ಪ್ರಧಾನಿ ನರೇಂದ್ರ ಮೋದಿ ಹಾದಿಯಲ್ಲಿ ಬಿಎಸ್​ವೈ; ವರ್ಷಗಳ ಸಮಸ್ಯೆಗೆ ಒಂದು ಇ-ಮೇಲ್​ನಿಂದ ಸಿಕ್ತು ಪರಿಹಾರ

ಚಾಮರಾಜನಗರದಲ್ಲಿ ಕಳೆದ ಹದಿನೈದು ವರ್ಷಗಳಿಂದ ಹದಗೆಟ್ಟು ಹೋಗಿರುವ ರಸ್ತೆಯ ದುರಸ್ತಿ ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ. ಅಲ್ಲದೆ, ಈ ಮೇಲ್​ಗೆ ಸರ್ಕಾರ ಸ್ಪಂದಿಸಿರುವುದಕ್ಕೆ ಗ್ರಾಮಸ್ಥರು ಖುಷಿಪಟ್ಟಿದ್ದಾರೆ.

Rajesh Duggumane | news18-kannada
Updated:November 17, 2019, 10:10 AM IST
ಪ್ರಧಾನಿ ನರೇಂದ್ರ ಮೋದಿ ಹಾದಿಯಲ್ಲಿ ಬಿಎಸ್​ವೈ; ವರ್ಷಗಳ ಸಮಸ್ಯೆಗೆ ಒಂದು ಇ-ಮೇಲ್​ನಿಂದ ಸಿಕ್ತು ಪರಿಹಾರ
ಇಮೇಲ್​ ಮಾಡಿ ದೂರು ನೀಡಿದ ಗಿರೀಶ್​ ಮತ್ತು ಹಾಳಾದ ರಸ್ತೆ
  • Share this:
ಚಾಮರಾಜನಗರ: ಜನಸಾಮಾನ್ಯರ  ಪತ್ರ, ಟ್ವೀಟ್, ಇಮೇಲ್​ಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಕಾರಾತ್ಮಕವಾಗಿ ಸ್ಪಂದಿಸುವ ರೀತಿಯಲ್ಲೇ ಸಿಎಂ ಬಿಎಸ್​ವೈ ಅವರ ಕಚೇರಿ ಕೂಡ ಕಾರ್ಯನಿರ್ವಹಿಸುತ್ತಿದೆ. ತಮ್ಮೂರಿನ ರಸ್ತೆ ದುಸ್ಥಿತಿ ಕುರಿತು ಚಾಮರಾಜನಗರ ಜಿಲ್ಲೆಯ ಗ್ರಾಮಸ್ಥರೊಬ್ಬರು ಮಾಡಿದ ಇ ಮೇಲ್​ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಸ್ತೆ ರಿಪೇರಿ ಮಾಡಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ವೀರನಪುರ-ಹರವೆ-ಹೆಗ್ಗವಾಡಿ ರಸ್ತೆ ಹಾಳಾಗಿತ್ತು. ಮಲೆಯೂರು, ಕೆರೆಹಳ್ಳಿ ಮೂಲಕ ಹಾದು ಹೋಗುವ ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಸುಮಾರು 22 ಕಿಲೋಮೀಟರ್ ಉದ್ದವಿರುವ ಈ ರಸ್ತೆ ಹಲವಾರು ವರ್ಷಗಳಿಂದ ಗುಂಡಿಬಿದ್ದು ಹದಗೆಟ್ಟು ಹೋಗಿದೆ. ಗುಂಡಿಗಳೇ ತುಂಬಿರುವ ಈ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಈ ಭಾಗದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.

ರಸ್ತೆ ದುರಸ್ತಿಪಡಿಸುವಂತೆ ಈ ಭಾಗದ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಮಲೆಯೂರು ಗ್ರಾಮಸ್ಥ ಗಿರೀಶ್ ಎಂಬವರು ರಸ್ತೆ ದುರಾವಸ್ಥೆ ಬಗ್ಗೆ ಫೋಟೋಗಳನ್ನು ತೆಗದು ಮುಖ್ಯಮಂತ್ರಿಗಳಿಗೆ ಇಮೇಲ್ ಮಾಡಿ ರಸ್ತೆ ದುರಸ್ತಿಗೆ ಮನವಿ ಮಾಡಿದ್ದರು. ಗಿರೀಶ್ ಅವರ ಇ ಮೇಲ್​ಗೆ ತಕ್ಷಣ ಸ್ಪಂದಿಸಿರುವ ಸಿಎಂ ಕಚೇರಿ, ವೀರನಪುರ-ಹರವೆ-ಹೆಗ್ಗವಾಡಿ ರಸ್ತೆ ದುರಸ್ತಿಪಡಿಸಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದೆ.

ಕಳೆದ ಹದಿನೈದು ವರ್ಷಗಳಿಂದ ಹದಗೆಟ್ಟು ಹೋಗಿರುವ ಈ ರಸ್ತೆಯ ದುರಸ್ತಿ ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ. ಅಲ್ಲದೆ, ಈ ಮೇಲ್​ಗೆ ಸರ್ಕಾರ ಸ್ಪಂದಿಸಿರುವುದಕ್ಕೆ ಗ್ರಾಮಸ್ಥರು ಖುಷಿಪಟ್ಟಿದ್ದಾರೆ.

(ವರದಿ: ಎಸ್.ಎಂ ನಂದೀಶ್)

First published:November 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ