Governor: ಬಿಪಿಎಲ್​​ ಫಲಾನುಭವಿಗಳಿಗೆ ಏಪ್ರಿಲ್ 1ರಿಂದ ಪ್ರತಿ ಕುಟುಂಬಕ್ಕೆ 1 ಕೆಜಿ ಹೆಚ್ಚುವರಿ ಪಡಿತರ ಅಕ್ಕಿ

ಪ್ರಸ್ತುತ ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಏಪ್ರಿಲ್ 1ರಿಂದ ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿಯನ್ನು ನೀಡಲಾಗುವುದು

ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್

ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್

  • Share this:
ಬೆಂಗಳೂರು (ಫೆ.14): ಬಡತನರೇಖೆಗಿಂತ ಕೆಳಗಿರುವ (BPL) ಪಡಿತರಚೀಟಿ (Ration card) ಹೊಂದಿದ ಪ್ರತಿ ಕುಟುಂಬಕ್ಕೆ ಈಗಾಗಲೇ 5 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ಹಂಚಲಾಗುತ್ತಿದೆ. ಇದೀಗ 1 ಕೆ.ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಲಾಗುವುದು.  ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ (Joint Session) ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್, ಪ್ರಸ್ತುತ ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಇನ್ನು ಮುಂದೆ ಹೆಚ್ಚುವರಿಯಾಗಿ ಒಂದು ಕೆಜಿ ನೀಡಲಾಗುವುದು ಎಂದು ತಿಳಿಸಿದರು. ಏಪ್ರಿಲ್ 1ರಿಂದ ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದ್ರು. ರಾಜ್ಯದಲ್ಲಿ ನೀರಾವರಿ ಕ್ರಾಂತಿ ಮಾಡಲು 1500 ಕೋಟಿ ರೂ. ವೆಚ್ಚದಲ್ಲಿ 55 ಅಣೆಕಟ್ಟುಗಳನ್ನು ಪುನಶ್ವೇತನಗೊಳಿಸಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದ ಎಲ್ಲ ಗ್ರಾಮಗಳ ಜನರಿಗೆ ನಲ್ಲಿ ನೀರು ಒದಗಿಸುವುದಾಗಿ ಘೋಷಿಸಿದೆ. ಕೊರೊನಾ ಸಂಕಟದ ನಡುವೆಯೂ ತಮ್ಮ ಸರ್ಕಾರ ಗುರುತರ ಸಾಧನೆ ಮಾಡಿದೆ ಎಂದು ಸಮರ್ಥಿಸಿಕೊಂಡರು.

ಕರ್ನಾಟಕ ಪ್ರಪ್ರಥಮವಾಗಿ ರಾಷ್ಟ್ರೀಯ ಶಿಕ್ಷಣ ನೀತಿ

ರಾಷ್ಟ್ರದಲ್ಲೇ ಕರ್ನಾಟಕ ಪ್ರಪ್ರಥಮವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ.ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಮಗ್ರ ವಿವಿ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ವಿದೇಶದಲ್ಲಿರುವ ದೇಶಿ ಸಂಜಾತರ ಜ್ಞಾನವನ್ನು ಸ್ವದೇಶದಲ್ಲಿ ಬಳಸಿಕೊಳ್ಳಲು ಮರಳಿ ತಾಯ್ನಾಡಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಸೂಕ್ತ ನೀತಿ ರಚನೆ ಮತ್ತು ಅನುದಾನ ಬಿಡುಗಡೆ ಮಾಡುವ ಆಶ್ವಾಸನೆಯನ್ನು ನೀಡಿದರು.

ತಮ್ಮ 30 ಪುಟಗಳ ಭಾಷಣದಲ್ಲಿ ಯಾವುದೇ ಹೊಸ ಯೋಜನೆಗಳನ್ನಾಗಿ ಅಥವಾ ಕಾರ್ಯಕ್ರಮಗಳನ್ನು ಘೋಷಣೆ ಮಾಡದ ರಾಜ್ಯಪಾಲರು, ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆಗಾಗಿ ನಡೆಸಿದ ಹೋರಾಟ ಹಾಗೂ ಜಾರಿಗೆ ತಂದಿರುವ ಕಾರ್ಯಕ್ರಮಗಳ ಅನುಷ್ಠಾನ ಹೊರತುಪಡಿಸಿದರೆ ಸರ್ಕಾರದ ಮುಂದುವರೆದ ಕಾರ್ಯಕ್ರಮಗಳನ್ನು ಮಾತ್ರ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: CM Meeting: ಸರ್ಕಾರಿ ಸೇವೆಗೆ ಅಲೆದಾಡುವ ಅಗತ್ಯವಿಲ್ಲ, ಗ್ರಾಮ ಒನ್ ಕೇಂದ್ರಗಳಲ್ಲಿ ಬಿಪಿಎಲ್, ಎಪಿಎಲ್​ ಕಾರ್ಡ್​ ವಿತರಣೆ

‘ಕೋವಿಡ್ ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆಯಿದೆ’

ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾದ ಹಿನ್ನೆಲೆಯಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೋವಿಡ್ ರೋಗವು ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆಯಿದೆ. ಸರ್ಕಾರ ಇದನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಇದೇ ರೀತಿ ನಾವು ಯಶಸ್ಸು ಕಾಣುತ್ತೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸರ್ಕಾರ ಮುಂದಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಹೆಚ್ಚಳ, ದೇಶವು ಎರಡು ಲಸಿಕೆಗಳನ್ನು ಉತ್ಪಾದಿಸಿ ಬೇರೆ ದೇಶಗಳಿಗೂ ರಫ್ತು ಮಾಡುವಲ್ಲಿ ಯಶಸ್ವಿಯಾಗಿದೆ ಜೊತೆಗೆ ಪ್ರತಿಯೊಬ್ಬರಿಗೂ ಹಂತ ಹಂತವಾಗಿ ತಲುಪುವಂತೆ ನೋಡಿಕೊಂಡಿದ್ದು, ಕೇಂದ್ರ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದರು.

ಇದನ್ನೂ ಓದಿ: BPL ಕುಟುಂಬಗಳಲ್ಲಿ ಯಾರೇ ಕೊರೊನಾದಿಂದ ಮೃತಪಟ್ಟಿದ್ದರೂ ₹1 ಲಕ್ಷ ಪರಿಹಾರ: ಸರ್ಕಾರದ ಹೊಸ ಆದೇಶ

ಕೊರೊನಾ ನಿಯಂತ್ರಣಕ್ಕೆ ಹಲವು ಕ್ರಮ

ರಾಜ್ಯದಲ್ಲಿ ಕೋವಿಡ್ 19 ಲಸಿಕೆ ಕಾರ್ಯಕ್ರಮ ಸಮತೋಲನದಲ್ಲಿ ನಡೆಯುತ್ತಿದೆ. ಪ್ರತಿದಿನ 6 ಸಾವಿರ ಲಸಿಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ಈವರೆಗೂ 9.3 ಕೋಟಿ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಒಟ್ಟು ಜನಸಂಖ್ಯೆಯ ಮೊದಲ ಡೋಸ್ ಹಾಗೂ ಶೇ.85ರಷ್ಟು ಜನರಿಗೆ 2ನೇ ಹಂತದ ಡೋಸ್ ನೀಡಲಾಗಿದೆ ಎಂದರು.

ದೇಶದಲ್ಲಿ ಅತಿಹೆಚ್ಚು ಕೋವಿಡ್ ಟೆಸ್ಟ್‍ಗಳನ್ನು ನಡೆಸಿದ ರಾಜ್ಯದಲ್ಲಿ ಈವರೆಗೂ 6 ಕೋಟಿ ಜನರಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಸ್ತುತ 540 ಟ್ರಯೆಜೆಸಿಂಗ್ ಸೆಂಟರ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಈವರೆಗೂ ಹೋಮ್ ಐಸೋಲೇಷನ್‍ನಲ್ಲಿ ಆರೈಕೆ ಪಡೆದ ವಯಸ್ಕರು ಮತ್ತು ಮಕ್ಕಳಿಗೆ ಸುಮಾರು 2.5 ಲಕ್ಷ ಐಸೊಲೇಷನ್ ಮೆಡಿಕಲ್ ಕಿಟ್‍ಗಳನ್ನು ನೀಡಲಾಗಿದೆ. ಈ ರೀತಿ ಮುಂದೆಯೂ ವಿತರಿಸಲಾಗುತ್ತದೆ ಎಂದು ಹೇಳಿದರು.

ಜನರಿಗಾಗಿ ಸುಸಜ್ಜಿತ ಆಸ್ಪತ್ರೆ

ಪ್ರಸ್ತುತ ರಾಜ್ಯದ ಆಸ್ಪತ್ರೆಗಳಲ್ಲಿ 55,256 ಎಚ್‍ಡಿಯು ಬೆಡ್‍ಗಳು, 7216 ಐಸಿಯು ಬೆಡ್‍ಗಳು, 6,123 ಐಸಿಯು-ವೆಂಟಿಲೇಟರ್ ಬೆಡ್‍ಗಳು, ಜಿಲ್ಲಾ ತಾಲ್ಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದೆ. 9 ಕೋಟಿ ವೆಚ್ಚದಲ್ಲಿ 50 ಹಾಸಿಗೆಗಳ ಆಯುಷ್ ಆಸ್ಪತ್ರೆಗಳನ್ನು ಗದಗ ಮತ್ತು ಮಂಗಳೂರು ನಗರಗಳಲ್ಲಿ ಆರಂಭಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ನೂತನವಾಗಿ ಆಯುಷ್ ವಿವಿಯನ್ನು ಪ್ರಾರಂಭಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.
Published by:Pavana HS
First published: