ಬೆಂಗಳೂರು(ಡಿ.15): ಸಾರಿಗೆ ನೌಕರರ ಅನಿರ್ದಿಷ್ಟವಾದಿ ಮುಷ್ಕರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಸ್ ಸಂಚಾರ ಮತ್ತೆ ಸಹಜ ಸ್ಥಿತಿಯತ್ತ ಮರಳಿದೆ. ಇಂದು ಬೆಳಗಿನ ಜಾವ 4 ಗಂಟೆಯಿಂದಲೇ ನಗರದಲ್ಲಿ ಬಸ್ ಸಂಚಾರ ಆರಂಭವಾಗಿದ್ದು ಪೂರ್ಣ ಪ್ರಮಾಣದಲ್ಲಿ ಬಸ್ ಗಳು ರಸ್ತೆಗಿಳಿದು ಕಾರ್ಯಾರಂಭ ಮಾಡಿವೆ. ಬೆಂಗಳೂರು ಜನರ ಜೀವನಾಡಿಯಾಗಿರುವ ಬಿಎಂಟಿಸಿ ಬಸ್ ಗಳು ಮತ್ತೆ ರಸ್ತೆಗೆ ಸಂಚಾರ ಆರಂಭಿಸಿರುವುದಕ್ಕೆ ಬಸ್ ಪ್ರಯಾಣಿಕರು ಸಂತಸಗೊಂಡಿದ್ದು ಬೆಳಗ್ಗೆಯಿಂದ ತಮ್ಮ ಕೆಲಸ, ಕಚೇರಿಗಳಿಗೆ ನೆಮ್ಮದಿಯಿಂದ ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು. ಮೆಜೆಸ್ಟಿಕ್ ನ ಬಿಎಂಟಿಸಿ ಬಸ್ ನಿಲ್ದಾಣದಿಂದ ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ಟ್ರಿಪ್ ಬಿಎಂಟಿಸಿ ಬಸ್ ಸಂಚಾರ ನಡೆಸುತ್ತವೆ. ಮೆಜೆಸ್ಟಿಕ್ ನಿಂದ ನಗರದ ಮೂಲೆ ಮೂಲೆಗೂ ಬಸ್ ಸಂಪರ್ಕವಿದ್ದು ಪ್ರತಿನಿತ್ಯ ಲಕ್ಷಾಂತರ ಜನ ಬಿಎಂಟಿಸಿ ಬಸ್ಗಳ ಮೂಲಕ ಪ್ರಯಾಣ ಮಾಡುತ್ತಾರೆ.
ಕಳೆದ ನಾಲ್ಕು ದಿನಗಳಿಂದ ನಡೆದ ಸಾರಿಗೆ ನೌಕರರ ಅನಿರ್ದಿಷ್ಟವಾದಿ ಮುಷ್ಕರದಿಂದಾಗಿ ರಾಜ್ಯದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸಹ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಅಕ್ಷರಶಃ ಪರದಾಡಿದ್ದರು. ನಾಲ್ಕು ದಿನಗಳ ಮುಷ್ಕರಕ್ಕೆ ನಿನ್ನೆ ಸಂಜೆ ಬ್ರೇಕ್ ಬಿದ್ದಿದ್ದು ನಿನ್ನೆಯೇ ಬೆರಳೆಣಿಕೆಯಷ್ಟು ಬಸ್ಗಳ ಸಂಚಾರ ಆರಂಭ ಮಾಡಿದ್ದವು.
ಕ್ಷುಲ್ಲಕ ವದಂತಿ ಹರಡಿದ ಏರ್ಟೆಲ್, ವಿಐ ವಿರುದ್ಧ ಟ್ರಾಯ್ ಕ್ರಮಕ್ಕೆ ಆಗ್ರಹಿಸಿ ರಿಲಾಯನ್ಸ್ ಜಿಯೋ ದೂರು
ಅದ್ರೆ ಬಹುತೇಕ ಚಾಲಕ ನಿರ್ವಾಹಕರು ಮುಷ್ಕರದಿಂದ ಪ್ರತಿಭಟನೆಗಳಲ್ಲಿ ಪಾಲ್ಗೊಂಡ ಪರಿಣಾಮ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿರಲಿಲ್ಲ. ಇಂದು ಬೆಳಗ್ಗೆಯಿಂದ ಮೊದಲ ಪಾಳಿಯ ಬಸ್ಗಳು ರಸ್ತೆಗೆ ಇಳಿದಿದ್ದು ಮೆಜೆಸ್ಟಿಕ್, ಮಾರ್ಕೆಟ್, ಶಿವಾಜಿನಗರ, ವಿಜಯನಗರ, ಯಶವಂತಪುರ, ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಜಯನಗರ, ಕೆಂಗೇರಿ ಸೇರಿದಂತೆ ನಗರದ ಪ್ರಮುಖ ಏರಿಯಾಗಳ ಕಡೆ ಸಂಚರಿಸಿದವು. ಬಸ್ ಗಳು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆಯೂ ಸಹ ಹೆಚ್ಚಳಗೊಂಡಿತ್ತು. ಬೆಳಗ್ಗೆಯಿಂದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಎಂದಿನಂತೆ ಪ್ರಯಾಣಿಕರ ಆಗಮಿಸುತ್ತಿದ್ದಾರೆ.
ಇನ್ನೂ ಬಿಎಂಟಿಸಿ ಬಸ್ ಗಳಲ್ಲದೆ ನಾಲ್ಕು ದಿನಗಳಿಂದ ಸ್ಥಗಿತಗೊಂಡಿದ್ದ ಕೆಎಸ್ಆರ್ ಟಿಸಿ ಬಸ್ ಗಳು ಸಹ ಸಂಚಾರ ಆರಂಭಿಸಿದವು. ಮೆಜೆಸ್ಟಿಕ್ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಟರ್ಮಿನಲ್ ಗಳಿಂದ ಸಂಚಾರ ಆರಂಭಿಸಿದ ಬಸ್ ಗಳು ರಾಜ್ಯದ ವಿವಿಧ ಜಿಲ್ಲೆ, ನಗರಗಳಿಗೆ ಪ್ರಯಾಣಿಕರನ್ನು ಕೊಂಡೊಯ್ದವು. ನಾಲ್ಕು ದಿನಗಳಿಂದ ಬಸ್ ಗಳು ಇಲ್ಲದೆ ನಗರದಲ್ಲಿ ಒದ್ದಾಡಿದ್ದ ಜನ ಬಸ್ ಬಂದ ಕೂಡಲೇ ಸಂತಸಗೊಂಡು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿ ಪ್ರಯಾಣ ಬೆಳೆಸಿದ್ದಾರೆ.
ನಿನ್ನೆ ಸಂಜೆಯಿಂದಲೇ ಬೆಳಗಾವಿ, ಗದಗ, ರಾಯಚೂರು, ಕಲಬುರಗಿ, ಯಾದಗಿರಿ, ಬಳ್ಳಾರಿ, ಶಿವಮೊಗ್ಗ, ತುಮಕೂರು, ಮಂಗಳೂರು ಸೇರಿ ಹಲವೆಡೆಗೆ ಬಸ್ ಗಳ ಓಡಾಟ ಶುರುವಾಗಿತ್ತು. ಇನ್ನೂ ಕೆಎಸ್ಆರ್ ಟಿಸಿ ಬುಕಿಂಗ್ ಸಹ ಆರಂಭವಾಗಿದ್ದು ನೂರಾರು ಜನ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಬುಕಿಂಗ್ ನಲ್ಲಿ ನಿರತರಾಗಿದ್ದರು. ಕಳೆದ ನಾಲ್ಕು ದಿನಗಳ ಬಸ್ ಅನಾನುಕೂಲದ ದಾವಂತದಿಂದ ಬಸವಳಿದಿದ್ದ ಜನ, ಸಂಜೆ ವೇಳೆಗೆ ನೆಮ್ಮದಿಯಿಂದ ಮನೆ ಕಡೆಗೆ ಬಸ್ ಹತ್ತಿದ್ದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸ್ವಲ್ಪ ನೆಮ್ಮದಿಯುಂಟು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ