ಬೆಂಗಳೂರು (ಜ. 19): ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಅಮಿತ್ ಷಾ ಅವರೊಂದಿಗೆ ಚರ್ಚೆ ಮಾಡಿರುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಾವು ದಾವೋಸ್ನಿಂದ ಮರಳಿದ ಮೇಲೆ ಸಂಪುಟ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸಂಪುಟ ವಿಸ್ತರಣೆಗೆ ಯಾವುದೇ ಅಡ್ಡಿ-ಆತಂಕ ಇಲ್ಲ. ಈ ವಾರದಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇವೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು. ನಾನು 2 ಬಾರಿ ಅಮಿತ್ ಷಾ ಜೊತೆ ಮಾತಾಡಿದ್ದೇನೆ.ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ವಿಶ್ವ ಆರ್ಥಿಕ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ವಿಟ್ಜರ್ಲೆಂಡ್ನ ದಾವೋಸ್ಗೆ ತೆರಳಲಿದ್ದಾರೆ. ಇಂದಿನಿಂದ 6 ದಿನಗಳ ಕಾಲ ಸಿಎಂ ಬಿಎಸ್ವೈ ದಾವೋಸ್ನಲ್ಲಿ ಇರಲಿದ್ದಾರೆ. ಇಂದು ಬೆಳಗ್ಗೆ 10.25ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಿ, ಅಲ್ಲಿಂದ ಜುರಿಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗವಾಗಿ ದಾವೋಸ್ಗೆ ತೆರಳಲಿದ್ದಾರೆ.
ಇದನ್ನೂ ಓದಿ: ಇಂದಿನಿಂದ 6 ದಿನಗಳ ಕಾಲ ಸಿಎಂ ಬಿ.ಎಸ್.ಯಡಿಯೂರಪ್ಪ ದಾವೋಸ್ ಪ್ರವಾಸ; ವಿಶ್ವ ಆರ್ಥಿಕ ಸಮಾವೇಶದಲ್ಲಿ ಭಾಗಿ
ಶೃಂಗಸಭೆಯಲ್ಲಿ 38 ಹೂಡಿಕೆದಾರರು, ಉದ್ಯಮಿಗಳ ಜೊತೆ ಸಂವಾದ ನಡೆಸುತ್ತೇವೆ. ರಾಜ್ಯಕ್ಕೆ ಹೂಡಿಕೆ ತರಲು ವಿಶೇಷ ಪ್ರಯತ್ನ ಮಾಡುತ್ತೇವೆ. ವರ್ಲ್ಡ್ ಎಕಾನಮಿ ಫೋರಂನಿಂದ ರಾಜ್ಯಕ್ಕೆ ಬಂಡವಾಳ ಹರಿದು ಬರುವ ಸಾಧ್ಯತೆ ಇದೆ. ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರಿಗೆ ನಾವು ಸೌಲಭ್ಯ, ಸಹಕಾರ ಕೊಡುತ್ತೇವೆ. ಈ ಪ್ರಯತ್ನಗಳಿಂದ ಉದ್ಯೋಗಾವಕಾಶ ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ವಿದೇಶ ಪ್ರವಾಸದ ಬಳಿಕ ಸಂಪುಟ ವಿಸ್ತರಿಸುವಂತೆ ಸಿಎಂ ಬಿಎಸ್ವೈಗೆ ಅಮಿತ್ ಶಾ ಅಭಯ
ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಇದ್ದರೂ ಕರ್ನಾಟಕದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಹಿಂದೆ ಜಾಗತಿಕ ಹೂಡಿಕೆದಾರರ ಸಭೆ ನಡೆದಾಗ ಬಹಳ ಯಶಸ್ವಿ ಕಾರ್ಯಕ್ರಮ ಆಗಿತ್ತು. ನನ್ನ ಜೊತೆ ಸಚಿವ ಜಗದೀಶ್ ಶೆಟ್ಟರ್ ಕೂಡ ಬರುತ್ತಿದ್ದಾರೆ ಎಂದು ಸಿಎಂ ದಾವೋಸ್ ಪ್ರಯಾಣಕ್ಕೆ ತೆರಳುವ ಮುನ್ನ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ