮದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವುದು ಕುತೂಹಲ ಹೆಚ್ಚಿಸಿದೆ. ಅನ್ಯಪಕ್ಷಗಳ ಈ ಇಬ್ಬರು ದಿಗ್ಗಜರನ್ನು ಕರೆಸುವ ಮೂಲಕ ಯಡಿಯೂರಪ್ಪ ತಾನು ಪಕ್ಷಾತೀತವಾಗಿ ಜನಪ್ರಿಯವಾಗಿರುವ ನಾಯಕ. ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮುನ್ನಡೆಸಬಲ್ಲ ಏಕೈಕ ವ್ಯಕ್ತಿ ತಾನು ಎಂಬ ಸಂದೇಶವನ್ನು ಅವರು ಸಾರುತ್ತಿರುವಂತಿದೆ.ಇದನ್ನೂ ಓದಿ: ದೆಹಲಿ ಹಿಂಸಾಚಾರ; ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ 6 ಪ್ರಶ್ನೆಗಳನ್ನು ಕೇಂದ್ರದ ಮುಂದಿಟ್ಟ ಸೋನಿಯಾ ಗಾಂಧಿ

ರಾಜಕಾರಣದಲ್ಲಿ ವಯಸ್ಸು ಲೆಕ್ಕಕ್ಕೆ ಇರುವುದಿಲ್ಲ. ಯಡಿಯೂರಪ್ಪ ಈ ಹಿಂದೆಯೂ ಕೂಡ ತಮ್ಮ ವಯಸ್ಸನ್ನು ಮರೆಮಾಚುವ ಅಗತ್ಯವೇನೂ ಇರಲಿಲ್ಲ ಎಂದು ಅವರ ಆಪ್ತರೊಬ್ಬರು ನ್ಯೂಸ್18ಗೆ ತಿಳಿಸಿದ್ದಾರೆ. “ಉನ್ನತ ಚುನಾಯಿತ ಸ್ಥಾನಕ್ಕೆ 75 ವರ್ಷದ ವಯಸ್ಸಿನ ಮಿತಿಯೇನೋ ಹಾಕಲಾಗಿದೆ. ಆದರೆ, ವಾಸ್ತವ ರಾಜಕಾರಣದಲ್ಲಿ ಅದು ಅನ್ವಯ ಆಗುವುದಿಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ಇಲ್ಲದೇ ಬಿಜೆಪಿ ಇಲ್ಲ. ಇದು ಹೈಕಮಾಂಡ್​ಗೂ ಗೊತ್ತಿದೆ. ಆ ಕಾರಣಕ್ಕೆ ನಾವು ಧೈರ್ಯವಾಗಿ ಯಡಿಯೂರಪ್ಪರ 78ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ” ಎಂದು ಇವರು ಹೇಳಿದ್ದಾರೆ.

ಈ ಜನ್ಮದಿನ ಕಾರ್ಯಕ್ರಮ ಆಯೋಜಿಸುವ ಕೆಲಸದ ಮುಂದಾಳತ್ವವನ್ನು ವಿಜಯೇಂದ್ರ ಅವರೇ ವಹಿಸಿಕೊಂಡಿದ್ದಾರೆ. ನ್ಯೂಸ್18 ಜೊತೆ ಮಾತನಾಡಿದ ವಿಜಯೇಂದ್ರ ತಮ್ಮ ತಂದೆಯ ಜನ್ಮದಿನೋತ್ಸವನ್ನು ರಾಜಕೀಯೇತರ ಖಾಸಗಿ ಕಾರ್ಯಕ್ರಮ ಎಂದು ಬಣ್ಣಿಸಿದ್ದಾರೆ. “ಈ ಕಾರ್ಯಕ್ರಮದಲ್ಲಿ ಸುಮಾರು 3,000 ಜನರಿರುತ್ತಾರೆ. ಎಲ್ಲಾ ಪಕ್ಷಗಳಿಂದಲೂ ನಾಯಕರು ಬರುತ್ತಾರೆ. ಇದೇನೂ ವಿಜೃಂಭಣೆಯಿಂದ ನಡೆಯುವ ಕಾರ್ಯಕ್ರಮವನ್ನ” ಎಂದು ಯಡಿಯೂರಪ್ಪ ಮಗ ಸ್ಪಷ್ಟಪಡಿಸಿದ್ದಾರೆ.

ಇಂಟರೆಸ್ಟಿಂಗ್ ವಿಷಯವೆಂದರೆ ನಾಳೆಯ ಯಡಿಯೂರಪ್ಪ ಜನ್ಮದಿನದ ಸಂದರ್ಭದಲ್ಲಿ ಅವರ 55 ವರ್ಷಗಳ ರಾಜಕೀಯ ಜೀವನದ ಬಗ್ಗೆ ಮಾಹಿತಿಯನ್ನೊಳಗೊಂಡ ಕಿರುಹೊತ್ತಿಗೆ ಬಿಡುಗಡೆಯಾಗಲಿದೆ.

ಇದೇನೇ ಇದ್ದರೂ ಇನ್ನೂ ಮೂರು ವರ್ಷ ಆಡಳಿತ ನಡೆಸುವ ಅವಕಾಶ ಹೊಂದಿರುವ ಯಡಿಯೂರಪ್ಪ ಮೂರು ವರ್ಷಗಳ ಬಳಿಕ ಮುಖ್ಯಮಂತ್ರಿಯಾಗಿಯೇ 81ನೇ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಾರಾ ಎಂಬ ಪ್ರಶ್ನೆಯನ್ನು ಕಾಲವೇ ಉತ್ತರಿಸಬೇಕು.

- ಡಿ.ಪಿ. ಸತೀಶ್, CNN-News18

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 27, 2020, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories