ದಿಲ್ಲಿ ಪೋಸ್ಟ್ | ಹರಿಪ್ರಸಾದ್ ಎಂಟ್ರಿ ಸಿದ್ದು-ಡಿಕೆಶಿ ಜೋಡಿಗೆ ಕುತ್ತು; ಕತೆ, ಚಿತ್ರಕಥೆ, ನಿರ್ದೇಶನ- ಜಿ.ಸಿ.ಚಂದ್ರಶೇಖರ್

ವಿಧಾನ ಪರಿಷತ್ತಿಗೆ ಬಿ.ಕೆ. ಹರಿಪ್ರಸಾದ್ ಅವರನ್ನೇ ಕಾಂಗ್ರೆಸ್ ಅಭ್ಯರ್ಥಿ ಮಾಡಿದ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗಾದ ನಷ್ಟದ ಕುತೂಹಲಕಾರಿ ಸಂಗತಿಗಳು ನ್ಯೂಸ್ 18 ಕನ್ನಡದ ದೆಹಲಿ ಪ್ರತಿನಿಧಿ ಧರಣೀಶ್ ಬೂಕನಕೆರೆ ಅವರ ಈ ವಾರದ ದಿಲ್ಲಿ ಪೋಸ್ಟ್ ಕಾಲಂನಲ್ಲಿ...

ದಿಲ್ಲಿ ಪೋಸ್ಟ್

ದಿಲ್ಲಿ ಪೋಸ್ಟ್

  • Share this:
ಬಿ.ಕೆ.‌ ಹರಿಪ್ರಸಾದ್ ರಾಜ್ಯ ರಾಜಕಾರಣಕ್ಕೆ ಅವರಾಗೇ ಬಂದವರಲ್ಲ.‌ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬರಮಾಡಿಕೊಂಡಿದ್ದಾರೆ. ಇದು 'ಕಾಟಾ ನಿಕಾಲ್ಕೆ ಕೂಟ ಮಾರ್ಲಿಯಾ' ಎಂಬಂತಾಗಿದೆ. ಅಂದರೆ 'ಮುಳ್ಳು‌ ಕಿತ್ತಾಕಿ ಗೂಟ ನೆಟ್ಟಿಕೊಂಡರು' ಎನ್ನುವ ಹಾಗೆ.
ವಿಧಾನ‌ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿದ್ದ 2 ಸ್ಥಾನಗಳ ಪೈಕಿ ಒಂದನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ, ಇನ್ನೊಂದನ್ನು ಹಿಂದುಳಿದವರಿಗೆ ನೀಡಲು ನಿಶ್ಚಯಿಸಲಾಗಿತ್ತು. ಮೊದಲಿಂದಲೂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಪೈಕಿ ನಸೀರ್ ಅಹಮದ್ ಗೆ ಕೊಡಿ ಎಂದು ಪಟ್ಟು ಹಿಡಿದಿದ್ದರು. ಹಿಂದುಳಿದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಡಿ.ಕೆ. ಶಿವಕುಮಾರ್ ಜೊತೆ ಸೇರಿ ಎಂ.ಆರ್.‌ ಸೀತಾರಾಂ (ಬಲಿಜ), ಎಂ.ಸಿ. ವೇಣುಗೋಪಾಲ್ (ಸವಿತಾ) ಮತ್ತು  ಡಿ.ಕೆ‌. ಮೊಹನ್ ಬಾಬು (ಯಾದವ) ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಿ ಹೈಕಮಾಂಡಿಗೆ ಒತ್ತಾಕಿದ್ದರು. ಯಾರನ್ನೂ ಹೇಳದೆ‌ ಕೇಳದೆ ಪಟ್ಟಿ ಕಳಿಸಿದ ಸಿದ್ದು-ಡಿಕೆಶಿ ಜೋಡಿ ವಿರುದ್ಧ ಮೂಲ ಕಾಂಗ್ರೆಸಿಗರು ಕೆಂಡಮಂಡಲರಾದರು. ಜೋಡೆತ್ತುಗಳಿಗೆ ನೀರು ಕುಡಿಸಬೇಕೆಂದು ನಿರ್ಧರಿಸಿದರು. ಸೂಕ್ತ ಅಭ್ಯರ್ಥಿ ಯಾರೂ ಅಂತಾ ಹುಡುಕಿದಾಗ ಸಿಕ್ಕಿದವರೇ ಬಿ.ಕೆ. ಹರಿಪ್ರಸಾದ್.

ಬಿಗ್ ಲಾಸ್ ಫಾರ್ ಬೋಥ್...

ವಿಧಾನ ಪರಿಷತ್ ಚುನಾವಣೆಯಲ್ಲಿ ‌ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರಿಗೂ ಭಾರೀ ನಷ್ಟವಾಗಿದೆ. ಸಿದ್ದರಾಮಯ್ಯ ತಾವು ಅಂದುಕೊಂಡಂತೆ ನಸೀರ್ ಅಹಮದ್ ಗೆ ಟಿಕೆಟ್ ಕೊಡಿಸುವುದರಲ್ಲಿ ಸಫಲರಾಗಿರಬಹುದು, ಆದರೆ ರಾಜ್ಯದ ಅಲ್ಪಸಂಖ್ಯಾತರ ನಾಯಕರುಗಳಿಗೇ ನಾಯಕರಂತಿದ್ದ ಸಿದ್ದರಾಮಯ್ಯ ಈ ಘಟನೆಯಿಂದ ಹಲವರ ವಿರೋಧ ಕಟ್ಟಿಕೊಂಡಿದ್ದಾರೆ. ಸಿದ್ದರಾಮಯ್ಯ, ನಸೀರ್ ಪರ ಪಟ್ಟು ಹಾಕುತ್ತಿದ್ದಂತೆ ಜಮೀರ್ ಅಹಮದ್ ಮತ್ತು ರಿಜ್ವಾನ್ ಅರ್ಷದ್ ಬಿಟ್ಟು ಉಳಿದೆಲ್ಲಾ ನಾಯಕರು ಜಬ್ಬಾರ್ ಪರ ಸಹಿ ಸಂಗ್ರಹ ಮಾಡಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಹಲವರಿಗೋಸ್ಕರ ಒಬ್ಬರ ವಿರೋಧ ಕಟ್ಟಿಕೊಳ್ಳುವುದು ರಾಜಕೀಯದಲ್ಲಿ ಮಾಮೂಲು.‌ ಆದರೆ ಸಿದ್ದರಾಮಯ್ಯ, ನಸೀರ್ ಒಬ್ಬರಿಗೋಸ್ಕರ ಹಲವರ ವಿರೋಧ ಕಟ್ಟಿಕೊಂಡಿದ್ದಾರೆ.

ಡಿ.ಕೆ. ಶಿವಕುಮಾರ್ ಸಂಕಟ ಇನ್ನೊಂದು ಬಗೆಯದು. ರಾಜ್ಯ ನಾಯಕರ ಪಟ್ಟಿಯನ್ನು ಹೈಕಮಾಂಡ್ ‌ಕಸದ ಬುಟ್ಟಿಗೆ ಎಸೆಯುತ್ತಿದ್ದಂತೆ ಡಿಕೆಶಿ ಎಂದಿನಂತೆ ಓವರ್ ಸ್ಮಾರ್ಟ್ ಆದರು. ದಿಢೀರನೆ ‌ಹಿಂದುಳಿದವರ ಕೋಟಾವನ್ನೇ ಕಸಿಯಲು ಮುಂದಾದರು. ಆ ಜಾಗಕ್ಕೆ ಅವರು ತರಲು ಹೊರಟಿದ್ದು ಮಾಜಿ ಸಂಸದ ಮುದ್ದಹನುಮೇಗೌಡರನ್ನು. ಆದರೆ ಇತರೆ ಮೂಲ ಕಾಂಗ್ರೆಸಿಗರ ಆಟದ ಎದುರು ಡಿಕೆಶಿ ಆಟ ನಡೆಯಲಿಲ್ಲ.‌ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ತಮ್ಮ ಅಭ್ಯರ್ಥಿಯೊಬ್ಬರನ್ನು ಆಯ್ಕೆ ಮಾಡುವ ಮೊದಲ ಅವಕಾಶವನ್ನೇ ಕಳೆದುಕೊಂಡರು.

ಕೈ ಕೊಟ್ಟ ಡಿಕೆ ಸಹೋದರರ ತಂತ್ರ

ಮುಖ್ಯಮಂತ್ರಿ ಕುರ್ಚಿ ಕನಸು ಕಾಣುತ್ತಿರುವ ಡಿಕೆಶಿ ಅದಕ್ಕಾಗಿ ನಂಬಿಕೊಂಡಿರುವುದು ಕಾಂಗ್ರೆಸ್ ಪಕ್ಷದ ಸಂಪ್ರದಾಯಿಕ ಮತಗಳನ್ನು. ‌ಜೊತೆಗೆ ಒಂದಿಷ್ಟು ಒಕ್ಕಲಿಗ ಮತಗಳನ್ನು. ಈ ಒಕ್ಕಲಿಗ ಮತಗಳ ಮೇಲೆ‌ ಕಣ್ಣಿಟ್ಟೇ ಮುದ್ದಹನುಮೇಗೌಡರನ್ನು ಪರಿಷತ್ತಿಗೆ ತರಲು ಪ್ರಯತ್ನಿಸಿದ್ದರು. ಡಿಕೆಶಿಗೆ ಇಂಥದೊಂದು ಸಲಹೆ ಕೊಟ್ಟವರು ಅವರ ಸಹೋದರ ಡಿ.ಕೆ.‌ ಸುರೇಶ್.‌ ಮುದ್ದಹನುಮೇಗೌಡರ ಆಯ್ಕೆ ಮುಖಾಂತರ ತಮ್ಮ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನೂ ಗಟ್ಟಿ ಮಾಡಿಕೊಳ್ಳುವುದು ಸುರೇಶ್ ಲೆಕ್ಕಾಚಾರ ಆಗಿತ್ತು.‌ ಆದರೆ ಮೂಲ ಕಾಂಗ್ರೆಸಿಗರು ಉರುಳಿಸಿದ ದಾಳದ ಎದುರು ಡಿಕೆ ಸಹೋದರರ ತಂತ್ರ ವಿಫಲವಾಯಿತು.

ಮೇಲುಗೈ ಸಾಧಿಸಿದ ಮೂಲ ಕಾಂಗ್ರೆಸಿಗರು

ಹರಿಪ್ರಸಾದ್ ಎಂಬ ಒಂದೇ ಕಲ್ಲಿನಲ್ಲಿ ಮೂಲ ಕಾಂಗ್ರೆಸಿಗರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರನ್ನೂ ಹೊಡೆದುರುಳಿಸಿದ್ದಾರೆ. ಇನ್ನು ಮುಂದೆ ಅದು ಶಾಸಕಾಂಗ ಪಕ್ಷದ ಸಭೆ ಇರಲಿ, ವಿರೋಧ ಪಕ್ಷದ ವೇದಿಕೆ ಇರಲಿ ಹರಿಪ್ರಸಾದ್ ಗುಟುರು ಇರುತ್ತದೆ. ಇಬ್ಬರಿಗೂ ಮುಖಕ್ಕೆ ಹೊಡೆದಂತೆ ಹೇಳುವ ಛಾತಿಯುಳ್ಳವರು ಹರಿಪ್ರಸಾದ್. ಅದಕ್ಕಾಗಿಯೇ ಹುಡುಕಿ‌ ಹುಡುಕಿ‌ ಹರಿಪ್ರಸಾದ್ ಅವರನ್ನು ತರಲಾಗಿದೆ.

ಕತೆ, ಚಿತ್ರಕಥೆ, ನಿರ್ದೇಶನ- ಜಿ.ಸಿ. ಚಂದ್ರಶೇಖರ್

ರಾಜ್ಯ ಕಾಂಗ್ರೆಸಿನಲ್ಲಿ ಉಂಟಾಗಿರುವ ಸಂಚಲನದ ಹಿಂದಿನ ಸೂತ್ರಧಾರ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್. ಸಿದ್ದರಾಮಯ್ಯ ಅವರನ್ನು ಗುರಿಯಾಗಿರಿಸಿಕೊಂಡು ಜಿ.ಸಿ. ಚಂದ್ರಶೇಖರ್ ಹೂಡಿದ ತಂತ್ರದ ಎದುರು ಘಟಾನುಘಟಿ ನಾಯಕರು ನಡುಗಿಹೋಗಿದ್ದಾರೆ.‌ ಮೊದಲಿನಿಂದಲೂ ಸಿದ್ದರಾಮಯ್ಯಗೆ ಸಡ್ಡು ಹೊಡೆಯಲು ಕಾಯುತ್ತಿದ್ದ ಜಿ.ಸಿ. ಚಂದ್ರಶೇಖರ್, ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ವಾಪಸ್ ಕಳಿಸುತ್ತಿದ್ದಂತೆ ಹೈ ಅಲರ್ಟ್ ಆದರು. ಪರ್ಯಾಯ ಅಭ್ಯರ್ಥಿಯಾಗಿ ಬಿ.ಕೆ. ಹರಿಪ್ರಸಾದ್ ಅವರನ್ನು ಹುಡುಕಿದರು. ಇತರೆ ಮೂಲ ಕಾಂಗ್ರೆಸಿಗರು ಮತ್ತು ಸಿದ್ದರಾಮಯ್ಯ ವಿರೋಧಿಗಳಾದ ಡಾ. ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ, ಶಾಮನೂರು ಶಿವಶಂಕರಪ್ಪ ಮತ್ತಿತರನ್ನು ಕಲೆಹಾಕಿದರು. ರಾಜ್ಯ ರಾಜಕಾರಣಕ್ಕೆ ಬರಲು ಸಿದ್ದರಿಲ್ಲದಿದ್ದ ಹರಿಪ್ರಸಾದ್ ಅವರ ಮನವೊಲಿಸಿದರು. ಇಷ್ಟೇಯಲ್ಲ, ಇದಕ್ಕೂ ಮುನ್ನ ಎಂ.ಆರ್.‌ ಸೀತಾರಾಂ, ಎಂ.ಸಿ. ವೇಣುಗೋಪಾಲ್ ಮತ್ತು  ಡಿ.ಕೆ‌. ಮೊಹನ್ ಬಾಬು ಪೈಕಿ ಯಾರನ್ನೇ ಮಾಡಿದರೂ 'ಪೇಮೆಂಟ್ ಕೋಟಾ' ಎಂಬ ಅಪಖ್ಯಾತಿ ಹೊರಬೇಕಾಗುತ್ತದೆ ಎಂಬ ಸಂದೇಶವನ್ನು ಹೈಕಮಾಂಡಿಗೆ ಮುಟ್ಟಿಸಿದರು. ಇದರಿಂದಾಗಿ ಹೈಕಮಾಂಡ್ ಕೂಡ ಹರಿಪ್ರಸಾದ್ ಅವರಿಗೆ ಹಸಿರು ನಿಶಾನೆ ತೋರಿತು. ಯಾರ ಮನೆ ಬಾಗಿಲಿಗೂ ಹೋಗದೆ, ಯಾರನ್ನೂ ಕೇಳದೆ ಹರಿಪ್ರಸಾದ್ ಲಕ್ ಕುದುರಿತು.

ಇದನ್ನು ಓದಿ: ದಿಲ್ಲಿ ಪೋಸ್ಟ್ | ಮುಂದಿನ ವಾರ ಸಿಎಂ ಯಡಿಯೂರಪ್ಪಗೆ ಮತ್ತೊಂದು ಶಾಕ್; ಕೈ ಕೊಟ್ಟವರ ಜೊತೆಗೇ ಡಿಕೆಶಿ ಕುಚುಕು!

ಕೈ ಸುಟ್ಟುಕೊಂಡ ಕೃಷ್ಣಭೈರೇಗೌಡ

ರಾಹುಲ್ ಗಾಂಧಿ ಕ್ಯಾಂಪಿಗೆ ಬಹಳ ಆತ್ಮೀಯ ಎಂದು ಹೇಳಿಕೊಳ್ಳುವ ಕೃಷ್ಣಭೈರೇಗೌಡಗೆ ಮತ್ತೊಮ್ಮೆ ಮುಖಭಂಗವಾಗಿದೆ. ಹಿಂದೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ಅಡ್ಡಹಾಕಲು ಹೋಗಿ ಕೈಸುಟ್ಟುಕೊಂಡಿದ್ದರು‌.‌ ಈಗ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರನ್ನೂ ಓವರ್ ಟೇಕ್ ಮಾಡಿ ಬೋಸರಾಜ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಪ್ರಯತ್ನಿಸಿದ್ದರು. ಆದರೆ ಅದೇ ದಿನೇಶ್ ಗುಂಡೂರಾವ್, ಅದೇ ರಿಜ್ವಾನ್ ಅರ್ಷದ್ ಬಿಟ್ಟರೆ ಮೂರನೆಯವರು ಮತ್ತೊಬ್ಬರಿರಲಿಲ್ಲ ಬೆಂಬಲಕ್ಕೆ.
Published by:HR Ramesh
First published: