HD Kumaraswamya: ಹಿಂದುತ್ವದ ಮೂಲಕವೇ ಬಿಜೆಪಿಗೆ ಹೆಚ್​ಡಿಕೆ ಟಕ್ಕರ್​

ಇಂದಿನಿಂದ ಕಳಸಕ್ಕೆ ಮುಂದಿನ ಒಂದು ವರ್ಷ ಕಾಲ ಸಂಪ್ರದಾಯದಂತೆ ನಿತ್ಯ ಗಂಗಾಪೂಜೆ ಮಾಡಲಾಗುತ್ತದೆ ಎಂದು ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

JDS ಕಚೇರಿಯಲ್ಲಿ ಪೂಜೆ

JDS ಕಚೇರಿಯಲ್ಲಿ ಪೂಜೆ

  • Share this:
    ಬೆಂಗಳೂರು (ಮೇ 26): ಹಿಂದುತ್ವದ ಅಜೆಂಡಾ ಇಟ್ಟುಕೊಂಡು ವಿಧಾನಸಭಾ ಚುನಾವಣೆ (Assembly Election) ಎದುರಿಸಲು ಮುಂದಾಗಿರುವ ರಾಜ್ಯ ಬಿಜೆಪಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (H.D Kumaraswamy) ಅವರು ಹಿಂದುತ್ವದ ಮೂಲಕವೇ ಟಕ್ಕರ್ ಕೊಡಲು ಮುಂದಾಗಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇವತ್ತು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಜನತಾ ಜಲಧಾರೆ (Janata Jaladhare) ಗಂಗಾ ರಥಯಾತ್ರೆ ಹಿನ್ನೆಲೆಯಲ್ಲಿ ರಾಜ್ಯದ ನದಿಗಳು ಹಾಗೂ ಉಪ ನದಿಗಳಿಂದ ಸಂಗ್ರಹಿಸಿದ್ದ ಗಂಗಾ ಜಲದ ಕಳಸ ಕಾರ್ಯಕ್ರಮ ರಾಜ್ಯ ಜೆಡಿಎಸ್ ಕಚೇರಿ (JDS Office) ಜೆಪಿ ಭವನದಲ್ಲಿ ನಡೆದಿದ್ದು, ಆ ಮೂಲಕ ಬಿಜೆಪಿಯ ಹಿಂದುತ್ವಕ್ಕೆ ತಿರುಗೇಟು ಕೊಡಲು ಕುಮಾರಸ್ವಾಮಿ ಸಿದ್ಧರಾಗಿದ್ದಾರೆ.

     ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧತೆ

    ಹಿಂದುತ್ವದ ಅಜೆಂಡಾದ ಮೇಲೆಯೇ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಅದಕ್ಕೆ ಸಾಫ್ಟ್ ಹಿಂದುತ್ವದ ಮೂಲಕ ತಿರುಗೇಟು ಕೊಡಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಅದಕ್ಕೆ ಇವತ್ತು ರಾಜ್ಯ ಜೆಡಿಎಸ್ ಕಚೇರಿಯಲ್ಲಿ ನಡೆದ ಬ್ರಹ್ಮ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮವೇ ಸಾಕ್ಷಿ. ಹೋಮ-ಹವನ-ಪೂಜೆಯ ಮೂಲಕವೇ ಬಿಜೆಪಿಯ ಹಿಂದುತ್ವದ ಅಜೆಂಡಾ ಎದುರಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ.

    ಜೆಡಿಎಸ್‍ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಪಂಡಿತ ಡಾ. ಭಾನುಪ್ರಕಾಶ್ ಶರ್ಮ ನೇತೃತ್ವದ ಪಂಡಿತರ ತಂಡ ಪೂಜೆ ಮಾಡುವ ಬ್ರಹ್ಮ ಕಳಸವನ್ನು ಪ್ರತಿಷ್ಠಾಪನೆ ಮಾಡಿತು. 10 ಅಡಿಯ ಎತ್ತರದ 500 ಲೀಟರ್ ಜಲ ತುಂಬಲಿರುವ ಕಳಸವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಜೊತೆಗೆ ಗಣ ಹೋಮ, ನವಗ್ರಹ ಹೋಮ, ಗಂಗಾ ಪೂಜೆ, ಪರ್ಜನ್ಯ ಹೋಮ, ಪೂರ್ಣಾಹುತಿಯನ್ನು ಕೂಡ ಮಾಡಲಾಗಿದೆ. ಹೋಮ-ಹವನ-ಪೂಜೆ ಈ ಎಲ್ಲವೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನಡೆದಿದ್ದು ವಿಶೇಷವಾಗಿತ್ತು.

    ಇದನ್ನೂ ಓದಿ: DK Shivakumar Tweet: ಬಿಜೆಪಿ ಪಕ್ಷಕ್ಕೆ ಸೇರುವಂತೆ ಒತ್ತಡ; ಒಪ್ಪದಿದ್ದಕ್ಕೆ ನನ್ನ ಮೇಲೆ ಬೀಳ್ತಿವೆ ಕೇಸ್

    ಮುಂದಿನ ಒಂದು ವರ್ಷ ಪೂಜೆ

    ದೇಶದ ಏಳು ಮಹಾನದಿಗಳ ಹೆಸರಿನಲ್ಲಿ ಇಡಲಾಗಿದ್ದ  ಹದಿನೈದು ಪುಟ್ಟ ಕಳಸಗಳಿಗೆ ಕುಮಾರಸ್ವಾಮಿ ಅವರು  ಶಾಸ್ತ್ರಬದ್ಧವಾಗಿ ಪೂಜೆ, ವಿಧಿ ವಿಧಾನ ನೆರವೇರಿಸಿದರು. ನಂತರ ಮೇಲೆ ಬ್ರಹ್ಮಕಳಸ ಪ್ರತಿಷ್ಠಾಪನೆ ಮಾಡಿ, ರಾಜ್ಯದ ನದಿಗಳಿಂದ ಸಂಗ್ರಹಿಸಿದ್ದ  ಜಲವನ್ನು ಅದಕ್ಕೆ ತುಂಬಿಸಲಾಯಿತು. ಇಂದಿನಿಂದ ಕಳಸಕ್ಕೆ ಮುಂದಿನ ಒಂದು ವರ್ಷ ಕಾಲ ಸಂಪ್ರದಾಯದಂತೆ ನಿತ್ಯ ಗಂಗಾಪೂಜೆ ಮಾಡಲಾಗುತ್ತದೆ ಎಂದು ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

    ನೀರಾವರಿ ಯೋಜನೆ ಜಾರಿಗೆ ಸಂಕಲ್ಪ

    ಜನತಾ ಜಲಧಾರೆ ಹಾಗೂ ಬ್ರಹ್ಮ ಕಳಸ ಪ್ರತಿಷ್ಠಾಪನೆ ವೇಳೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಹಾಗೂ ಎಲ್ಲ ಜಿಲ್ಲೆಗಳಿಗೂ ಸಮಗ್ರ ನೀರಾವರಿ ಕಲಿಸುವ ಸಂಕಲ್ಪ ಮಾಡಲಾಯಿತು. ಅದಕ್ಕೆ ಶಕ್ತಿ ಕೊಡು ತಾಯಿ ಎಂದು ಗಂಗಾ ಮಾತೆಯನ್ನು ಪ್ರಾರ್ಥನೆ ಮಾಡಿಕೊಂದಿದ್ದೇನೆ. ಐದು ವರ್ಷಗಳ ಪೂರ್ಣ ಪ್ರಮಾಣದ ಸ್ವತಂತ್ರ ಸರಕಾರ ನೀಡಿದರೆ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಇದರ ಜತೆಗೆ, ಸರ್ವ ಜನರ ಹಿತಕ್ಕಾಗಿ ರೂಪಿಸಲಾಗಿರುವ ಪಂಚರತ್ನ ಕಾರ್ಯಕ್ರಮಗಳ ಜಾರಿಗೂ ಶಕ್ತಿ ಕೊಡು ತಾಯಿ ಎಂದು ಗಂಗಾ ಮಾತೆಯವರಲ್ಲಿ ಬೇಡಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

    ವಿಶೇಷ ಮಂಟಪ ಹಾಗೂ ಬ್ರಹ್ಮ ಕಳಸ

    ಕಳಸ ಪ್ರತಿಷ್ಠಾಪನೆ ಮಾಡಿರುವ ಮಂಟಪವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಕರ್ನಾಟಕದ ಪರಂಪರೆಯನ್ನು ಬಿಂಬಿಸುವ ವಾಸ್ತುಶಿಲ್ಪ ಉಳ್ಳ ಮಂಟಪ ವಿಶೇಷ ಆಕರ್ಷಣೆಯಾಗಿದೆ. ಇಡೀ ಮಂಟಪವನ್ನು ಆವರಣ ಮಂಟಪ ಕಲಾ ಆರ್ಟ್​ನ ಕಲಾವಿದರು ಸಿದ್ಧಪಡಿಸಿದ್ದಾರೆ. ಈ ಮಂಟಪದಲ್ಲಿ ನಿರಂತರವಾಗಿ ಜಪ, ಮಂತ್ರ, ಮಂಗಳ ನಾದದ ವ್ಯವಸ್ಥೆ ಮಾಡಲಾಗಿದೆ.

    ಇದನ್ನೂ ಓದಿ: H.D Devegowda: ಬೆಂಗಳೂರಲ್ಲಿ ಕೆಸಿಆರ್-ಹೆಚ್​ಡಿಡಿ ಭೇಟಿ, ತೃತೀಯ ರಂಗ ಬಲಪಡಿಸುವ ಕುರಿತು ಮಾತುಕತೆ

    ನೀರು ಶುದ್ಧೀಕರಣಕ್ಕೆ ವಿಶೇಷ ವ್ಯವಸ್ಥೆ

    ಪವಿತ್ರ ಗಂಗಾಜಲವು ಸುಮಾರು ಒಂದು ವರ್ಷ ಕಾಲ ಈ  ಕಳಸದಲ್ಲಿ ಇರಲಿದೆ. ನೀರು ಕೆಡದಂತೆ ನೋಡಿಕೊಳ್ಳಲು ವಿಶೇಷ ಯುವಿ - ಓಜೋನೈಶನ್ ವ್ಯವಸ್ಥೆ ಮಾಡಲಾಗಿದೆ. ಇದು ಆಮ್ಲಜನಕಯುಕ್ತ ಆಗಿರುತ್ತದೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.

    ವರದಿ: ಅನಿಲ್ ಬಾಸೂರ್
    Published by:Pavana HS
    First published: