ಗದಗ (ಏ. 14) : ರಾಜ್ಯಾದ್ಯಂತ ಕಳೆದ 8 ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. 6ನೇ ವೇತನ ಆಯೋಗದ ಶಿಫಾರಸು ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಿತ್ಯ ಪ್ರತಿಭಟನೆ ಮೂಲಕ ಸರ್ಕಾರದ ಮೇಲೆ ಒತ್ತಡವೇರುತ್ತಿದ್ದಾರೆ. ಮುಷ್ಕರ, ಪ್ರತಿಭಟನೆಗಳ ಮಧ್ಯೆಯೇ ಮತ್ತೊಬ್ಬ ಸಾರಿಗೆ ನೌಕರ ಸಾವಿಗೆ ಶರಣಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ಮನನೊಂದು ಉತ್ತರಹಳ್ಳಿ ಡಿಪೋದ ಬಿಎಂಟಿಸಿ ನಿರ್ವಾಹಕ ಟಿಪ್ಪು ಸುಲ್ತಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗದಗ ಜಿಲ್ಲೆಯ ನಿಡಗುಂದಿ ಮೂಲದವರಾದ ಟಿಪ್ಪು ಸುಲ್ತಾನ್ ಬೆಂಗಳೂರಿನ ಉತ್ತರಹಳ್ಳಿ ಡಿಪೋದಲ್ಲಿ ಬಿಎಂಟಿಸಿ ಬಸ್ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಂಜಾನ್ ಹಬ್ಬದ ನಿಮಿತ್ತ ಹುಟ್ಟೂರಾದ ನಿಡಗುಂದಿಗೆ ಆಗಮಿಸಿದ್ದರು. ತಿಂಗಳಿಡಿ ಕೆಲಸ ಮಾಡಿದ್ದರೂ ವೇತನ ಇನ್ನೂ ಸಿಕ್ಕಿರಲಿಲ್ಲ. ಇದರಿಂದ ಟಿಪ್ಪು ಸುಲ್ತಾನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.
ಸಂಬಳವಿಲ್ಲದೆ ರಂಜಾನ್ ಹಬ್ಬಕ್ಕೆ ಮಕ್ಕಳಿಗೆ ಬಟ್ಟೆ ಕೊಡಿಸಲು ಟಿಪ್ಪು ಸುಲ್ತಾನ್ಗೆ ಸಾಧ್ಯವಾಗಿರಲಿಲ್ಲ. ಈ ವಿಚಾರವಾಗಿ ಮನೆಯಲ್ಲಿ ಜಗಳವೂ ಆಗಿತ್ತು. ಈ ಎಲ್ಲಾ ಘಟನೆಯಿಂದ ನೊಂದ ಟಿಪ್ಪು ಸುಲ್ತಾನ್ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಮೃತ ಟಿಪ್ಪು ಸುಲ್ತಾನ್ ಸಾರಿಗೆ ಸಿಬ್ಬಂದಿ ಕೈಗೊಂಡಿರುವ ಮುಷ್ಕರವನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಇದನ್ನು ಓದಿ: ಬೆಂಗಳೂರಲ್ಲಿ ಹಬ್ಬದಂದೇ ಅತಿ ಹೆಚ್ಚು ಕೋವಿಡ್ ಸಾವು; ಅಂತ್ಯಕ್ರಿಯೆಗಾಗಿ ಚಿತಾಗಾರಗಳ ಮುಂದೆ ಸರತಿ ಸಾಲು!
ಐದು ದಿನಗಳ ಹಿಂದೆ ಬೆಳಗಾವಿಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಶಿವಕುಮಾರ ಕಲ್ಲಪ್ಪ ನೀಲಗಾರ (40) ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿದ್ದರು.
ಇನ್ನು ಸಾರಿಗೆ ನೌಕರರ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ನಾಳೆ ಸಂಜೆ 6 ಗಂಟೆಗೆ ದೀಪ ಹಚ್ಚಿ ಚಳವಳಿ ಮಾಡಲಿದ್ದೇವೆ. ಸಿಎಂ ಯಡಿಯೂರಪ್ಪನವರೇ ನೀವು ಪದೇ ಪದೇ ತಿರಸ್ಕಾರ ಮಾಡುತ್ತಿದ್ದೀರಿ. ನಮ್ಮ ಯುಗಾದಿ ಅಂಧಕಾರದಲ್ಲಿದೆ, ಹೀಗಾಗಿ ದೀಪ ಹಚ್ಚಿ ಹೋರಾಟ ಮಾಡಲಿದ್ದೇವೆ. ಸಾರಿಗೆ ನೌಕರರ ಕುಟುಂಬ ಸಮೇತ ದೀಪ ಹಚ್ಚಿ ಚಳವಳಿ ಮಾಡಲಿದ್ದೇವೆ. ನಾವು ಕೊರೋನಾದ ಎಲ್ಲಾ ನಿಯಮ ಪಾಲನೆ ಮಾಡುತ್ತೇವೆ. 16ನೇ ತಾರೀಖು ಕರ್ನಾಟಕದ ಎಲ್ಲಾ ಶಾಸಕರ ಮನೆ ಮುಂದೆ ಧರಣಿ ಮಾಡಲಿದ್ದೇವೆ. ನೀವು ಸರ್ಕಾರದ ಜೊತೆ ನಮ್ಮ ಪರವಾಗಿ ಮಾತನಾಡಿ ಅಂತ ಮನವಿ ಮಾಡಿಕೊಳ್ಳಲಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
(ವರದಿ: ಕಾವ್ಯಾ .ವಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ