BS Yeddyurappa: ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಮೋಸವಾಗಲ್ಲ, ಅದಕ್ಕೆ ನಾನು ಅವಕಾಶ ನೀಡಲ್ಲ; ಬಿ.ಎಸ್. ಯಡಿಯೂರಪ್ಪ
ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ತಪ್ಪು ಗ್ರಹಿಕೆ ಒಳ್ಳೆಯದಲ್ಲ. ರೈತರಿಗೆ ತಾವು ಬೆಳೆದ ಉತ್ಪಾದನೆಗೆ ಹೆಚ್ಚು ಬೆಲೆ ದೊರಕಬೇಕು ಎಂಬ ಏಕೈಕ ಕಾರಣಕ್ಕೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಬಿಎಸ್ವೈ ತಿಳಿಸಿದ್ದಾರೆ.
ಬೆಂಗಳೂರು (ಮೇ 15); ಎಪಿಎಂಸಿ ಕಾಯ್ದೆ ಸಂಬಂಧ ಇಂದು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಆದರೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದರಿಂದ ಹೆಚ್ಚು ಲಾಭವಾಗಲಿದೆ. ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿ ಕೃಷಿ ಬಜೆಟ್ ಮಂಡಿಸಿದ ನಾನು ರೈತರಿಗೆ ಮೊಸ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಕರೆದು ಎಪಿಎಂಸಿ ಕಾಯ್ದೆ ಕುರಿತು ಮಾಹಿತಿ ನೀಡಿರುವ ಬಿಎಸ್ವೈ, "ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ತಪ್ಪು ಗ್ರಹಿಕೆ ಒಳ್ಳೆಯದಲ್ಲ. ರೈತರಿಗೆ ತಾವು ಬೆಳೆದ ಉತ್ಪಾದನೆಗೆ ಹೆಚ್ಚು ಬೆಲೆ ದೊರಕಬೇಕು ಎಂಬ ಏಕೈಕ ಕಾರಣಕ್ಕೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಅಥವಾ ಎಪಿಎಂಸಿ ಕಮಿಟಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದರಿಂದ ಖಾಸಗಿ ಕಂಪೆನಿಗಳಿಗೆ ಲಾಭವಾಗಲಿದೆ ಎಂಬ ವಿಚಾರದಲ್ಲಿ ಯಾವುದೇ ಹುರುಳಿಲ್ಲ.
ನಲವತ್ತು ವರ್ಷಗಳ ಹಿಂದೆಯೇ ನಾನು ಶಿಕಾರಿಪುರ ಎಪಿಎಂಸಿ ಎದುರು ರೈತರಿಗಾಗಿ ಸತ್ಯಾಗ್ರಹ ಹೋರಾಟ ನಡೆಸಿದವನು ನಾನು. ರೈತರ ಹೆಸರಲ್ಲಿ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಕೃಷಿಗಾಗಿ ಮೊದಲ ಬಜೆಟ್ ಮಂಡಿಸಿದ್ದೇನೆ ನಾನು ರೈತರಿಗೆ ಯಾವುದೇ ಕಾರಣಕ್ಕೂ ಅನ್ವಾಯವಾಗಲು ಬಿಡುವುದಿಲ್ಲ" ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ.