ಸೋದರ ಮಾವನ ಮಗನೇ ಗಂಡನಾಡ ಖುಷಿ.. ಆದರೆ ಮದುವೆ ಮರುದಿನವೇ ಹೆಣವಾದ ನವವಿವಾಹಿತೆ!

ರಾಣಿ ಅವರನ್ನು ಜುಲೈ 1 ರಂದು ಸೋದರ ಮಾವನ ಮಗನಾದ ಗಣೇಶ ಚೌಹಾಣ್​ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಹೊಸ ಜೀವನದ ಕನಸು ‌ಕಂಡಿದ್ದ ಆಕೆ ನಡು ಬೀದಿಯಲ್ಲಿ ಹೆಣವಾಗಿದ್ದಾರೆ. ‌

ಗಣೇಶ್​-ರಾಣಿ ಮದುವೆ ಫೋಟೋ

ಗಣೇಶ್​-ರಾಣಿ ಮದುವೆ ಫೋಟೋ

  • Share this:
    ವಿಜಯಪುರ: ಆ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಬಂಧು-ಬಳಗದ ಸೇರಿ ಪುತ್ರಿಯ ವಿವಾಹವನ್ನು ತಮ್ಮ ತೋಟದ ಮನೆಯಲ್ಲಿ ಮಾಡಿದ್ದರು‌.‌‌ ನಿನ್ನೆ ಮದುವೆ ಮುಗಿದ ಬಳಿಕ ಇಂದು ದೇವರ ದರ್ಶನ ಮಾಡಲು ನಸುಕಿನ ಜಾವ ಮನೆಯಿಂದ ನವ ದಂಪತಿ ಸಮೇತರಾಗಿ ಹೊರಟಿದ್ದರು. ಕುಟುಂಬಸ್ಥರು, ಸಂಬಂಧಿಗಳ ಜೊತೆ ದೇವರ ದರ್ಶನ ‌ಮಾಡಿ‌ ಜೀವನದಲ್ಲಿ ಎಲ್ಲವೂ ಒಳೆಯದಾಗಲಿ ಎಂದು ಪೂಜೆ ಸಲ್ಲಿಸುವವರಿದ್ದರು. ಆದರೆ ವಿಧಿಯಾಟ ದೇವಸ್ಥಾನ ತಲುಪುವ ಮೊದಲೇ ಆ ಕುಟುಂಬಕ್ಕೆ ಆಘಾತ ಕೊಟ್ಟಿದೆ.  

    ದಾರಿಯಲ್ಲಿ ಜನರಾಯನ ಅಟ್ಟಹಾಸಕ್ಕೆ ನವ ವಿವಾಹಿತೆ ರಾಣಿ(26) ಬಲಿಯಾಗಿದ್ದಾರೆ.‌ ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿಯ‌ 50ರ ಯರಗಲ್ ಬಿ.ಕೆ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಕ್ರೂಜರ್ ವಾಹನ‌ ಹಾಗೂ ಗೋಡ್ಸ್ ಟೆಂಪೋ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಟೆಂಪೋ‌ ಡಿಕ್ಕಿಯಾದ ಬಳಿಕ ರಸ್ತೆ ಪಕ್ಕದಲ್ಲಿ ಕ್ರೋಜರ್ ವಾಹನ ಪಲ್ಟಿಯಾಗಿದ್ದು ರಾಣಿ ಸ್ಥಳದಲ್ಲೇ ಸಾವನಪ್ಪಿದ್ದಾಳೆ. ಘಟನೆಯಲ್ಲಿ ರಾಣಿ ಪತಿ ಗಣೇಶ್​ಗೆ ಗಾಯಗಳಾಗಿದೆ. ವಾಹನದಲ್ಲಿ ಅಜಯ ಕುಮಾರ, ವಿಜಯ ಕುಸಳಿ, ರೇಣುಕಾ ಹಾಗೂ 6 ವರ್ಷದ ಆರುಶ್ ಎಂಬುವರಿಗೆ ಗಾಯಗಳಾಗಿದ್ದು, ಉಳಿದವರು ಬಚಾವ್ ಆಗಿದ್ದಾರೆ‌. ಗಾಯಾಳುಗಳನ್ನು ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮದುಮಗಳ ಪ್ರಾಣ ಪಕ್ಷಿ ಹಾರಿಹೋಗಿದೆ. ಮದುವೆಯಾಗಿ ಹೊಸ ಜೀವನದ ಕನಸು ‌ಕಂಡಿದ್ದ ಆಕೆ ನಡು ಬೀದಿಯಲ್ಲಿ ಹೆಣವಾಗಿದ್ದಾರೆ. ಸಾವಿರಾರು ಕನಸು ಕಂಡಿದ್ದ ಶಾಬಾದ ಪಟ್ಟಣದ ನಿವಾಸಿ ರಾಣಿ ಅವರನ್ನು ಜುಲೈ 1 ರಂದು ಸೋದರ ಮಾವನ ಮಗನಾದ ಗಣೇಶ ಚೌಹಾಣ್​ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಶಾಬಾದಾ ಪಟ್ಟಣದಲ್ಲಿ ತಮ್ಮ ತೋಟದ ಮನೆಯ ಆವರಣದಲ್ಲಿ ರಾಣಿ ಮದುವೆಯನ್ನು ಸರಳವಾಗಿ ಮಾಡಲಾಗಿತ್ತು. ಬಡತನವಿದ್ದರೂ ಮಗಳ ಮದುವೆಗೆ ಯಾವುದೇ ಅಡ್ಡಿಯಾಗಬಾರದು ಎಂದು ಆಕೆ ಕುಟುಂಬಸ್ಥರು ಸಂಬಂಧಿಗಳು ಸರಳವಾಗಿ ಸಂತೋಷದಿಂದ‌ ವಿವಾಹ ಮಾಡಿಕೊಟ್ಟಿದ್ದರು. ಆದರೆ ಇಂದು ಆ ಕುಟುಂಬ ಸಾವಿನ ಸೂತಕದಲ್ಲಿದೆ.

    ಇದನ್ನೂ ಓದಿ: ಡಾಕ್ಟರ್ಸ್ ಡೇಯಂದೇ ವೈದ್ಯ ದಂಪತಿ ಸಾವು: ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ!

    ಇಂದು ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಶಾಬಾದ ಪಟ್ಟಣದಿಂದ ರಾಣಿ ಚೌಹಾಣ್, ಆಕೆಯೆ ಪತಿ ಗಣೇಶ ಹಾಗೂ ಐದು ಜನ ಸಂಬಂಧಿಗಳು ಸೇರಿ ಏಳು ಜನ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮಕ್ಕೆ ಆಗಮಿಸುತ್ತಿದ್ದರು. ಕೊಕಟನೂರ ಗ್ರಾಮದಲ್ಲಿರುವ ಎಲ್ಲಮ್ಮ ದೇವಸ್ಥಾನ ಇವರ ಮನೆ ದೇವರಾಗಿದ್ದ ಕಾರಣ ದರ್ಶನಕ್ಕೆ ಬರುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಭೀಕರ ಅಪಘಾತ.

    ರಾಣಿ ಕುಟುಂಬಸ್ಥರು ಕಲ್ಲಿನ ಗಣಿಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಕಡು ಬಡತನದಲ್ಲೂ ಮಗಳಿಗೆ ಉತ್ತಮ ಶಿಕ್ಷಣ ನೀಡಿ ಸೋದರ ಮಾವನ ಜೊತೆಗೆ ಮದುವೆ ಮಾಡಿದ್ದಾರೆ. ಪುಣೆಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗಣೇಶ ರಾಣಿಯನ್ನು ಮದುವೆಯಾಗಿ ಇಂದು ದೇವರ ದರ್ಶನ ಮಾಡಿ ನಾಳೆ ಪೂಣೆಗೆ ಕರೆದುಕೊಂಡು ಹೋಗುವವರಿದ್ದರು. ಅದರೆ ವಿಧಿಯಾಟ ಎಲ್ಲವೂ ಆರಂಭದಲ್ಲೇ ಅಂತ್ಯವಾಗಿದೆ. ಮದುವೆಯಾಗಿ ಗಂಡನ ಮನೆ ಸೇರಬೇಕಿದ್ದ ರಾಣಿ ಮಸಣ ಸೇರಿದ್ದಾಳೆ. ಸಂಭ್ರಮದ ಮನೆಯಲ್ಲಿ ಸೂತಕ‌ ಮೂಡಿದೆ. ಘಟನಾ ಸ್ಥಳಕ್ಕೆ ಸಿಂದಗಿ ಪಿಎಸ್ಐ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

    ವರದಿ: ಗುರುರಾಜ್ ಗದ್ದನಕೇರಿ
    Published by:Kavya V
    First published: