ಬಿಜೆಪಿ ಮನೆಯೊಂದು ಹತ್ತು ಬಾಗಿಲು; ವಿರೋಧಗಳ ಸರಮಾಲೆಗಳೊಂದಿಗೆ ಹೈಕಮಾಂಡ್​ಗೆ ಬಿಎಸ್​ವೈ ರಿಪೋರ್ಟ್

ಪ್ರಹ್ಲಾದ್ ಜೋಷಿ, ಅನಂತಕುಮಾರ್ ಹೆಗಡೆ ಮೊದಲಾದವರಿಗೆ ಟಿಕೆಟ್ ನೀಡಲು ಕಾರ್ಯಕರ್ತರಿಂದ ವಿರೋಧವಿದೆ. ಡಿವಿ ಸದಾನಂದ ಗೌಡ, ಪ್ರತಾಪ್ ಸಿಂಹ ಸೇರಿ ಕೆಲವು ಹಾಲಿ ಸಂಸದರಿಗೆ ಸೋಲಿನ ಭೀತಿ ಇದೆಯಂತೆ.

Vijayasarthy SN | news18
Updated:January 11, 2019, 11:14 PM IST
ಬಿಜೆಪಿ ಮನೆಯೊಂದು ಹತ್ತು ಬಾಗಿಲು; ವಿರೋಧಗಳ ಸರಮಾಲೆಗಳೊಂದಿಗೆ ಹೈಕಮಾಂಡ್​ಗೆ ಬಿಎಸ್​ವೈ ರಿಪೋರ್ಟ್
ಬಿ.ಎಸ್​. ಯಡಿಯೂರಪ್ಪ
Vijayasarthy SN | news18
Updated: January 11, 2019, 11:14 PM IST
- ಚಿದಾನಂದ ಪಟೇಲ್,

ಬೆಂಗಳೂರು(ಜ. 11): ಲೋಕಸಭೆ ಚುನಾವಣೆ ಹತ್ತಿರ ಬಂದಂತೆ ಒಂದು ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಒಂದೇ ಸಮನೆ ಅಲುಗಾಡುತ್ತಿದೆ. ಇನ್ನೊಂದೆಡೆ ಬಿಜೆಪಿ ಪಾಳಯದಲ್ಲಿ ಇದಕ್ಕಿಂತಲೂ ಗೊಂದಲಕಾರಿ ವಾತಾವರಣ ಇದ್ದಂತಿದೆ. ಹೇಗಾದರೂ ಮಾಡಿ 20ಕ್ಕಿಂತ ಹೆಚ್ಚು ಸೀಟು ಗೆಲ್ಲಲೇಬೇಕೆಂದು ಅಮಿತ್ ಶಾ ಕೊಟ್ಟಿರುವ ಗುರಿಯು ರಾಜ್ಯದ ಬಿಜೆಪಿ ನಾಯಕರನ್ನು, ಅದರಲ್ಲೂ ಯಡಿಯೂರಪ್ಪ ಅವರನ್ನು ಚಿಂತೆಗೀಡು ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸಂತೃಪ್ತರಾಗಿ ಚುನಾವಣೆಗೆ ಇಳಿದರಂತೂ ಬಿಜೆಪಿಯ ಕಥೆ ಬಹುತೇಕ ಮುಗಿದಂತೆ ಎನ್ನುವಂತಹ ವಾತಾವರಣ ಇದೆ. ಜೊತೆಗೆ, ಬಿಜೆಪಿಯೊಳಗೆಯೂ ಟಿಕೆಟ್ ಅವರಿಗೆ ಬೇಡ, ಇವರಿಗೆ ಬೇಡ ಎಂಬ ಪ್ರಕರಣಗಳಂತೂ ಪ್ರತೀ ಕ್ಷೇತ್ರದಲ್ಲೂ ಕಾಣಿಸುತ್ತಿವೆ. ಇವೆಲ್ಲವನ್ನೂ ಕ್ರೋಢೀಕರಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಹೈಕಮಾಂಡ್​ಗೆ ವರದಿ ರವಾನೆ ಮಾಡಿದ್ದಾರೆಂಬ ಎಕ್ಸ್​ಕ್ಲೂಸಿವ್ ಮಾಹಿತಿ ನ್ಯೂಸ್18 ಕನ್ನಡಕ್ಕೆ ಲಭಿಸಿದೆ.

ಪ್ರಹ್ಲಾದ್ ಜೋಷಿ, ಅನಂತಕುಮಾರ್ ಹೆಗಡೆ ಮೊದಲಾದವರಿಗೆ ಟಿಕೆಟ್ ನೀಡಲು ಕಾರ್ಯಕರ್ತರಿಂದ ವಿರೋಧವಿದೆ. ಡಿವಿ ಸದಾನಂದ ಗೌಡ, ಪ್ರತಾಪ್ ಸಿಂಹ ಸೇರಿ ಕೆಲವು ಹಾಲಿ ಸಂಸದರಿಗೆ ಸೋಲಿನ ಭೀತಿ ಇದೆಯಂತೆ. ಶ್ರೀರಾಮುಲು ಅವರಂತಹ ಕೆಲ ಗೆಲ್ಲೋ ಕುದುರೆಗಳು ಲೋಕಸಭೆ ಹಣಾಹಣಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಇವೆಲ್ಲವೂ ಯಡಿಯೂರಪ್ಪ ಅವರಿಗೆ ತಲೆನೋವು ತಂದಿದೆ.

ಗೌಡರ ವಲಸೆ?
ಬೆಂಗಳೂರು ಉತ್ತರ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕೇಳಿದಾಗಿನಿಂದ ಹಾಲಿ ಬಿಜೆಪಿ ಸಂಸದ ಡಿವಿ ಸದಾನಂದ ಗೌಡರು ಆತಂಕದಲ್ಲಿದ್ದಾರೆ. ಈ ಮುಂಚೆಯೇ ಆಂತರಿಕ ಸಮೀಕ್ಷೆಯಲ್ಲಿ ಬೆಂಗಳೂರು ಉತ್ತರದಲ್ಲಿ ಬಿಜೆಪಿಗೆ ಕಷ್ಟ ಎಂಬ ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸದಾನಂದ ಗೌಡರು ಬೇರೆ ಕ್ಷೇತ್ರವನ್ನು ಅರಸುತ್ತಿದ್ದಾರೆ. ಇದೇ ಸಮಯಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವುದ ಡಿವಿಎಸ್​ಗೆ ಜೀವದಾನ ತರುವ ಸಾಧ್ಯತೆ ಇದೆ. ಶೋಭಾ ಸ್ಪರ್ಧಿಸದಿದ್ದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಕೇಂದ್ರ ಸಚಿವ ಡಿವಿಎಸ್ ಅವರಿಗೆ ದಕ್ಕುವ ಸಾಧ್ಯತೆ ಇದೆ. ಆದರೆ, ಬೆಂಗಳೂರು ಉತ್ತರದಲ್ಲಿ ಡಿವಿಎಸ್ ಖಾಲಿ ಮಾಡಿದ ಸ್ಥಾನವನ್ನು ಯಾರಿಂದ ತುಂಬಿಸಬೇಕೆಂಬುದು ಸದ್ಯಕ್ಕೆ ಬಿಜೆಪಿಗೆ ಯಕ್ಷ ಪ್ರಶ್ನೆಯಾಗಿದೆ. ಅದೇ ರೀತಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಿ.ಸಿ. ಮೋಹನ್ ಅವರು ಸೋಲಬಹುದೆಂದು ಸಮೀಕ್ಷೆಯು ಸುಳಿವು ನೀಡಿರುವುದು ಬಿಜೆಪಿಗೆ ಹೆಚ್ಚುವರಿ ತಲೆನೋವು ತಂದಿದೆ.

ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಸಂದಿಗ್ದ ಸ್ಥಿತಿಯಲ್ಲಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ವನ್ನು ಹೇಗಾದರೂ ಸೋಲಿಸಬೇಕೆಂದು ಜೆಡಿಎಸ್ ಜಿದ್ದಿಗೆ ಬಿದ್ದಿದ್ದು ಬಿಜೆಪಿಯ ಪ್ರತಾಪ್ ಸಿಂಹ ಗೆಲುವಿಗೆ ಪ್ರಮುಖ ಕಾರಣಗಳಲ್ಲೊಂದಾಗಿತ್ತು. ಆದರೆ, ಈ ಬಾರಿ ಇವೆರಡು ಪಕ್ಷಗಳು ಒಂದಾಗಿಬಿಟ್ಟರೆ ಮೈಸೂರು ಕ್ಷೇತ್ರವು ಬಿಜೆಪಿಯ ಕೈತಪ್ಪುವುದು ನಿಶ್ಚಿತವೆನ್ನಲಾಗಿದೆ.
Loading...

ಉತ್ತರ ಕರ್ನಾಟಕದ ಭಾಗದಲ್ಲೂ ಬಿಜೆಪಿಗೆ ಬೇರೆ ಬೇರೆ ಸಮಸ್ಯೆಗಳಿವೆ. ಬೀದರ್​ನಲ್ಲಿ ಭಗವಂತ ಖೂಬಾ, ಕೊಪ್ಪಳದಲ್ಲಿ ಸಂಗಣ್ಣ ಕರಡಿ ಮತ್ತು ಬಾಗಲಕೋಟೆಯಲ್ಲಿ ಗದ್ದಿಗೌಡರ್ ಅವರಿಗೆ ಮತ್ತೆ ಟಿಕೆಟ್ ಕೊಡಬಾರದೆಂದು ಅಲ್ಲಿ ಸ್ಥಳೀಯ ಕಾರ್ಯಕರ್ತರು ಒತ್ತಾಯ ಹಾಕುತ್ತಿದ್ದಾರೆ. ಇಲ್ಲಿ ಟಿಕೆಟ್ ಹಂಚಿಕೆ ಹೇಗೆ ಮಾಡಿದರೂ ಬಂಡಾಯದ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಆತಂಕ ಯಡಿಯೂರಪ್ಪ ಅವರನ್ನು ಕಾಡುತ್ತಿದೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲೂ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಲು ಸ್ಥಳೀಯ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಷಿ ಬದಲಿಗೆ ಬೇರೆಯವರನ್ನು ನಿಲ್ಲಿಸಬೇಕೆಂಬ ಒತ್ತಾಯವೂ ಇದೆ. ಆದರೆ, ಇವರಿಬ್ಬರಿಗೂ ಆರೆಸ್ಸೆಸ್ ಮತ್ತು ಹೈಕಮಾಂಡ್ ಕೃಪಾಕಟಾಕ್ಷವಿದೆ ಎನ್ನಲಾಗಿದೆ. ನಳಿನ್ ಕಮಾರ್ ಕಟೀಲ್ ಅವರು ಈಗಾಗಲೇ ಆರೆಸ್ಸೆಸ್ ನಾಯಕರ ಬಳಿ ಲಾಬಿ ಮಾಡಲು ಪ್ರಾರಂಭಿಸಿದ್ದಾರೆ. ಇತ್ತ, ಪ್ರಹ್ಲಾದ್ ಜೋಷಿ ಅವರಿಗೆ ಟಿಕೆಟ್ ನೀಡುವುದು  ಹೈಕಮಾಂಡ್ ಆಸೆಯಾದರೆ, ಜೋಷಿ ಬದಲು ವಿಜಯ್ ಸಂಕೇಶ್ವರ ಅವರಿಗೆ ಟಿಕೆಟ್ ಕೊಟ್ಟು ಮುನ್ನೆಲೆಗೆ ತರುವುದು ಬಿಎಸ್​ವೈ ಯೋಜನೆಯಾಗಿದೆ. ಹುಬ್ಬಳ್ಳಿ-ಧಾರವಾಡ ವಿಚಾರದಲ್ಲಿ ಬಿಎಸ್​ವೈ ನಿರ್ಧಾರ ಗೆಲ್ಲುತ್ತಾ ಎಂಬ ಖಾತ್ರಿ ಇಲ್ಲ.

ಉತ್ತರ ಕನ್ನಡ ಕ್ಷೇತ್ರದ ಸಂಸದ ಹಾಗು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಮಾತೇ ಅವರಿಗೆ ಮುಳುವಾಗಿದೆ. ಸ್ಥಳೀಯ ಕಾರ್ಯಕರ್ತರಿಗೆ ಹೆಗಡೆ ವರ್ತನೆ ಬೇಸರ ತಂದಿದೆ. ಇವರಿಗೆ ಟಿಕೆಟ್ ಕೊಡಬಾರದೆಂದು ಯಡಿಯೂರಪ್ಪ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಆರೆಸ್ಸೆಸ್ ಬೆಂಬಲ ಅನಂತಕುಮಾರ್ ಅವರನ್ನು ಕಾಪಾಡಬಹುದು ಎನ್ನಲಾಗಿದೆ.

ಹಾಸನದಲ್ಲಿ ಇಂಟರೆಸ್ಟಿಂಗ್ ಸನ್ನಿವೇಶ ಎದುರಾಗುವ ಸಾಧ್ಯತೆ ಇದೆ. ಇಲ್ಲಿ ಹೆಚ್.ಡಿ. ರೇವಣ್ಣ ಜೊತೆ ಕಾಂಗ್ರೆಸ್​ನ ಎ. ಮಂಜು ಜಿದ್ದಿಗೆ ಬಿದ್ದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೂ ಹಾಸನ  ಮತ್ತು ಮಂಡ್ಯದಲ್ಲಿ ಇವೆರಡೂ ಬದ್ಧವೈರಿಗಳೇ. ಒಂದು ವೇಳೆ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಹಾಸನದಲ್ಲಿ ಅರಕಲಗೂಡು ಮಂಜು ಅವರನ್ನು ಸೆಳೆದುಕೊಂಡು ಟಿಕೆಟ್ ಕೊಡುವುದು ಬಿಜೆಪಿಯ ಪ್ಲಾನ್ ಆಗಿದೆ. ರೇವಣ್ಣ ಅವರ ವರ್ತನೆಯಿಂದ ರೋಸಿ ಹೋಗಿರುವ ಎ. ಮಂಜು ಅವರು ಬಿಜೆಪಿ ಜೊತೆ ಈಗಾಗಲೇ ರಹಸ್ಯ ಮಾತುಕತೆ ನಡೆಸಿರುವ ಮಾಹಿತಿ ನ್ಯೂಸ್18 ಕನ್ನಡಕ್ಕೆ ಸಿಕ್ಕಿದೆ. ಒಂದು ವೇಳೆ, ಎ. ಮಂಜು ಅವರು ಬಿಜೆಪಿ ಅಭ್ಯರ್ಥಿಯಾಗಿ ನಿಂತರೆ ಗೆಲ್ಲುತ್ತಾರೆಂಬುದು ನಿಶ್ಚಿತವಲ್ಲ. ಆದರೆ, ಬಿಜೆಪಿ ಹಿಂದೆಂದೂ ಪಡೆಯದಷ್ಟು ಮತಗಳನ್ನ ಪಡೆಯುವುದು ಗ್ಯಾರಂಟಿ.

ಕೊನೆಯದಾಗಿ, ಮೈತ್ರಿಯ ವಿಚಾರಕ್ಕೆ ಬಂದರೆ ಬಿಜೆಪಿಗೆ ಆತಂಕದ ಸುದ್ದಿ ಇದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ರಾಜ್ಯದಲ್ಲಿ ಬಿಜೆಪಿಗೆ 10 ಕ್ಷೇತ್ರವೂ ದಕ್ಕುವುದಿಲ್ಲ. ಇಂಥ ಹಲವಾರು ಆತಂಕಗಳೊಂದಿಗೆ ಯಡಿಯೂರಪ್ಪನವರು ಸಮಗ್ರ ವರದಿಯನ್ನು ಹೈಕಮಾಂಡ್​ಗೆ ಸಲ್ಲಿಸಿದ್ದಾರೆ.
First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...