ಬಿಜೆಪಿ ಸೇರಿದ ಶಾಸಕರಿಗೆ ಶುಕ್ರದೆಸೆಯೋ, ಶನಿ ಕಾಟವೋ?; ಬಿಎಸ್​ವೈಗೆ ಮಾತ್ರ ಕಾಯುವುದೇ ಕಾಯಕ

ಕಳೆದ ವರ್ಷ ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆದಿದ್ದು, ಡಿ.9ಕ್ಕೆ ಫಲಿತಾಂಶ ಹೊರ ಬಂದಿತ್ತು. ಉಪ ಚುನಾವಣೆಯಲ್ಲಿ ಗೆದ್ದ 12 ಬಿಜೆಪಿ ಶಾಸಕರ ಪೈಕಿ 11 ಅನರ್ಹರು. ಚುನಾವಣೆ ಫಲಿತಾಂಶ ಬಂದು ಎರಡು ತಿಂಗಳು ಕಳೆಯುತ್ತಾ ಬಂದರೂ ಸಂಪುಟ ವಿಸ್ತರಣೆ ಆಗಿಲ್ಲ. ಇದು ಉಪಚುನಾವಣೆಯಲ್ಲಿ ಗೆದ್ದವರ ತಾಳ್ಮೆ ಪರೀಕ್ಷೆ ಮಾಡುತ್ತಿದೆ.

ಬಿಎಸ್​ ಯಡಿಯೂರಪ್ಪ ಹಾಗೂ ಅನರ್ಹ ಶಾಸಕರು

ಬಿಎಸ್​ ಯಡಿಯೂರಪ್ಪ ಹಾಗೂ ಅನರ್ಹ ಶಾಸಕರು

  • Share this:
ಬೆಂಗಳೂರು (ಜ.31): ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಕಳೆದ ಎರಡು ತಿಂಗಳಿಂದ ಸಂಪುಟ ವಿಸ್ತರಣೆ ಮಾಡಲು ಕಸರತ್ತು ನಡೆಸುತ್ತಿದ್ದಾರೆ. ಪಕ್ಷಾಂತರ ಮಾಡಿರುವ ಶಾಸಕರು ಸಚಿವ ಸ್ಥಾನಕ್ಕಾಗಿ ಬಿಎಸ್​ವೈ ಮೇಲೆ ತೀವ್ರ ಒತ್ತಡ ಹಾಕುತ್ತಿದ್ದಾರೆ. ಈ ಮಧ್ಯೆ ಸಿಎಂಗೆ ಹೈಕಮಾಂಡ್​ ಭೇಟಿಗಾಗಿ ಕಾಯುವುದೇ ಕಾಯಕವಾಗಿದೆ. ದೆಹಲಿಗೆ ತೆರಳಿದರೂ… ಹೈಕಮಾಂಡ್​ ಭೇಟಿ ಆದರೂ… ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ಸಾಧ್ಯವಾಗುತ್ತಿಲ್ಲ.  ಸಂಜೆ ನಾಲ್ಕು ಗಂಟೆಗೆ ಅಮಿತ್​ ಶಾ ಅವರನ್ನು ಬಿಎಸ್​ವೈ ಭೇಟಿ ಆಗಲಿದ್ದು ಈ ವೇಳೆ  ಅನರ್ಹರಿಗೆ ಶುಕ್ರದೆಸೆ ಬರಲಿದೆಯೇ ಅಥವಾ ಶನಿ ದೆಸೆಯೇ ಮುಂದುವರಿಯಲಿದೆಯೋ ಎಂಬುದು ನಿರ್ಧಾರವಾಗಲಿದೆ. 

ಅದು ಜುಲೈ 1. ರಾಜ್ಯದಲ್ಲಿ ಕಾಂಗ್ರೆಸ್​ -ಜೆಡಿಎಸ್​ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ‘ಎಚ್​.ಡಿ. ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ’ ಎಂದು ಎರಡೂ ಪಕ್ಷದವರು ಹೇಳಿಕೊಳ್ಳುತ್ತಿರುವಾಗಲೇ 17 ಶಾಸಕರು ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಆರೋಪದ ಮೇಲೆ ಅಂದಿನ ಸ್ಪೀಕರ್​ ರಮೇಶ್​ ಕುಮಾರ್​ ಎಲ್ಲಾ 17 ಶಾಸಕರನ್ನು ಅನರ್ಹಗೊಳಿಸಿ, ಚುನಾವಣೆಗೆ ಸ್ಪರ್ಧಿಸದಂತೆ ಆದೇಶ ಹೊರಡಿಸಿದ್ದರು.

17 ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್​ ಇವರ ಅನರ್ಹತೆಯನ್ನು ಎತ್ತಿ ಹಿಡಿದಿತ್ತು. ಜೊತೆಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿತ್ತು. ತೆರವುಗೊಂಡ 17 ಕ್ಷೇತ್ರಗಳ ಪೈಕಿ ಆರ್​ಆರ್​ ನಗರ ಹಾಗೂ ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು.

ಇದನ್ನೂ ಓದಿ:  ಅನರ್ಹರೇ ಅರ್ಹರು: ಯಡಿಯೂರಪ್ಪ ಸರ್ಕಾರಕ್ಕೆ ಸ್ಪಷ್ಟ ಬಹುಮತ; ಕಾಂಗ್ರೆಸ್​, ಜೆಡಿಎಸ್​ಗೆ ಹೀನಾಯ ಸೋಲು

ಫಲಿತಾಂಶ ಬಂದು ಎರಡು ತಿಂಗಳಾದರೂ ಇಲ್ಲ ಸಂಪುಟ ವಿಸ್ತರಣೆ:

ಕಳೆದ ವರ್ಷ ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆದು, ಡಿ.9ಕ್ಕೆ ಫಲಿತಾಂಶ ಹೊರ ಬಿದ್ದಿತ್ತು. ಉಪ ಚುನಾವಣೆಯಲ್ಲಿ ಗೆದ್ದ 12 ಬಿಜೆಪಿ ಶಾಸಕರ ಪೈಕಿ 11 ಮಂದಿ ಅನರ್ಹರು. ಇವರು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಚುನಾವಣೆ ಫಲಿತಾಂಶ ಬಂದು ಎರಡು ತಿಂಗಳು ಕಳೆಯುತ್ತಾ ಬಂದರೂ ಸಂಪುಟ ವಿಸ್ತರಣೆ ಆಗಿಲ್ಲ. ಇದು ಉಪಚುನಾವಣೆಯಲ್ಲಿ ಗೆದ್ದವರ ತಾಳ್ಮೆ ಪರೀಕ್ಷೆ ಮಾಡುತ್ತಿದೆ.

ಸಂದಿಗ್ಧ ಸ್ಥಿತಿಯಲ್ಲಿ ಬಿಎಸ್​ವೈ:

ಚುನಾವಣಾ ಪ್ರಚಾರದ ವೇಳೆ ಅನರ್ಹರ ಪರ ನಿಂತಿದ್ದು ಬಿಎಸ್​ವೈ, ಪ್ರತಿ ಕ್ಷೇತ್ರಕ್ಕೆ ತೆರಳಿ ಅನರ್ಹರ ಪರವಾಗಿ ಮತ ಕೇಳಿದ್ದರು. ಅಲ್ಲದೆ, ಗೆದ್ದವರೆಲ್ಲರನ್ನೂ ಸಚಿವರನ್ನಾಗಿ ಮಾಡುತ್ತೇನೆ ಎನ್ನುವ ಭರವಸೆಯನ್ನೂ ನೀಡಿದ್ದರು. ಆದರೆ, ಈಗ ಕೊಟ್ಟ ಮಾತಿನಂತೆ ನಡೆದುಕೊಂಡರೆ 11 ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಆದರೆ, ಇದಕ್ಕೆ ಹೈಕಮಾಂಡ್​ ಒಪ್ಪಿಗೆ ನೀಡುವುದು ಅನುಮಾನ ಎನ್ನಲಾಗಿದೆ.

ಅತ್ತ ಸಿಗುತ್ತಿಲ್ಲ ಹೈಕಮಾಂಡ್​, ಇತ್ತ ಅನರ್ಹರಿಗೆ ಟೆನ್ಶನ್​:

ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಗುರುವಾರ ದೆಹಲಿಗೆ ತೆರಳಿದ್ದರು. ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾರನ್ನು ಭೇಟಿಯಾಗಿ ಮಾತುಕತೆ ಕೂಡ ನಡೆಸಿದ್ದರು. ಆದರೆ, ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚೆ ನಡೆಸಲು ಸಾಧ್ಯವಾಗಿರಲಿಲ್ಲ.  ಇಂದು ಸಂಜೆ 4ಗಂಟೆಗೆ ಅಮಿತ್​ ಶಾ-ಸಿಎಂ ಭೇಟಿ ನಡೆಯಲಿದ್ದು, ಅಲ್ಲಿ ಎಲ್ಲವೂ ಅಂತಿಮವಾಗಲಿದೆ.

ಪಕ್ಷಾಂತರ ಮಾಡಿದ ಉದ್ದೇಶವೇ ಫೇಲ್​?:

17 ಅನರ್ಹರು ಪಕ್ಷಾಂತರ ಮಾಡಲು ಮುಂದಾಗಿದ್ದು ಸಚಿವ ಸ್ಥಾನಕ್ಕಾಗಿ ಎಂಬುದು ಈಗ ಗುಟ್ಟಾಗೇನು ಉಳಿದಿಲ್ಲ. ಆದರೆ, ಈ ಪೈಕಿ ಕೆಲವರ ಉದ್ದೇಶವೇ ವಿಫಲವಾಗುವ ಮುನ್ಸೂಚನೆ ಸಿಕ್ಕಿದೆ. ಶಿವಾಜಿ ನಗರದ ಶಾಸಕರಾಗಿದ್ದ ರೋಷನ್​ ಬೇಗ್​ಗೆ ಬಿಜೆಪಿಗೆ ಸೇರಲು ಅವಕಾಶವೇ ಸಿಕ್ಕಿರಲಿಲ್ಲ. ಇನ್ನು, ಎಂಟಿಬಿ ಹಾಗೂ ವಿಶ್ವನಾಥ್​ ಉಪಚುನಾವಣೆಯಲ್ಲಿ ಸೋಲುವ ಮೂಲಕ ಅನರ್ಹರು ಎಂಬ ಟ್ಯಾಗ್​ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಆರ್​ ಶಂಕರ್​ಗೆ ಬಿಜೆಪಿ ಸೇರಿದ್ದರೂ ಉಪಚುನಾವಣೆಗೆ ನಿಲ್ಲಲು ಅವಕಾಶ ಸಿಕ್ಕಿರಲಿಲ್ಲ. ಇವರಿಗೆ ಅತ್ತ ಸಚಿವ ಸ್ಥಾನವೂ ಇಲ್ಲ, ಶಾಸಕ ಸ್ಥಾನವೂ ಇಲ್ಲ ಎಂಬಂತಾಗಿದೆ.

ಇನ್ನು, ಮಸ್ಕಿಯ ಪ್ರತಾಪ್​ ಗೌಡ ಪಾಟೀಲ್ ​ ಹಾಗೂ ಆರ್​ಆರ್​ ನಗರದ ಮುನಿರತ್ನ ರಾಜಕೀಯ ಭವಿಷ್ಯ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಉಪಚುನಾವಣೆಯಲ್ಲಿ ಗೆದ್ದವರ ಪೈಕಿ ಕೆಲವರಿಗೆ ಸಚಿವ ಸ್ಥಾನ ದೊರೆಯುತ್ತಿಲ್ಲ. ಇದು ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಮೂಲ ಬಿಜೆಪಿಗರಿಂದ ವಿರೋಧ?:

ಬಿಜೆಪಿಗೆ ವಲಸೆ ಬಂದವರಿಗೆ ಸಚಿವ ಸ್ಥಾನ ನೀಡುತ್ತಿರುವ ಬಗ್ಗೆ ಮೂಲ ಬಿಜೆಪಿಗರಿಗೆ ಅಸಮಾಧಾನವಿದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಕೆಲ ಮೂಲ ಬಿಜೆಪಿಗರು ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಇವರಿಗೆ ನಿರಾಸೆ ಆದರೆ, ಇವರು ಬಂಡಾಯ ಏಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
First published: