ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕೋಲಾರದಿಂದ (Kolar) ಸ್ಪರ್ಧೆ ಮಾಡುತ್ತೇನೆ, ಆದರೆ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ನಾಯಕರು ಸಿದ್ದರಾಮಯ್ಯ ಅವರ ಸ್ಪರ್ಧೆ ಕುರಿತಂತೆ ಸಲಹೆ ರೂಪದಲ್ಲಿ ಹಲವು ಹೇಳಿಕೆ ನೀಡಿದ್ದರು. ಅದರಲ್ಲೂ ಕೆಲ ನಾಯಕರು ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಮನೆಗೆ ಹೋಗುವುದು ಖಚಿತ ಎಂದಿದ್ದರು. ಈ ಎಲ್ಲದರ ನಡುವೆ ಸಿದ್ದು, ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತರ ಸಭೆಗಳನ್ನು ನಡೆಸಿ ಭಾಗಿಯಾಗಿದ್ದರು. ತಾವು ಗೆದ್ದರೆ ಕೋಲಾರ ಕ್ಷೇತ್ರಕ್ಕೆ ಏನೆಲ್ಲಾ ಕಾರ್ಯಕ್ರಮಗಳನ್ನು ನೀಡುತ್ತೇನೆ ಅಂತ ಹೇಳಿದ್ದರು. ಆದರೆ ಸದ್ಯ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಸ್ಪರ್ಧೆ ಮಾಡದಂತೆ ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬೆಳವಣಿಗೆಗಳ ನಡುವೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಸಿದ್ದರಾಮಯ್ಯ ಸ್ಪರ್ಧೆ ಕುರಿತಂತೆ ನುಡಿದಿದ್ದ ಭವಿಷ್ಯ ನಿಜವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಅಂದಹಾಗೆ, ಯಡಿಯೂರಪ್ಪ ಏನು ಹೇಳಿದ್ದರು? ಸಿದ್ದರಾಮಯ್ಯ ಅವರು ಕ್ಷೇತ್ರದ ಆಯ್ಕೆ ಕುರಿತಂತೆ ನೀಡಿರುವ ಸ್ಪಷ್ಟನೆ ಏನು ಎಂಬ ಕುತೂಹಲಕಾರಿ ಹೇಳಿಕೆಗಳ ಮಾಹಿತಿ ಇಂತಿದೆ.
ಇದನ್ನೂ ಓದಿ: Congress: ಸಿದ್ದರಾಮಯ್ಯ ನಿರ್ಧಾರ ಹಿಂದಿದ್ಯಾ ರಾಹುಲ್ ಗಾಂಧಿ ಸಲಹೆ? ರಾಜ್ಯ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್
ಮಾಜಿ ಸಿಎಂ ಯಡಿಯೂರಪ್ಪ ಏನು ಹೇಳಿದ್ರು?
ಜನವರಿಯಲ್ಲಿ ಸಿದ್ದರಾಮಯ್ಯ ಅವರ ಕೋಲಾರ ಸ್ಪರ್ಧೆ ಚರ್ಚೆ ಕುರಿತಂತೆ ಮಾತನಾಡಿದ್ದ ಯಡಿಯೂರಪ್ಪ ಅವರು, ಯಾವುದೇ ಕಾರಣಕ್ಕೂ ಕೋಲಾರದಿಂದ ಸಿದ್ದರಾಮಯ್ಯ ನಿಲ್ಲುವುದಿಲ್ಲ. ಅವರು ಡ್ರಾಮಾ ಮಾಡುತ್ತಿದ್ದಾರೆ. ನಾನು ಭವಿಷ್ಯ ಹೇಳುತ್ತಿಲ್ಲ. ಮೈಸೂರಿಗೆ ಬರಲು ಅವರು ಕೋಲಾರ ಅಂತ ಡ್ರಾಮಾ ಮಾಡುತ್ತಿದ್ದಾರೆ. ಕೋಲಾರದಲ್ಲಿ ನಿಂತರೆ ಅವರು ಸೋಲುವುದು ನಿಶ್ಚಿತ ಅಂತ ಯಡಿಯೂರಪ್ಪ ಅವರು ಭವಿಷ್ಯ ನುಡಿದ್ದಿದ್ದರು.
ಅಲ್ಲದೆ, ಮೈಸೂರಿಗೆ ಹೋಗಲಿ ಅಥವಾ ಎರಡು, ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿ, ಸಿದ್ದರಾಮಯ್ಯ ಅವರು ಈ ಬಾರಿ ಮನೆಗೆ ಹೋಗುವುದು ಖಚಿತ. ಕೋಲಾರದಲ್ಲಿ ಮಾತ್ರ ಅವರು ಸ್ಪರ್ಧೆ ಮಾಡುವುದಿಲ್ಲ. ಮೈಸೂರಿಗೆ ಹೋಗಬಹುದು ಎಂದು ಹೇಳಿದ್ದರು.
ಮೊದಲೇ ನಾನು ಕೋಲಾರ ಅಂತ ಕಥೆ ಹೇಳುತ್ತಿದ್ದಾರೆ ಅಂತ ಹೇಳಿದ್ದೆ
ನಾನು ಈ ಹಿಂದೆಯೇ ಸಿದ್ದರಾಮಯ್ಯ ಅವರ ಬಗ್ಗೆ ಒಂದು ಹೇಳಿದ್ದೆ. ಅನಗತ್ಯವಾಗಿ ಅಲ್ಲಿ ಇಲ್ಲಿ ಅಂತ ಹೇಳುತ್ತಿದ್ದಾರೆ. ಕೋಲಾರ ಅದು ಇದು ಅಂತ ಕಥೆ ಹೇಳುತ್ತಿದ್ದಾರೆ. ಅವರು ವರುಣಾದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಅಂತ ಹೇಳಿದ್ದೆ.
ನನ್ನ ಭವಿಷ್ಯ ಸತ್ಯ ಆಗುವ ಸಂದರ್ಭ ಎದುರಾಗಿದೆ ಅನ್ಸುತ್ತೆ. ಅವರು ಕೋಲಾರ ಅದು ಇದು ಗೊಂದಲ ಮೂಡಿಸುವ ಅಗತ್ಯ ಇರಲಿಲ್ಲ, ಅವರು ಏಕೆ ಆ ರೀತಿ ಮಾಡಿದರು ಅಂತ ಗೊತ್ತಿಲ್ಲ. ನನ್ನ ಪ್ರಕಾರ ಅವರು ವರುಣಾದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ಹೇಳಿದ ಕ್ಷೇತ್ರದಿಂದ ನಾನು ಸ್ಫರ್ಧೆ ಮಾಡುತ್ತೇನೆ. ನಾನು ಯಾವುದೇ ಕ್ಷೇತ್ರಕ್ಕೆ ಅರ್ಜಿ ಹಾಕಿಲ್ಲ. ಈ ಹಿಂದೆಯೂ ನನ್ನ ಸ್ಪರ್ಧೆ ಹೈಕಮಾಂಡ್ ನಿರ್ಧಾರ ಅಂತ ಹೇಳಿದ್ದೆ. ಹೈಕಮಾಂಡ್ ಸೂಚಿಸುವ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ ಖಚಿತ.
ಎರಡೂ ಕ್ಷೇತ್ರ ಸೂಚಿಸಿದ್ರೆ ಎರಡು ಇಲ್ಲವಾದ್ರೆ ಇಲ್ಲ. ನಾನು ಕೋಲಾರದಲ್ಲಿ ಮನೆ ನೋಡಿದ್ದು, ಆದರೆ ಮಾಡಿಲ್ಲ. ನಾಳೆ ಬೆಳಗಾವಿಗೆ ಹೋಗಬೇಕಿರುವ ಕಾರಣ ಕೋಲಾರ ಪ್ರವಾಸ ರದ್ದು ಮಾಡಿದ್ದೇನೆ. ಬಾದಮಿ, ಕೋಲಾರ, ವರುಣಾ ಎಲ್ಲಿ ಹೇಳ್ತಾರೆ ಅಲ್ಲಿ ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಇಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ