ಬೆಂಗಳೂರಿನ 3 ಕ್ಷೇತ್ರಗಳ 6 ಅಭ್ಯರ್ಥಿಗಳಿಗೆ ಸಿಕ್ಕಿದೆ ಬಿಪ್ಯಾಕ್ ಅನುಮೋದನೆ

ಬಿಪ್ಯಾಕ್ ಸಂಸ್ಥೆಯು ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಕ್ಷೇತ್ರಗಳ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಅನುಮೋದನೆ ಮಾಡಿದೆ.

ಬಿಪ್ಯಾಕ್​ನ ಎಲೆಕ್ಷನ್ ಹಬ್ಬ

ಬಿಪ್ಯಾಕ್​ನ ಎಲೆಕ್ಷನ್ ಹಬ್ಬ

  • News18
  • Last Updated :
  • Share this:
ಬೆಂಗಳೂರು: ನಗರ ಜನಜೀವನದ ಗುಣಮಟ್ಟ ಹೆಚ್ಚಿಸಲು ಕೆಲಸ ಮಾಡುತ್ತಿರುವ ಬಿಪ್ಯಾಕ್ ಎಂಬ ನಾಗರಿಕ ಸಂಸ್ಥೆ ಈ ಬಾರಿಯ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಅನುಮೋದನೆ ಮಾಡಿದೆ. ಈ ಮೂಲಕ ಬೆಂಗಳೂರಿನ ಮತದಾರರ ಮುಂದಿರುವ ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಮಾಡಿದೆ. ಬಿಪ್ಯಾಕ್ ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳ ಒಟ್ಟು 6 ಅಭ್ಯರ್ಥಿಗಳಿಗೆ ಅನುಮೋದಿಸಿ ಬೆಂಬಲಿಸಿದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಅನುಮೋದನೆಗೆ ಬಿಪ್ಯಾಕ್ ಆರಿಸಿದೆ.

ಬೆಂಗಳೂರು ಉತ್ತರ ಕ್ಷೇತ್ರದಿಂದ ಡಿ.ವಿ. ಸದಾನಂದ ಗೌಡ ಮತ್ತು ಕೃಷ್ಣ ಭೈರೇಗೌಡ; ಬೆಂಗಳೂರು ಕೇಂದ್ರದಿಂದ ಪಿ.ಸಿ. ಮೋಹನ್ ಮತ್ತು ರಿಜ್ವಾನ್ ಅರ್ಷದ್; ಹಾಗೂ ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ಮತ್ತು ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಬಿಪ್ಯಾಕ್ ಎನ್ಡೋರ್ಸ್ ಮಾಡಿದೆ. ಈ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಟ್ಟು 78 ಅಭ್ಯರ್ಥಿಗಳ ಪೈಕಿ 6 ಮಂದಿಯನ್ನು ಬಿಪ್ಯಾಕ್ ಬೆಂಬಲಿಸಿದೆ.

ಬಿಪ್ಯಾಕ್ ಅನುಮೋದನೆಯಾದ ಅಭ್ಯರ್ಥಿಗಳು:

ಬೆಂಗಳೂರು ಉತ್ತರ: ಸದಾನಂದಗೌಡ(ಬಿಜೆಪಿ), ಕೃಷ್ಣ ಬೈರೇಗೌಡ(ಕಾಂಗ್ರೆಸ್)
ಬೆಂಗಳೂರು ಸೆಂಟ್ರಲ್: ಪಿ.ಸಿ. ಮೋಹನ್(ಬಿಜೆಪಿ), ರಿಜ್ವಾನ್ ಅರ್ಷದ್(ಕಾಂಗ್ರೆಸ್)
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ(ಬಿಜೆಪಿ), ಬಿ.ಕೆ. ಹರಿಪ್ರಸಾದ್(ಕಾಂಗ್ರೆಸ್)



ಬಿಪ್ಯಾಕ್ (B.PAC) ಎಂದರೆ ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ – ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ಕೆಲವಾರು ಚುನಾವಣೆಗಳಿಂದ ಸಕ್ರಿಯವಾಗಿದೆ. ತಟಸ್ಥ ರಾಜಕೀಯ ನಿಲುವು ಹೊಂದಿರುವ ಈ ಸರ್ಕಾರೇತರ ಸಂಸ್ಥೆಯು ಪ್ರತೀ ಚುನಾವಣೆಯಲ್ಲೂ ನಗರಕ್ಕೆ ಅನುಕೂಲವಾಗಬಲ್ಲ ಅಭ್ಯರ್ಥಿಗಳನ್ನು ಅನುಮೋದನೆ ಮಾಡುತ್ತದೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯ ವೇಳೆ ಬೆಂಗಳೂರು ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ 29 ಅಭ್ಯರ್ಥಿಗಳನ್ನು ಬೆಂಬಲಿಸಿತ್ತು.

ಅಭ್ಯರ್ಥಿಗಳ ಅನುಮೋದನೆ ವಿಧಾನ ಹೇಗೆ?

ಅಭ್ಯರ್ಥಿಗಳ ಅನುಮೋದನೆಗೆ ಮುಂಚೆ ವ್ಯಾಪಕವಾಗಿ ಸಮೀಕ್ಷೆ ಮತ್ತು ಅಧ್ಯಯನ ನಡೆಸುತ್ತೇವೆ ಎಂದು ಬಿಪ್ಯಾಕ್ ಸಂಸ್ಥೆ ಹೇಳಿಕೊಳ್ಳುತ್ತದೆ.

* ಸಂಸತ್ ಸದಸ್ಯನಾಗಿ; ಕೇಂದ್ರ ಅಥವಾ ರಾಜ್ಯದ ಮಂತ್ರಿಯಾಗಿ, ಶಾಸಕನಾಗಿ, ವಿಧಾನಪರಿಷತ್ ಸದಸ್ಯನಾಗಿ ಹೇಗೆ ಕೆಲಸ ಮಾಡಿದ್ದಾರೆ ಎಂದು ಪರಿಶೀಲಿಸಲಾಗುತ್ತದೆ.
* ಬಿಪ್ಯಾಕ್ ಸಂಸ್ಥೆಯು ತಜ್ಞರ ಅಭಿಪ್ರಾಯದ ಸಮೀಕ್ಷೆ ನಡೆಸುತ್ತದೆ
* ಅಭ್ಯರ್ಥಿಗಳ ಆಸ್ತಿ ಮತ್ತು ಅಪರಾಧ ಪ್ರಕರಣಗಳ ವಿವರ ಪರಿಶೀಲಿಸಲಾಗುತ್ತದೆ
* ಕ್ಷೇತ್ರದ ಪ್ರಮುಖ ಸಮಸ್ಯೆಗಳಿಗೆ ಅಭ್ಯರ್ಥಿಗಳು ಹೇಗೆ ಸ್ಪಂದಿಸಿದ್ದಾರೆ ಅಥವಾ ಸ್ಪಂದಿಸುತ್ತಾರೆ ಎಂಬುದನ್ನು ಅವಲೋಕಿಸಲಾಗುತ್ತದೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿಗರಿಗೆ ಬಿಪ್ಯಾಕ್ ಅನುಮೋದನೆ ಮಾಡಿದ ಅಭ್ಯರ್ಥಿಗಳ ಪೈಕಿ ಹೊಸ ಮುಖವೆಂದರೆ ತೇಜಸ್ವಿ ಸೂರ್ಯ. ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರಿಗೆ ಇದು ಮೊದಲ ಚುನಾವಣೆ. ಯುವಜನತೆಯ ಆಶೋತ್ತರಗಳನ್ನು ಈಡೇರಿಸುವ ಸಾಮರ್ಥ್ಯ ಹೊಂದಿದ್ದಾರೆಂದು ಇವರನ್ನು ಅನುಮೋದನೆ ಮಾಡಲು ನಿರ್ಧರಿಸಿದ್ದೇವೆಂದು ಬಿಪ್ಯಾಕ್ ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಉಳಿದ ಪಕ್ಷಗಳು ಮತ್ತು ಅಭ್ಯರ್ಥಿಗಳು ಇಲ್ಲಿ ಗೌಣವಾಗಿದ್ಧಾರೆ. ಆದರೆ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪ್ರಕಾಶ್ ರಾಜ್ ಅವರು ಅಖಾಡಕ್ಕಿಳಿದಿರುವುದರಿಂದ ತುಸು ತ್ರಿಕೋನ ಫೈಟ್ ನಿರೀಕ್ಷಿಸಬಹುದಾಗಿದೆ. ಇಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೇ ಪ್ರಮುಖವಾಗಿದ್ದರೂ ಪ್ರಕಾಶ್ ರಾಜ್ ಒಂದಷ್ಟು ಪೈಪೋಟಿ ನೀಡುವ ಸಾಧ್ಯತೆ ಇಲ್ಲದಿಲ್ಲ. ಆದರೆ, ಪ್ರಕಾಶ್ ರಾಜ್ ಅವರ ಹೆಸರಿಗೆ ಬಿಪ್ಯಾಕ್ ಅನುಮೋದನೆ ಸಿಕ್ಕಿಲ್ಲ.
First published: