ಬೆಂಗಳೂರು; ಬೆಂಗಳೂರು ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಅಸಮಾಧಾನಗೊಂಡಿದ್ದಾರೆ. ವಿಡಿಯೋ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಮ್ಮ ಬಗ್ಗೆ ಯೋಚಿಸಿ ಅಂತ ಕೈಮುಗಿದು ಬೇಡಿಕೊಂಡಿದ್ದಾರೆ. ಹೌದು, ಬಿಎಂಟಿಸಿಯ ಇಬ್ಬರು ಮಹಿಳಾ ಕಂಡಕ್ಟರ್ಗಳು ವಿಡಿಯೋ ಮಾಡೊ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸಿಎಂ ಹಾಗೂ ಸಾರಿಗೆ ಸಚಿವರೇ ಇಲ್ನೋಡಿ ನಮ್ಮ ಪಾಡನ್ನು ಅಂತ ಗೋಗರೆದಿದ್ದಾರೆ. ಹೌದು, ಇಬ್ಬರು ಮಹಿಳಾ ಕಂಡಕ್ಟರ್ ಗಳು ಡ್ಯೂಟಿ ಟೈಮ್ ಅನ್ನು 8 ಗಂಟೆಗಳಿಗೆ ಇಳಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ಬಿಎಂಟಿಸಿ ಸಿಬ್ಬಂದಿಗಳು 12 ರಿಂದ 16 ಗಂಟೆಗಳ ಕಾಲ ಡ್ಯೂಟಿ ಮಾಡಬೇಕಾದ ಸ್ಥಿತಿ ಇದೆ. ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಟರೆ ಸಂಜೆ 8 ಗಂಟೆಯಾದರೂ ಡ್ಯೂಟಿಯಲ್ಲೇ ಇರುವ ಸ್ಥಿತಿ ನಮ್ಮದು ಅಂತ ಅಳಲು ತೋಡಿಕೊಂಡಿದ್ದಾರೆ.
ಇದೇ ವೇಳೆ, ಡ್ಯೂಟಿಯಲ್ಲಿ ಮಹಿಳೆಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಮಹಿಳಾ ಶೌಚಾಲಯಗಳ ಕೊರತೆ ಇದೆ. ಸಂಬಳ ಕೂಡ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಮಕ್ಕಳಿಗೆ ಶಾಲೆ ಫೀಸ್, ಮನೆ ಬಾಡಿಗೆ, ಪವರ್ ಬಿಲ್, ನೀರಿನ ಬಿಲ್ ಎಲ್ಲ ಕಟ್ಟಬೇಕು. ಜೀವನ ನಡೆಸೋದು ತುಂಬಾ ಕಷ್ಟವಾಗಿದೆ. ಆದ್ದರಿಂದ ಡ್ಯೂಟಿ ಟೈಮ್ ಇಳಿಸಿ, ಸರಿಯಾದ ಸಮಯಕ್ಕೆ ಸಂಬಳ ನೀಡುವಂತೆ ಈ ಇಬ್ಬರು ಮಹಿಳಾ ನಿರ್ವಾಹಕರು ಮುಖ್ಯಮಂತ್ರಿಗೆ ಹಾಗೂ ಸಾರಿಗೆ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನು ಓದಿ: ನಾನು ಮತ್ತೆ ಹೇಳುತ್ತೇನೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ; ಸಿದ್ದರಾಮಯ್ಯ
ಕೊರೋನಾ ಲಾಕ್ ಡೌನ್ ಎಲ್ಲಾ ಅನ್ ಲಾಕ್ ಆಗಿ ಬಹಳ ದಿನಗಳೇ ಕಳೀತು. ಎಲ್ಲವೂ ಸಹಜ ಸ್ಥಿತಿಯತ್ತ ಮರಳ್ತಾ ಇದೆ. ಹೀಗಿದ್ದರೂ ಬಿಎಂಟಿಸಿಯ 802 ಸಿಬ್ಬಂದಿಗಳು ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ. ಈ ಬಗ್ಗೆ ಮಾತನಾಡಿದ ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಿತ್ ಥೋರಗಲ್, 802 ಮಂದಿ ಕಾರಣ ನೀಡದೆ ರಜೆ ಹಾಕಿದ್ದಾರೆ. ಇಷ್ಟು ದಿನ ರಜೆಯಲ್ಲಿರುವ ಸಿಬ್ಬಂದಿಗೆ ಕಾದು ನೋಡಿದ್ದೇವೆ. ಕೋವಿಡ್ ಇರುವ ಕಾರಣಕ್ಕೆ 3 ತಿಂಗಳವರೆಗೆ ರಜೆ ಹಾಕಿರುವ ಸಿಬ್ಬಂದಿಗಳಿಗೆ ಯಾವುದೇ ಶಿಕ್ಷೆ ವಿಧಿಸಲ್ಲ. ಆದರೆ ಅವರಿಗೆ ದಂಡ ಮತ್ತು ಎಚ್ಚರಿಕೆ ನೀಡುತ್ತೇವೆ. 802 ಸಿಬ್ಬಂದಿಗಳು ಯಾಕೆ ಬಂದಿಲ್ಲ ಅನ್ನೋದು ನಮಗೆ ಗೊತ್ತಿಲ್ಲ. 3 ತಿಂಗಳು ಆದ್ಮೇಲೆ ಯಾರು ಬರಲ್ಲ, ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ತೇವೆ. 802 ಸಿಬ್ಬಂದಿಗಳು ಬಂದಿಲ್ಲ ಅಂತ ಸಂಸ್ಥೆಗೆ ಯಾವ ರೀತಿಯಾಗಿ ತೊಂದರೆ ಆಗಿಲ್ಲ ಅಂತ ಹೇಳಿದರು.
ಒಂದು ಕಡೆ ಬಿಎಂಟಿಸಿ ಮಹಿಳಾ ಸಿಬ್ಬಂದಿಗಳು ತಮ್ಮ ಕಷ್ಟ ನಷ್ಟದ ಬಗ್ಗೆ ಅಳಲು ತೋಡಿಕೊಂಡರೆ ಇತ್ತ 802 ಸಿಬ್ಬಂದಿಗಳು ಕಳೆದ ಮೂರು ತಿಂಗಳಿನಿಂದ ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ ಇವೆಲ್ಲವನ್ನೂ ಬಗೆಹರಿಸುವ ಜವಾಬ್ದಾರಿ ಈಗ ಬಿಎಂಟಿಸಿ ಮೇಲಿದೆ. ಇದರ ಜೊತೆಗೆ ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ ಎಂದ ಮಹಿಳಾ ಸಿಬ್ಬಂದಿಗಳ ಕಣ್ಣೀರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರಗುತ್ತಾರಾ ಎಂದು ಕಾದು ನೋಡಬೇಕಿದೆ.
ವರದಿ: ಆಶಿಕ್ ಮುಲ್ಕಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ