ಬೆಂಗಳೂರು (ಫೆ.29): ಮಹದಾಯಿ ಬಗ್ಗೆ ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಷನ್ ಬಂದ ಬೆನ್ನಲ್ಲೇ ಈ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತೀವ್ರ ಉತ್ಸುಕವಾಗಿದೆ. ಅಲ್ಲದೆ, ಮಹದಾಯಿ ಯೋಜನೆ ಜಾರಿಗೊಳಿಸಿದ ಸಂಪೂರ್ಣ ಕ್ರೆಡಿಟ್ ತಾವೇ ತಗೆದುಕೊಳ್ಳಬೇಕು ಎಂಬುದು ರಾಜ್ಯ ಬಿಜೆಪಿಯ ಲೆಕ್ಕಾಚಾರವಾಗಿದೆ.
ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು. ಇದರ ಅನ್ವಯ ಕರ್ನಾಟಕ ಮಹದಾಯಿ ನದಿಯಿಂದ 13.05 ಟಿಎಂಸಿ ನೀರು ಬಳಸಬಹುದಾಗಿದೆ. ಈಗ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದರ ಕ್ರೆಡಿಟ್ ಪಡೆದುಕೊಳ್ಳಲು ಮುಂದಾಗಿದೆ.
ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ ಬೆನ್ನಲ್ಲೇ ಉತ್ತರ ಕರ್ನಾಟಕ ಭಾಗವಾದ ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಬೃಹತ್ ರೈತ ಸಮಾವೇಶ ನಡೆಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಕಿಸಾನ್ ಸಮ್ಮಾನ್ ಯೋಜನೆ ವಿಚಾರವಾಗಿ ತುಮಕೂರಿನಲ್ಲಿ ನಡೆದ ಬೃಹತ್ ಸಮಾವೇಶದ ಮಾದರಿಯಲ್ಲೇ ಈ ಸಮಾವೇಶ ನಡೆಯಲಿದೆ.
2 ಲಕ್ಷಕ್ಕೂ ಅಧಿಕ ರೈತರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲು ತೀರ್ಮಾನ ಮಾಡಲಾಗಿದೆ. ಈ ಬೃಹತ್ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅತಿಥಿಯಾಗಿ ಕರೆ ತರಯವ ಆಲೋಚನೆಯೂ ರಾಜ್ಯ ಸರ್ಕಾರಕ್ಕಿದೆ. ಬಜೆಟ್ ಅಧಿವೇಶನ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿ ಹೈಕಮಾಂಡ್ನಿಂದ ಒಪ್ಪಿಗೆ ಪಡೆಯಲು ಬಿಎಸ್ವೈ ನಿರ್ಧರಿಸಿದ್ದಾರೆ.
ನುಡಿದಂತೆ ನಡೆದ ಬಿಎಸ್ವೈ:
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಹದಾಯಿ ಯೋಜನೆ ಜಾರಿಗೊಳಿಸಿಯೇ ತೀರುತ್ತೇವೆ ಎಂದು ಬಿಎಸ್ವೈ ಭರವಸೆ ನೀಡಿದ್ದರು. ಇದೀಗ ಸುಪ್ರೀಂಕೋರ್ಟ್ ಆದೇಶ ನೀಡಿದ ಒಂದು ವಾರದಲ್ಲಿ ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಪಿಕೇಷನ್ ಕೂಡ ಹೊರ ಬಿದ್ದಿದೆ. ಈ ಮೂಲಕ ಮೋದಿ ಸರ್ಕಾರ ರಾಜ್ಯದ ರೈತರ ಸಂಕಷ್ಟ ಆಲಿಸಿದೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ