ಬೆಂಗಳೂರು(ಮಾ.07): ನಾಳೆ ಅಂದರೆ ಸೋಮವಾರ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಬಹುನಿರೀಕ್ಷಿತ ಬಜೆಟ್ನ್ನು ಮಂಡಿಸಲಿದ್ದಾರೆ. ಕೊರೋನಾ ಸಂಕಷ್ಟದಿಂದ ಈಗಾಗಲೇ ನಲುಗಿರುವ ಜನ ಸಾಮಾನ್ಯರಿಗೆ ಈ ಬಜೆಟ್ನಲ್ಲಿ ಸಿಎಂ ಯಾವ್ಯಾವ ಗಿಫ್ಟ್ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಬಿಎಂಟಿಸಿ ಪ್ರಯಾಣಿಕರಿಗೆ ಈ ಬಾರಿಯ ಬಜೆಟ್ನಲ್ಲಿ ಸಿಹಿಗಿಂತ ಕಹಿಯೇ ಜಾಸ್ತಿ ಎನ್ನಲಾಗುತ್ತಿದೆ. ಅಂದರೆ ನಾಳಿನ ಬಜೆಟ್ನಲ್ಲಿ ಬಿಎಂಟಿಸಿ ಟಿಕೆಟ್ ದರ ಏರಿಕೆ ಮಾಡಲಾಗುತ್ತೆ ಎಂದು ತಿಳಿದು ಬಂದಿದೆ. ಹೀಗಾಗಿ ಬಿಎಂಟಿಸಿ ಪ್ರಯಾಣಿಕರು ಬಜೆಟ್ ಶಾಕ್ಗೆ ಸಿದ್ಧವಾಗಿರಿ.
ಡೀಸೆಲ್ ಬೆಲೆ ಏರಿಕೆ ಹಾಗೂ ಪ್ರಯಾಣಿಕರ ಸಂಖ್ಯೆ ಇಳಿಕೆ ಹಿನ್ನೆಲೆ ಬಿಎಂಟಿಸಿ ನಷ್ಟದಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರವು ಬಿಎಂಟಿಸಿ ಟಿಕೆಟ್ ದರ ಏರಿಕೆ ಮಾಡಲು ನಿರ್ಧರಿಸಿದೆ. ಲಾಕ್ಡೌನ್ ಸಮಯದಲ್ಲಿ ಬಿಎಂಟಿಸಿ ಸಾರಿಗೆಗೆ ಸಾಕಷ್ಟು ನಷ್ಟವಾಗಿತ್ತು. ಲಾಕ್ಡೌನ್ ತೆರವಿನ ನಂತರವೂ ಸಹ ಕೊರೋನಾ ಆತಂಕದಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬಿಎಂಟಿಸಿ ಸಾರಿಗೆಯಲ್ಲಿ ಪ್ರಯಾಣಿಸುತ್ತಿರಲಿಲ್ಲ. ಇದಾದ ಬಳಿಕ ಸಾರಿಗೆ ನೌಕರರ ಪ್ರತಿಭಟನೆಯೂ ನಡೆದಿತ್ತು. ಆಗಲೂ ಸಹ ಬಿಎಂಟಿಸಿಗೆ ಅಪಾರ ಪ್ರಮಾಣದ ನಷ್ಟವಾಗಿತ್ತು.
ಬಿಎಂಟಿಸಿ ಸಾರಿಗೆ ಸಾರ್ವಕಾಲಿಕ ನಷ್ಟದಲ್ಲಿದ್ದು, ಇದು ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಈ ನಷ್ಟವನ್ನು ಸರಿದೂಗಿಸಲು ಬಿಎಂಟಿಸಿ ದರ ಏರಿಕೆ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಬಿಎಂಟಿಸಿ ಸಾರಿಗೆ ನಷ್ಟದಲ್ಲಿರುವ ಹಿನ್ನೆಲೆ, ನಿಗಮದ ನಿರ್ವಹಣೆ ಸರ್ಕಾರದ ಹೆಗಲೇರಿದೆ. ಈ ಕಾರಣದಿಂದ ರಾಜ್ಯ ಸರ್ಕಾರ ಬಿಎಂಟಿಸಿ ಟಿಕೆಟ್ ದರ ಏರಿಸಲು ಮುಂದಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳನ್ನು GSTಗೆ ಸೇರಿಸಿದರೆ ಅದು ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ; ಎಚ್.ಡಿ.ಕುಮಾರಸ್ವಾಮಿ
ಕೋವಿಡ್ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಪ್ರತಿದಿನ ಸರಾಸರಿ 10 ಲಕ್ಷದಷ್ಟು ಕಡಿಮೆಯಾಗಿದೆ. ಆದ್ರೆ ನೌಕರರ ಸಂಬಳ, ಭತ್ಯೆ ಏರಿಕೆಯ ಬೇಡಿಕೆ ತೀವ್ರಗೊಳ್ಳುತ್ತಿದೆ. ಹೀಗಾಗಿ ದರ ಏರಿಕೆ ಮಾಡದಿದ್ರೆ ನಿಗಮ ನಿರ್ವಹಣೆ ಅಸಾಧ್ಯ ಎಂದು ಬಿಎಂಟಿಸಿ ಆಡಳಿತ ವರ್ಗ ಸರ್ಕಾರದ ಮುಂದೆ ಕೈಚೆಲ್ಲಿದೆ. ಈ ಹಿನ್ನಲೆ ತನ್ನ ಮೇಲಿನ ಭಾರವನ್ನ ಪ್ರಯಾಣಿಕರಿಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಟಿಕೆಟ್ ದರವನ್ನ ಶೇ. 18 ರಿಂದ ಶೇ. 20 ಕ್ಕೆ ಏರಿಸಲು ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರವು ಬಿಎಂಟಿಸಿ ಪ್ರಸ್ತಾವನೆಯನ್ನ ಬಜೆಟ್ನಲ್ಲಿ ಅನುಮೋದಿಸಿ ನೂತನ ದರ ಘೋಷಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಬೆಂಗಳೂರು ನಗರ ಜನತೆಗೆ ಬಜೆಟ್ ಶಾಕ್ ಬಹುತೇಕ ನಿಶ್ಚಿತವಾಗಿದೆ.
ಇನ್ನು, ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಮಾಡುವ ವಿಚಾರವಾಗಿ ಬಿಎಂಟಿಸಿ ಎಂಡಿ ಸಿ. ಶಿಖಾ ಪ್ರತಿಕ್ರಿಯೆ ನೀಡಿದ್ದಾರೆ. ಸಂಸ್ಥೆ ಕೊರೋನಾ ಆರ್ಥಿಕ ಸಂಕಷ್ಟದಲ್ಲಿ ಇದೆ. ಕಳೆದ ಬಾರಿ ದರ ಏರಿಕೆ ವೇಳೆಯಲ್ಲಿದ್ದ ಡೀಸೆಲ್ ದರಕ್ಕಿಂತ ಪ್ರಸ್ತುತ ಡೀಸೆಲ್ ಬೆಲೆ 30 ರೂಪಾಯಿಯಷ್ಟು ಹೆಚ್ಚಳವಾಗಿದೆ. ಹೀಗಾಗಿ ಟಿಕೆಟ್ ದರ ಹೆಚ್ಚಳ ಮಾಡೋದು ಅನಿವಾರ್ಯವಾಗಿದೆ. ಈಗಾಗಲೇ ಸರ್ಕಾರಕ್ಕೆ ದರ ಹೆಚ್ಚಳ ಮಾಡುವ ಕುರಿತು ಪ್ರಸ್ತಾವನೆ ಕೊಡಲಾಗಿದೆ ಎಂದರು.
ಕಿಲೋ ಮೀಟರ್ಗೆ ಅನುಸಾರವಾಗಿ ದರ ಹೆಚ್ಚಳ ಮಾಡಲಾಗುತ್ತೆ. ಪ್ರಯಾಣಿಕರ ಕೊರತೆ ಸಹ ಇದೆ. 10 ಲಕ್ಷ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಬಜೆಟ್ ನಲ್ಲಿ ನಿರ್ಧಾರ ಹೊರಬರುವ ನಿರೀಕ್ಷೆ ಇದೆ. ಕಳೆದ ಬಾರಿ ಬೇರೆ ನಿಗಮಗಳು ಬಸ್ ದರ ಏರಿಕೆ ಮಾಡಿದ್ದವು. ಆಗ ಬಿಎಂಟಿಸಿ ದರ ಹೆಚ್ಚಳ ಮಾಡಿಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ