ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ (Bengaluru) ಖಾಸಗಿ ಶಾಲೆಗಳಿಗೆ (Privet Schools) ಬಾಂಬ್ ಬೆದರಿಕೆ ಕರೆ (Bomb threat call) ಬಂದಿತ್ತು. ಇದರಿಂದ ಶಿಕ್ಷಕರು, ಪೋಷಕರು, ಮಕ್ಕಳು ಆತಂಕಕ್ಕೆ ಒಳಗಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಪರಿಶೀಲನೆ ವೇಳೆ ಅವೆಲ್ಲ ಹುಸಿ ಬಾಂಬ್ ಕರೆ (Hoax Bomb Call) ಎನ್ನುವುದು ಸಾಬೀತಾಗಿತ್ತು. ಇದೀಗ ಬೆಂಗಳೂರು ನಗರದ ಮತ್ತೊಂದು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ರಾಜಾಜಿನಗರದ, ಬಸವೇಶ್ವರ ನಗರದ ಎನ್ಪಿಎಸ್ ಶಾಲೆಗಳಿಗೆ ಬೆದರಿಕೆ ಮೇಲ್ಗಳು ಬಂದಿದೆ.
ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ಗಳು ಆಗಮಿಸುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಭೇಟಿ ನೀಡಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸಿವೆ. ಸದ್ಯ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸುರಕ್ಷಿತ ಸ್ಥಳಕ್ಕೆ ಶಾಲಾ ಮಕ್ಕಳು ಶಿಫ್ಟ್
ಘಟನೆ ಕುರಿತಂತೆ ಪೊಲೀಸರು ತನಿಖೆ ಆರಂಭ ಮಾಡಿದ್ದು, ಮೇಲ್ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಮೊದಲು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಂದು ಬೆಳಗ್ಗೆ ಮೇಲ್ ಮೂಲಕ ಶಾಲೆಗೆ ಬೆದರಿಕೆ ಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದೆ. ಬಾಂಬ್ ನಿಷ್ಕ್ರಿಯ ದಳ ಶಾಲಾ ಆವರಣ ಮತ್ತು ಕೊಠಡಿಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Bhatkal: ಭಟ್ಕಳ ಬ್ಲಾಸ್ಟ್ ಮಾಡೋದಾಗಿ ಬೆದರಿಕೆ ಪತ್ರ! ಕೊನೆಗೂ ಸಿಕ್ಕಿಬಿದ್ದ ಆರೋಪಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಬೆಳಗ್ಗೆ 11:30ರ ವೇಳೆಗೆ ಬಂದಿತ್ತು ಬೆದರಿಕೆ ಮೇಲ್
ಶಾಲೆಯಲ್ಲಿ 6 ಜಿಲೆಟಿನ್ ಕಡ್ಡಿ ಇಟ್ಟಿರೋದಾಗಿ ಮೇಲ್ನಲ್ಲಿ ಉಲ್ಲೇಖ ಮಾಡಲಾಗಿದ್ದು, ಬೆಳಗ್ಗೆ 11:30ಕ್ಕೆ ಮೇಲ್ ಬಂದಿದೆ. ಇನ್ನು ತಪಾಸಣೆ ಬಳಿಕ ಯಾವುದೇ ಸ್ಫೋಟಕಗಳು ಶಾಲೆಯ ಪರಿಸರದಲ್ಲಿ ಕಂಡು ಬಂದಿಲ್ಲ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದ್ದ, ಇದೊಂದು ಹುಸಿ ಬೆದರಿಕೆ ಮೇಲ್ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದರ ಹೊರತಾಗಿಯೂ ಪೊಲೀಸರು ಪ್ರಕರಣ ತನಿಖೆ ನಡೆಸಿದ್ದಾರೆ.
ಅತಂಕದಲ್ಲಿ ಮಕ್ಕಳ ಪೋಷಕರು, ಶಾಲೆ ಬಳಿ ಆಗಮನ
ಇನ್ನು, ಬಾಂಬ್ ಬೆದರಿಕೆ ಕುರಿತಂತೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಆತಂಕಗೊಂಡ ಮಕ್ಕಳ ಪೋಷಕರು ಶಾಲೆ ಬಳಿಗೆ ದೌಡಾಯಿಸಿದ್ದರು. ಆದರೆ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಜೊತೆ ವಿಜಯನಗರ ಎಸಿಪಿ ರವಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ ಬಳಿಕ ಪೋಷಕರು ನಿಟ್ಟುಸಿರು ಬಿಟ್ಟಿದ್ದರು. ಯಾರೋ ಉದ್ದೇಶ ಪೂರ್ವಕವಾಗಿ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು, ಶಾಲೆಯಲ್ಲಿ ಪರಿಶೀಲನೆ ನಡೆಸಿದ ಬಳಿ ಮಕ್ಕಳನ್ನು ಪೋಷಕರು ಮನೆಗೆ ಕರೆದೊಯ್ಯುತ್ತಿದ್ದಾರೆ.
ಇದನ್ನೂ ಓದಿ: Bengaluru Airport: ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ ಪತ್ರ ಪತ್ತೆ; ಫ್ಲೈಟ್ ಸ್ಥಳಾಂತರ ಮಾಡಿ ತಪಾಸಣೆ
ಡಿಕೆ ಶಿವಕುಮಾರ್ ಮಾಲೀಕತ್ವದ ಶಾಲೆಗೂ ಬಂದಿತ್ತು ಬೆದರಿಕೆ ಮೇಲ್
ಕೆಲ ತಿಂಗಳ ಹಿಂದಷ್ಟೇ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಲೀಕತ್ವದ ಶಾಲೆಗಳಿಗೂ ಕೂಡ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಆರ್ ಆರ್ ನಗರ ಠಾಣೆ ಪೊಲೀಸರು ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಪರಿಶೀಲನೆ ನಡೆಸಿ, ಮಕ್ಕಳನ್ನು ಸ್ಥಳಾಂತರ ಮಾಡಿದ್ದರು. ಆ ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ವಿದ್ಯಾರ್ಥಿಯೋರ್ವ ಪರೀಕ್ಷೆಯನ್ನು ಮುಂದೂಡಲು ಇ-ಮೇಲ್ ಮೂಲಕ ಬೆದರಿಕೆ ಪತ್ರ ರವಾನಿಸಿದ್ದ ಎಂಬ ಸಂಗತಿ ತಿಳಿದುಬಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ