ಸೋಮವಾರ ಸಚಿವ ಸಂಪುಟ ರಚನೆ? ಗುರುವಾರವೇ ಬಿಎಸ್​ವೈ ದೆಹಲಿಗೆ ಪ್ರಯಾಣ

ಪ್ರವಾಹಪೀಡಿತ ರಾಜ್ಯಕ್ಕೆ ವಿಶೇಷ ಪರಿಹಾರ ಪ್ಯಾಕೇಜ್ ಕೋರುವುದು ಹಾಗೂ ಸಂಪುಟ ರಚನೆಗೆ ಹೆಸರುಗಳನ್ನು ಅಂತಿಮಗೊಳಿಸುವುದು ಈ ಎರಡು ಗುರಿಯೊಂದಿಗೆ ಯಡಿಯೂರಪ್ಪ ಅವರು ದೆಹಲಿಗೆ ಹೊರಟಿದ್ದಾರೆ.

news18
Updated:August 14, 2019, 11:09 PM IST
ಸೋಮವಾರ ಸಚಿವ ಸಂಪುಟ ರಚನೆ? ಗುರುವಾರವೇ ಬಿಎಸ್​ವೈ ದೆಹಲಿಗೆ ಪ್ರಯಾಣ
ಬಿ.ಎಸ್​. ಯಡಿಯೂರಪ್ಪ
  • News18
  • Last Updated: August 14, 2019, 11:09 PM IST
  • Share this:
ಬೆಂಗಳೂರು(ಆ. 14): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಳೆ ಸಂಜೆ ದೆಹಲಿಗೆ ತೆರಳಲಿದ್ದಾರೆ. ಪ್ರವಾಹ ಪರಿಸ್ಥಿತಿ ಮತ್ತು ಸಚಿವ ಸಂಪುಟ ರಚನೆ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ಬಿಎಸ್​ವೈ ಅವರು ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಶುಕ್ರವಾರ ಮತ್ತು ಶನಿವಾರಂದು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಸ್ವಾತಂತ್ರ್ಯೋತ್ಸವ ಸಮಾರಂಭಗಳ ಬಳಿಕ ನಾಳೆ ಗುರುವಾರ ರಾತ್ರಿ 9ಗಂಟೆಗೆ ಯಡಿಯೂರಪ್ಪ ಅವರು ದೆಹಲಿಗೆ ಹೋಗಲಿದ್ದಾರೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಪ್ರವಾಹಪೀಡಿತ ರಾಜ್ಯಕ್ಕೆ ಕೇಂದ್ರದಿಂದ ಪರಿಹಾರ ಕೋರಲಿದ್ದಾರೆ. ಯಡಿಯೂರಪ್ಪ ಈಗಾಗಲೇ ಕೇಂದ್ರದಿಂದ 3 ಸಾವಿರ ಕೋಟಿ ರೂ ಪರಿಹಾರ ಯಾಚಿಸಿದ್ಧಾರೆ. ರಾಜ್ಯದ ವಿಪಕ್ಷಗಳು 5 ಸಾವಿರ ಕೋಟಿ ರೂ ಪರಿಹಾರ ಬರಬೇಕೆಂದು ಆಗ್ರಹಿಸಿವೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಪ್ರಧಾನಿ ಈ ಬಗ್ಗೆ ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಕದ್ದಾಲಿಕೆ ಪ್ರಕರಣ: ಫೋನ್​ ಕದ್ದಾಲಿಸಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ; ಎಚ್​ಡಿಕೆ ಸ್ಪಷ್ಟನೆ

ಯಡಿಯೂರಪ್ಪ ಅವರು ಪ್ರಧಾನಿ ಭೇಟಿ ಬಳಿಕ ಅಂದೇ ರೈಲ್ವೆ ಸಚಿವ, ವಿಮಾನಯಾನ ಸಚಿವ ಸೇರಿದಂತೆ ಕೇಂದ್ರ ಸಂಪುಟದ ಕೆಲ ಸಚಿವರನ್ನು ಭೇಟಿಯಾಗಲಿದ್ಧಾರೆ.

ಶನಿವಾರದಂದು ಯಡಿಯೂರಪ್ಪ ಅವರು ಬಿಜೆಪಿ ವರಿಷ್ಠರನ್ನು ಭೇಟಿಯಾಗಲಿದ್ಧಾರೆ. ಸಂಪುಟ ರಚನೆ ಸಂಬಂಧ ಅಮಿತ್ ಶಾ, ಜೆ.ಪಿ. ನಡ್ಡಾ ಮೊದಲಾದವರೊಂದಿಗೆ ಬಿಎಸ್​ವೈ ಸಮಾಲೋಚನೆ ನಡೆಸಲಿದ್ದಾರೆ. ಬಹುತೇಕ ಶನಿವಾರವೇ ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರನ್ನು ಅಂತಿಮಗೊಳಿಸಿ ಬರಲಿದ್ಧಾರೆ. ಮೂಲಗಳ ಪ್ರಕಾರ ಸೋಮವಾರ ಯಡಿಯೂರಪ್ಪ ಅವರ ಸಂಪುಟ ರಚನೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಪ್ರವಾಹದಲ್ಲೂ ಸೇತುವೆಯ ಮೇಲೆ ನಡೆದು ಆಂಬುಲೆನ್ಸ್​​ಗೆ ದಾರಿ ತೋರಿದ ರಾಯಚೂರು ಪೋರ; ವಿಡಿಯೋ ವೈರಲ್

ಆಗಸ್ಟ್ ಮೊದಲ ವಾರದಲ್ಲೇ ಯಡಿಯೂರಪ್ಪ ಅವರ ಸಂಪುಟ ರಚನೆಯಾಗಬೇಕಿತ್ತು. ಅವರು ದೆಹಲಿಗೂ ಹೋಗಿದ್ದರು. ಆದರೆ, ಕಾಶ್ಮೀರದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೇಂದ್ರ ನಾಯಕರ ಭೇಟಿ ಸಾಧ್ಯವಾಗದೇ ವಾಪಸ್ ಬಂದಿದ್ದರು. ಆ ಬಳಿಕ ರಾಜ್ಯದಲ್ಲಿ ಭೀಕರ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಎದುರಾಯಿತು. ಸಂಪುಟವಿಲ್ಲದೇ ಯಡಿಯೂರಪ್ಪ ಅವರು ಏಕಾಂಗಿಯಾಗಿ ನಿಂತು ಸರ್ಕಾರವನ್ನು ನಿಭಾಯಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದರಿಂದಾಗಿ ವಿಪಕ್ಷಗಳ ಟೀಕೆಗೂ ಗುರಿಯಾಗಿದ್ದಾರೆ.ಇದೇ ವೇಳೆ, ಮಳೆ ಮತ್ತು ಪ್ರವಾಹಗಳಿಗೆ ರಾಜ್ಯದಲ್ಲಿ ಸತ್ತವರ ಸಂಖ್ಯೆ 61ಕ್ಕೆ ಏರಿದೆ. ಮನೆ ಮತ್ತು ಗೃಹೋಪಯೋಗಿ ವಸ್ತುಗಳನ್ನ ಕಳೆದುಕೊಂಡ ಸಂತ್ರಸ್ತ ಕುಟುಂಬವೊಂದಕ್ಕೆ ಕೇಂದ್ರದ ಪ್ರಕೃತಿ ವಿಕೋಪ ನಿಧಿಯಿಂದ 3,800 ರೂಪಾಯಿಗಳ ಸಹಾಯ ಸಿಗಲಿದೆ. ಇದರ ಜೊತೆಗೆ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಪ್ರತೀ ಕುಟುಂಬಕ್ಕೆ 6,200 ರೂಪಾಯಿ ಕೊಡಲಿದೆ. ಒಟ್ಟಾರೆಯಾಗಿ ಪ್ರತೀ ಸಂತ್ರಸ್ತ ಕುಟುಂಬಕ್ಕೆ 10 ಸಾವಿರ ರೂಪಾಯಿಯಂತೆ ಹಣ ಮಂಜೂರು ಮಾಡಲಾಗಿದೆ.

(ವರದಿ: ಕೃಷ್ಣ ಜಿ.ವಿ.)

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ