HOME » NEWS » State » BS YEDIYURAPPA MAKES PORTFOLIO CHANGES FOR 6 MINISTERS IN HIS CABINET KGV SNVS

BSY Cabinet - ಮತ್ತೆ ಖಾತೆ ಅದಲುಬದಲು ಮಾಡಿದ ಯಡಿಯೂರಪ್ಪ; ಆದರೂ ನಿಂತಿಲ್ಲ ಅಸಮಾಧಾನ

ನಿನ್ನೆಯಷ್ಟೇ ಏಳು ನೂತನ ಸಚಿವರಿ ಖಾತೆ ಹಂಚಿಕೆ ಹಾಗೂ ಇನ್ನೂ 10 ಸಚಿವರಿಗೆ ಖಾತೆ ಬದಲಾವಣೆ ಮಾಡಿದ್ದ ಸಿಎಂ ಯಡಿಯೂರಪ್ಪ ಒಂದೇ ದಿನದ ಅಂತರದಲ್ಲಿ ಆರು ಮಂದಿಗೆ ಖಾತೆ ಅದಲುಬದಲು ಮಾಡಿದ್ದಾರೆ.

news18-kannada
Updated:January 22, 2021, 3:34 PM IST
BSY Cabinet - ಮತ್ತೆ ಖಾತೆ ಅದಲುಬದಲು ಮಾಡಿದ ಯಡಿಯೂರಪ್ಪ; ಆದರೂ ನಿಂತಿಲ್ಲ ಅಸಮಾಧಾನ
ಬಿಎಸ್ ಯಡಿಯೂರಪ್ಪ
  • Share this:
ಬೆಂಗಳೂರು(ಜ. 22): ಹರಸಾಹಸ ಮಾಡಿ ಸಂಪುಟ ವಿಸ್ತರಣೆ ಮಾಡಿದ ಯಡಿಯೂರಪ್ಪ ಮತ್ತೂ ಕಸರತ್ತು ಮಾಡಿ ನಿನ್ನೆ ಗುರುವಾರ ಖಾತೆ ಹಂಚಿಕೆ ಮಾಡಿದ್ದರು. ಆದರೂ ಬಿಜೆಪಿಯೊಳಗೆ ಅಸಮಾಧಾನ ಕಡಿಮೆ ಆಗುವ ಬದಲು ಇನ್ನೂ ಹೆಚ್ಚಿಸಿದೆ. ಮೈತ್ರಿಪಾಳಯದಿಂದ ವಲಸೆ ಬಂದಿದ್ದವರು ಮುನಿಸಿಕೊಂಡು ಕುಳಿತಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಇಂದು ಮತ್ತೆ ಕೆಲ ಸಚಿವರಿಗೆ ಖಾತೆ ಅದಲು ಬದಲು ಮಾಡಿದ್ದಾರೆ. ಆದರೂ ಕೂಡ ಅಸಂತುಷ್ಟಿ ಕ್ಷೀಣಿಸಿಲ್ಲ.

ಅಬಕಾರಿ ಖಾತೆ ತನಗೆ ಬೇಡವೇ ಬೇಡ, ಒಳ್ಳೆ ಖಾತೆಯೇ ಬೇಕು ಎಂದು ನಿನ್ನೆ ಪಟ್ಟುಹಿಡಿದು ಕೂತಿದ್ದ ಎಂಟಿಬಿ ನಾಗರಾಜ್ ಅವರಿಗೆ ಅಬಕಾರಿ ಬದಲು ಪೌರಾಡಳಿತ ಮತ್ತು ಸಕ್ಕರೆ ಖಾತೆಗಳನ್ನ ಯಡಿಯೂರಪ್ಪ ನೀಡಿದ್ದಾರೆ. ಇದು ಎಂಟಿಬಿಗೆ ಸಮಾಧಾನ ತಂದಿದಂತೆ ಇಲ್ಲ. ಯಾಕೆಂದರೆ ಪೌರಾಡಳಿತ ಖಾತೆಯನ್ನ ಆರ್ ಶಂಕರ್ ಅವರಿಂದ ಕಿತ್ತು ಕೊಡಲಾಗಿದೆ. ತನಗೆ ಈಗಿನ ಸಚಿವರ ಬಳಿ ಇರುವ ಖಾತೆಯನ್ನ ತೆಗೆದುಕೊಡುವ ಬದಲು ತಮ್ಮ ಬಳಿ ಖಾಲಿ ಇರುವ ಇಂಂಧ ಇತ್ಯಾದಿ ಪ್ರಮುಖ ಖಾತೆಗಳಲ್ಲಿ ಒಂದನ್ನ ಕೊಡುವಂತೆ ಎಂಟಿಬಿ ಬೇಡಿಕೆ ಇಟ್ಟಿದ್ದರು. ಆದರೆ ಯಡಿಯೂರಪ್ಪ ಈ ಮನವಿಗೆ ಕಿವಿಗೊಟ್ಟಿಲ್ಲ. ಅಲ್ಲಿಂದ ಕಿತ್ತು ಇಲ್ಲಿಗೆ, ಇಲ್ಲಿಂದ ಕಿತ್ತು ಅಲ್ಲಿಗೆ ಹಾಕಿ ಥೇಪೆ ಹಚ್ಚುವ ಕೆಲಸ ಮಾಡಿದಂತಿದೆ.

ಸಚಿವರಿಗೆ ಹೊಸ ಖಾತೆ ಬದಲಾವಣೆ:
ಗೋಪಾಲಯ್ಯ – ಅಬಕಾರಿ
ಎಂಟಿಬಿ ನಾಗರಾಜ್ – ಪೌರಾಡಳಿತ, ಸಕ್ಕರೆ
ನಾರಾಯಣಗೌಡ – ಯುವಜನ ಸೇವೆ, ಕ್ರೀಡೆ ಮತ್ತು ಸಾಂಖ್ಯಿಕ
ಆರ್ ಶಂಕರ್ – ತೋಟಗಾರಿಕೆ, ರೇಷ್ಮೆಅರವಿಂದ್ ಲಿಂಬಾವಳಿ – ಅರಣ್ಯ, ಕನ್ನಡ-ಸಂಸ್ಕೃತಿ ಖಾತೆ
ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ ಮತ್ತು ವಕ್ಫ್

ಇದನ್ನೂ ಓದಿ: ಖಾತೆ ಹಂಚಿಕೆ ಬಗ್ಗೆ ಸುಧಾಕರ್ ಆಕ್ರೋಶ; ರಾಜಕೀಯವಾಗಿ ಬಿಜೆಪಿ ಆತ್ಮಹತ್ಯೆಯತ್ನ ಎಂದು ಗುಡುಗು

ತಮ್ಮ ಬಳಿ ಇದ್ದ ಪೌರಾಡಳಿತ ಖಾತೆ ಕೈತಪ್ಪಿರುವುದಕ್ಕೆ ಆರ್ ಶಂಕರ್ ಬಹಳ ಬೇಸರಗೊಂಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಅವರು ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲೇ ಓಡಾಡುತ್ತಿದ್ದಾರೆ. ಸಿಎಂ ಭೇಟಿಗೂ ಅವರು ನಿರಾಕರಿಸುತ್ತಿದ್ದಾರೆ. ಇನ್ನು, ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ವೈದ್ಯಕೀಯ ಶಿಕ್ಷಣ ಖಾತೆ ಕೈತಪ್ಪಿದ್ದಕ್ಕೆ ಇಂದು ಬಹಿರಂಗವಾಗಿಯೇ ಬಿಜೆಪಿಗೆ ಛೀಮಾರಿ ಹಾಕಿದ್ದಾರೆ. ಬಹಳ ಅಪಾಯ ಇದ್ದರೂ ಬಿಜೆಪಿಗೆ ವಲಸೆ ಬಂದು ಸರ್ಕಾರ ರಚನೆಗೆ ಸಹಾಯವಾದರೂ ಮುಖ್ಯಮಂತ್ರಿಗಳು ಮಾತು ತಪ್ಪುತ್ತಿದ್ಧಾರೆ ಎಂದು ಅವರು ಹರಿಹಾಯ್ದಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಎರಡೂ ಒಬ್ಬರ ಬಳಿಯೇ ಇದ್ದರೆ ಕಾರ್ಯನಿರ್ವಹಣೆ ಸುಲಭವಾಗುತ್ತದೆ. ತನಗಲ್ಲವಾದರೂ ಯಾರಿಗೇ ನೀಡಿದರೂ ಎರಡೂ ಖಾತೆ ಒಬ್ಬರ ಬಳಿಯಲ್ಲೇ ಇರಲಿ ಎಂದು ಅವರು ತಿಳಿಹೇಳಿದ್ದಾರೆ.

ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಅಸಮಾಧಾನಗೊಂಡು 17 ಮಂದಿಗೆ ಒಟ್ಟಿಗೆ ವಲಸೆ ಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದರು. ಇವರ ಪೈಕಿ ಪ್ರತಾಪ್ ಗೌಡ ಪಾಟೀಲ್ ಹೊರತುಪಡಿಸಿ ಉಳಿದವರೆಲ್ಲರೂ ಉಪಚುನಾವಣೆ ಮತ್ತು ಪರಿಷತ್ ಚುನಾವಣೆ ಮೂಲಕ ಶಾಸಕರಾಗಿ ಮರು ಆಯ್ಕೆಯಾಗಿದ್ದಾರೆ. ಶಾಸಕರಾದವರಲ್ಲಿ ಹಚ್ ವಿಶ್ವನಾಥ್, ಮಹೇಶ್ ಕುಮಟಳ್ಳಿ ಮತ್ತು ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ವಿಶ್ವನಾಥ್ ಅವರು ಪದೇ ಪದೇ ತಮ್ಮ ಅಸಮಾಧಾನ ತೋರ್ಪಡಿಸುತ್ತಲೇ ಇದ್ಧಾರೆ. ಮುನಿರತ್ನ ಕೂಡ ತಮ್ಮ ಅತೃಪ್ತಿಯನ್ನ ನುಂಗಿಕೊಂಡು ಸೂಕ್ತ ಸಮಯಕ್ಕಾಗಿ ಕಾಯುತ್ತಿರುವಂತಿದೆ. ಹೆಚ್ ನಾಗೇಶ್ ಅವರನ್ನ ಮಂತ್ರಿಮಂಡಲದಿಂದ ಹೊರಕಳುಹಿಸಲಾಗಿದೆ. ಈಗ ಡಾ. ಸುಧಾಕರ್, ಎಂಟಿಬಿ ನಾಗರಾಜ್, ಹೆಚ್ ನಾಗೇಶ್, ಆರ್ ಶಂಕರ್, ಮುನಿರತ್ನ, ಹೆಚ್ ವಿಶ್ವನಾಥ್, ಮಹೇಶ್ ಕುಮಟಳ್ಳಿ ಹೀಗೆ 7-10 ಮಂದಿ ಅಸಮಾಧಾನಗೊಂಡಿರುವುದು ತಿಳಿದುಬಂದಿದೆ. ಮೈತ್ರಿಸರ್ಕಾರಕ್ಕೆ ಆದ ಕಥೆ ಬಿಜೆಪಿ ಸರ್ಕಾರಕ್ಕೂ ಪುನಾವರ್ತನೆ ಆಗುತ್ತಾ ಎಂಬ ಅನುಮಾನ ದಟ್ಟವಾಗುತ್ತಿದೆ.

ವರದಿ: ಕೃಷ್ಣ ಜಿ.ವಿ.
Published by: Vijayasarthy SN
First published: January 22, 2021, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories