ದೊಡ್ಡವರೆನಿಸಿಕೊಂಡವರ ರಕ್ಷಣೆಗೆ ಬೇಕಾದ ಬೌನ್ಸರ್​​ಗಳೇ ಈಗ ಬೀದಿಪಾಲು!

ರಾಜಧಾನಿ ಬೆಂಗಳೂರು ಒಂದರಲ್ಲೇ ಹತ್ತಿರತ್ತಿರ ಒಂದುವರೆ  ಸಾವಿರದಿಂದ ಎರಡು ಸಾವಿರದಷ್ಟು ಬೌನ್ಸರ್​ಗಳಿದ್ದಾರೆ. ಪ್ರತಿಷ್ಟಿತ ವೇದಿಕೆಗಳಲ್ಲಿ ಕೆಲಸ ಮಾಡುವ ಇವರು ಇಂದು ಅಕ್ಷರಶಃ ನಿರುದ್ಯೋಗಿಗಳಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜು.2): ಇವರದು ಒಂದು ರೀತಿ ಸ್ವಾಭಿಮಾನದ ಬದುಕು. ಹಸಿವಿದ್ದರೂ ಕೂಡ ಬೇರೆಯವರ ಬಳಿ ಕೈ ಚಾಚುವ ಜಾಯಮಾನ ಇವರದಲ್ಲವೇ ಅಲ್ಲ. ನಿಮಗೆ ಗೊತ್ತಿರಲಿ, ಎಲ್ಲಾ ದೊಡ್ಡವರ ಕಾರ್ಯಕ್ರಮಗಳಿಗೂ ಇವರು ಬೇಕೆ ಬೇಕು. ಆದರೆ ಇವರಿಗೆ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ಸಹಾಯ ಮಾಡಲು ಯಾರೊಬ್ಬರೂ ಇಲ್ಲ. ಆ ಸ್ವಾಭಿಮಾನಿ ಶ್ರಮಿಕರೇ ಈ  ಬೌನ್ಸರ್ಸ್​ಗಳು.

ದೊಡ್ಡ ಕಾರ್ಯಕ್ರಮಗಳಲ್ಲಿ, ಪ್ರತಿಷ್ಠಿತರ ಸಮಾರಂಭಗಳಲ್ಲಿ, ಚಿತ್ರನಟರು, ರಾಜಕಾರಣಿಗಳು, ಕ್ರೀಡಾತಾರೆಗಳು, ಬಂದಂಥ ಸಂದರ್ಭದಲ್ಲಿ ಅವರ ಹಿಂದೆಮುಂದೆ ಅಜಾನುಬಾಹುಗಳಾಗಿ ಅಡ್ಡಾಡುತ್ತಾ, ತಮ್ಮ‌ ಲೈಫನ್ನು ರಿಸ್ಕ್ ಗೆ ಹಾಕ್ಕೊಂಡು ಕೆಲಸ ಮಾಡುತ್ತಿರುತ್ತಾರೆ. ಆದರೆ, ದುರಂತ ನೋಡಿ, ಬೌನ್ಸರ್ಸ್​ಗಳಿಂದ ಪ್ರಯೋಜನ ಪಡೆದುಕೊಂಡವರೇ ಇವತ್ತು ಲಾಕ್ ಡೌನ್ ಸಂಕಷ್ಟದಲ್ಲಿ ಇವರ ನೆರವಿಗೆ ಬಂದಿಲ್ಲ.

ರಾಜಧಾನಿ ಬೆಂಗಳೂರು ಒಂದರಲ್ಲೇ ಹತ್ತಿರತ್ತಿರ ಒಂದುವರೆ  ಸಾವಿರದಿಂದ ಎರಡು ಸಾವಿರದಷ್ಟು ಬೌನ್ಸರ್​ಗಳಿದ್ದಾರೆ. ಪ್ರತಿಷ್ಟಿತ ವೇದಿಕೆಗಳಲ್ಲಿ ಕೆಲಸ ಮಾಡುವ ಇವರು ಇಂದು ಅಕ್ಷರಶಃ ನಿರುದ್ಯೋಗಿಗಳು. ಜೀವನ ನಿರ್ವಹಣೆ ಹೇಗೆ ಮಾಡುವುದು ಎಂದು ಗೊತ್ತಾಗದೆ ಪೇಚಿಗೆ ಸಿಲುಕಿದ್ದಾರೆ. ಬೌನ್ಸರ್ ಕೆಲಸ ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿ ಅಭ್ಯಾಸವಿಲ್ಲದ ಇವರುಗಳಿಗೆ, ಲಾಕ್ ಡೌನ್ ಎನ್ನೋದು ದೊಡ್ಡ ಅಘಾತವಾಗಿದೆ.  ಈ‌ ಉದ್ಯೋಗ ಆಯ್ಕೆ ‌ಮಾಡಿಕೊಂಡಿದ್ದೇ ತಪ್ಪಾಯ್ತಾ ಎಂದು‌ ತಮಗೆ ತಾವೇ ಶಾಪ ಹಾಕ್ಕೊಳ್ಳುವಂತಾಗಿದೆ ಇವರ ಸ್ಥಿತಿ ಬಂದೊದಗಿದೆ.

ಜೀವನ ನಿರ್ವಹಣೆಗೆ ಸ್ವಾಭಿಮಾನ ಹಾಗೂ ಪ್ರತಿಷ್ಠೆಯನ್ನು ಬದಿಗೊತ್ತಿ ಕೆಲಸ ಕೇಳಲು ಹೋದರೆ ಯಾರೊಬ್ಬರೂ  ಕೆಲಸ ಕೊಡುತ್ತಿಲ್ಲ. ನಿಮಗೆ ಕೆಲಸ ಕೊಡಬೇಕಾ? ಕೆಲಸದ ಅವಶ್ಯಕತೆ ನಿಜಕ್ಕೂ ನಿಮಗಿದೆಯೇ? ಎನ್ನುವ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.ಇದು ಕೆಲಸ ಮಾಡುವ ಉತ್ಸಾಹದಲ್ಲಿ ತೆರಳುವ ಬೌನ್ಸರ್ ಗಳ ಆಸಕ್ತಿಗೇನೇ ತಣ್ಣೀರೆರಚಿದಂತಾಗುತ್ತಿದೆ.

“ನಮ್ಮ‌ ಕಟ್ಟುಮಸ್ತಾದ ದೇಹ ನೋಡಿ ಇಂಥ ಪ್ರಶ್ನೆಗಳನ್ನು ಕೇಳುವವರೇ ಹೆಚ್ಚು.  ದೇಹವನ್ನು ಸದೃಢವಾಗಿಟ್ಟುಕೊಳ್ಳೋದೇ ತಪ್ಪಾ? ನಮಗಾಗಿ ನಮ್ಮ ಕಟ್ಟುಮಸ್ತಾದ ದೇಹದ ನಿರ್ವಹಣೆಗಾಗಿ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ನಂಬಿರುವ ಕುಟುಂಬ ಹಾಗೂ ಜೀವಗಳಿಗಾಗಿ  ದುಡಿಯಲೇಬೇಕಾದ ಅಗತ್ಯವಿದೆ. ಆದರೆ ಉದ್ಯೋಗ ಅರಸಿ ಹೋದೆಡೆಯಲ್ಲೆಲ್ಲಾ ನಮಗೆ ಕೆಲಸ ಸಿಗುವುದೇ ಕಷ್ಟವಾಗಿದೆ. ಇಷ್ಟವಿಲ್ಲದ ಕೆಲಸ ಕೊಟ್ಟರೂ ಪ್ರಾಮಾಣಿಕತೆ-ಶೃದ್ಧೆಯಿಂದ ಮಾಡ್ತೇವೆ ಎಂದು ಮನವಿ ಮಾಡಿಕೊಂಡ್ರೂ ಯಾರೂ ನಮ್ಮ ಸಂಕಷ್ಟ ಕೇಳುತ್ತಿಲ್ಲ .ನಾವು ಸಮಾಜಕ್ಕೆ ಇಷ್ಟೊಂದು ಬೇಡವಾದ್ವಾ ಎಂದು ಪ್ರಶ್ನಿಸ್ತಾರೆ, ಬೌನ್ಸರ್ಸ್.

ಬೌನ್ಸರ್ ಗಳ ಬಹುದೊಡ್ಡ ಸಮಸ್ಯೆ ಹಾಗೂ ದೌರ್ಬಲ್ಯವೇ ಅವರ ದೇಹ ಹಾಗೂ ಅಂಗಸೌಷ್ಟವತೆ. ಅದನ್ನು ಸದಾ  ಹುರಿಗಟ್ಟಿಸಿಕೊಳ್ಳುವುದು ಅವರ ಕಸುಬು ಹಾಗೂ ಪ್ರೊಪೆಷನ್​ನ ಮೊದಲ ಆದ್ಯತೆ. ಅದಕ್ಕಾಗಿ ಜಿಮ್ ಗಳಲ್ಲಿ  ಸಾಕಷ್ಟು ಬೆವರಿಳಿಸಬೇಕಾಗುತ್ತದೆ.ಸ್ವಲ್ಪ ಹೊಟ್ಟೆ ಕಾಣಿಸಿಕೊಂಡ್ರೂ ಪ್ರೊಫೆಷನ್ ನಲ್ಲಿ ಎಕ್ಸ್ ಪೈರಿ ಆದಂಗೆ. ಯಾರೂ ಕೇಳೊಲ್ಲ.ಕರೆಯೊಲ್ಲ.

ಇವ್ರ ದುರಾದೃಷ್ಟ ನೋಡಿ,  ಜಿಮ್ ಗಳೆಲ್ಲಾ ಲಾಕ್ ಡೌನ್ ಆದ್ಮೇಲೆ ಬಾಗಿಲು ಮುಚ್ಚಿಕೊಂಡಿವೆ. ಹೀಗಾಗಿ, ಕಾಳಜಿ ತೋರಿಸಲಿಕ್ಕೂ ಆಗ್ತಿಲ್ಲ. ಇದೆಲ್ಲಕ್ಕಿಂತಲೂ ಬೌನ್ಸರ್ಸ್ ಗಳು ಎದುರಿಸುತ್ತಿರುವ ಗಂಭೀರ ಹಾಗೂ ಬಹುದೊಡ್ಡ ಸಮಸ್ಯೆ ಏನ್ ಗೊತ್ತಾ? ಸಂತುಲಿತ ಪೌಷ್ಠಿಕ‌ ಆಹಾರ. ಆಹಾರಕ್ರಮಕ್ಕೇನೆ ಬೌನ್ಸರ್ಗೆ ಕನಿಷ್ಟ ಎಂದರೂ ಒಂದು ಸಾವಿರ ಖರ್ಚಾಗುತ್ತೆ.

ಹೊಟ್ಟೆ ತುಂಬಿಕೊಳ್ಳುವುದೇ ಕಷ್ಟವಾಗಿರುವ ಪ್ರಸ್ತುತ ಸಂದರ್ಭದಲ್ಲಿ ದಿನಕ್ಕೆ ಐನೂರಯ ರೂನಿಂದ ಒಂದು ಸಾವಿರ ಹಣವನ್ನು ಎಲ್ಲಿ ಖರ್ಚು ಮಾಡುವುದು ಎನ್ನುವ ಪ್ರಶ್ನೆ ಬೌನ್ಸರ್ ಗಳನ್ನ ಕಾಡುತ್ತಿದೆ. ಹಾಗಾಗಿ ಪೌಷ್ಟಿಕ ಆಹಾರದ ಆಸೆಯನ್ನೇ ಕೈಬಿಟ್ಟಿದ್ದಾರೆ.ಇದರ ಅಲಭ್ಯತೆ ಸಹಜವಾಗೇ ಅವರ ಆರೋಗ್ಯದ ಮೇಲೂ ಕೂಡ  ಪರಿಣಾಮ  ಬೀರುತ್ತಿದೆ.ಅಷ್ಟೇ ಅಲ್ಲ‌ ದೇಹದ ರಚನೆ ಹಾಗೂ ಗಟ್ಟಿತನಕ್ಕೆ ಹೊಡೆತ ನೀಡಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಅನುಭವಿಸಿದ ಸಂಕಷ್ಟ- ಸಮಸ್ಯೆಯ ಬೆನ್ನಲ್ಲೇ ಮತ್ತೆ ಈಗ ಲಾಕ್ ಡೌನ್ ಜಾರಿಯಾಗುತ್ತದೆ  ಎನ್ನುವ ಸುದ್ದಿ ಬೌನ್ಸರ್ ಗಳನ್ನ ಮತ್ತಷ್ಟು ವಿಚಲಿತಗೊಳಿಸಿದೆ. ಹೇಗೋ ಸಮಸ್ಯೆಯಿಂದ ಸುಧಾರಿಸಿಕೊಂಡು ಮತ್ತೆ ಹೊಸ  ಜೀವನವನ್ನ ಕಟ್ಟಿಕೊಳ್ಳಬಹುದು ಎನ್ನುವ ನಿರೀಕ್ಷೆಯನ್ನು ಹುಸಿ ಮಾಡಿದೆ‌. ಹೀಗಾಗಿ ನಮ್ಮ ಸಹಾಯಕ್ಕೆ ಸರ್ಕಾರ ಸ್ಪಂದಿಸಬೇಕು ಎನ್ನುವುದು ಬೌನ್ಸರ್​ಗಳ ಆಶಯ.
First published: