• Home
  • »
  • News
  • »
  • state
  • »
  • BS Yediyurappa Resigns: ರಾಜೀನಾಮೆ ನೀಡಿದ ಬಿ ಎಸ್ ಯಡ್ಯೂರಪ್ಪ; ವಿದಾಯದ ಭಾಷಣದಲ್ಲಿ ಕಣ್ಣೀರು.. ಬೆಂಬಲಿಗರಿಗೆ ಏನೆಲ್ಲಾ ಹೇಳಿದ್ರು?

BS Yediyurappa Resigns: ರಾಜೀನಾಮೆ ನೀಡಿದ ಬಿ ಎಸ್ ಯಡ್ಯೂರಪ್ಪ; ವಿದಾಯದ ಭಾಷಣದಲ್ಲಿ ಕಣ್ಣೀರು.. ಬೆಂಬಲಿಗರಿಗೆ ಏನೆಲ್ಲಾ ಹೇಳಿದ್ರು?

ಬಿ ಎಸ್ ಯಡ್ಯೂರಪ್ಪ

ಬಿ ಎಸ್ ಯಡ್ಯೂರಪ್ಪ

BS Yediyurappa Resigns: ಜುಲೈ 26ರಂದು ಬಿಎಸ್​ವೈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ರು. ಈಗ ಅದೇ ದಿನ ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ ಎಸ್ ಯಡ್ಯೂರಪ್ಪ ಮಾಡಿದ ವಿದಾಯದ ಭಾಷಣದಲ್ಲಿ ತಮ್ಮ ಬೆಂಬಲಿಗರನ್ನು ಕುರಿತು ಈ ವಿಚಾರಗಳನ್ನು ಹೇಳಿದ್ರು ಬಿಎಸ್​ವೈ.

ಮುಂದೆ ಓದಿ ...
  • Share this:

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಜೆಪಿಯ ಹೋರಾಟದ ನಾಯಕರಾಗಿ ಗುರುತಿಸಿಕೊಂಡವರು ಬಿ ಎಸ್ ಯಡ್ಯೂರಪ್ಪ. ಕಳೆದ ಒಂದೆರಡು ತಿಂಗಳಿಂದ ನಡೆಯುತ್ತಿರುವ ಸಿಎಂ ಕುರ್ಚಿಯ ಹಗ್ಗಜಗ್ಗಾಟ ಕೊನೆಗೂ ಒಂದು ಮಹತ್ವದ ಘಟ್ಟ ಕಂಡಿದ್ದು ಅದರಲ್ಲಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಗೆಹ್ಲೋಟ್​ಗೆ ರಾಜೀನಾಮೆ ಪತ್ರವನ್ನೂ ಸಲ್ಲಿಸಿರುವ ಬಿಎಸ್​ವೈ ಅದಕ್ಕೂ ಮುನ್ನ ತಮ್ಮ ಸರ್ಕಾರ 2 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಸಂತಸಕ್ಕೆ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶದಲ್ಲಿ ಭಾವುಕರಾಗಿ ಮಾತನಾಡಿದ್ರು. ಎರಡು ವರ್ಷಗಳ ಹಿಂದೆ ಇದೇ ದಿನಾಂಕ ಅಂದ್ರೆ ಜುಲೈ 26ರಂದು ಬಿಎಸ್​ವೈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ರು. ಈಗ ಅದೇ ದಿನ ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ ಎಸ್ ಯಡ್ಯೂರಪ್ಪ ಮಾಡಿದ ವಿದಾಯದ ಭಾಷಣದಲ್ಲಿ ತಮ್ಮ ಬೆಂಬಲಿಗರನ್ನು ಕುರಿತು ಈ ವಿಚಾರಗಳನ್ನು ಹೇಳಿದ್ರು ಬಿಎಸ್​ವೈ.


ಕಳೆದೆರಡು ವರ್ಷದಲ್ಲಿ ನನ್ನೊಂದಿಗೆ ನಿಂತು ಸರ್ಕಾರ ಸುಗಮವಾಗಿ ಸಾಗಲು ಜೊತೆಯಾಗಿ ನಿಂತ ಅಧಿಕಾರಿಗಳಿಗೆ ಮತ್ತು ದೇಶದ ಸಮಗ್ರತೆಗೆ ಧಕ್ಕೆ ತಂದ ಪಾಕ್ ಪಾಪಿಗಳನ್ನು ಸದೆಬಡಿದ ಭಾರತೀಯ ಸೇನೆಯ ಕಾರ್ಗಿಲ್ ಯೋಧರಿಗೆ ನಮನ ಎಂದು ಮಾತು ಆರಂಭಿಸಿದರು ಬಿ ಎಸ್ ವೈ. ಟೋಕಿಯೋದಲ್ಲಿ ಭಾಗಹಿಸಿ ಚಿನ್ನದ ಪದಕ ಗೆದ್ದವರಿಗೆ ಐದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಲ್ಲದೇ, ಬೆಳ್ಳಿ ಪಡೆದವರಿಗೆ ಮೂರು ಕೋಟಿ, ಕಂಚು ಗೆದ್ದವರಿಗೆ ಎರಡು ಕೋಟಿ ಬಹುಮಾನ ಘೋಷಣೆ ಮಾಡಿದ್ರು.


ಇದನ್ನೂ ಓದಿ: BSY Resignation – ಸಾಧನಾ ಸಮಾವೇಶದಲ್ಲಿ ಸಿಎಂ ಕಣ್ಣೀರು; ಯಡಿಯೂರಪ್ಪ ರಾಜೀನಾಮೆ ಸಲ್ಲಿಕೆ


ಶಿಕಾರಿಪುರ ತಾಲೂಕಿನಲ್ಲಿ ಅಂದು ಬಸವನಬಾಗೇವಾಡಿ, ಬಸವಕಲ್ಯಾಣ, ಶಿವಮೊಗ್ಗದಿಂದ ಪಾದಯಾತ್ರೆ ಮಾಡಿ ಪಕ್ಷ ಬಲಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆವು. ಅಂದು ಶಾಸಕಾಂಗ ಸಭೆಯಲ್ಲಿ ಯಾರೂ ಇರಲಿಲ್ಲ. ಇದ್ದ ಇಬ್ಬರಲ್ಲಿ ವಸಂತ ಬಂಗೇರ ಗೆದ್ದಾಗ ನಾನೊಬ್ಬನೇ ಉಳಿದಿದ್ದೆ. ನಾನೆಂದೂ ಹಿಂದೆ ತಿರುಗಿ ನೋಡಿಲ್ಲ. ನನ್ನ ಕರ್ತವ್ಯವನ್ನು ಜನ ಮೆಚ್ಚುವಂತೆ ಮಾಡಿದ್ದೇನೆ ಎನ್ನುವ ತೃಪ್ತಿ ಸಮಾಧಾನ, ವಿಶ್ವಾಸ ನನಗಿದೆ ಎಂದರು ಬಿಎಸ್​ವೈ. ಮಂಡ್ಯ ಜಿಲ್ಲೆಯ ಭೂಕಕೆರೆಯಲ್ಲಿ ಹುಟ್ಟಿ, ಶಿವಮೊಗ್ಗದ ಶಿಕಾರಿಪುರದಲ್ಲಿ ಸಂಘದಲ್ಲಿ ತೊಡಗಿಸಿಕೊಂಡೆ. ಬಳಿಕ ಪುರಸಭೆಯಲ್ಲಿ ನಿಂತು ಗೆದ್ದು ಅಧ್ಯಕ್ಷನಾದೆ. ಆಗ ಮನೆಯಿಂದ ಕಚೇರಿಗೆ ಹೋಗಲು ದಾರಿ ಮಧ್ಯೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಆದರೆ ಭಗವಂತನ ದಯೆಯಿಂದ ಬದುಕುಳಿದೆ. ಅಂದೇ ನನ್ನ ಬದುಕು ರಾಜ್ಯದ ಜನತೆಗೆ ಮೀಸಲು ಎಂದಿದ್ದೆ. ಅದೇ ರೀತಿ ನಡೆದುಕೊಂಡೆ ಎಂದು ಆತ್ಮವಿಶ್ವಾಸ ಮಾತನ್ನಾಡಿದರು.


ಪ್ರಧಾನಿ ಮೋದಿಯ ಕೇಂದ್ರ ಸರ್ಕಾರ 75 ವರ್ಷ ದಾಟಿದ ವ್ಯಕ್ತಿಗೆ ಯಾವುದೇ ಸ್ಥಾನಮಾನ ನೀಡುವುದಿಲ್ಲ ಎಂದಿತ್ತು. ಆದರೆ ಬಿಎಸ್‌ವೈ ಬಗ್ಗೆ ಅತ್ಯಂತ ವಾತ್ಸಲ್ಯ, ಪ್ರೀತಿ ವಿಶ್ವಾಸದಿಂದ ಅವಕಾಶ ಕೊಟ್ಟರು. ಎರಡು ವರ್ಷ ರಾಜ್ಯದ ಸಿಎಂ ಆಗಲು ಅವಕಾಶ ಮಾಡಿಕೊಟ್ಟರು. ಮತ್ತೆ ಮೋದಿ, ಶಾ ಮುಂದಿನ ಚುನಾವಣೆಯಲ್ಲಿ ಗೆದ್ದು ಮುನ್ನಡೆದರೆ ಭಾರತ ಜಗತ್ತಿನಲ್ಲಿ ಪ್ರಭಾವಶಾಲಿಯಾಗುತ್ತದೆ. ದೇವರಲ್ಲಿ ಈ ನಮ್ಮ ಮೋದಿ, ಶಾ ಜೋಡಿ ಗೆದ್ದು ಬರಲಿ ಎಂದು ಪ್ರಾರ್ಥಿಸುತ್ತೇನೆ.


ಇದನ್ನೂ ಓದಿ: BS Yediyurappa Resigns: ಬಿ ಎಸ್ ಯಡಿಯೂರಪ್ಪ ರಾಜೀನಾಮೆ; 2 ವರ್ಷಗಳ ಹಾದಿಯ ಏಳು-ಬೀಳುಗಳು ಸಾಮಾನ್ಯದ್ದಲ್ಲ!


ಅಂದಿನ ಜನಸಂಘದ ತಾಲೂಕು, ಜಿಲ್ಲಾ ಅಧ್ಯಕ್ಷನಾಗಿ ನನ್ನ ಕೆಲಸ ಆರಂಭಿಸಿ ರೈತ, ದಲಿತ ಪರ ಹೋರಾಟ ಮಾಡಿದೆ. ಶಿವಮೊಗ್ಗದಲ್ಲಿ 50-60 ಸೇರಿಸಿ ಕಾರ್ಯಕ್ರಮ ಆಯೋಜಿಸಿದ್ದೆ. ಆಗ ರಾಜನಾಥ್ ಸಿಂಗ್ ಅಚ್ಚರಿಗೀಡಾಗಿದ್ದರು. ಮಹಿಳಾ ಸಮಾವೇಶ ಕಂಡು ಸುಷ್ಮಾ ಸ್ವರಾಜ್ ಆಶ್ಚರ್ಯಪಟ್ಟಿದ್ದರು. ಕರ್ನಾಟಕದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡಿದ್ದಕ್ಕೆ ಇಂದು ಈ ಸ್ಥಾನದಲ್ಲಿದ್ದೇನೆ. ಅಂದು ವಾಜಪೇಯಿ ಕೇಂದ್ರದಲ್ಲಿ ಸಚಿವನಾಗಬೇಕು ಎಂದಿದ್ದರು. ಆದರೆ ನಾನು ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕು. ಯಾವ ಕಾರಣಕ್ಕೂ ದೆಹಲಿಗೆ ಬರಲ್ಲ ಎಂದಿದ್ದೆ. ಆಗ ವಾಜಪೇಯಿ, ಅಡ್ವಾಣಿ, ಜೋಷಿ ಬರುವಾಗ ಇನ್ನೂರು ಜನ ಕೂಡಾ ಸೇರುತ್ತಿರಲಿಲ್ಲ. ಆದರೀಗ ಇದು ಬದಲಾಗಿದೆ. ಇಂದು ರಾಜ್ಯದಲ್ಲಿ ಬಿಜೆಪಿ ಬಂದಿದೆ. ಶಿಕಾರಿಪುರ ಜನ ನನ್ನನ್ನು ಏಳು ಬಾರಿ ಶಾಸಕನಾಗಿ ಮಾಡಿದ್ರು. ಜನ ನನ್ನ ಕೈ ಬಿಡಲಿಲ್ಲ.


ಶಿವಮೊಗ್ಗದಲ್ಲಿ ನನ್ನ ಬಳಿ ಕಾರು ಇಲ್ಲದಾಗ ಸೈಕಲ್‌ನಲ್ಲಿ ಓಡಾಡಿ ಕೆಲಸ ಮಾಡಿದ್ದೇವೆ. ಇಂದು ಪಕ್ಷ ಸದೃಢವಾಗಿದೆ. ನಾವೆಲ್ಲಾ ಒಟ್ಟಾಗಿ ಬಲಪಡಿಸಿದ್ದೇವೆ ಎಂದು ಆ ದಿನಗಳನ್ನು ನೆನೆದರು. ಜನರ ಆಶೀರ್ವಾದದಿಂದ ಸಾಧನೆ ಮಾಡಿದ್ದೇವೆ. ಮಾಧ್ಯಮ ಸ್ನೇಹಿತರಿಗೂ ಧನ್ಯವಾದ. ನಮ್ಮ ಒಳ್ಳೆ ಕೆಲಸ ಜನರಿಗೆ ತೋರಿಸಿಕೊಟಟ್ಟಿದ್ದೀರಿ. ಒಂದು ಸಂದರ್ಭದಲ್ಲಿ ಅನಿವಾರ್ಯವಾಗಿ ಜೆಡಿಎಸ್‌ ಜೊತೆ ಸರ್ಕಾರ ರಚಿಸಿದೆವು. ಒಂದು ವರ್ಷದ ಬಳಿಕ ಅವರು ಸಿಎಂ ಸ್ಥಾನ ನನಗೆ ಬಿಟ್ಟು ಕೊಡಬೇಕಿತ್ತು. ಆದರೆ ತಂದೆ ಮಗ ಸೇರಿ ಕೆಲ ಷರತ್ತು ಹಾಕಲಾರಂಭಿಸಿದರು. ಆದರೆ ನಾನು ಇದಕ್ಕೊಪ್ಪಲಿಲ್ಲ. ಅದನ್ನು ನಾನು ಮರೆಯಲು ಸಾಧ್ಯವಿಲ್ಲ. ಬಹುಶಃ ಬೇರೆ ಬೇರೆ ಕಾರಣಗಳಿಂದ ನಮಗೆ ಬಹುಮತ ಬರಲಿಲ್ಲ. ಸ್ವತಂತ್ರವಾಗಿ ಸ್ಥಾನ ಗೆಲ್ಲಲು ಅವಕಾಶವಿದ್ದರೂ ಇದು ಆಗಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಬಹುಮತ ಗೆಲ್ಲುವಂತೆ ಮಾಡುತ್ತೇವೆಂಬ ವಿಶ್ವಾಸ ನನಗಿದೆ. ನಾನು ಸೇರಿ ಕಾರ್ಯಕರ್ತರೊಂದಿಗೆ ಪಕ್ಷ ಮತ್ತಷ್ಟು ಬಲಪಡಿಸುತ್ತೇವೆ. ಅಧಿಕಾರ ವಹಿಸಿಕೊಂಡಾಗ ಎರಡು ವರ್ಷ ನನಗೆ ಮಂತ್ರಿ ಮಂಡಲ ಮಾಡಲು ಬಿಡಲಿಲ್ಲ ಕೇಂದ್ರದವರು. ಪ್ರವಾಹ, ಬರಗಾಲ ಹೀಗಿರುವಾಗ ಎಲ್ಲಾ ಕಡೆ ಸುತ್ತಬೇಕಾಯ್ತು. ಅದೊಂದು ಅಗ್ನಿ ಪರೀಕ್ಷೆಯಾಗಿತ್ತು. ಈಗ ಕಳೆದ ಒಂದೂವರೆ ವರ್ಷದಿಂದ ಕೋವಿಡ್‌ನಿಂದ ಜನ ಸಂಕಷ್ಟಕ್ಕೆ ತುತ್ತಾದರು. ಅದನ್ನೆದುರಿಸಲು ಶಕ್ತಿ ಮೀರಿ ಪ್ರಯತ್ನಿಸಿದೆವು. ಪರಿಣಾಮವಾಗಿ ಇಡೀ ದೇಶದಲ್ಲಿ ಕರ್ನಾಟಕ ಯಶಸ್ವಿಯಾಗಿದೆ ಎಂದು ಮೋದಿಯೇ ಹೇಳಿದ್ದಾರೆ.


ಒಂದಾದ ಬಳಿಕ ಮತ್ತೊಂದು ಅಗ್ನಿ ಪರೀಕ್ಷೆ ಬಂದರೂ ಎದೆಗುಂದದೆ ಎದುರಿಸಿದ್ದೇವೆ. ಸರ್ಕಾರಿ ನೌಕರರ ಬೆಂಬಲಕ್ಕೂ ನಾನು ಋಣಿ. ನನ್ನ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡಿದ್ದಾರೆ, ಇದರಿಂದಲೇ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಯ್ತು. ಎಲ್ಲರ ಸಹಕಾರದಿಂದ ಒಂದು ಬದಲಾವಣೆ ತರಲು ಸಾಧ್ಯವಾಯ್ತು. ಮುಂದಿನ ದಿನಗಳಲ್ಲಿ ಇನ್ನೂ ಅಭಿವೃದ್ಧಿ ಮಾಡಿ ರಾಜ್ಯವನ್ನು ಮುನ್ನಡೆಸುವ ಯತ್ನ ಮಾಡಬೇಕು. ನಾನು ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಚುನಾಯಿತ ಪ್ರತಿನಿಧಿ, ಅಧಿಕಾರಿಗಳ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಅನೇಕರು ಪ್ರಾಮಾಣಿಕರಾಗಿದ್ದಾರೆ ಅದರಲ್ಲು ಯಾವುದೇ ಸಂಶಯವಿಲ್ಲ. ನಾನು ನಿಮ್ಮ ಅಪ್ಪಣೆ ಪಡೆದು, ತೀರ್ಮಾನ ಮಾಡಿದ್ದೇನೆ. ದುಃಖದಿಂದ ಅಲ್ಲ, ಸಂತೋಷ, ಖುಷಿಯಿಂದ ತೀರ್ಮಾನಿಸಿದ್ದೇನೆ. 75 ವರ್ಷ ದಾಟಿದ ಯಡಿಯೂರಪ್ಪನಿಗೆ ಮತ್ತೆರಡು ವರ್ಷ ಸಿಎಂ ಆಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟ ಮೋದಿ, ಅಮಿತ್ ಶಾ ಹಾಗೂ ನಡ್ಡಾರವರಿಗೆ ಋಣಿಯಾಗಿದ್ದೇನೆ.

Published by:Soumya KN
First published: