ಬೆಂಗಳೂರು: ಚುನಾವಣೆ (Elections) ಅನ್ನೋದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಆದರೆ ಆ ಹಬ್ಬ ಬರುತ್ತಿದ್ದಂತೆ ಅನಾಚಾರಗಳು ಉತ್ತುಂಗಕ್ಕೆ ಹೋಗುತ್ತಿವೆ. ರಾಜ್ಯದಲ್ಲೂ ಚುನಾವಣೆ (Karnataka Legislative Assembly Election) ಸಮೀಪಿಸುತ್ತಿದ್ದು, ನಾಲಿಗೆ ಮೇಲೆ ನಿಗಾ ಇಲ್ಲದೆ ಮಾತನಾಡುತ್ತಿದ್ದಾರೆ. ಈ ಮಾತುಗಳು ಛೀ, ಥೂ.. ಅನ್ನೋ ಮಟ್ಟಕ್ಕೆ ತಲುಪಿವೆ. ವಿಧಾನಸಭೆ ಚುನಾವಣೆಗೆ ದಿನೇ ದಿನೇ ಅಖಾಡ ರಂಗೇರುತ್ತಿದೆ. ಸಂಘಟನೆ, ಮತ ಬ್ಯಾಂಕ್ಗಳನ್ನ (Vote Bank) ಸೆಳೆಯೋ ಮೂಲಕ ರಾಜಕೀಯ ಪಕ್ಷಗಳು (Political Parties) ವೋಟ್ ಬೇಸ್ ಮಾಡಿಕೊಳ್ಳುತ್ತಿವೆ. ಈ ಮಧ್ಯೆ ಒಬ್ಬರನ್ನ ಮತ್ತೊಬ್ಬರು ಹಣಿಯಲು ಹೋಗಿ ತೀರಾ ಕೆಳ ಮಟ್ಟಕ್ಕೂ ನಾಯಕರು ಇಳಿಯುತ್ತಿದ್ದಾರೆ. ಹೌದು, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ (BK Hariprasad) ಹೇಳಿರುವ ಆ ಒಂದು ಮಾತು ಎದುರಾಳಿ ನಾಯಕರ ಬಾಯಲ್ಲಿ ಬೆಂಕಿಯುಂಡೆ ಬರುವಂತೆ ಮಾಡಿದೆ.
ವೇಶ್ಯೆಯರ ರೀತಿ ಮಾರಿಕೊಂಡಿದ್ದಾರೆ
ವಿಜಯನಗರದಲ್ಲಿ ನಡೆಯುತ್ತಿದ್ದ ಬಸ್ ಯಾತ್ರೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರನ್ನ ಹಣಿಯೋ ಆತುರದಲ್ಲಿ ತೀರ ಆಕ್ಷೇಪಾರ್ಹ ರೀತಿಯಲ್ಲಿ ಉದಾಹರಣೆ ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಈ ಹಿಂದೆ ನೀವು ಯಾವುದೇ ಪಕ್ಷಕ್ಕೆ ಬಹುಮತ ನೀಡದ ಸಂದರ್ಭದಲ್ಲಿ ನಾವು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವು.
ಭಾರತೀಯ ಜನತಾ ಪಾರ್ಟಿಯನ್ನ ನೀವು ತಿರಸ್ಕಾರ ಮಾಡಿದ್ರಿ. ಆದರೆ ಅಂದು ಕೆಲವು ಶಾಸಕರು ತಮ್ಮನ್ನೇ ಮಾರಾಟ ಮಾಡಿಕೊಂಡಿದ್ದರು. ತನ್ನ ಹೊಟ್ಟೆಪಡಿಗಾಗಿ ಮಹಿಳೆ ಮೈ ಮಾರಿಕೊಂಡಾಗ ಅವರನ್ನು ಯಾವ್ಯಾವುದೇ ಹೆಸರಿನಲ್ಲಿ ಕರೆಯುತ್ತೇವೆ. ವೇಶ್ಯೆ ಅಂತ ಹೇಳುತ್ತೇವೆ. ಆದರೆ ತಮ್ಮನ್ನ ಮಾರಿಕೊಂಡ ಶಾಸರಿಗೆ ನೀವು ಏನಂತಾ ಕರೆಯುತ್ತೀರಿ? ಅದನ್ನು ನಿಮಗೆ ಬಿಟ್ಟಿದ್ದೇನೆ ಎಂದು ಹೇಳಿದ್ದರು.
ಹರಿಪ್ರಸಾದ್ ಹೇಳಿಕೆಗೆ ಕೇಸರಿ ಕಲಿಗಳು ನಿಗಿನಿಗಿ
ಬಿ.ಕೆ ಹರಿಪ್ರಸಾದ್ ಹೇಳೆಕೆಯಿಂದ ಕಂಡಾಮಂಡಲರಾಗಿರುವ ಬಿಜೆಪಿ ನಾಯಕರು ಬೆಂಕಿ ಉಗುಳಿದ್ದಾರೆ. ಹರಿಪ್ರಸಾದ್ ವಿರುದ್ಧ ಮನಸೋ ಇಚ್ಛೆ ವಾಗ್ಧಾಳಿ ನಡೆಸಿದ್ದಾರೆ.
ಹಾವೇರಿಯಲ್ಲಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ ತಿರುಗೇಟು ಕೊಟ್ಟಿದ್ದಾರೆ. ನಾವು ಕಾಂಗ್ರೆಸ್ ನವರು ಮಾಡಿದ ದ್ರೋಹಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇವು. ಜನಾದೇಶ ಪಡೆದು ಮತ್ತೆ ಶಾಸಕರಾಗಿದ್ದೇವೆ, ನಮ್ಮ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇವೆ. ಹರಿಪ್ರಸಾದ್ ಯಾವ ಚುನಾವಣೆ ಗೆದ್ದು ಬಂದಿದ್ದಾರೆ? ಹಿಂಬಾಗಲಿನಿಂದ ಬಂದು MLC ಆಗಿದ್ದಾರೆ. ಆದರೆ ನಾವು ಆ ತರ ಅವರನ್ನ ಕರೆಯಲ್ಲ. ಬಹುಶಃ ಇದು ಅವರ ಸಂಸ್ಕೃತಿ ತೋರಿಸುತ್ತೆ. ಹಿಂಬಾಗಲಿನಿಂದ ಬಂದು ಎಂ.ಎಲ್ ಸಿ ಆಗಿದ್ದಾರೆ. ಹಿಂಬಾಗಲಿನಿಂದ ಬಂದ ಇವರನ್ನು ಪಿಂಪ್ ಎಂದು ಕರೆಯಬಹುದಾ? ಆದರೆ ನಾವು ಆ ತರ ಕರೆಯುವುದಿಲ್ಲ.
ಇವರಿಗೂ ಸಾಂಟ್ರೋ ರವಿಗೂ ಏನು ವ್ಯತ್ಯಾಸ?
ಬಹುಶಃ ಇದು ಅವರ ಸಂಸ್ಕೃತಿ ತೋರಿಸುತ್ತೆ ಅಷ್ಟೇ. ಆ ತರ ಮಾತಾಡಿದರೆ ಜನ ಬೆನ್ನತ್ತಿ ಹೊಡೆಯುತ್ತಾರೆ. ಇಷ್ಟು ವರ್ಷ ಕಾಂಗ್ರೆಸ್ ನವರು ರೋಗ ಗ್ರಸ್ತ ಸರ್ಕಾರ ಮಾಡಿದ್ದರು. ಅದನ್ನು ತೊಳೆಯುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ಇವರು ಇದ್ದಾಗ ಯಾವ ರೀತಿ ಇತ್ತು ಮುಟ್ಟಿ ನೋಡಿಕೊಳ್ಳಲಿ. ಕಾಂಗ್ರೆಸ್ ನವರಿಗೆ ಸುಳ್ಳು ಅವರ ಮನೆ ದೇವರು, ಮೋದಿ ಅತ್ಯಂತ ಹೆಚ್ಚು ಬಹುಮತಗಳಿಸಿದ್ದಾರೆ ಎಂದರು. ಇತ್ತ ಕೋಲಾರದಲ್ಲಿ ಮಾತನಾಡಿರುವ ಸಚಿವ ಮುನಿರತ್ನ ಅವರು, ಸ್ಯಾಂಟ್ರೋ ರವಿಗೂ, ಬಿ.ಕೆ ಹರಿಪ್ರಸಾದ್ ಏನು ವ್ಯತ್ಯಾಸ ಇಲ್ಲ ಅಂತ ಕುಟುಕಿದ್ದಾರೆ.
ಇದನ್ನೂ ಓದಿ: BJP ಮಾಡೆಲ್ ಅನುಸರಿಸುತ್ತಾ ಕಾಂಗ್ರೆಸ್? ಗುಜರಾತ್ನಂತೆ ಕರ್ನಾಟಕದಲ್ಲೂ ಹಿರಿಯರಿಗೆ ಕೊಡ್ತಾರಾ ಗೇಟ್ಪಾಸ್?
ರಾಜಕೀಯ ಎಂದರೇ ಜನಸಾಮಾನ್ಯರು ಈಗಾಗಲೇ ಛೀ, ಥೂ ಅಂತಿದ್ದಾರೆ. ಇಂಥಹಾ ಸಮಯದಲ್ಲಿ ನಾಯಕರು ಎನ್ನಿಸಿಕೊಂಡವರ ಮೌಲ್ಯಯುತ ಮಾತುಗಳನ್ನ ಮರೆತು ಈ ರೀತಿ ವರ್ತಿಸುವುದು ನಿಜಕ್ಕೂ ವಿಪರ್ಯಾಸ. ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ ರಾಜಕೀಯ ನಾಯಕರು ಇನ್ನು ಯಾವ ಮಟ್ಟಕ್ಕೆ ಇಳಿಯುತ್ತಾರೋ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ