ಬೆಂಗಳೂರು: 2023 ವಿಧಾನಸಭಾ ಚುನಾವಣೆ (Assembly Election 2023) ಹತ್ತಿರವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಜಟಾಪಟಿ ಜೋರಾಗಿದೆ. ಹೌದು ಕಾಂಗ್ರೆಸ್ (Congress) ಪಕ್ಷದ ಸಭೆಯೊಂದರಲ್ಲಿ ಟಿಕೆಟ್ ಆಕಾಂಕ್ಷಿಗಳ ನಡುವೆ ಭಿನ್ನಮತ ಸ್ಪೋಟಗೊಂಡಿದ್ದು, ಆಕಾಂಕ್ಷಿಗಳ ಹಾಗೂ ಅವರ ಬೆಂಬಲಿಗರ ನಡುವೆ ವಾಕ್ಸಮರ ನಡೆದಿದೆ. ಇದು ಬೀದಿ ರಂಪಾಟಕ್ಕೆ ಕಾರಣವಾಗಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ (Bommanahalli Constituency) ಕಾಂಗ್ರೆಸ್ ಆಕಾಂಕ್ಷಿಗಳ ಜಟಾಪಟಿ ಜೋರಾಗಿದೆ. ಚುನಾವಣೆ ಪೂರ್ವಭಾವಿಯಾಗಿ ಬೊಮ್ಮನಹಳ್ಳಿಯಲ್ಲಿ ಕೇರಳ ಸಂಸದ ಆಡೂರು ಪ್ರಕಾಶ್ (MP Adur Prakash), ಮಾಜಿ ಸಚಿವ ರಾಮಲಿಂಗಾರಡ್ಡಿ (Former Minister Ramalinga Reddy) ಹಾಗೂ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ (AICC Secretary Abhishek Dat) ನೇತೃತ್ವದಲ್ಲಿ ಕಾರ್ಯಕರ್ತರ ಸಭೆಯನ್ನ ಆಯೋಜಿಸಲಾಗಿತ್ತು.
ಸಭೆಯಲ್ಲಿ ಬೂತ್ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಗಳಾದ ಕವಿತಾ ರೆಡ್ಡಿ, ಉಮಾಪತಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಸಭೆಯನ್ನ ಉದ್ದೇಶಿಸಿ ರಾಮಲಿಂಗಾರೆಡ್ಡಿಯವರು ಹಾಗೂ ಸಂಸದ ಆಡೂರು ಪ್ರಕಾಶ್ ಮಾತನಾಡಿ ತೆರಳಿದ್ದಾರೆ.
ಉಮಾಪತಿ ಬೆಂಬಲಿಗರಿಂದ ಘೋಷಣೆ
ಬಳಿಕ ಓರ್ವ ಬೂತ್ ಅಧ್ಯಕ್ಷ ಮೈಕ್ ಹಿಡಿದು ಮಾತನಾಡುವ ವೇಳೆ ಬೊಮ್ಮನಹಳ್ಳಿಯ ಮೂರು ಬೂತ್ ಗಳ ಅಧ್ಯಕ್ಷರು ಉಮಾಪತಿಯೇ ಅಭ್ಯರ್ಥಿಯಾಗಬೇಕು ಎಂದು ನಿರ್ಧರಿಸಿದ್ದೇವೆ ಎಂದು ಹೇಳುತ್ತಿದ್ದಂತೆ ಉಮಾಪತಿ ಬೆಂಬಲಿಗರು ಹಾಗೂ ಕಾರ್ಯಕರ್ತರು ಘೋಷಣೆಗಳನ್ನು ಹಾಕಲು ಶುರು ಮಾಡಿದ್ದಾರೆ.
ಅಷ್ಟೇ ಅಲ್ಲದೇ ಉಮಾಪತಿರವರನ್ನು ಭುಜದ ಮೇಲೆ ಹೊತ್ತು ಇವರೇ ಬೊಮ್ಮನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆಗಳನ್ನ ಹಾಕುವ ಸಂಧರ್ಭದಲ್ಲಿ ಅಲ್ಲಿಯೇ ಇದ್ದ ಮತ್ತೋರ್ವ ಪ್ರಬಲ ಟಿಕೆಟ್ ಆಕಾಂಕ್ಷಿ ಕವಿತಾ ರೆಡ್ಡಿ ಆಕ್ರೋಶವನ್ನ ಹೊರಹಾಕಿದ್ದು, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಜೊತೆ ವಾಕ್ಸಮರ ನಡೆಸಿದರು.
ಕವಿತಾ ರೆಡ್ಡಿ ಆಕ್ರೋಶ
ಇದೇ ವೇಳೆ ಕಾರ್ಯಕರ್ತರ ನಡುವೆಯೂ ಮಾತಿನ ಚಕಮಕಿ ನಡೆದಿದ್ದು, ಕ್ಷೇತ್ರದಲ್ಲಿ ಉಮಾಪತಿ ಏನು ಕೆಲಸಗಳನ್ನ ಮಾಡಿಲ್ಲ ಚುನಾವಣೆ ಸಂಧರ್ಭದಲ್ಲಿ ಬಂದು ನಾನೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಇಷ್ಟು ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿ ಕಳೆದ ಬಾರಿಯೂ ಟಿಕೆಟ್ ನಿಂದ ವಂಚಿತರಾಗಿದ್ದು ಈ ಬಾರಿ ಮಹಿಳಾ ಕೋಟಾದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಕವಿತಾ ರೆಡ್ಡಿ ಒತ್ತಾಯಿಸಿದ್ದಾರೆ.
ಇನ್ನೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಮೂರು ಬಾರಿ ಗೆಲುವು ದಾಖಲಿಸಿ ಬಿಜೆಪಿ ಭದ್ರಕೋಟೆ ಮಾಡಿಕೊಂಡಿರುವ ಶಾಸಕ ಸತೀಶ್ ರೆಡ್ಡಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಆರು ಮಂದಿ ಆಕಾಂಕ್ಷಿಗಳು ಕಣದಲ್ಲಿದ್ದಾರೆ.
ಆರು ಜನರಲ್ಲಿ ಕವಿತಾ ರೆಡ್ಡಿ ಹಾಗೂ ಉಮಾಪತಿ ಪ್ರಬಲ ಆಕಾಂಕ್ಷಿಗಳಾಗಿದ್ದು, ಇದೀಗ ಬೊಮ್ಮನಹಳ್ಳಿಯ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಬೊಮ್ಮನಹಳ್ಳಿ ಮೂರು ಮಂದಿ ಬೂತ್ ಅಧ್ಯಕ್ಷರುಗಳು ಉಮಾಪತಿ ಪರವಾಗಿ ಸಭೆಯಲ್ಲಿ ಮಾತನಾಡಿದ್ದು, ಇಷ್ಟೆಲ್ಲಾ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ ಎನ್ನಲಾಗಿದೆ.
ಕವಿತಾ ರೆಡ್ಡಿಗೆ ಟಾಂಗ್ ಕೊಟ್ಟ ಉಮಾಪತಿ
ಆಕಾಂಕ್ಷಿಗಳ ಭಿನ್ನಮತ ಸ್ಪೋಟದಿಂದಾಗಿ ಕಾರ್ಯಕರ್ತರು, ಬೆಂಬಲಿಗರ ನಡುವೆಯೂ ವಾಕ್ಸಮರ ನಡೆದು ಗೊಂದಲಕ್ಕೆ ಕಾರವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಟಿಕೆಟ್ ಆಕಾಂಕ್ಷಿ ಉಮಾಪತಿ, ಎಲ್ಲಾ ಪಕ್ಷಗಳಲ್ಲಿ ಗೊಂದಲಗಳು ಇರುತ್ತವೆ. ಕ್ಷೇತ್ರದಲ್ಲಿ ಆರು ಮಂದಿ ಆಕಾಂಕ್ಷಿಗಳಿದ್ದು, ನಾಯಕತ್ವ ಗುಣಗಳನ್ನ ಬೆಳೆಸಿಕೊಳ್ಳಬೇಕು ಅದನ್ನು ತೋರಿಸಿಕೊಳ್ಳುವುದರಲ್ಲಿ ಕೆಲವರು ವಿಫಲರಾಗಿದ್ದಾರೆ. ಜನರೇ ನಿರ್ಧಾರ ಮಾಡುತ್ತಾರೆ ಪ್ರಬಲ ಆಕಾಂಕ್ಷಿ ಯಾರು ವೀಕ್ ಯಾರು ಅಂತ ಎಂದು ಟಾಂಗ್ ನೀಡಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಕಾಂಕ್ಷಿಗಳ ಭಿನ್ನಮತ ತಾರಕಕ್ಕೇರಿದ್ದು, ಬೊಮ್ಮನಹಳ್ಳಿಯಲ್ಲೂ ಆಕಾಂಕ್ಷಿಗಳ ಬೀದಿ ರಂಪಾಟ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇವರುಗಳ ಈ ಕಿತ್ತಾಟ ಬಿಜೆಪಿಗೆ ಮುಂದಿನ ದಿನಗಳಲ್ಲಿ ವರದಾನವಾಗುತ್ತ ಎಂದು ಕಾಲವೇ ಉತ್ತರಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ