ಕೊಪ್ಪಳ(ಜ.28): ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ಕಿ ಅಕ್ರಮದ ಕಳ್ಳರಷ್ಟೇ ಅಲ್ಲ, ರೇಷನ್ ಅಕ್ಕಿ ಮಾರಿಕೊಳ್ಳುತ್ತಿರುವ ಪಡಿತರ ಚೀಟಿಯ ಫಲಾನುಭವಿಗಳು ಸಹ ಅಷ್ಟೇ ಪಾಲುದಾರರು. ಅವರ ವಿರುದ್ಧವೂ ಕ್ರಮ ಅಗತ್ಯ ಎಂದು ಮನಗಂಡಿರುವ ಜಿಲ್ಲಾಡಳಿತ ಅದಕ್ಕೂ ಪ್ಲ್ಯಾನ್ ರೆಡಿ ಮಾಡಿಕೊಂಡಿದೆ. ಈಗಾಗಲೇ ಸರಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ಕಾರ್ಡ್ ಬಡತನ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ಕಾರ್ಡ್ ವಿತರಿಸಿ ಫಲಾನುಭವಿಗಳ ಪಟ್ಟಿ ತಯಾರಿಸಿದೆ. ಎಪಿಎಲ್ ಕಾರ್ಡುದಾರರು ಹಣ ನೀಡಿ ಪಡಿತರ ಕೊಳ್ಳಬೇಕು. ಬಿಪಿಎಲ್ ಕಾರ್ಡ್ನವರಿಗೆ ಉಚಿತವಾಗಿ ಅಕ್ಕಿ, ಬೇಳೆ ಕೊಡಲಾಗುತ್ತೆ. ಲಾಕ್ಡೌನ್ ಸಮಯದಲ್ಲಿ ಗರೀಬ್ ಕಲ್ಯಾಣ ಯೋಜನೆ ಜಾರಿಗೆ ತಂದು ಅಕ್ಕಿ, ಬೇಳೆ ಜೊತೆಗೆ ಗೋಧಿಯನ್ನು ಕೊಡಲಾಗಿದೆ. ಬಹುತೇಕ ಬಿಪಿಎಲ್ ಕಾರ್ಡುದಾರರು ಸರಕಾರದಿಂದ ಉಚಿತವಾಗಿ ಪಡೆದ ಪಡಿತರವನ್ನು ಹಣಕ್ಕೆ ಮಾರಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ.
ಇದು ಮೊದಲಿನಿಂದಲೂ ಇದೆ. ಈಗಲೂ ಇದೆ. ಆದರೆ ಈಗ ಬಿಸಿ ಮುಟ್ಟಿ ಕೊಂಚ ಬಿಗಿಯಾಗಿದೆ. ಅಕ್ಕಿಯನ್ನು ಅಕ್ರಮವಾಗಿ ಖರೀದಿ ಮಾಡಿ, ಅದನ್ನು ಪಾಲಿಶ್ಗೊಳಿಸಿ ಬೇರೆ ಬೇರೆ ರಾಜ್ಯ, ದೇಶಗಳಿಗೆ ರಫ್ತು ಮಾಡುವವರ ತಪ್ಪು ಎಷ್ಟಿದೆಯೋ, ಅಂಥ ಕಳ್ಳರಿಗೆ ಸರಕಾರದ ಸದುದ್ದೇಶದ ಅಕ್ಕಿಯನ್ನು ಮಾರಾಟ ಮಾಡಿಕೊಳ್ಳುವುದು ಸಹ ಅದಕ್ಕಿಂತ ದೊಡ್ಡ ತಪ್ಪು.
ರೇಷನ್ ಕಾರ್ಡ್ ರದ್ದು
ಗಂಗಾವತಿಯಲ್ಲಿ ಈಚೆಗೆ ದೊರೆತ ಅಕ್ಕಿಯನ್ನು ಪಾಲಿಶ್ ಮಾಡಿ ಬೇರೆಡೆ ಕಳಿಸಲು ಅಣಿಯಾಗುತ್ತಿರುವ ದಾಳಿ ನಡೆಸಿದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಮುಖ್ಯವಾಗಿ ಕಳ್ಳರಿಗೆ ಅಕ್ಕಿಯನ್ನೇ ಮಾರಾಟ ಮಾಡದಿದ್ದರೆ, ಅಕ್ಕಿ ಮಾರಾಟ ಮಾಡುವವರನ್ನೇ ಬಿಗಿ ಮಾಡಿದರೆ..? ಎಂಬ ಚಿಂತನೆ ಜಿಲ್ಲಾಡಳಿತದ ತಲೆ ಹೊಕ್ಕಿದೆ. ಹಾಗಾಗಿ ಇನ್ನು ಮುಂದೆ ಅಕ್ಕಿ ಅಕ್ರಮ ಪತ್ತೆಯಾದರೆ ಸಿಕ್ಕಿರುವ ಅಕ್ಕಿಯನ್ನು ಯಾರು? ಎಷ್ಟು? ಮಾರಿಕೊಂಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು, ಬಿಪಿಎಲ್ ಪಡಿತರದಾರರು ಅಕ್ಕಿ ಮಾರಾಟ ಮಾಡಿಕೊಂಡಿರುವುದು ದೃಢಪಟ್ಟರೆ ಅಂಥವರ ಕಾರ್ಡ್ನ್ನು ಶಾಶ್ವತವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ.
30 ಕೆ.ಜಿ ಕಿತ್ತಳೆ ಹಣ್ಣನ್ನು ಅರ್ಧ ಗಂಟೆಯಲ್ಲೇ ತಿಂದು ಮುಗಿಸಿದ ನಾಲ್ವರು; ಕಾರಣ ಕೇಳಿದ್ರೆ ನಗೋದು ಗ್ಯಾರಂಟಿ..!
ಕಾರಟಗಿ, ಕನಕಗಿರಿಯಲ್ಲೂ ಅಕ್ರಮ
ಅಕ್ಕಿ ಅಕ್ರಮ ನಡೆಯುತ್ತಿರುವುದು ಕೇವಲ ಗಂಗಾವತಿ ಮಾತ್ರವಲ್ಲ. ಕೊಪ್ಪಳ, ಗೊಂಡಬಾಳದಲ್ಲೂ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿರುವುದು ಹಿಂದಿನ ಹಲವು ಪ್ರಕರಣಗಳಲ್ಲಿ ದೃಢಪಟ್ಟಿದೆ. ಕೆಲ ಮೂಲಗಳ ಪ್ರಕಾರ ಅದಿನ್ನೂ ನಿಂತಿಲ್ಲ. ಹಾಗೆಯೇ ಕಾರಟಗಿ, ಕನಕಗಿರಿ ಭಾಗದಲ್ಲಿ ನ್ಯಾಯಬೆಲೆ ಮಾಲಕರು ಫಲಾಭವಿಗಳ ಕಾರ್ಡ್ನಲ್ಲಿ ಎಂಟ್ರಿ ಮಾಡಿದ ಪ್ರತಿ ಕೆಜಿ ಅಕ್ಕಿಗೆ 11-12 ರೂ.ಯಂತೆ ಲೆಕ್ಕ ಹಾಕಿ ಫಲಾನುಭವಿಗಳಿಗೆ ಹಣ ಕೊಟ್ಟು ಪಡಿತರವನ್ನು ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ. ಆನಂತರ ದೊಡ್ಡ ದೊಡ್ಡ ರೈಸ್ ಮಿಲ್ಗಳ ಗೋದಾಮುಗಳಿಗೆ ಅವುಗಳನ್ನು ಸಾಗಿಸುತ್ತಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಪಡಿತರ ಅಕ್ರಮದ ಬಗ್ಗೆ ಮೊದಲಿನಿಂದಲೂ ಸಾಕಷ್ಟು ದೂರುಗಳಿವೆ. ಗಂಗಾವತಿ ಪ್ರಕರಣದಿಂದ ಅಕ್ಕಿ ಅಕ್ರಮ ಕೊಂಚ ತಗ್ಗಿದೆ. ಎಂಥ ಒತ್ತಡ ಬಂದರೂ ಅಕ್ರಮಕ್ಕೆ ಕಡಿವಾಣ ಖಚಿತ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ