ರಾಜ್ಯ ಬಿಜೆಪಿ ಸರ್ಕಾರದ ಪಾಲಿನ ಅಳಿವು ಉಳಿವಿನ ಪ್ರಶ್ನೆಯಾಗಿದ್ದ ಉಪ ಚುನಾವಣೆಯಲ್ಲಿ ಮತದಾರ ಕೊನೆಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಕೈ ಹಿಡಿದಿದ್ದಾನೆ. ಉಪ ಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12 ಜನ ಅನರ್ಹ ಶಾಸಕರನ್ನು ಮತ್ತೆ ಅರ್ಹರನ್ನಾಗಿಸಿ ವಿಧಾನಸಭೆಗೆ ಕಳುಹಿಸಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಅಸ್ಥಿರ ಸರ್ಕಾರ ಅಥವಾ ಅಪರೇಷನ್ ಕಮಲ ನಡೆಯಬಹುದಾದ ಎಲ್ಲಾ ಸಾಧ್ಯತೆಗಳು ದೂರಾಗಿವೆ.
ಆದರೆ, ಈ ನಡುವೆ ರಾಜ್ಯ ರಾಜಕೀಯ ವಠಾರದಲ್ಲಿ ಎಲ್ಲರನ್ನೂ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ ಎಂದರೆ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿ ಸರ್ಕಾರ ಉಪ ಮುಖ್ಯಮಂತ್ರಿಯನ್ನಾಗಿ ಮಾಡುತ್ತಾ ಎಂಬುದು? ಈ ಪ್ರಶ್ನೆ ಸ್ವತಃ ಅನರ್ಹತೆಯನ್ನು ತೊಡೆದು ಇದೀಗ ಅರ್ಹತೆಯನ್ನು ಗಿಟ್ಟಿಸಿಕೊಂಡಿರುವ ಶಾಸಕರ ಪಾಳಯವನ್ನೂ ಕಾಡುತ್ತಿರುವುದು ಸುಳ್ಳಲ್ಲ.
ಹೀಗೊಂದು ಪ್ರಶ್ನೆ ಮೂಡಲು ಕಾರಣಗಳೂ ಸಾಕಷ್ಟಿವೆ. ಏಕೆಂದರೆ ಕಳೆದ 6 ತಿಂಗಳ ಅವಧಿಯಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆದ ಎಲ್ಲಾ ನಾಟಕೀಯ ಬೆಳವಣಿಗೆಯ ಹಿಂದಿನ ಪ್ರಮುಖ ಸೂತ್ರಧಾರ ಇದೇ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿದು ಬಿ.ಎಸ್. ಯಡಿಯೂರಪ್ಪ ನಾಲ್ಕನೇ ಬಾರಿಗೆ ಸಿಎಂ ಸ್ಥಾನಕ್ಕೆ ಏರಿಸುವಲ್ಲಿ ರಮೇಶ್ ಜಾರಕಿಹೊಳಿ ನಿರ್ವಹಿಸಿದ ಪಾತ್ರ ಮಹತ್ವವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ.
ಮೈತ್ರಿ ಸರ್ಕಾರದಲ್ಲಿ ತನಗೆ ಸಚಿವ ಸ್ಥಾನ ನೀಡದೆ ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧ ಸಿಡಿದೆದ್ದು ಸಮಾನ ಮನಸ್ಕರನ್ನು ಒಂದೆಡೆ ಕಲೆಹಾಕಿ ಮುಂಬೈಗೆ ಹಾರಿಸಿದ್ದ ರಮೇಶ್ ಜಾರಕಿಹೊಳಿ ಆ ಮೂಲಕ ಮೈತ್ರಿ ಸರ್ಕಾರಕ್ಕೆ ದೊಡ್ಡ ಶಾಕ್ ನೀಡಿ ಸರ್ಕಾರವನ್ನೇ ಉರುಳಿಸಿದ್ದರು. ಆನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಬಿ.ಎಸ್. ಯಡಿಯೂರಪ್ಪ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಇಂದು ಇತಿಹಾಸ.
ರಮೇಶ್ ಜಾರಕಿಹೊಳಿಗೆ ಉಪ ಮುಖ್ಯಮಂತ್ರಿ ಸ್ಥಾನದ ಆಶ್ವಾಸನೆ ನೀಡಿದ್ದ ಬಿ.ಎಸ್. ಯಡಿಯೂರಪ್ಪ
ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಏಳುವ ಮುನ್ನವೇ ಭವಿಷ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ತನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬಿ.ಎಸ್. ಯಡಿಯೂರಪ್ಪ ಅವರ ಬಳಿ ರಮೇಶ್ ಜಾರಕಿಹೊಳಿ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಯಡಿಯೂರಪ್ಪ ನೀಡಿದ ಆಶ್ವಾಸನೆಯ ಮೇಲೆ ವಿಶ್ವಾಸವಿದ್ದ ಕಾರಣಕ್ಕೆ ರಮೇಶ್ ಜಾರಕಿಹೊಳಿ ಸರ್ಕಾರವನ್ನು ಬೀಳಿಸಿದ್ದರು. ಅಲ್ಲದೆ, ಅನರ್ಹ ಶಾಸಕ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡರು.
ಇದೀಗ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ರಮೇಶ್ ಜಾರಕಿಹೊಳಿ ಸಹೋದರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯ ಜೊತೆಗೆ ಬಿಜೆಪಿ ಪಕ್ಷ ಮುಂದಿನ ಮೂರು ವರ್ಷ ಸ್ಥಿರ ಸರ್ಕಾರ ರಚನೆ ಮಾಡುವುದು ಪಕ್ಕಾ ಆಗಿದೆ. ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿ ಹಾಗೂ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ ಉಪ ಮುಖ್ಯಮಂತ್ರಿ ಸ್ಥಾನ ನೀಡ್ತಾರ? ಎಂಬುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಬದಲಾಗಿದೆ.
ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡುವ ಸಾಧ್ಯತೆ ಇದೆಯಾ?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿ ಒಂದು ತಿಂಗಳ ನಂತರ ಸಂಪುಟ ರಚನೆ ಮಾಡಿದ್ದ ಬಿ.ಎಸ್. ಯಡಿಯೂರಪ್ಪ ಕೇವಲ 17 ಶಾಸಕರಿಗೆ ಮಾತ್ರ ಕ್ಯಾಬಿನೆಟ್ ಸಚಿವ ಸ್ಥಾನ ನೀಡಿ, ಉಳಿದ ಸ್ಥಾನವನ್ನು ಉಪ ಚುನಾವಣೆಯಲ್ಲಿ ಗೆದ್ದುಬರುವ ಅನರ್ಹ ಶಾಸಕರಿಗೆ ಎಂದು ಮೀಸಲಿಟ್ಟಿದ್ದರು.
ಈಗಲೂ ಬಿಎಸ್ವೈ ಗೆಲುವು ಸಾಧಿಸುವ ಎಲ್ಲಾ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಹಲವು ಬಾರಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಅಸಲಿ ಸಮಸ್ಯೆ ಇರುವುದೇ ರಮೇಶ್ ಜಾರಕಿಹೊಳಿ ಅವರಿಗೆ.
ಏಕೆಂದರೆ ಉಪ ಮುಖ್ಯಮಂತ್ರಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಇದ್ದ ಕಾರಣಕ್ಕೆ ಅವರು ಬಿಜೆಪಿ ಗೆ ಪಕ್ಷಾಂತರ ಮಾಡಿದ್ದರು. ಆದರೆ, ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಎಸ್ವೈ ಅವರನ್ನೇ ಕೇಳದೆ ಬಿಜೆಪಿ ಹೈಕಮಾಂಡ್ ರಾಜ್ಯಕ್ಕೆ ಈಗಾಗಲೇ 3 ಜನ ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿದೆ. ಹೀಗಾಗಿ ನಾಲ್ಕನೇಯದಾಗಿ ರಮೇಶ್ ಜಾರಕಿಹೊಳಿ ಅವರನ್ನು ಡಿಸಿಎಂ ಮಾಡುವುದು ದೂರದ ಮಾತು ಎನ್ನುವ ಮಾತುಗಳು ಬಿಜೆಪಿ ಮೂಲಗಳಿಂದಲೇ ಕೇಳಿಬರುತ್ತಿದೆ.
ಇದಲ್ಲದೆ, ಬಿಜೆಪಿ ಸೇರ್ಪಡೆಯಾದ ಕೂಡಲೇ ರಮೇಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಅಂತಹ ಉನ್ನತ ಸ್ಥಾನ ನೀಡುವುದು ಮೂಲ ಬಿಜೆಪಿಗರಿಗೆ ಸುತಾರಾಂ ಇಷ್ಟವಿಲ್ಲ. ಒಂದು ವೇಳೆ ಅವರಿಗೆ ಡಿಸಿಎಂ ಸ್ಥಾನ ನೀಡಿದರೆ, ಪಕ್ಷದ ಹಿರಿಯ ನಾಯಕರು ಬಂಡಾಯ ಏಳುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಈ ಎಲ್ಲಾ ಪ್ರಸಂಗಗಳನ್ನು ಗಮನಿಸಿದರೆ ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ಕೈತಪ್ಪುವುದು ಬಹುತೇಕ ಖಚಿತವಾದಂತಾಗಿದೆ. ಆದರೆ, ಒಂದು ವೇಳೆ ಡಿಸಿಎಂ ಸ್ಥಾನ ಕೈತಪ್ಪಿದರೆ ಅವರ ಮುಂದಿನ ನಡೆ ಏನು? ಇದು ಪ್ರಸ್ತುತ ಇಡೀ ರಾಜ್ಯವನ್ನು ಕಾಡುತ್ತಿರುವ ಪ್ರಶ್ನೆ.
ಇದನ್ನೂ ಓದಿ : ಅನರ್ಹರೇ ಅರ್ಹರು: ಯಡಿಯೂರಪ್ಪ ಸರ್ಕಾರಕ್ಕೆ ಸ್ಪಷ್ಟ ಬಹುಮತ; ಕಾಂಗ್ರೆಸ್, ಜೆಡಿಎಸ್ಗೆ ಹೀನಾಯ ಸೋಲು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ