ಹಾಸನದಲ್ಲಿ ಬೋಗಸ್ ಕಂಪನಿ ಮತ್ತು ಭ್ರಷ್ಟ ಅಧಿಕಾರಿಗಳು; ಕೈಕಟ್ಟಿ ಕುಳಿತರೇ ರೋಹಿಣಿ ಸಿಂಧೂರಿ?

news18
Updated:September 7, 2018, 6:14 PM IST
ಹಾಸನದಲ್ಲಿ ಬೋಗಸ್ ಕಂಪನಿ ಮತ್ತು ಭ್ರಷ್ಟ ಅಧಿಕಾರಿಗಳು; ಕೈಕಟ್ಟಿ ಕುಳಿತರೇ ರೋಹಿಣಿ ಸಿಂಧೂರಿ?
news18
Updated: September 7, 2018, 6:14 PM IST
-ಡಿಎಂಜಿಹಳ್ಳಿ ಅಶೋಕ್, ನ್ಯೂಸ್ 18 ಕನ್ನಡ

ಹಾಸನ,(ಸೆ.07): ದಕ್ಷ ಹಾಗೂ ಪ್ರಾಮಾಣಿಕ ಡಿಸಿ ಎಂಬ ಹೆಗ್ಗಳಿಕೆ ಪಡೆದಿರುವ ರೋಹಿಣಿ ಸಿಂಧೂರಿ ನೇತೃತ್ವದ ಜಿಲ್ಲೆಯಲ್ಲಿಯೇ ಭ್ರಷ್ಟಾಚಾರ ಕೇಳಿ ಬಂದಿದೆ. ಅಧಿಕಾರಿಗಳು ಬೋಗಸ್ ಕಂಪನಿಯೊಂದಿಗೆ ಸೇರಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಜಾಹೀರಾತು ದಂಧೆಕೋರರ ಅಕ್ರಮ ಸಾಬೀತಾದ ಹಿನ್ನೆಲೆ ದಂಡ ಕಟ್ಟುವಂತೆ ನೋಟಿಸ್ ನೀಡಿದರೂ ಕ್ಯಾರೇ ಅನ್ನದ ಬೋಗಸ್ ಕಂಪನಿ ಮೊಂಡುತನ ತೋರಿಸಿದೆ.

ಹೌದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹಾಸನ ನಗರಸಭೆಗೆ ಕೋಟ್ಯಂತರ ರೂಪಾಯಿ ನಷ್ಟ ಆಗಿದೆ. ಒಂದು ವರ್ಷಕ್ಕೆ ಜಾಹೀರಾತು ಪರವಾನಿಗೆ ಪಡೆದ ಬೋಗಸ್ ಕಂಪನಿಯೊಂದು ಮೂರು ವರ್ಷ ಅಕ್ರಮ ನಡೆಸಿದೆ. ಅಕ್ರಮ ಬೆಳಕಿಗೆ ಬಂದ ಹಿನ್ನಲೆ ಅಧಿಕಾರಿಗಳು ದಂಡ ಕಟ್ಟುವಂತೆ ನೋಟಿಸ್ ನೀಡಿದರೂ ಜಾಹೀರಾತು ದಂಧೆಕೋರರು ಕ್ಯಾರೇ ಎನ್ನುತ್ತಿಲ್ಲ. 2014 ರಂದು ಹೆಚ್ ಔಟ್ ಡೋರ್ ಎಂಬ ಜಾಹೀರಾತು ಕಂಪನಿ ಭ್ರಷ್ಟ ಅಧಿಕಾರಿಗಳ ಸಹಾಯದಿಂದ ಒಂದು ವರ್ಷಕ್ಕೆ ಕೇವಲ 70 ಸಾವಿರ ನೀಡಿ ನಗರದಲ್ಲಿ ಫ್ಲೆಕ್ಸ್ ಜಾಹೀರಾತಿಗೆ ಪರವಾನಿಗೆ ಪಡೆದಿತ್ತು. ಆದರೆ ಅದೇ ಅಧಿಕಾರಿಗಳ ಸಹಾಯದಿಂದ ಮತ್ತೆ ಮೂರು ವರ್ಷ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ನಗರದಲ್ಲಿ ಜಾಹೀರಾತು ಫಲಕಗಳನ್ನು ಹಾಕಿಕೊಂಡು ನಗರಸಭೆಗೆ ಕೋಟ್ಯಾಂತರ ಹಣವನ್ನ ವಂಚಿಸಿದೆ. ಅಕ್ರಮ ಸಾಬೀತು ಹಿನ್ನೆಲೆ ಸದ್ಯ ಇರುವ ನಗರಸಭೆ ಆಯುಕ್ತ ಪರಮೇಶ್ ಕಂಪನಿಗೆ 80 ಲಕ್ಷ ದಂಡ ವಿಧಿಸಿ ನೋಟಿಸ್ ನೀಡಿದ್ದಾರೆ.

ನಗರಸಭೆ ಅಧಿಕಾರಿಗಳು ನೀಡಿದ ನೋಟಿಸ್ ಗೆ ಮೂರು ಕಾಸಿನ ಕಿಮ್ಮತ್ತು ನೀಡದ ಹೆಚ್ ಔಟ್ ಡೋರ್ ಜಾಹೀರಾತು ಕಂಪನಿ, ನೋಟಿಸ್ ನೀಡಿ ನಾಲ್ಕೈದು ತಿಂಗಳು ಕಳೆದರೂ ದಂಡದ ಹಣ ಪಾವತಿ ಮಾಡಿಲ್ಲ.  ಹಾಗಾಗಿ ಹಾಸನ ನಗರ ಸಾರ್ವಜನಿಕ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ನಗರಸಭೆ ವ್ಯಾಪ್ತಿಯ ನಿವಾಸಿಗಳು ಒಂದು ತಿಂಗಳು ತೆರಿಗೆ ಉಳಿಸಿಕೊಂಡರೆ ಎಲ್ಲಾ ಸೌಲಭ್ಯ ಕಡಿತಗೊಳಿಸಲಾಗುತ್ತದೆ. ಆದರೆ ಅಕ್ರಮ ಮಾಡಿದ ಕಂಪನಿಯಿಂದ ಲಕ್ಷಾಂತರ ಹಣವನ್ನ ವಸೂಲಿ ಮಾಡುತ್ತಿಲ್ಲ. ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಹಾಸನ ಡಿಸಿ ಸೂಕ್ತ ತನಿಕೆ ನಡೆಸಿ ಭ್ರಷ್ಟರ ಬಲಿ ಹಾಕುವಂತೆ ಒತ್ತಾಯಿಸಿದ್ದಾರೆ.

ಇನ್ನು 2014 ರಲ್ಲಿ ನಗರಸಭೆಯಲ್ಲಿದ್ದ ಅಧಿಕಾರಿಗಳು ಬೋಗಸ್ ಕಂಪನಿಯೊಂದಿಗೆ ಕೈಜೋಡಿಸಿದರೆ, ನಂತರ ಬಂದವರು ನಿರ್ಲಕ್ಷ್ಯ ಮಾಡಿ ನಗರಸಭೆಗೆ ಕೋಟ್ಯಂತರ ನಷ್ಟವಾಗಿದೆ.  ಹಾಗಾಗಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಬಗ್ಗೆ ಗಮನಹರಿಸಿ ಭ್ರಷ್ಟರಿಗೆ ಚಾಟಿ ಬೀಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ