ವಿಜಯಪುರ: ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ (sindgi, hangal by election) ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (bs yediyurappa) ಕೂಡ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ತಂಗಿದ್ದ ಬಿಎಸ್ವೈ ಇಡೀ ದಿನ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಎದುರಾಳಿ ಪಕ್ಷಗಳ ಹೇಳಿಕೆಗಳಿಗೂ ಬಿಎಸ್ವೈ ತಿರುಗೇಟು ಕೊಟ್ಟರು. RSS ವಿರುದ್ಧ ನಿರಂತರ ವಾಗ್ದಾಳಿಯಲ್ಲಿ ತೊಡಗಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ (hd kumaraswamy) ನಯವಾಗಿಯೇ ಟಾಂಗ್ ಕೊಟ್ಟರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹಗುರವಾಗಿ ಮತನಾಡಬಾರದು. ಸಂಘದ ಬಗ್ಗೆ ಟೀಕೆ ಮಾಡುವವರಿಗೆ ಗೊತ್ತಿರಲಿ, ಈ ದೇಶದ ರಾಷ್ಟ್ರಪತಿ ಕೂಡಾ ಸಂಘದ ಕಾರ್ಯಕರ್ತ. ದೇಶದ ಪ್ರಧಾನಿ ಕೂಡಾ ಆರ್ ಎಸ್ಎಸ್ ಸಂಘದ ಹಿನ್ನೆಲೆಯವರು ಎಂದು ಉಲ್ಲೇಖಿಸಿ ಕುಟುಕಿದರು.
RSS ವಿರುದ್ಧ ಮಾತಾಡಿದ್ರೆ ಮುಸ್ಲಿಮರ ಓಟು ಸಿಗಲ್ಲ
ನಾನು ಕೂಡಾ ಆರ್ ಎಸ್ ಎಸ್ ನಿಂದ ಬಂದವನು. ಈ ದೇಶದಲ್ಲಿ 26 ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿದ್ದೇವೆ. ಎಲ್ಲರೂ ಆರ್ ಎಸ್ ಎಸ್ ನಿಂದ ಬಂದವರು. ಸಂಘದ ಬಗ್ಗೆ ಕೇಳುವ ನೈತಿಕ ಹಕ್ಕು ಕುಮಾರಸ್ವಾಮಿ ಅವರಿಗಿಲ್ಲ.ಸಂಘದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಮಾಡುವ ಅಗತ್ಯತೆ ಇಲ್ಲ, ಉತ್ತರ ನೀಡುವ ಅಗತ್ಯತೆಯೂ ಇಲ್ಲ. ಯಾವ ಪಕ್ಷದ ಬಗ್ಗೆಯೂ ಯಾರೂ ಹಗುರವಾಗಿ ಮಾತನಾಡಬಾರದು. ಮುಸ್ಲಿಮರ ಓಲೈಕೆಗೆ ಹೆಚ್ಡಿಕೆ ಹೀಗೆ ಮಾತನಾಡ್ತಿದ್ದಾರೆ. RSS ವಿರುದ್ಧ ಮಾತಾಡಿದ್ರೆ ಮುಸ್ಲಿಂ ಓಟು ಸಿಗುತ್ವೆ ಅನ್ನೋ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ ಎಂದು ಕಿಡಿಕಾರಿದರು.
ಜನ ಬಿಜೆಪಿ ಕೈ ಹಿಡಿಯುತ್ತಾರೆ
ಉಪಚುನಾವಣೆ ಬಳಿಕ ರಾಜ್ಯ ಪ್ರವಾಸ ಶುರು ಮಾಡ್ತೀನಿ, ಮುಂಬರುವ ಸಾರ್ವತ್ರಿಕ ಚುನಾವಣೆಯ ದೃಷ್ಟಿಯಿಂದ ರಾಜ್ಯಪ್ರವಾಸ ಮಾಡುತ್ತೇನೆ. ಪ್ರತಿ ಜಿಲ್ಲೆ ಜಿಲ್ಲೆಗು ಭೇಟಿ ಕೊಡ್ತೀನಿ ಎಂದು ಇದೇ ವೇಳೆ ತಿಳಿಸಿದರು. ಇನ್ನು ಎರಡು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ನಾನು ಪ್ರಚಾರಕ್ಕೆ ಹೋದ ಸಮಯದಲ್ಲಿ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ. ಜನರು ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ. ನಿರೀಕ್ಷೆ ಮಿರಿ ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ನನ್ನ ಅವಧಿಯಲ್ಲಾದ ಅಭಿವೃದ್ಧಿ ಕೆಲಸ ಹಾಗೂ ಬೊಮ್ಮಾಯಿ ಸರ್ಕಾರದಲ್ಲಿ ನಡೆಯುತ್ತಿರುವ ಉತ್ತಮ ಕೆಲಸ ನಮ್ಮ ಕೈಹಿಡಿಯುತ್ತವೆ.
ಇದನ್ನೂ ಓದಿ: ಹೌದು ತಪ್ಪಾಗಿತ್ತು, ಆದರೆ ತಿದ್ದುಕೊಂಡಿದ್ದೇನೆ: ದ್ವಿಪತ್ನಿತ್ವದ ಬಗ್ಗೆ ಪ್ರಶ್ನಿಸಿದ ಬಿಜೆಪಿಗೆ hd kumaraswamy ತಿರುಗೇಟು
ಜನರ ಒಲವು ಬಿಜೆಪಿಯತ್ತ ಇದೆ
ಯಾವುದೇ ಪಕ್ಷದ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ದೇವೇಗೌಡರು ಸಹಿತ ಮತಕ್ಷೇತ್ರದಲ್ಲೇ ಉಳಿದು ತಮ್ಮ ಅಭ್ಯರ್ಥಿಯ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಆದರೆ ಇಂದು ಜನರ ಒಲವು ಬಿಜೆಪಿಯತ್ತ ಇದೆ. ಎರಡೂ ಚುನಾವಣೆಯಲ್ಲಿ ಜನ ನಮ್ಮ ಪರವಾಗಿ ತೀರ್ಪು ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಸಾಧನೆ, ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡ್ತೀನಿ ಎಂದರು.
ಅನ್ನ ಭಾಗ್ಯ ಸಿದ್ದರಾಮಯ್ಯ ಕೊಟ್ಟ ಯೋಜನೆ ಅಲ್ಲ
ನನ್ನ ರಾಜಕೀಯ ಜೀವನದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಂ ಬಂಧುಗಳಿಗೆ ಅನ್ಯಾಯ ಮಾಡುವ ಕೆಲಸ ಮಾಡಿಲ್ಲ. ನಾವು ಅಥವಾ ಪ್ರಧಾನಿ ಮೋದಿಯವರು ಹಿಂದುಗಳಿಗೆ ಕೊಟ್ಟು ಅಲ್ಪ ಸಂಖ್ಯಾತರ ಕೊಡದೇ ಇರುವ ಯಾವುದಾದರೂ ಒಂದು ಕಾರ್ಯಕ್ರಮ ತೋರಿಸಿ. ಪ್ರಧಾನಿ ಮೋದಿಯವರಾಗಲಿ, ನಾವಾಗಲಿ ಎಲ್ಲ ಕಾಲದಲ್ಲೂ ಎಲ್ಲ ಯೋಜನೆಗಳನ್ನು ಹಿಂದು ಮುಸ್ಲಿಂ ಕ್ರೈಸ್ತ ರೆಂದು ಬೇಧ ಭಾವ ಮಾಡದೇ ಕೊಟ್ಟಿದ್ದೇವೆ ಎಂದರು. ಅನ್ನ ಭಾಗ್ಯದ ಅಕ್ಕಿ ಕೊಟ್ಟಿದ್ದು ಕೇಂದ್ರ ಸರ್ಕಾರ. ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ ಕೊಟ್ಟ ಯೋಜನೆ ಅಲ್ಲ. ಭಾಗಲಕ್ಷ್ಮೀ ಯೋಜನೆ, ಕಿಸಾನ್ ಸಮ್ಮಾನ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮ ಕೊಟ್ಟಿದ್ದೇವೆ. ಈ ಕಾರ್ಯಕ್ರಮದ ಫಲವಾಗಿಯೇ ಇಂದು ದೇಶದಲ್ಲಿ ಬಿಜೆಪಿಯ ಪರವಾಗಿ ಜನರ ಒಲವಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ