ಇತ್ತ ಅತೃಪ್ತರು, ಅತ್ತ ಅನರ್ಹರು; ಬಂಡಾಯ ಶಮನಕ್ಕೆ ಬಿಎಸ್​ವೈ ಸಂಧಾನ ಕಸರತ್ತು

ಬಿಜೆಪಿಯ ಶಾಸಕರಿಗೆ ಇನ್ನೂ 5 ಸಚಿವ ಸ್ಥಾನ ಹಾಗೂ ಅನರ್ಹ ಶಾಸಕರಿಗೆಂದು 11 ಸಚಿವ ಸ್ಥಾನವನ್ನು ಯಡಿಯೂರಪ್ಪ ಕಾಯ್ದಿರಿಸಿದ್ದಾರೆ.

news18-kannada
Updated:August 21, 2019, 9:37 AM IST
ಇತ್ತ ಅತೃಪ್ತರು, ಅತ್ತ ಅನರ್ಹರು; ಬಂಡಾಯ ಶಮನಕ್ಕೆ ಬಿಎಸ್​ವೈ ಸಂಧಾನ ಕಸರತ್ತು
ಯಡಿಯೂರಪ್ಪ
  • Share this:
ಬೆಂಗಳೂರು(ಆ. 20): ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ಇವತ್ತು 17 ನೂತನ ಸಚಿವರ ಸೇರ್ಪಡೆಯ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಬಿಸಿಬಿಸಿ ವಾತಾವರಣ ಸೃಷ್ಟಿಯಾಗಿದೆ. ಸಚಿವ ಸ್ಥಾನ ಪಡೆದವರ ಖುಷಿ ಒಂದೆಡೆಯಾದರೆ, ಮಂತ್ರಿಪಟ್ಟದ ಸಿಗದ ಆಕಾಂಕ್ಷಿಗಳ ಆಕ್ರೋಶ ಇನ್ನೊಂದೆಡೆ ವ್ಯಕ್ತವಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಕುತೂಹಲಮಿಶ್ರಿತ ಆತಂಕದಿಂದ ನೋಡುತ್ತಿರುವ ಅನರ್ಹ ಶಾಸಕರು ಮಗದೊಂದೆಡೆ ಇದ್ದಾರೆ. ಇವೆಲ್ಲರ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಧಾನ ಕಸರತ್ತಿಗೆ ಮುಂದಾಗಿದ್ದಾರೆ.

ಯಡಿಯೂರಪ್ಪ ಅವರ ಮಂತ್ರಿಮಂಡಲದಲ್ಲಿ ಇನ್ನೂ 16 ಸಚಿವರಿಗೆ ಅವಕಾಶವಿದೆ. ಇದನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳು ಬಂಡಾಯದ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಇವತ್ತು ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ 15ಕ್ಕೂ ಹೆಚ್ಚು ಬಿಜೆಪಿ ಶಾಸಕರು ತಮ್ಮ ಅತೃಪ್ತಿಯನ್ನು ಒಂದಿಲ್ಲೊಂದು ರೀತಿಯಲ್ಲಿ ಹೊರಹಾಕಿದ್ಧಾರೆ. ಉಮೇಶ್ ಕತ್ತಿ ನೇತೃತ್ವದಲ್ಲಿ ಕೆಲ ಅಸಮಾಧಾನಿತರು ರೇಸ್ ವ್ಯೂ ಹೋಟೆಲ್​ನಲ್ಲಿ ಒಂದೆಡೆ ಸೇರಿ ಸಭೆ ಕೂಡ ನಡೆಸಿದ್ದಾರೆ. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಯಡಿಯೂರಪ್ಪ ಅವರು ತಮ್ಮ ಸಂಪುಟದಲ್ಲಿ ಇನ್ನೂ 16 ಸ್ಥಾನ ಖಾಲಿ ಇರುವುದಾಗಿ ಸಂದೇಶ ರವಾನಿಸಿದ್ಧಾರೆ.

ಇದನ್ನೂ ಓದಿ: ಯಡಿಯೂರಪ್ಪ ಸಂಪುಟದಲ್ಲಿ ಹೈದ್ರಾಬಾದ್, ಉತ್ತರ ಕರ್ನಾಟಕಕ್ಕೆ ಅನ್ಯಾಯ ಆರೋಪ; ಬೂದಿ ಮುಚ್ಚಿದ ಕೆಂಡದಂತಿರುವ ಭಿನ್ನಮತ!

ಯಾರೂ ಕೂಡ ಬೇಸರ ಪಡಬೇಕಿಲ್ಲ. ತಾವು ಕಾಂಗ್ರೆಸ್ ಪಕ್ಷದಂತೆ ಕೈಕೊಡಲ್ಲ. ಎಲ್ಲರಿಗೂ ಸೂಕ್ತ ಸ್ಥಾನಮಾನ ಸಿಗುತ್ತದೆ. ಪಕ್ಷದ ನಿಷ್ಠಾವಂತರನ್ನೂ ಕೈಬಿಡಲ್ಲ. ಪಕ್ಷ ನಂಬಿ ಬಂದವರನ್ನೂ ಕೈಬಿಡಲ್ಲ. ಅನರ್ಹಗೊಂಡ ಶಾಸಕರಿಗೆ 11 ಸಚಿವ ಸ್ಥಾನ, ಹಾಗೂ ಬಿಜೆಪಿಯ ಶಾಸಕರಿಗೆ ಇನ್ನಷ್ಟು 5 ಸ್ಥಾನಗಳನ್ನು ನೀಡಲಾಗುವುದು. ಹಾಗೂ ಸಚಿವ ಸ್ಥಾನ ಸಿಗದವರಿಗೆ ಸೂಕ್ತ ನಿಗಮ ಮಂಡಳಿ ಸ್ಥಾನಗಳನ್ನ ಕೊಡಲಾಗುವುದು ಎಂದು ಯಡಿಯೂರಪ್ಪ ವಾಗ್ದಾನ ನೀಡಿದ್ದಾರೆ.

ಸಿಎಂ ಅವರ ಆಶ್ವಾಸನೆ ಸಿಕ್ಕ ಬಳಿಕ ಅಸಮಾಧಾನಿತರು ಸ್ವಲ್ಪ ಮೆತ್ತಗಾಗಿದ್ದಾರೆ. ಯಡಿಯೂರಪ್ಪ ಅವರನ್ನು ಭೇಟಿಯಾದ ಅತೃಪ್ತ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರೂ ತುಸು ಸಮಾಧಾನಗೊಂಡಂತೆ ಕಂಡಿದ್ಧಾರೆ. ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನಿಶ್ಚಿತವಾಗಿ ಕೊಡುವುದಾಗಿ ಯಡಿಯೂರಪ್ಪ ಅವರಿತ್ತ ಭರವಸೆ ಕೆಲಸ ಮಾಡಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಸಚಿವ ಸ್ಥಾನ ಸಿಗುವುದು ಖಚಿತ. ಹಾಗಾಗಿ ತಮಗೆ ಅಸಮಾಧಾನವೇನಿಲ್ಲ ಎಂದು ಹೇಳಿದ್ಧಾರೆ. ಇದರೊಂದಿಗೆ ಬಿಜೆಪಿಯೊಳಗಿದ್ದ ಪ್ರಮುಖ ಬಂಡಾಯದ ಅಪಾಯವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: ಮೋದಿ, ಅಮಿತ್ ಶಾ ತಲೆಯಲ್ಲಿ ಏನಿದೆ ಎಂಬುದು ದೇವರಿಗೂ ಗೊತ್ತಿಲ್ಲ; ನೂತನ ಸಚಿವ ಕೆ.ಎಸ್.ಈಶ್ವರಪ್ಪ

ಆದರೆ, ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಹಾಗೂ ಲಕ್ಷ್ಮಣ ಸವದಿ ಅವರನ್ನು ಮಂತ್ರಿಗಿರಿ ಮಾಡಿದ್ದಕ್ಕೆ ಬಾಲಚಂದ್ರ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ಧಾರೆ. ಬೆಳಗಾವಿಯಲ್ಲಿ 10 ಶಾಸಕರಿದ್ದರೂ ಸೋತಿರುವವರಿಗೆ ಮಣೆ ಹಾಕಲಾಗಿದೆ. ಉಮೇಶ್ ಕತ್ತಿ ಅವರಿಗೆ ಅಸಮಾಧಾನವಾಗಿರುವುದು ನಿಜ. ಅವರ ಮನವೊಲಿಸಲು ಪ್ರಯತ್ನ ಮಾಡುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ಧಾರೆ.ಉಮೇಶ್ ಕತ್ತಿ, ತಿಪ್ಪಾರೆಡ್ಡಿ, ಎಂ.ಪಿ. ರೇಣುಕಾಚಾರ್ಯ, ರವೀಂದ್ರನಾಥ್, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಎಂ.ಪಿ. ಕುಮಾರಸ್ವಾಮಿ, ಎಸ್. ಅಂಗಾರ, ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಪೂರ್ಣಿಮಾ ಶ್ರೀನಿವಾಸ್ ಮೊದಲಾದ ಅಸಮಾಧಾನಿತರನ್ನು ಯಡಿಯೂರಪ್ಪ ಭೇಟಿಯಾಗಿ ಮಾತುಕತೆ ನಡೆಸಿದ್ಧಾರೆ.

ಇನ್ನೊಂದೆಡೆ, ಇವೆಲ್ಲಾ ಬೆಳವಣಿಗೆಗಳನ್ನು ಕಾಂಗ್ರೆಸ್-ಜೆಡಿಎಸ್ ಅನರ್ಹ ಶಾಸಕರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಬಿಜೆಪಿಯೊಳಗೆ ಏಳುತ್ತಿರುವ ಭಿನ್ನಮತದಿಂದ ತಮ್ಮ ಸ್ಥಾನಗಳಿಗೆ ಕುತ್ತು ಬರಬಹುದಾ? ಅಥವಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಂತೆ ಇದೂ ಕೂಡ ಅನಿಶ್ಚಿತವಾಗಿ ಮುಂದುವರಿಯುತ್ತಾ ಎಂಬುದು ಅನರ್ಹ ಶಾಸಕರಿಗೆ ತಲೆನೋವಿನ ಪ್ರಶ್ನೆಯಾಗಿದೆ. ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿರುವ ಅನರ್ಹ ಶಾಸಕರು ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ಧಾರೆ.

(ವರದಿ: ಕೃಷ್ಣ ಜಿ.ವಿ.)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:August 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ