ಮಂಡ್ಯ (ಫೆ.20): ಕಳೆದ ವರ್ಷ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮದ್ದೂರಿನ ಯೋಧ ಗುರು ಸ್ಮಾರಕ ನಿರ್ಮಾಣಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ.
ಯೋಧ ಗುರು ಸಾವನ್ನಪ್ಪಿ ಒಂದು ವರ್ಷ ಕಳೆದರೂ ಅವರ ಸ್ಮಾರಕ ನಿರ್ಮಾಣವಾಗದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿಂದೆ ಸ್ಥಳೀಯ ಶಾಸಕ ಡಿಸಿ ತಮ್ಮಣ್ಣ ನೀಡಿದ ಭರವಸೆ ಆಶ್ವಾಸನೆಯಾಗಿಯೇ ಉಳಿದಿತ್ತು. ಹುತಾತ್ಮ ಯೋಧನ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪವೂ ಕೇಳಿ ಬಂದಿತು.
ಕಳೆದ ವರ್ಷ ನಡೆದ ಯೋಧನ ಅಂತ್ಯ ಸಂಸ್ಕಾರದ ಬಳಿಕ ಸ್ವಲ್ಪ ಅಸ್ಥಿಯನ್ನು ನದಿಯಲ್ಲಿ ವಿಸರ್ಜನೆ ಮಾಡಲಾಗಿತ್ತು. ಉಳಿದ ಚಿತಾಭಸ್ಮವನ್ನು ಸ್ಮಾರಕ ನಿರ್ಮಾಣಕ್ಕೆ ಬಳಸಿಕೊಳ್ಳಲು ಹಾಗೇ ಸಂರಕ್ಷಿಸಿಟ್ಟುಕೊಳ್ಳಲಾಗಿದೆ. ಆದರೆ, ಇದುವರೆಗೂ ಸ್ಮಾರಕ ನಿರ್ಮಾಣವಾಗದ ಕಾರಣ ಆ ಭಸ್ಮ ವರ್ಷದಿಂದ ಅವರ ಸಮಾಧಿ ಬಳಿ ಹಾಗೇ ಮೂಟೆಕಟ್ಟಿ ಇಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ ವಾರ ಯೋಧನ ಒಂದನೇ ಪುಣ್ಯ ತಿಥಿ ಕೂಡ ನಡೆದಿದ್ದು, ಈ ವೇಳೆಯೂ ಕೂಡ ಸ್ಮಾರಕ ನಿರ್ಮಾಣವಾಗದಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಎಸ್ ಎಂ ಕೃಷ್ಣ ಎರಡು ದಿನ ಹಿಂದೆ ಈ ಕುರಿತು ಗಮನ ಸೆಳೆದು ಸರ್ಕಾರಕ್ಕೆ ಪತ್ರ ಬರೆದಿದ್ದರು.
ಇದನ್ನು ಓದಿ: ಹುತಾತ್ಮ ಯೋಧ ಗುರುವಿನ ಸ್ಮರಣೆ ಕಾರ್ಯಕ್ಕೆ ಗೈರಾದ ಹೆಂಡತಿ ಕಲಾವತಿ
ಎಸ್ಎಂ ಕೃಷ್ಣ ಅವರ ಪತ್ರದಿಂದ ಎಚ್ಚೆತ್ತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸ್ಮಾರಕ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಹಣ ಬಿಡುಗಡೆ ಮಾಡಿ ಸ್ಮಾರಕ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ