ಮುಗಿಯದ ಬಿಎಸ್​ವೈ ಸಂಪುಟ ಗೊಂದಲ; ಐವರು ಸಚಿವರಿಗೆ ಮತ್ತೆ ಖಾತೆ ಬದಲಾವಣೆ

ಸಿಎಂ ಬಿ.ಎಸ್​. ಯಡಿಯೂರಪ್ಪನವರ ಖಾತೆ ಹಂಚಿಕೆಯ ತಲೆನೋವು ಇನ್ನೂ ಬಗೆಹರಿದಿಲ್ಲ. ಸೋಮವಾರ ಖಾತೆ ಹಂಚಿಕೆ ಪಟ್ಟಿ ಪ್ರಕಟವಾದ ನಂತರ ಬಿಜೆಪಿಯಲ್ಲಿ ಅಸಮಾಧಾನ ಕೇಳಿಬಂದಿತ್ತು. ಹೀಗಾಗಿ, ಬಿ.ಸಿ. ಪಾಟೀಲ್​ ಸೇರಿ ಐವರು ಸಚಿವರಿಗೆ ಖಾತೆ ಮರುಹಂಚಿಕೆ ಮಾಡಲಾಗಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

  • Share this:
ಬೆಂಗಳೂರು (ಫೆ. 11): ಕೆಲವು ದಿನಗಳ ಹಿಂದಷ್ಟೇ ಬಿಎಸ್​ವೈ ಸಂಪುಟ ಸೇರಿದ್ದ 10 ಶಾಸಕರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿತ್ತು. ಈ ಖಾತೆ ಹಂಚಿಕೆ ಬಗ್ಗೆಯೂ ಬಿಜೆಪಿಯಲ್ಲಿ ಅಸಮಾಧಾನ ಎದ್ದಿತ್ತು. ಕೆಲವು ಸಚಿವರು ತಮಗೆ ನೀಡಿದ ಖಾತೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮತ್ತೊಮ್ಮೆ ಖಾತೆ ಮರುಹಂಚಿಕೆ ಮಾಡಲಾಗಿದೆ. ಬದಲಾದ ಹೊಸ ಪಟ್ಟಿಯಲ್ಲಿ ಯಾವ ಸಚಿವರಿಗೆ ಯಾವ ಖಾತೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

ಸೋಮವಾರ ನೂತನ ಸಚಿವರ ಖಾತೆ ಹಂಚಿಕೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ರಮೇಶ್ ಜಾರಕಿಹೊಳಿ - ಜಲ ಸಂಪನ್ಮೂಲ, ಡಾ. ಕೆ. ಸುಧಾಕರ್ - ವೈದ್ಯಕೀಯ ಶಿಕ್ಷಣ, ಆನಂದ್ ಸಿಂಗ್ - ಆಹಾರ ಮತ್ತು ನಾಗರಿಕ, ಶ್ರೀಮಂತ ಪಾಟೀಲ್- ಜವಳಿ ಇಲಾಖೆ, ನಾರಾಯಣ ಗೌಡ- ಪೌರಾಡಳಿತ ಮತ್ತು ತೋಟಗಾರಿಕೆ, ಎಸ್​.ಟಿ. ಸೋಮಶೇಖರ್- ಸಹಕಾರ, ಶಿವರಾಂ ಹೆಬ್ಬಾರ್ - ಕಾರ್ಮಿಕ, ಭೈರತಿ ಬಸವರಾಜು - ನಗರಾಭಿವೃದ್ಧಿ, ಗೋಪಾಲಯ್ಯ - ಸಣ್ಣ ಕೈಗಾರಿಕೆ ಹಾಗೂ ಬಿ.ಸಿ. ಪಾಟೀಲ್​ಗೆ ಅರಣ್ಯ ಖಾತೆ ನೀಡಲಾಗಿತ್ತು.

ಇದನ್ನೂ ಓದಿ: ಬಿಎಸ್​ವೈಗೆ ಮತ್ತೆ ಶುರುವಾಯ್ತ ವಲಸಿಗರ ಕಾಟ?; ಎಂಎಸ್​ಐಎಲ್ ಅಧ್ಯಕ್ಷ ಸ್ಥಾನ ನಿರಾಕರಿಸಿದ ಕುಮಟಳ್ಳಿ

ಆದರೆ, ಖಾತೆ ಹಂಚಿಕೆ ವೇಳೆ ತಮಗೆ ಸಿಕ್ಕಿದ್ದ ಅರಣ್ಯ ಇಲಾಖೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದ ಬಿ.ಸಿ. ಪಾಟೀಲ್ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದ ಕೃಷಿ ಖಾತೆಯನ್ನು ಬಿ.ಸಿ. ಪಾಟೀಲ್​ಗೆ ವಹಿಸಲಾಗಿತ್ತು.

ಇದನ್ನೂ ಓದಿ: ಅಸಮಾಧಾನಕ್ಕೆ ಮಣಿದ ಯಡಿಯೂರಪ್ಪ; ಅರಣ್ಯ ಬದಲು ಕೃಷಿ ಖಾತೆ ದಕ್ಕಿಸಿಕೊಂಡ ಬಿ.ಸಿ. ಪಾಟೀಲ್​

ಕೇವಲ ಬಿ.ಸಿ. ಪಾಟೀಲ್​ಗೆ ಮಾತ್ರವಲ್ಲದೆ ಇನ್ನೂ ನಾಲ್ವರು ಸಚಿವರಿಗೆ ಖಾತೆ ಮರುಹಂಚಿಕೆ ಮಾಡಲಾಗಿದೆ. ಆನಂದ ಸಿಂಗ್​ಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ಬದಲು ಅರಣ್ಯ ಹಾಗೂ ಜೈವಿಕ ಪರಿಸರ ಇಲಾಖೆಯನ್ನು ನೀಡಲಾಗಿದೆ. ಗೋಪಾಲಯ್ಯ ಅವರಿಗೆ ಸಣ್ಣ ಕೈಗಾರಿಕೆ ಬದಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಲಾಗಿದೆ. ಶಿವರಾಮ್ ಹೆಬ್ಬಾರ್ ಅವರಿಗೆ ಕಾರ್ಮಿಕ ಇಲಾಖೆ ಜೊತೆಗೆ ಸಕ್ಕರೆ ಖಾತೆ ನೀಡಲಾಗಿದೆ.

ಹಾಗೇ, ಸಚಿವ ಸಿ.ಸಿ. ಪಾಟೀಲ್​ಗೆ ಗಣಿ ಮತ್ತು ಭೂವಿಜ್ಞಾನ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯನ್ನು ನೀಡಲಾಗಿದೆ. ಈಗಾಗಲೇ ಪರಿಷ್ಕೃತ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ.
First published: