HOME » NEWS » State » BLAST CASE AT HUBLI RAILWAY STATION THE ACCUSED WHO HAVE NOT YET BEEN FOUND MAK

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ ಪ್ರಕರಣ; ಇನ್ನೂ ಪತ್ತೆಯಾಗದ ಆರೋಪಿಗಳು, ಹಳಿ ತಪ್ಪಿರುವ ತನಿಖೆ

ಸ್ಫೋಟ ಪ್ರಕರಣದ ನಂತರವಾದರೂ ರೈಲ್ವೇ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ರೈಲ್ವೇ ಪೊಲೀಸರು ರೈಲ್ವೆ ಇಲಾಖೆಗೆ ಕೆಲವು ಸಲಹೆಗಳನ್ನು ನೀಡಿ ಸುಮ್ಮನಾಗಿದ್ದಾರೆಯೇ ವಿನಃ ರಕ್ಷಣೆಯನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಿಲ್ಲ.

news18-kannada
Updated:January 24, 2020, 7:17 AM IST
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ ಪ್ರಕರಣ; ಇನ್ನೂ ಪತ್ತೆಯಾಗದ ಆರೋಪಿಗಳು, ಹಳಿ ತಪ್ಪಿರುವ ತನಿಖೆ
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಪೋಟ ಸಂಭವಿಸಿದ ಸ್ಥಳವನ್ನು ಪರಿಶೀಲನೆ ನಡೆಸಿದ್ದ ಪೊಲೀಸರು.
  • Share this:
ಹುಬ್ಬಳ್ಳಿ(ಜ.24) : ಇಲ್ಲಿನ ಕೇಂದ್ರ ರೈಲು ನಿಲ್ದಾಣದಲ್ಲಿ ಕಳೆದ ಅಕ್ಟೋಬರ್‌ 21ರಂದು ಸ್ಫೋಟ ಪ್ರಕರಣವೊಂದು ನಡೆದಿತ್ತು. ಜನನಿಬಿಡ ರೈಲು ನಿಲ್ದಾಣದಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದ ಕಾರಣ ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣ ಅದು. ಈ ಪ್ರಕರಣದ ಬೆನ್ನಿಗಿರುವ ವಿಧ್ವಂಸಕ ಶಕ್ತಿಯನ್ನು ಹುಡುಕುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡವನ್ನೂ ರಾಜ್ಯ ಪೊಲೀಸ್​ ರಚನೆ ಮಾಡಿತ್ತು. ಆದರೆ, ಈವರೆಗೆ ಆರೋಪಿಗಳು ಪತ್ತೆಯಾಗಿಲ್ಲ. ಅಷ್ಟೇ ಅಲ್ಲ ಇದೀಗ ತನಿಖೆಯೂ ಹಳಿ ತಪ್ಪಿರುವ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಅಂದು ವಿಜಯವಾಡ-ಹುಬ್ಬಳ್ಳಿ ಅಮರಾವತಿ ಎಕ್ಸಪ್ರೆಸ್‌ ರೈಲಿನಲ್ಲಿದ್ದ ಎಂಟು ಸ್ಪೋಟಕಗಳ ಪೈಕಿ ಒಂದು ಸಿಡಿದಿತ್ತು. ಇನ್ನುಳಿದ ಏಳು ಸ್ಪೋಟಕಗಳನ್ನು ಬಾಂಬ್‌ ನಿಷ್ಕ್ರೀಯ ದಳದಿಂದ ನಿಷ್ಕ್ರೀಯಗೊಳಿಸಲಾಗಿತ್ತು. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು. ಆದರೆ ಇದುವರೆಗೆ ತನಿಖೆಯಲ್ಲಿ ಸಣ್ಣ ಪ್ರಮಾಣದ ಪ್ರಗತಿಯೂ ಆಗಿಲ್ಲ.

ತನಿಖಾ ತಂಡ ಆಂಧ್ರದ ವಿಜಯವಾಡ ಮತ್ತು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹೋಗಿ ಬಂದಿದೆ. ವಿಜಯವಾಡದಿಂದ ಹುಬ್ಬಳ್ಳಿವರೆಗಿನ 26 ರೈಲು ನಿಲ್ದಾಣಗಳನ್ನು ಪರಿಶೀಲನೆ ನಡೆಸಲಾಗಿದೆ. ಆದರೆ ಬಹುತೇಕ ರೈಲು ನಿಲ್ದಾಣಗಳಲ್ಲಿನ ಸಿಸಿಟಿವಿಗಳು ಕೆಲಸ  ಮಾಡುತ್ತಿಲ್ಲ. ಹೀಗಾಗಿ ಯಾವ ನಿಲ್ದಾಣದಲ್ಲಿ ಸ್ಪೋಟಕಗಳನ್ನು ರೈಲಿನಲ್ಲಿ ಇರಿಸಲಾಯಿತು ಎನ್ನುವುದರ ಸುಳಿವು ಸಿಕ್ಕಿಲ್ಲ. ಈ ಭಾಗದವರೇ ಆದ ರೈಲ್ವೆ ಸಚಿವ ಸುರೇಶ್‌ ಅಂಗಡಿ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದಿದ್ದರು. ಆದರೆ ತನಿಖೆ ಮಾತ್ರ ಯಾವುದೇ ಪ್ರಗತಿ ಕಾಣುವ ಲಕ್ಷಣ ಕಂಡುಬರುತ್ತಿಲ್ಲ.

ಭದ್ರತೆ ವಿಚಾರದಲ್ಲೂ ಅದೇ ರಾಗ ಅದೇ ಹಾಡು:

ಸ್ಫೋಟ ಪ್ರಕರಣದ ನಂತರವಾದರೂ ರೈಲ್ವೇ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ರೈಲ್ವೇ ಪೊಲೀಸರು ರೈಲ್ವೆ ಇಲಾಖೆಗೆ ಕೆಲವು ಸಲಹೆಗಳನ್ನು ನೀಡಿ ಸುಮ್ಮನಾಗಿದ್ದಾರೆಯೇ ವಿನಃ ರಕ್ಷಣೆಯನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಿಲ್ಲ.

ರೈಲ್ವೇ ನಿಲ್ದಾಣದಲ್ಲಿ ನಾಲ್ಕು ಮೆಟಲ್‌ ಡಿಟೆಕ್ಟರ್‌ ಡೋರ್‌ ಪ್ರೇಮ್‌ಗಳನ್ನು ಅಳವಡಿಸಬೇಕು. ಲಗೇಜ್‌ ಸ್ಕ್ಯಾನಿಂಗ್‌ ಯಂತ್ರ ಇರಬೇಕು. ಹ್ಯಾಂಡ್‌ ಹೋಲ್ಡ್‌ ಡಿಟೆಕ್ಟರ್‌ಗಳು ಬೇಕು. ಕೆಲವು ಪ್ರದೇಶಗಳಲ್ಲಿ ಹೈ ರೆಜಲ್ಯೂಷನ್‌ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ರೈಲ್ವೇ ಇಲಾಖೆ ಮಾತ್ರ ಸೂಕ್ತ ಕ್ರಮಕ್ಕೆ ಮುಂದಾದಂತೆ ಕಂಡು ಬರುತ್ತಿಲ್ಲ. ಘಟನೆ ನಡೆದು ಮೂರು ತಿಂಗಳಾದರೂ ಪ್ರಪೋಜಲ್‌ ಕಳಿಸಿದ್ದೇವೆ ಎನ್ನುವ ಉತ್ತರವೇ ಸಿಗುತ್ತದೆಯೇ ವಿನಃ ಬೇರೆ ಏನೂ ಲಾಭವಿಲ್ಲ.

ಘಟನೆ ಮರುಕಳಿಸಲ್ಲಾ ಅನ್ನೋ ಗ್ಯಾರಂಟಿ ಇಲ್ಲಾ:ಸ್ಪೋಟಕಗಳಿದ್ದ ಬಾಕ್ಸ್‌ ಮೇಲೆ ಮಹಾರಾಷ್ಟ್ರದ ರಾಧಾನಗರಿ ಕ್ಷೇತ್ರದ ಶಾಸಕ ಪ್ರಸಾದ್‌ ಅಬೀದ್ಕರ ಹೆಸರು ಬರೆಯಲಾಗಿತ್ತು. ನೋ ಬಿಜೆಪಿ, ನೋ ಆರ್‌ಎಸ್‌ಎಸ್‌, ಓನ್ಲಿ ಶಿವಸೇನಾ ಎಂದು ನಮೂದಿಸಲಾಗಿತ್ತು. ರೈಲ್ವೇ ಪೊಲೀಸರು ಶಾಸಕ ಪ್ರಸಾದ್‌ ಅಬಿದ್ಕರ್‌ ಅವರನ್ನೂ ಭೇಟಿಯಾಗಿ ಬಂದಿದ್ದಾರೆ. ಆದರೆ ಯಾವುದೇ ಸುಳಿವು ಮಾತ್ರ ಸಿಕ್ಕಿಲ್ಲ.

ಸ್ಪೋಟಕದಲ್ಲಿ ಗನ್‌ ಪೌಡರ್‌, ಸಲ್ಫರ್‌, ಅಮೋನಿಯಂ ನೈಟ್ರೇಟ್‌ ಅಂಶ ಇತ್ತೆಂದು ಈಗಾಗಲೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರೈಲ್ವೆ ಪೊಲೀಸರು ತನಿಖೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಂತೆ ಕಂಡು ಬರುತ್ತಿಲ್ಲ. ಇನ್ನೊಂದೆಡೆ ಸ್ಪೋಟಕದ ಜೊತೆಗೆ ಇಟ್ಟಿದ್ದ ಭತ್ತದ ಗೊಳಲಿಯನ್ನು ಪರೀಶೀಲನೆಗೆ ಕಳಿಸಲಾಗಿದೆ. ಯಾವ ಭಾಗದಲ್ಲಿ ಈ ಮಾದರಿಯ ಭತ್ತ ಬೆಳೆಯಲಾಗುತ್ತದೆ ಎಂದು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸ್ಪೋಟಕ ಎಲ್ಲಿಂದ ಬಂತು ಎನ್ನುವುದು ಕೂಡ ಪತ್ತೆಯಾಗಿಲ್ಲದಿರುವುದು ತನಿಖಾ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಪ್ರತಿನಿತ್ಯ ಸುಮಾರು ನೂರು ಟ್ರೈನ್‌ಗಳು ಸಂಚರಿಸುತ್ತವೆ. ಐವತ್ತು ಸಾವಿರ ಪ್ರಯಾಣಿಕರು ನಿಲ್ದಾಣಕ್ಕೆ ಪ್ರತಿನಿತ್ಯ ಬಂದು ಹೋಗುತ್ತಾರೆ. ಮೂರು ಪ್ರಮುಖ ದ್ವಾರಗಳಿವೆ. ಆದರೆ ಕೈಯ್ಯಲ್ಲಿ ಒಂದು ಮೆಟಲ್‌ ಡಿಟೆಕ್ಟರ್‌ ಹಿಡಿದು ಪ್ರಯಾಣಿಕರನ್ನು ಮತ್ತು ಬ್ಯಾಗ್‌ಗಳನ್ನು ಪರಿಶೀಲಿಸುವ ಕೆಲವೇ ಆರ್‌ಪಿಎಫ್‌ ಸಿಬ್ಬಂಧಿ ಕಾಣಸಿಗುತ್ತಾರೆ. ಕೇಳಿದರೆ ಸೆಕ್ಯುರಿಟಿ ಲೋಪವಾಗದಂತೆ ಭದ್ರತೆ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ.

ಆರೋಪಿ ಬಂಧನಕ್ಕೆ ಇನ್ನೆಷ್ಟು ದಿನ ಬೇಕು?:

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದ ಸ್ಪೋಟದಲ್ಲಿ ಓರ್ವ ಅಮಾಯಕ ಕಾರ್ಮಿಕ ಕೈ ಕಳೆದುಕೊಂಡಿದ್ದ. ಇತರೆ ಏಳು ಸ್ಪೋಟಕಗಳು ಸಿಡಿದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ. ಜನ ನಿಬಿಡ ರೈಲ್ವೇ ನಿಲ್ದಾಣದಲ್ಲಿ ಸ್ಪೋಟಕ ಸಿಕ್ಕಿದ್ದು ಜನರನ್ನು ಭಯಭೀತರನ್ನಾಗಿ ಮಾಡಿತ್ತು. ಆದರೂ ಸೂಕ್ತ ಕ್ರಮವನ್ನು ಕೈಗೊಳ್ಳದಿರುವುದು ರೈಲು ನಿಲ್ದಾಣದ ಸುರಕ್ಷತೆಯ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ. ರೈಲ್ವೆೇ ಪೊಲೀಸರು ಮತ್ತು ರೈಲ್ವೆೇ ಇಲಾಖೆ ಪ್ರಕರಣವನ್ನು ನಿರ್ಲಕ್ಷಿಸಿದಂತೆ ಕಂಡುಬರುತ್ತಿದೆ. ಪೊಲೀಸರು ತನಿಖೆ ಚುರುಕುಗೊಳಿಸಿ, ಆರೋಪಿಗಳನ್ನು ಬಂಧಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಇದನ್ನೂ ಓದಿ : ವರ್ಗಾವಣೆಯಾದರೂ ಖುರ್ಚಿ ಬಿಡದ ಅಧಿಕಾರಿ, ರಾಯಚೂರಿನಲ್ಲಿ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು..!

 
Youtube Video
First published: January 24, 2020, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories