BS Yediyurappa: ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ‌ಕೊಟ್ಟಿದ್ದೇನೆ, ಇದರಲ್ಲಿ ಯಾರ ಒತ್ತಡವೂ ಇಲ್ಲ; ಸದನದಲ್ಲಿ ಯಡಿಯೂರಪ್ಪ ಸ್ಪಷ್ಟನೆ

ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಏಕಾಂಗಿಯಾಗಿ ಕಟ್ಟಿ ಬೆಳೆಸಿದ ನಾಯಕನನ್ನು ಮೂಲೆಗುಂಪು ಮಾಡುವುದು ಎಷ್ಟು ಸರಿ ಎಂಬ ಮಾತುಗಳು ಪಕ್ಷಾತೀತವಾಗಿ ವ್ಯಕ್ತವಾಗುತ್ತಿದ್ದವು. ಇಂದು ಇದೇ ವಿಷಯವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸದನದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಬಿಎಸ್​ ಯಡಿಯೂರಪ್ಪ

ಬಿಎಸ್​ ಯಡಿಯೂರಪ್ಪ

  • Share this:
    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆದ ರಾಜಕೀಯ ಪಲ್ಲಟದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡ ಬಳಿಕ ಬಿಜೆಪಿ ಸರ್ಕಾರ ರಚನೆಯಾಗಲು ಬಿಎಸ್ ಯಡಿಯೂರಪ್ಪ ಅವರ ಪಾತ್ರ ಪ್ರಮುಖವಾಗಿತ್ತು. ಆ ಬಳಿಕ ನಿರೀಕ್ಷೆಯಂತೆ ಅವರು ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಡಳಿತದ ಚುಕ್ಕಾಣಿಯನ್ನು ಹಿಡಿದರು. ಎರಡು ವರ್ಷಗಳ ಕಾಲ ಆಡಳಿತವನ್ನು ನೀಡಿದರು. ಕರ್ನಾಟಕ ವಿಧಾನಸಭೆ ಚುನಾವಣೆ ಕೇವಲ ಒಂದೂವರೆ ವರ್ಷ ಬಾಕಿ ಇರುವಂತೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಿಜೆಪಿ ಹೈಕಮಾಂಡ್ ಕೆಳಗೆ ಇಳಿಸಿತು. ಆ ಬಳಿಕ ಆ ಸ್ಥಾನಕ್ಕೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಲಾಯಿತು.

    ಯಡಿಯೂರಪ್ಪ ಅವರು ರಾಜೀನಾಮೆ ಕೊಡುವ ದಿನವು ಸಹ ನಾನು ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಇದರಲ್ಲಿ ಯಾರದೇ ಒತ್ತಡ ಇಲ್ಲ ಎಂದು ಕಣ್ಣೀರು ಹಾಕುತ್ತಲೇ ಹೇಳಿದ್ದರು. ಅದಾದ ಬಳಿಕವೂ ಬಿಎಸ್​ವೈ ಅವರನ್ನು ಪಕ್ಷ ಕಡೆಗಣಿಸಿತು ಎಂಬ ಮಾತುಗಳು ಕೇಳಿಬರುತ್ತಲೇ ಇವೆ. ಈ ವಿಚಾರವಾಗಿ ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸದನದಲ್ಲಿ ಮಾತನಾಡಿ, ನಾನು ಸ್ವ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

    ಸದನದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು, ಸಿಎಂ ಸ್ಥಾನಕ್ಕೆ ನಾನೇ ಸ್ವ ಇಚ್ಚೆಯಿಂದ ರಾಜೀನಾಮೆ ‌ಕೊಟ್ಟಿದ್ದೇನೆ. ಬೇರೆಯವರಿಗೆ ಅವಕಾಶ ಸಿಗಬೇಕು ಅಂತಾ ಈ ನಿರ್ಧಾರ ತೆಗೆದುಕೊಂಡು, ಬೊಮ್ಮಾಯಿ‌ ಅವರನ್ನು ಸಿಎಂ ಮಾಡಿದೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ. ನಾನು ತೆಗೆದುಕೊಂಡ ನಿರ್ಧಾರದಕ್ಕೆ ದೇಶದಲ್ಲಿ ಶ್ಲಾಘನೆ ವ್ಯಕ್ತವಾಗಿದೆ ಎಂದು ಸದನದಲ್ಲಿ  ಯಡಿಯೂರಪ್ಪ ಅವರು ಹೇಳಿದರು.

    ರಾಜೀನಾಮೆ ನೀಡಿದ ದಿನಾಂಕವನ್ನು ಜನವರಿ 26 ಎಂದು ಯಡಿಯೂರಪ್ಪ ಹೇಳಿದಾಗ ಕೆಲವು ಸದಸ್ಯರು ಜುಲೈ ಎಂದು ಹೇಳಿದರು. ಅದಕ್ಕೆ ಯಡಿಯೂರಪ್ಪ ಅವರು ಇಲ್ಲಾ ಸಾರ್ ಜನವರಿ ಎಂದು ಹೇಳಿ, ಮತ್ತೆ ಫೆಬ್ರವರಿ 26 ಎಂದು ಸರಿಪಡಿಸಿಕೊಂಡರು. ರಾಜೀನಾಮೆಗೆ ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ. ನಾನೇ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದೇನೆ. ನಾನು ತೆಗೆದುಕೊಂಡ ತೀರ್ಮಾನವನ್ನು ಪ್ರಧಾನಿ ಮೋದಿ, ಅಮಿತ್ ಶಾ ಅವರು ಕೂಡ ಹೊಗಳಿದರು. ದೇಶದ ಜನ ಕೂಡ ನನ್ನ ರಾಜೀನಾಮೆ ನಿರ್ಧಾರ ಒಪ್ಪಿದರು. ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯ್ತು ಎಂದು ಮತ್ತೊಮ್ಮೆ ಸದನಕ್ಕೆ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದರು.

    ಇದನ್ನು ಓದಿ: 5ಜಿ, ಭಾರತದ ಹೊಸ ಡ್ರೋಣ್ ನೀತಿ: ಪ್ರಧಾನಿ ಮೋದಿ- ಕ್ವಾಲ್ಕಾಮ್ ಸಿಇಒ ಅಮೊನ್ ಸಭೆಯ ಮುಖ್ಯಾಂಶಗಳು

    ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು?

    ಯಡಿಯೂರಪ್ಪ ಅವರನ್ನು ಬಿಜೆಪಿ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿತು. ಆದರೆ, ಯಡಿಯೂರಪ್ಪ ಅವರ ಅಣತಿಯಂತೆ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಸ್ಥಾನವನ್ನು ಕರುಣಿಸಿತು. ಮುಂದಿನ ಚುನಾವಣೆಗೆ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ಗೃಹ ಸಚಿವ ಅಮಿತ್ ಶಾ ಅವರು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಹೇಳುವ ಮೂಲಕ ಬಿಎಸ್​ವೈ ಶಾಕ್ ನೀಡಿದ್ದರು. ಆ ಬಳಿಕ ಪಕ್ಷದೊಳಗೆ ಬಿಎಸ್​ವೈ ಅವರನ್ನು ಸೈಡ್​ಲೈನ್​ ಮಾಡಲಾಗುತ್ತಿದೆ ಎಂಬ ಗುಸುಗುಸುಗಳು ಕೇಳಿಬರಲಾರಂಭಿಸಿದವು. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಏಕಾಂಗಿಯಾಗಿ ಕಟ್ಟಿ ಬೆಳೆಸಿದ ನಾಯಕನನ್ನು ಮೂಲೆಗುಂಪು ಮಾಡುವುದು ಎಷ್ಟು ಸರಿ ಎಂಬ ಮಾತುಗಳು ಪಕ್ಷಾತೀತವಾಗಿ ವ್ಯಕ್ತವಾಗುತ್ತಿದ್ದವು. ಇಂದು ಇದೇ ವಿಷಯವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸದನದಲ್ಲಿ ಸ್ಪಷ್ಟನೆ ನೀಡಿದ್ದಾರೆ.
    Published by:HR Ramesh
    First published: